ಲವಣ ಅಂದ್ರೆ....
ಒಂದು ಊರಿನಲ್ಲಿ ಒಬ್ಬ ಪ್ರಕಾಂಡ ಸಂಸ್ಕೃತ ಪಂಡಿತನಿದ್ದನಂತೆ.ಅಪ್ಪಾಭಟ್ಟ ಎಂದು ಹೆಸರು. ಅವನಿಗೆ ಒಬ್ಬಳು ಮಗಳು. ಅಪ್ಪ ಪಂಡಿತನಾದರೂ ಮಗಳು ಅಷ್ಟಕ್ಕಷ್ಟೆ. ತನ್ನ ಮಗಳನ್ನು ತಿಪ್ಪಾಭಟ್ಟ ಎಂಬ ಇನ್ನೊಬ್ಬ ಪಂಡಿತನ ಮಗನಿಗೆ ಕೊಟ್ಟು ಮದುವೆ ಮಾಡಿದ. ಮದುವೆ ಆದಮೇಲೆ ಗಂಡನ ಮನೆಯಲ್ಲಿ ಔತಣ. ಬೀಗರೂಟಕ್ಕೆ ಬಂದವರೆಲ್ಲಾ ಪಂಡಿತರೇ. ಮಗಳು ಬಡಿಸಲು ನಿಂತಳಂತೆ.
ಒಬ್ಬ ವಯಸ್ಸಾದ ಪಂಡಿತ ಊಟದ ಮಧ್ಯದಲ್ಲಿ " ಅಮ್ಮ, ಲವಣ ಇದೆಯೇ" ಅಂತ ಕೇಳಿದ. ಆಕೆಗೆ ಅರ್ಥ ಆಗಲಿಲ್ಲ ಪಾಪ. ಪಲ್ಯ ತಂದಳಂತೆ.
"ಇಲ್ಲಮ್ಮಾ ಲವಣ.. ಲವಣ!!" ಎಂದ ಪಂಡಿತ. ಈ ಬಾರಿ ಹುಡುಗಿ ತುಪ್ಪ ತಂದಳಂತೆ.
ಸಿಟ್ಟು ಬಂತು ಪಂಡಿತನಿಗೆ.. " ಏನಮ್ಮಾ.. ಲವಣ ಅಂದ್ರೆ ಗೊತ್ತಿಲ್ಲವೇ??" ಅಂದ.
ಹುಡುಗಿಗೂ ಸ್ವಲ್ಪ ಪಿತ್ತ ನೆತ್ತಿಗೇರಿತು. ನನಗೂ ಗೊತ್ತಿದೆ ಅಂತ ತೋರಿಸಿಕೊಳ್ಳಬೇಕಲ್ಲವೇ?? ಹೀಗೆಂದಳಂತೆ..
" ಅಪ್ಪಾಭಟ್ಟರ ಮಗಳಾಗಿ, ತಿಪ್ಪಾಭಟ್ಟರ ಸೊಸೆಯಾಗಿ ಲವಣ ಅಂದ್ರೆ ಗೊತ್ತಿಲ್ವೇ, ದೊಡ್ಡೆಮ್ಮೆ ಸಗಣಿ".
ಯಾರಾದರೂ ಜ್ಞಾನವಿಲ್ಲದೇ ಸುಮ್ಮನೆ ಎಲ್ಲಾ ಗೊತ್ತಿದ್ದಂತೆ ಮಾತಾಡುತ್ತಿದ್ದರೆ "ಲವಣ ಅಂದ್ರೆ ಗೊತ್ತಿಲ್ವೇ" ಎಂದು ಹೇಳಿ ನಮ್ಮ ತಾತ ನಗುತ್ತಿದ್ದರು. ಹಿಂದಿನ ಕಥೆ ಏನು ಎಂದು ಕೇಳಿದರೆ ಈ ಕಥೆ ಹೊರಗೆ ಬರುತ್ತಿತ್ತು. ತೆಲುಗು ಮೂಲದ ಕಥೆ ಎಂದು ನೆನಪು.