ಲಂಟಾನ ಉತ್ತಮ ಪೊಟ್ಯಾಶ್ ಸತ್ವದ ಗಿಡ.

ಲಂಟಾನ ಉತ್ತಮ ಪೊಟ್ಯಾಶ್ ಸತ್ವದ ಗಿಡ.

ಸಾಮಾನ್ಯವಾಗಿ ಸಾವಯವ ವಿಧಾನದಲ್ಲಿ ಬೇಸಾಯ ಮಾಡುವಾಗ ಸಾರಜನಕ ಮೂಲವನ್ನು ಬೇಕಾದಷ್ಟು ಪ್ರಮಾಣದಲ್ಲಿ ಹೊಂದಿಸಿಕೊಳ್ಳಲಿಕ್ಕಾಗುತ್ತದೆ. ಆದರೆ ರಂಜಕ ಮತ್ತು ಪೊಟ್ಯಾಶಿಯಂ ಸತ್ವಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ ಪೋಷಕಾಂಶಗಳ ಅಸಮತೋಲನ ಉಂಟಾಗುವುದು ಕಂಡು ಬರುತ್ತದೆ. ಈ ಅಸಮತೋಲನವನ್ನು ನಿವಾರಿಸಲು ಬಳಕೆ ಮಾಡುವ ಒಳಸುರಿಗಳಲ್ಲಿ ಯಾವ ಸತ್ವ ಅಡಗಿದೆ ಎಂಬುದನ್ನು ಅರಿತು ಅದನ್ನು ಬಳಕೆ ಮಾಡಬೇಕು. ನಮ್ಮ ಸುತ್ತಮುತ್ತ ಇರುವ ವೈವಿಧ್ಯಮಯ ಸೊಪ್ಪು ಸದೆಗಳಲ್ಲಿ ಒಂದೊಂದರಲ್ಲಿ ಒಂದೊಂದು ಪೋಷಕಾಂಶ, ಕೀಟ ವಿಕರ್ಷಕ ಗುಣ, ರೋಗ ನಿರೋಧಕ ಗುಣ ಇರುತ್ತದೆ. ಇವುಗಳ ಬಗ್ಗೆ ಕೆಲವನ್ನು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ರಾಷ್ಟ್ರೀಯ ಸಾವಯವ ಕೃಷಿ ಸಂಶೋಧನಾ ಸಂಸ್ಥೆ ಪರೀಕ್ಷೆ ಮಾಡಿದ ವರದಿ ಇದೆ. ಅದನ್ನು ತಜ್ಞರಿಂದ ತಿಳಿದು ಕಾಂಪೋಸ್ಟ್ ಅಥವಾ ಹಸುರೆಲೆ ಸೊಪ್ಪಾಗಿ ಬೆಳೆಗಳಿಗೆ ಬಳಕೆ ಮಾಡುವುದು ಸೂಕ್ತ.

ಲಂಟಾನ (Lantana indica) ಸೊಪ್ಪಿನಲ್ಲಿ ಪೊಟ್ಯಾಶಿಯಂ ಸತ್ವ ಉತ್ತಮವಾಗಿದೆ. ಚಿಕ್ಕಮಗಳೂರು, ಹಾಸನ, ಧಾರವಾಡ, ಕೋಲಾರ, ಮೈಸೂರು, ತುಮಕೂರು, ಬೀದರ್ ಮುಂತಾದೆಡೆ ಇದು ಹುಲುಸಾಗಿ ಬೆಳೆಯುತ್ತದೆ. ಅದೇ ರೀತಿಯಲ್ಲಿ ನೆಕ್ಕಿ ಸೊಪ್ಪಿನಲ್ಲಿ (Vitex negundo) ಕೀಟ ವಿಕರ್ಷಕ ಶಕ್ತಿ ಇದೆ. ಕಾಸರಕನ ಸೊಪ್ಪಿನಲ್ಲಿ (strychnos nux vomica) ಸತು ಮೆಗ್ನೀಶಿಯಂ ಸತ್ವ ಚೆನ್ನಾಗಿದೆ. ಅಲ್ಲದೆ ಬೆಳೆಗಳಿಗೆ ಉಂಟಾಗುವ ಜಂತು ಹುಳ (ನಮಟೋಡು) ತೊಂದರೆಯನ್ನೂ ಕಡಿಮೆ ಮಾಡುತ್ತದೆ. ಗ್ಲೆರಿಸೀಡಿಯಾ, ಕ್ರೊಟೋಲೋರಿಯಾ ಸೊಪ್ಪಿನಲ್ಲಿ ಸಾರಜನ ಅಂಶ ಹೇರಳವಾಗಿರುತ್ತದೆ. ಲಕ್ಕಿ ಗಿಡದಲ್ಲಿ ರಂಜಕದ ಅಂಶ ಉತ್ತಮವಾಗಿರುತ್ತದೆ. ಬೆಳೆಗಳಿಗೆ ಹಸುರೆಲೆ ಸೊಪ್ಪುಗಳನ್ನು ಬಳಕೆ ಮಾಡುವಾಗ ಬೇರೆ ಬೇರೆ ಸತ್ವಗಳನ್ನು ಹೊಂದಿರುವಂತದ್ದನ್ನು ಮಿಶ್ರಣ ಮಾಡಿ ಬಳಕೆ ಮಾಡಿದರೆ ಪೋಷಕಾಂಶದ ಸಮತೋಲನಕ್ಕೆ ಸಹಾಯಕವಾಗುತ್ತದೆ.

ಚಿತ್ರಗಳು: ರಾಧಾಕೃಷ್ಣ ಹೊಳ್ಳ