ಲೋಕಾಯುಕ್ತ ದಾಳಿಯ ನಂತರ ಮುಂದೇನು???
ಇವತ್ತು ಫೇಸ್ ಬುಕ್ ನ್ನು ಮೊಬೈಲ್ ನಲ್ಲಿ ನೋಡುತ್ತಿರಬೇಕಾದರೆ, ನಮ್ಮ ಉಮೇಶ ದೇಸಾಯಿ ಸರ್ ರವರು ಈ ಕೆಳಕಂಡ ಪೋಸ್ಟ್ ನ್ನು ಅಂಟಿಸಿದ್ದರು ಮತ್ತು ಪ್ರಶ್ನೆಗಳನ್ನು ಕೇಳಿದ್ದರು..
ಸಾಮಾನ್ಯವಾದ ಸುದ್ದಿ ಅಂದರೆ ರಾಜ್ಯದಲ್ಲಿ ಲೋಕಾಯುಕ್ತ ದಾಳಿ ಆಗುತ್ತದೆ
ದಾಳಿಯಾದವರ ಮನೆಯಲ್ಲಿ ಇಷ್ಟು ಬಂಗಾರ, ಹಣ ಇತ್ಯಾದಿ ಸಿಕ್ಕವು ಹಾಗೆಯೇ ಅವರ ಲಾಕರ್ ಇತ್ಯಾದಿ
ಜಪ್ತಿ ಮಾಡತಾರೆ..ನನ್ನ ಪ್ರಶ್ನೆ ಮುಂದೇನು..
೧) ದಾಳಿಗೊಳಗಾದ ವ್ಯಕ್ತಿಯನ್ನು ಕಾಯಂ ಆಗಿ ನೌಕರಿಯಿಂದ ಕಿತ್ತೊಗೆಯುತ್ತಾರೆಯೇ..?
೨) ಅವ ಕೋರ್ಟ್ ಮೊರೆಹೋಗಬಹುದೇ..?
೩) ವಿಚಾರಣೆ ಮುಗಿಯುವವರೆಗೆ ಅವನನ್ನು ಸಸ್ಪೆಂಡ್ ಮಾದುತ್ತಾರೆಯೇ ಹೇಗೆ..?
ನನಗೆ ತಿಳಿಯುವ ಕುತೂಹಲ ಇದೆ ನಾ ಬರೆಯುತ್ತಿರುವ ಕತೆಗೆ ನಿಮ್ಮಗಳ ಉತ್ತರದಿಂದ ಸಹಾಯವಾಗುವುದು ಸೊ ಪ್ಲೀಸ್ ಹೇಳಿ...
ಈ ಪ್ರಶ್ನೆಗಳಿಗೆ ಉತ್ತರವಾಗಿ ನನ್ನ ಉತ್ತರವನ್ನು ಸಹ ತಿಳಿಸಿದ್ದೆ. ಆದರೆ, ಅದು ಸಾಕಾಯಿತು ಅನ್ನಿಸುತ್ತಿಲ್ಲ. ನನಗೆ ತಿಳಿದಷ್ಟು ಮಟ್ಟಿಗೆ ಸ್ವಲ್ಪ ವಿವರಣೆಯನ್ನು ನೀಡುತ್ತಿದ್ದೇನೆ.
ಲೋಕಾಯುಕ್ತದವರು ಯಾವುದೇ ಅಧಿಕಾರಿ/ನೌಕರನ ಮನೆಯನ್ನು ದಾಳಿ ಮಾಡಿದಾಗ, ಅಂದಿನ ಎಲ್ಲಾ ಟೀವಿ ಚಾನಲ್ ಗಳಲ್ಲಿ ಹಾಗೂ ಮಾರನೇ ದಿನದ ಪತ್ರಿಕೆಗಳಲ್ಲಿ ಕೇವಲ ಇದರದ್ದೇ ಮುಖ್ಯ ಸುದ್ದಿ. ದಾಳಿಗೊಳಗಾದ ಅಧಿಕಾರಿ/ನೌಕರನನ್ನು ಬಲೆಗೆ ಇದ್ದ ತಿಮಿಂಗಿಲ.. ಇತ್ಯಾದಿ ಸರ್ವನಾಮಗಳೊಂದಿಗೆ ಸಂಬೋಧಿಸುವುದು ಕುಚೇಷ್ಠೆಯ ಪರಿಪಾಠವಾಗಿದೆ. ಕೆಲವರು ಭ್ರಷ್ಠರು ಇರಬಹುದು. ಆದರೆ, ಎಲ್ಲರೂ ಭ್ರಷ್ಠರೆಂದೇ ನಾನು ಹೇಳುತ್ತಿಲ್ಲ. ಕೆಲವೊಂದು ಅಧಿಕಾರಿಗಳ ಮನೆ ಮೇಲೆ ಜರುಗಿದ ದಾಳಿಯ ನಂತರ ನ್ಯಾಯಾಲಯದ ಕಟಕಟೆಯಲ್ಲಿ ಅವರನ್ನು ಲೋಕಾಯುಕ್ತರು ತಂದು ನಿಲ್ಲಿಸುವುದು ಅಷ್ಟು ಸುಲಭವಲ್ಲ. ಅದು ಯಾಕೆಂದು ನಿಮಗೆ ಹೇಳುತ್ತೇನೆ..
ಪ್ರತಿಯೊಬ್ಬ ಸರಕಾರಿ/ನೌಕರನು ಕೆಲಸಕ್ಕೆ ಸೇರಿದ ದಿನದಂದು ಮತ್ತು ಪ್ರತಿ ವರ್ಷದ ಮಾರ್ಚ್ 31 ನೇ ದಿನಾಂಕದಂದು ತನ್ನ ಆಸ್ತಿ ಎಷ್ಟಿದೆಯೆಂದು ಚರ-ಸ್ಥಿರ ಆಸ್ತಿ ವಿವರದ ನಮೂನೆಯಲ್ಲಿ ಸರಕಾರಕ್ಕೆ ಮಾಹಿತಿ ಸಲ್ಲಿಸಬೇಕು. ಹಿಂದಿನ ವರ್ಷದ ಆಸ್ತಿಗಿಂತ ಈ ವರ್ಷದ ಆಸ್ತಿ ಹೆಚ್ಚಾದಲ್ಲಿ ಈ ಬಗ್ಗೆ ಸರಕಾರವು ಸಂಬಂಧಿಸಿದ ಅಧಿಕಾರಿ/ನೌಕರನಿಂದ ವಿವರಣೆಯನ್ನು ಪಡೆಯುತ್ತದೆ. ಅದು ನ್ಯಾಯಯುತವಾಗಿದ್ದು, ಸರಕಾರದಿಂದ ಪೂರ್ವಾನುಮತಿ ಪಡೆದಿದ್ದರೆ ಮಾತ್ರ ಅಂಗೀಕರಿಸುತ್ತದೆ. ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸುತ್ತದೆ.
ಯಾವುದೇ ಸರಕಾರಿ ನೌಕರ ಒಂದು ಮನೆ, ಸೈಟು, ಚಿನ್ನ ಅಥವಾ ಜಮೀನನ್ನು ಕೊಂಡುಕೊಳ್ಳಬೇಕೆಂದು ಬಯಸಿದರೆ, ಖರೀದಿ ಪೂರ್ವದಲ್ಲಿ ಸರಕಾರದಿಂದ ಅನುಮತಿಯನ್ನು ಪಡೆಯುವುದು ಸರಕಾರಿ ನಿಯಮಗಳನ್ವಯ ಕಡ್ಡಾಯವಾಗಿದೆ. ಸರಕಾರವು ಆ ಆಸ್ತಿ ಖರೀದಿಗೆ ಆತನ ಆದಾಯದ ಮೂಲ ಇತ್ಯಾದಿಗಳನ್ನು ಪರಿಶೀಲಿಸಿ ಅದು ನ್ಯಾಯಯುತವಾಗಿದ್ದಲ್ಲಿ ಮಾತ್ರ ಖರೀದಿಗೆ ಅವಕಾಶ ನೀಡುತ್ತದೆ. ಇಲ್ಲದಿದ್ದರೆ ಆತನ ಮನವಿಯನ್ನು ತಿರಸ್ಕರಿಸುತ್ತದೆ. ಇದು ಸರಕಾರದ ನಿಯಮವಾಗಿದೆ.
ಸಾಮಾನ್ಯವಾಗಿ ಲೋಕಾಯುಕ್ತರು ದಾಳಿ ಮಾಡಲು ಕಾರಣವೇನೆಂದರೆ, ಒಬ್ಬ ಸರಕಾರಿ ಅಧಿಕಾರಿ/ನೌಕರನ ಜೀವಮಾನದ ಒಟ್ಟು ಆದಾಯ ಸುಮಾರು 30 ಲಕ್ಷವಿದ್ದರೆ, ಆತನ ಕುಟುಂಬದ ಅಸ್ತಿ 2 ಕೋಟಿ ಮೀರಿತ್ತೆಂದು ದಾಳಿ ನಡೆದ ವೇಳೆಯಲ್ಲಿ ತಿಳಿಸುತ್ತಾರೆ. ಆದರೆ, ಅವರು ಆದಾಯದ ಮೂಲವನ್ನು ಮತ್ತು ಸರಕಾರದಿಂದ ಚರ-ಸ್ಥಿರ ಆಸ್ತಿಯ ವಿವರವನ್ನು ಸರಕಾರದಿಂದ ಪಡೆದುಕೊಂಡು ದಾಳಿ ಮಾಡಿರುವುದಿಲ್ಲ ಎಂಬುದು ಇಲ್ಲಿನ ನಿಜ ಸಂಗತಿ.
ಈಗ ನೀವೇ ಯೋಚನೆ ಮಾಡಿ, ಸರಕಾರಿ ನೌಕರ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ 20000 ಕೊಟ್ಟು ಖರೀದಿಸಿದ ಒಂದು ಸೈಟಿನ ಬೆಲೆ ಇಂದು ಸುಮಾರು 50 ಲಕ್ಷಗಳಷ್ಟಾಗುತ್ತದೆ. ಆತನ ವೇತನ ಉಳಿತಾಯದಿಂದ ಬರುವ ಬಡ್ಡಿ (ಆರ್.ಡಿ./ಜಿ.ಪಿ.ಎಫ್/ಎಲ್.ಐ.ಸಿ.) ಯನ್ನು ದಾಳಿಯ ಸಂದರ್ಭದಲ್ಲಿ ಆದಾಯದ ಮೂಲವಾಗಿ ಲೆಕ್ಕಕ್ಕೇ ಹಿಡಿಯುವುದಿಲ್ಲ. ಅಲ್ಲದೇ, ಒಬ್ಬ ಸರಕಾರಿ ನೌಕರನ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ, ಆ ನೌಕರನು 20 ವರ್ಷ ಸೇವೆ ಸಲ್ಲಿಸಿದ್ದರೆ, ಆತನಿಗೆ ಸುಮಾರು 50-58 ವರ್ಷಗಳಾಗಿರಬಹುದು. ಅಷ್ಟರಲ್ಲಿ ಆತನು ಎಷ್ಟು ಹಣವನ್ನು ಸೈಟು-ಮನೆ ಮೇಲೆ ಹೂಡಿಕೆ ಮಾಡಿರಬಹುದು? ಆತನ ಹಣ ಮತ್ತು ಸ್ಥಿರ ಆಸ್ತಿಗಳ ಮೌಲ್ಯ ಎಷ್ಟು ಪಟ್ಟು ಹೆಚ್ಚಾಗಿರಬಹುದು? ಇದನ್ನು ಸ್ವಲ್ಪ ವಿವೇಚನೆಯಿಂದ ಯೋಚಿಸಿದರೆ, ದಾಳಿಯ ನಂತರದ ಬೆಳವಣಿಗೆಗಳ (ನ್ಯಾಯಾಲಯದಿಂದ ಖುಲಾಸೆಗೊಂಡ ಪ್ರಕರಣಗಳು) ನಿಜ ರೂಪ ತಿಳಿಯುತ್ತದೆ. ಒಬ್ಬ ಸರಕಾರಿ ನೌಕರನ ಮನೆ ಮೇಲೆ ದಾಳಿ ನಡೆದಾಗ, ಆತನ ಹೆಂಡತಿಯ ಉದ್ಯೋಗದಿಂದ ಬಂದಂತಹ ಆಸ್ತಿ, ತಮ್ಮ ಮಗ-ಮಗಳು, ಚಿಕ್ಕಪ್ಪ-ದೊಡ್ಡಪ್ಪ-ಅವರ ಮಕ್ಕಳ ಆಸ್ತಿಗಳು (ಒಂದೇ ಕುಟುಂಬದಲ್ಲಿ ವಾಸವಿದ್ದ ಪಕ್ಷದಲ್ಲಿ) ಮತ್ತು ಪಿತ್ರಾರ್ಜಿತ ಆಸ್ತಿಯೆಲ್ಲವನ್ನೂ ಸಹ ಒಬ್ಬನೇ ನೌಕರನ ಆಸ್ತಿಯೆಂಬಂತೆ ಲೋಕಾಯುಕ್ತ ದಾಳಿ ವೇಳೆಯಲ್ಲಿ ಬಿಂಬಿಸಲಾಗುತ್ತದೆ. ದಾಳಿಯ ಒಂದು ವಾರವಂತೂ ವಿರೋಧಿಗಳಿಗೆ ಮತ್ತು ಮಾಧ್ಯಮದವರಿಗೆ ಪುಷ್ಕಳ ಭೋಜನ ಸಿಕ್ಕಿರುತ್ತದೆ.
ಆದರೆ, ನಾವು ಆ ನೌಕರನ ಮತ್ತು ಅವರ ಕುಟುಂಬದ ಸದಸ್ಯರು ಮತ್ತು ಬಂಧುಗಳ-ಸ್ನೇಹಿತರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಆತನೇನಾದರೂ ಸಜ್ಜನ ನೌಕರನಾಗಿದ್ದು, ಮೀಡಿಯಾದವರ ಚೆಲ್ಲಾಟಕ್ಕೆ ಆತ್ಮಹತ್ಯೆಯ ದಾರಿಯ ಬಗ್ಗೆ ಯೋಚಿಸುವ ಸಂದರ್ಭವು ಸ್ಠಷ್ಠಿಯಾಗುತ್ತದೆ. ಪುಣ್ಯಕ್ಕೆ ಅಂತಹ ಪ್ರಕರಣಗಳು ವಿರಳ.
ಲೋಕಾಯುಕ್ತ ದಾಳಿಯ ನಂತರ ಲೋಕಾಯುಕ್ತದವರು ಅಂದೇ ಎಫ್.ಐ.ಆರ್. ತಯಾರಿಸುತ್ತಾರೆ. ನಂತರ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲು ಸರಕಾರದಿಂದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಲೋಕಾಯುಕ್ತದವರು ದಾಖಲಿಸಿದ ಎಫ್.ಐ.ಆರ್. ನಲ್ಲಿ ತೋರಿಸಿರುವ ಆಸ್ತಿ ಬಗ್ಗೆ ಸರಕಾರವು ಪರಿಶೀಲನೆ ನಡೆಸುತ್ತದೆ. ವಾರ್ಷಿಕ ಚರ-ಸ್ಥಿರ ಆಸ್ತಿಯಲ್ಲಿ ಈ ಮಾಹಿತಿಯನ್ನು ನೌಕರನು ಸರಕಾರಕ್ಕೆ ಮೊದಲೇ ಮಾಹಿತಿ ನೀಡಿದ್ದರೆ ಹಾಗೂ ತನ್ನ ಆದಾಯದ ಮೂಲವನ್ನು ಸರಕಾರಕ್ಕೆ ಮೊದಲೇ ಮಾಹಿತಿ ಒದಗಿಸಿದ್ದರೆ, ಸರಕಾರವು ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಆತನ ವಿರುದ್ಧ ದಾವೆ ಹೂಡಲು ನಿರಾಕರಿಸುತ್ತದೆ (ಇದನ್ನು ಅಭಿಯೋಜನಾ ಮಂಜೂರಾತಿ ಎಂದು ಕರೆಯುತ್ತಾರೆ). ಸರಕಾರದ ಮತ್ತು ಲೋಕಾಯುಕ್ತದ ಮಧ್ಯೆ ಇದೇ ವಿಚಾರವಾಗಿ ಜಟಾ-ಪಟಿಯನ್ನು ನಾವು ನೋಡುತ್ತಲೇ ಇರುತ್ತೇವೆ. ಆದರೆ, ಸರಕಾರದ ನಿಖರ ಕಾರಣಗಳನ್ನು ನಾವು ಅರ್ಥ ಮಾಡಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಎಲ್ಲಾ ಸಾಮಾನ್ಯ ನಾಗರೀಕರೆಲ್ಲರೂ ಸರಕಾರಿ ನೌಕರನೆಂದರೆ ಲಂಚವನ್ನು ಪಡೆದುಕೊಳ್ಳದೇ ಕೆಲಸ ಮಾಡುವುದಿಲ್ಲ ಎಂಬ ಮೂಢನಂಬಿಕೆ(?) ಗೆ ಒಳಗಾಗಿದ್ದೇವೆ. ಸರಕಾರಿ ನೌಕರನೆಂದರೆ ಭ್ರಷ್ಠ ಎಂದು ಪೂರ್ವಾಗ್ರಹಪೀಡಿತ ( Prejudicial) ಅಭಿಪ್ರಾಯವನ್ನು ಹೊಂದಿರುತ್ತೇವೆ.
ಎಲ್ಲ ಸರಕಾರಿ ನೌಕರರು ಅಪ್ರಾಮಾಣಿಕರಲ್ಲ. ಈ ಹಿಂದೆ ಇದ್ದಂತಹ ವ್ಯವಸ್ಥೆ ಈಗಿಲ್ಲ. ಕೇವಲ ಕೆಲವೇ ವರ್ಷಗಳಲ್ಲಿ ಸರಕಾರಿ ನೌಕರರ ಕಾರ್ಯನಿರ್ವಹಣೆ ಬದಲಾಗಿದೆ. ದಿನೇ ದಿನ ಸರಕಾವು ಹೊಸ ಕಾನೂನುಗಳನ್ನು ನಿಯಮಗಳನ್ನು ರಚಿಸುತ್ತಾ, ಸರಕಾರಿ ನೌಕರನಿಗೆ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತಲೇ ಇದೆ. ಮಾಹಿತಿ ಹಕ್ಕು ವಿಧೇಯಕ, ಸಕಾಲ ಇವುಗಳು ಜನರಿಗೆ ಅನುಕೂಲವಾಗಲು ಮತ್ತು ಭ್ರಷ್ಟತನವನ್ನು ಕಡಿಮೆ ಮಾಡಲು ಉಪಯುಕ್ತವಾಗಿವೆ. ಆದಾಗ್ಯೂ ಕೂಡಾ ಭ್ರಷ್ಟಾಚಾರವನ್ನು ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗಿಲ್ಲವಷ್ಟೇ.
ಸರಕಾರಿ ನೌಕರನ ನಿಧಾನಗತಿ ಕಾರ್ಯನಿರ್ವಹಣೆಗೆ ಸರಕಾರದ ಓಬಿರಾಯನ ಕಾಲದ ನಿಯಮಗಳೇ ಆಗಿವೆ ಎಂಬುದು ಸರ್ವ ವಿಧಿತ. ಉದಾಹರಣೆಗೆ, ಒಬ್ಬ ಸರಕಾರಿ ನೌಕರನ ಹಾಜರಾತಿಯನ್ನು ನಿಖರವಾಗಿಸಲು ಎಷ್ಟೊಂದು ಕಚೇರಿಗಳಲ್ಲಿ ಬಯೋಮೆಟ್ರಿಕ್ ಮೆಷಿನ್ ನ್ನು ಆಳವಡಿಸಿ, ಅದರಲ್ಲಿ ಅವರ ಹೆಬ್ಬೆಟ್ಟು ಒತ್ತಿದಲ್ಲಿ ಮಾತ್ರ ಆತನ ಹಾಜರಾತಿ ಆ ಸಮಯದಲ್ಲಿ ದಾಖಲಾಗುತ್ತದೆ. ಪ್ರತಿ ತಿಂಗಳು ಆ ಮೆಷಿನ್ನಿನಲ್ಲಿ ದಾಖಲಾದ ಡೇಟಾಬೇಸ್ ನಲ್ಲಿ ಆತನು ಯಾವ ದಿನದಂದು ಎಷ್ಟು ಗಂಟೆಗೆ ಕಚೇರಿಗೆ ಆಗಮಿಸಿದ? ಎಷ್ಟು ಸಮಯಕ್ಕೆ ನಿರ್ಗಮಿಸಿದ? ಯಾವ ದಿನಗಳಂದು ಸೇವೆಗೆ ಗೈರು ಹಾಜರಾಗಿದ್ದಾನೆ ? ಎಂಬ ಬಗ್ಗೆ ಸುಲಭವಾಗಿ ತಿಳಿಯಬಹುದು. ಇದರಿಂದ ಎಷ್ಟೊಂದು ಕೆಲಸ ಕಡಿಮೆಯಾಯಿತೆಂದು ನಿಮಗನ್ನಿಸಿತಲ್ಲವೇ? ಆದರೆ, ಅದು ತಪ್ಪು. ಯಾಕೆಂದರೆ, ಆತನು ಬಯೋ ಮೆಟ್ರಿಕ್ ಸಾಧನದಲ್ಲಿ ತನ್ನ ಬೆರಳನ್ನು ಒತ್ತಿ ಹಾಜರಾತಿಯನ್ನು ದಾಖಲಿಸಿದರೆ ಮಾತ್ರವಷ್ಟೇ ಅಲ್ಲ, ಕಚೇರಿ ಕಾರ್ಯವಿಧಾನ ಕೈಪಿಡಿಯಲ್ಲಿ ವಿವರಿಸಿರುವಂತೆ ಹಾಜರಾತಿ ರಜಿಸ್ಟರ್ ನಲ್ಲಿ ಕಡ್ಡಾಯವಾಗಿ ಸಹಿ ಮಾಡಲೇಬೇಕು. ಇಲ್ಲದಿದ್ದಲ್ಲಿ ಗೈರು ಹಾಜರಾತಿ ಎಂದು ಪರಿಗಣಿಸಲ್ಪಡುತ್ತದೆ. ನೌಕರನು ಬಯೋ ಮೆಟ್ರಿಕ್ ನಲ್ಲಿ ಹಾಜರಾತಿ ದಾಖಲಿಸುವುದಲ್ಲದೇ ಹಾಜರಾತಿ ವಹಿಯಲ್ಲಿ ಕೂಡಾ ಸಹಿ ಮಾಡಲೇಬೇಕು. ಇದಕ್ಕೆ ಸರಕಾರವು ಪರಿಶೀಲಿಸಿ ಹಾಜರಾತಿಯು ವಹಿಯಲ್ಲಿ ಸಹಿ ಮಾಡುವುದರಿಂದ ಅಥವಾ ಬಯೋ ಮೆಟ್ರಿಕ್ ಸಾಧನದಲ್ಲಿ ದಾಖಲಿಸುವುದರಿಂದ ಪರಿಗಣಿಸಲ್ಪಡುತ್ತದೆ ಎಂದು ಸಂಬಂಧಿಸಿದ ನಿಯಮಾವಳಿಗಳಿಗೆ ತಿದ್ದುಪಡಿ ತರುವುದು ಅತೀ ಅವಶ್ಯಕವಾಗಿದೆ. (ಬಯೋ ಮೆಟ್ರಿಕ್ ಸಾಧನವು ಚಳಿಗಾಲದಲ್ಲಂತೂ ನಮ್ಮ ಬೆರಳುಗಳ ರೇಖೆಗಳನ್ನು ಗುರುತಿಸುವುದು ಸಾಧ್ಯವಾಗುವುದಿಲ್ಲ. ಬೇಸಿಗೆಯಲ್ಲಿ ಕರೆಂಟು ಕೈಕೊಟ್ಟರೆ ಆತನ ಹಾಜರಾತಿ ದಾಖಲಾಗುವುದೇ ಇಲ್ಲ. ನೌಕರನ ಫಜೀತಿ ದೇವರಿಗೇ ಪ್ರೀತಿ.. ಹ್ಹ ಹ್ಹ...)
ನಮ್ಮ ಸಾಮಾನ್ಯ ಜನರು ಹೇಗೆ ಸರಕಾರಿ ನೌಕರೆಂದರೆ ಮೂಗು ಮುರಿಯುವರೋ ಹಾಗೆಯೇ ರಾಜಕಾರಣಿಗಳು ಕೂಡಾ.. ಆದರೆ, ಅವರು ನೌಕರಶಾಹಿ ವ್ಯವಸ್ಥೆಯನ್ನು ನಮ್ಮದೇ ಒಂದು ಅಂಗ (ಕಾರ್ಯಾಂಗ) ವೆಂದು ಪರಿಗಣಿಸುವುದೇ ಇಲ್ಲ. ಸುಮಾರು 20 ವರ್ಷಗಳ ಹಿಂದೆ ಇದ್ದ ಹುದ್ದೆಗಳೇ ಈಗಲೂ ಇವೆ. ಹೆಚ್ಚಿಗೆ ಮಾಡಲು ಯಾರೂ ಸಹ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. 20 ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಿಗೆಯಾಗಿದೆ. ಬೇಡಿಕೆಗಳು ಜಾಸ್ತಿಯಾಗಿವೆ. ಆದರೆ, ಅದೇ ಒಂದು ಸರಕಾರಿ ಕಚೇರಿಯಲ್ಲಿ ಇರುವ 02 ದ್ವಿತೀಯ ದರ್ಜೆ ಸಹಾಯಕನ ಹುದ್ದೆಗಳು ಅಷ್ಟೇ ಇವೆ. ಇದು ಕಚೇರಿ ಕಾರ್ಯನಿರ್ವಹಣೆಯ ನಿಧಾನಗತಿಗೆ ಒಂದು ಕಾರಣವಾದರೆ, ಇನ್ನೂ ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ 1.20 ಲಕ್ಷ ಹುದ್ದೆಗಳು ಖಾಲಿ ಇರುವುದು ಸಹ ಇನ್ನೊಂದು ಮುಖ್ಯ ಕಾರಣವಾಗಿದೆ.
ನನ್ನ ಲೇಖನದ ಉದ್ದೇಶವೆಂದರೆ, ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿ/ನೌಕರರೆಲ್ಲರೂ ಭ್ರಷ್ಟರಲ್ಲ. ಸರಕಾರ ಮತ್ತು ಲೋಕಾಯುಕ್ತ ನಡುವೆ ಜಟಾಪಟಿಯ ಮೂಲ ಕಾರಣ ಮತ್ತು ಸರಕಾರವು ದಾಳಿಗೊಳಗಾದ ನೌಕರನ ಮೇಲೆ ನ್ಯಾಯಾಲಯದಲ್ಲಿ ಕೇಸು ದಾಖಲಿಸಲು ಅನುಮತಿ ನೀಡುತ್ತಿಲ್ಲವೇಕೆ? ಎಂಬ ಬಗ್ಗೆ ಆಗಿದೆ. ನನ್ನ ಮಟ್ಟಿಗೆ ಸಾಧ್ಯವಾದಷ್ಟು ಮಾಹಿತಿಯನ್ನು ಒದಗಿಸಿದ್ದೇನೆ. ಹೇಳುವುದು ಇನ್ನೂ ಬಾಕಿ ಇದೆ..
ಇಂತಿ ನಿಮ್ಮ ಪ್ರೀತಿಯ
ಶಿವಶಂಕರ ವಿಷ್ಣು ಯಳವತ್ತಿ
Comments
ಉ: ಲೋಕಾಯುಕ್ತ ದಾಳಿಯ ನಂತರ ಮುಂದೇನು???
ಮುಂದುವರೆಸಿರಿ. ಉತ್ತಮ ವಿಚಾರವಿದೆ.