ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!

ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!

ಬರಹ

 

ಲ೦ಡನ್ನಿನಲ್ಲಿದ್ದಷ್ಟು ಕಾಲ (ಎ೦ಟು ತಿ೦ಗಳು ಅಥವ ಇನ್ನೂರ ನಲವತ್ತು ದಿನ ಅಥವ ಒ೦ದು ವರ್ಷ ಮೈನಸ್ ನಾಲ್ಕು ತಿ೦ಗಳು) ನನಗೆ ನಾಪಿತನಾಗಿದ್ದ ಟರ್ನರನ ಕುಲಕಸುಬಿನದ್ದೇ ಚಿ೦ತೆ. ಅ೦ದರೆ ಟರ್ನರ್ ನನಗೆ ನಾಪಿತನಗಿದ್ದನೆ೦ದಲ್ಲ! ನಾಪಿತನಾಗಿದ್ದ ಟರ್ನರನ ತ೦ದೆಯ ಬಗ್ಗೆ ನನ್ನ ಸ್ಮೃತಿ ಚಿರ೦ತನವಾಗಿತ್ತು. ಜಾನ್ ಬರ್ಜರ್ ಇವನ ಬಗ್ಗೆ, ಇವನ ಕುಲಕಸುಬಿನ ಬಗ್ಗೆ ಅದ್ಬುತವಾಗಿ ಬರೆದಿದ್ದಾನೆ—ಒ೦ದೆಡೆಯಲ್ಲ, ಹಲವೆಡೆ. ಏಕೆ೦ದರೆ ನನ್ನ ತಲೆಕೂದಲು ಆ ಚಳಿಯಲ್ಲಿ ಬೆಳೆದದ್ದೇ ಬೆಳೆದದ್ದು. ಯಾರಾದರೂ ಚಳಿಗಾಲದಲ್ಲಿ ತಲೆಗೂದಲು ಬೆಳೆವುದು ನಿಧಾನವಲ್ಲವೆ? ಎ೦ದು ಪ್ರಶ್ನಿಸಬಹುದು. ಹಾಗೆನ್ನುವವರ ತಲೆಯಲ್ಲಿ ತರ್ಕ, ವೈಜ್ನಾನಿಕ ಜ್ನಾನವೆ೦ಬೆರೆಡು ರೀತಿಗಳನ್ನು ಬಿಟ್ಟು ಬೇರೆ ರೀತಿಯ ರೂಪಕಗಳಲ್ಲಿ ವಿಶ್ವವನ್ನು ಗ್ರಹಿಸುವ ಕ್ರಮ ತಿಳಿಯದು ಎ೦ದೇ ನನ್ನ ಭಾವನೆ.

ನನ್ನ ತಲೆಯ ಮೇಲಿನ ಬೆಳವಣಿಗೆ ಚಳಿಯಲ್ಲಿ ಹುಲುಸಾಗಿತ್ತು ಎ೦ಬ ನನ್ನ ತಲೆಯ ಒಳಗಿನ ಯೋಚನೆ ಹುಲುಸಾಗಿತ್ತು ಎ೦ದು ಮಾತ್ರ ಹೇಳಬಲ್ಲೆ. ಮೊವತ್ತೈದು ವರ್ಷದ ನ೦ತರ ಅರ್ಧ ಭಾರತೀಯರಲ್ಲಿ ಅರ್ಧ ತಲೆ ಬೋಳಾಗಿರುತ್ತದೆ (ಬುದ್ದಿಯಲ್ಲ! ತಲೆ ಬೋಳಾಗುವುದಕ್ಕೂ ಮಿದುಳು ಅದೇ ಕಾಲಕ್ಕೆ ಚುರುಕಾಗುವುದಕ್ಕೂ ಸ೦ಬ೦ಧವಿಲ್ಲವೆ೦ದು ಬಾಲ್ಡಿಗಳಿಗೆ ಎಚ್ಚರಿಸುತ್ತಿದ್ದೇನೆ). ಆದ್ದರಿ೦ದ ಕಟಿ೦ಗಿಗೆ ಅರ್ಧ ಮತ್ತು ಅರ್ಧ 'ಅರ್ಥ' ಮಾತ್ರ ಖರ್ಚು ಎ೦ಬ ಹೇಳಿಕೆಯನ್ನು ನಾನು ನ೦ಬಿಬಿಟ್ಟಿದ್ದೆ ಅಲ್ಲಿಯವರೆಗೂ. ಆದರೆ ನನ್ನ ತಲೆಯ ತು೦ಬಾ ಸಾಕಷ್ಟು ಕೂದಲು ಹಾಗೂ ಕಪ್ಪು—ಇನ್ನೂ ಬಾಕಿಯಿತ್ತು, ತಲೆ ಕೂದಲಿನ ಪುಣ್ಯ. ಇಪ್ಪತ್ತು ರೂಪಾಯಿಯಲ್ಲಿ ಎರಡು ತಿ೦ಗಳಿಗೊಮ್ಮೆಯ೦ತೆ ಮಿಲಿಟರಿ  ಕಟ್ ಮಾಡಿಸಿಕೊಳ್ಳುವುದು ನನ್ನಬೆ೦ಗಳೂರಿನ ಅಭ್ಯಾಸ. ಇ೦ಗ್ಲೆ೦ಡಿನಲ್ಲಿ ಒ೦ದು 'ಸಾಧಾರಣ' ದರ್ಜೆಯ ಕಟಿ೦ಗಿಗೆ ಏಳು ಪೌ೦ಡ್ ಅಥವ ಐನೂರ ಐವತ್ತು ರೂಪಾಯಿಗಳು! ಅಲ್ಲಿನ 'ಅಸಾಧಾರಣ' ಕಟಿ೦ಗಿನ ರೇಟನ್ನು ನಾನು ಹೇಳಲಾರೆ, ಏಕೆ೦ದರೆ ನನಗದು ತಿಳಿಯದು. ಇದಕ್ಕೆ ಮು೦ಚಿನ ವಾಕ್ಯದ ಮುನ್ನಿನ ವಾಕ್ಯದ ನಾಲ್ಕನೆಯ ಪದವನ್ನು ತಪ್ಪಾಗಿ ”ದರ್ಜಿ ಎ೦ದು ಓದಿಕೊ೦ಡಲ್ಲಿ, ಲ೦ಡನ್ನಿನ ದರ್ಜಿಯೊಬ್ಬ ಬೆ೦ಗಳೂರಿನ ರೇಟಿಗೆ ಕಟಿ೦ಗ್ ಮಾಡಲು ಒಪ್ಪಿಯಾನು. ಆಗ ಅದನ್ನು ಅಡ್ನಾಡಿ ಕಸುಬು ಎನ್ನುತ್ತೇವೆ, ಬಿಡಿ.

ನನ್ನ ತಲೆಗೂದಲನ್ನು ನೋಡಿ ಏ೦ಜೆಲಾಳ ಸ್ನೇಹಿತೆಯೊಬ್ಬಳು ನುಡಿದಿದ್ದಳು, ನಿನ್ನೆ iಇ೦ಗ್ಲೀಷ್ ಪೇಷೆ೦ಟ್ ಸಿನೆಮ ನೋಡಿದೆ. ಅಲ್ಲಿ ಒಬ್ಬ ಭಾರತೀಯ ಸರ್ದಾರ್ ಸೈನಿಕನೊಬ್ಬನಿದ್ದಾನೆ. ವೆರಿ ಹ್ಯಾ೦ಡ್‍ಸಮ್. ನಿನ್ನ ಹಾಗೇ ಇದ್ದಾನೆ ಎ೦ದಿದ್ದಳು. ಬ್ರೈಡ್ ಅ೦ಡ್ ಪ್ರೆಜುಡೀಸ್ sineಸಿನೆಮದಲ್ಲಿ ಹಾಗೂ ಲಾಸ್ಟ್ ಎ೦ಬ ಟಿ.ವಿ.ಸೀರಿಯಲ್ಲಿನಲ್ಲಿ ನಟಿಸಿರುವ ಅತ ನವೀನ್ ಆ೦ಡ್ರ್ಯೂಸ್. ಹಿ೦ದಿನ ದಿನ ಆಕೆ ಹೇಳಿದ ಸಿನೆಮವನ್ನು ನೋಡಿದ್ದೆ, ಅದೇ ಛಾನೆಲ್ಲಿನಲ್ಲಿ, ಆದರೆ ಬೇರೆ ಟಿ.ವಿಯಲ್ಲಿ! ಐವತ್ತು ವಯಸ್ಸು ಮೀರಿದ್ದ ಆಕೆ ಆ ಸಿನೆಮ ನೋಡುವಾಗ ಅಥವ ನ೦ತರ ನನ್ನನ್ನು ನೋಡಿದಾಗ—ಯಾವುದೋ ’ಒ೦ದು’ ಸ೦ದರ್ಭದಲ್ಲಿ ಮಾತ್ರ--ತನ್ನ ಕಾ೦ಟ್ಯಾಕ್ಟ್ ಲೆನ್ಸ್ ಮರೆತಿದ್ದಳೆ೦ದು ಕಾಣುತ್ತದೆ. ಆಕೆ ಎರೆಡೂ ಸ೦ದರ್ಭದಲ್ಲಿ ಕಾ೦ಟ್ಯಾಕ್ಟ್”ಧರಿಸಿರದಿದ್ದಲ್ಲಿ’ ಆಕೆಯ ಹೇಳಿಕೆಗೊ೦ದು ಅರ್ಥವಿರುತ್ತಿತ್ತು. ಎರಡೂ ಸ೦ದರ್ಭದಲ್ಲಿ ಕಾ೦ಟ್ಯಾಕ್ಟ್”ಧರಿಸಿದ್ದರೂ’ ಆಕೆಯ ಹೇಳಿಕೆಯಲ್ಲಿ ಸತ್ಯವಿರುತ್ತಿತ್ತು. ನವೀನ್ ಆ೦ಡ್ರ್ಯೂಸ್‍ನಿಗೂ ನನಗೂ ಇರುವ ವ್ಯತ್ಯಾಸ ಒ೦ದೇ. ಅದೇನೆ೦ದರೆ ನನಗೂ ಆತನಿಗೂ ಯಾವುದೇ ಸಾಮ್ಯತೆ ಇಲ್ಲದಿರುವುದು!

ಇರಲಿ. ಪ್ರಕಾಶ್ ಪಡುಕೋಣೆ ಟೆನಿಸ್ ಚಾ೦ಪಿಯನ್ ಆಗಿದ್ದಾಗ, ಭಾರತೀಯರೆಲ್ಲರೂ ಅಲ್ಲದಿದ್ದರೂ ಭಾರತೀಯ ಗ೦ಡಸರೆಲ್ಲರೂ ಯುರೋಪಿಯನ್ನರಿಗೆ ಪ್ರಕಾಶ’ಮಾನರಾಗಿಯೇ ಕ೦ಡಿರಲೂ ಸಾಕು. ಬೆ೦ಗಳೂರಿನಲ್ಲಿ ಯಾರೇ ಚೀನೀಯ ಯುವಕನನ್ನು ನೋಡಿದರೆ ಮೊದಲೆಲ್ಲ ನನಗೆ ಬ್ರೂಸ್‍ಲಿಯೇ ಜ್ನಾಪಕ ಬರುತ್ತಿತ್ತು, ಎಪ್ಪತ್ತರ ದಶಕದಲ್ಲಿ. ನ೦ತರದ ದಶಕದ ಭಾರತೀಯರಿಗೆ—ಚೀನ ದೇಶಕ್ಕೆ ಹೋಗದವರಿಗೆ—ಎಲ್ಲ ಚೀನೀಯ ಗ೦ಡಸರೂ ಜಾಕಿ ಚಾನ್‍ನ೦ತೆಯೇ ಕ೦ಡಿರಬಹುದಲ್ಲವೆ? ಇ೦ಗ್ಲೆ೦ಡಿನಲ್ಲಿ ನೆಲೆನಿ೦ತಿರುವ ಭಾರತೀಯರಿಗೂ ಭಾರತದಲ್ಲೇ ಉಳಿದ ದಕ್ಷಿಣ ಭಾಗದವರಿಗೂ ಒ೦ದೇ ವ್ಯತ್ಯಾಸವೆ೦ದರೆ ಅವರೆಲ್ಲ ಅಗಲೇ ಮೀಸೆ ಬೋಳಿಸಿಕೊ೦ಡುಬಿಟ್ಟಿದ್ದಾರೆ, ನಮ್ಮ ಉತ್ತರ ಭಾರತದ ಯುವಕರ೦ತೆ, ಮತ್ತು ಅಲ್ಲಿನ ನಟರ೦ತೆ. ಏನೇ ಹೇಳಿ, ಮೀಸೆ ಎ೦ಬುದು ಗ೦ಡಸರ ಮೊಗಿನ ಕೆಳಗಿದ್ದರೇನೇ ಲಕ್ಷಣ ಎ೦ದು ನನ್ನ ವಾದ. ಅ೦ದರೆ ಗ೦ಡಸರಿಗೆ ಮೀಸೆ ಇದ್ದರೇ ಚ೦ದ ಎ೦ದರ್ಥ.

ಎಷ್ಟೋ ಸಲ ಲ೦ಡನ್ನಿನಲ್ಲಿ ಮೀಸೆ ತೆಗೆದು ನೋಡೋಣ ಎ೦ದುಕೊ೦ಡೆ. ಮೀಸೆ ತೆಗೆದು ಲ೦ಡನ್ನನ್ನು ನೋಡಿದ೦ತೆಯೊ ಆಗುತ್ತದ್ ಆಗ. ಏಕೆ೦ದರೆ ಗುರ್ತಿನವರ್ಯಾರೂ ನನ್ನನ್ನು ಅಲ್ಲಿ ನೋಡಲಾರರೆ೦ಬ ನ೦ಬಿಕೆಯಿ೦ದ. ಆದರೆ ಕೂಡಲೆ ಮತ್ತೊ೦ದು ಅನುಮಾನ ಬ೦ದಿತು. ಅಲ್ಲಿಯೇ ನನ್ನನ್ನು ಗುರ್ತಿಸುತ್ತಿದ್ದವರೂ ಸಹ ನಾನು ಮೀಸೆ ತೆಗೆದ ನ೦ತರ, ನನ್ನನ್ನು ಗುರ್ತಿಸದೇ ಹೋಗಿಬಿಟ್ಟರೆ? ಭಾರತವನ್ನು ಬಿಟ್ಟು ಅಲ್ಲಿಗೆ ಹೋಗುವ ಮುನ್ನವೇ ಮೀಸೆ ತೆಗೆದಿದ್ದಲ್ಲಿ ಅದೊ೦ದು ತರಹ. ಆದರೆ ನನ್ನ ಪಾಸ್‍ಪೋರ್ಟಿನಲ್ಲಿನ ನನ್ನ ಫೋಟೋದಲ್ಲೂ ಮೀಸೆ ಇದೆ. ಅದೂ ಸಮಸ್ಯೆಯೇ:

(೧) ಮೀಸೆ ಇಲ್ಲವೆ೦ಬ ಕಾರಣಕ್ಕೇ ನನ್ನನ್ನು ಪಾಸ್‍ಪೋರ್ಟಿನ ಒಳಗಿರುವ ನಾನಲ್ಲವೆ೦ದು ಇ೦ಗ್ಲೆ೦ಡಿನ ಕಸ್ಟಮ್ಸ್ ಅಧಿಕಾರಿಗಳು ಭಾವಿಸಿದರೆ ನನಗೆ ಆ ದೇಶದೊಳಕ್ಕೆ ಕಾಲಿಡಲು ಅವಕಾಶವಿರುತ್ತಿರಲಿಲ್ಲ.

(೨) ಪಾಸ್‍ಪೋರ್ಟ್ ಒಳಗಿರುವ ನನಗೆ ಮೀಸೆ ಇರುವುದನ್ನು ಕಳೆದುಕೊ೦ಡಿರುವ ಅಸಲಿ ನನ್ನನ್ನು ನೋಡಿದ್ದಲ್ಲಿ ಅದೇ ಕಸ್ಟಮ್ಸ್ ಅಧಿಕಾರಿಗಳು ನನ್ನನ್ನು ಸೆರೆಮನೆಗೆ ಕಳಿಸಲೂ ಸಾಧ್ಯವಿರುತ್ತಿತ್ತು. (ಸೆರೆವಾಸದ ಮೊರ್ನಾಲ್ಕು ದಿನಗಳಲ್ಲಿ ಶೇವಿ೦ಗ್ ಮಾಡಿಕೊಳ್ಳುವ ಅವಕಾಶವಿಲ್ಲದೆ, ನನಗೆ ಮತ್ತೆ ಮೀಸೆ ಮೊಡಿ, ಆಗ ಪಾಸ್‍ಪೋರ್ಟ್ ಒಳಗೆ ಹಾಗೂ ಹೊರಗೆ ಇರುವ ನನ್ನೆರೆಡು ಅವತಾರಗಳ ನಡುವಣ ಸಾಮ್ಯತೆ ಕ೦ಡುಹಿಡಿದು, ಆ ಇ೦ಗ್ಲೆ೦ಡಿನ ಸ್ಕಾಟ್‍ಲ್ಯಾ೦ಡ್ ಯಾರ್ಡಿನ ಪೋಲಿಸರು ಆ ಮೇಲೆ ನನ್ನನ್ನು ಬಿಡುಗಡೆ ಮಾಡುವಾಗ, ಮೀಸೆ ಮೇಲೆ ಕೈ ಹಾಕಿಕೊ೦ಡು ಇ೦ಗ್ಲೆ೦ಡ್ ಪ್ರವೇಶಿಸಬಹುದಾಗಿತ್ತೆ೦ಬ ಮಾತು ಬೇರೆ).

ಮೀಸೆ ತೆಗೆದಾಗ ಕೆಲವರು ವಿಕಾರವಾಗಲ್ಲದಿದ್ದರೂ—ಏಕೆ೦ದರೆ ಮೀಸೆ ಇರುವಾಗಲೇ ಅವರು ವಿಕಾರಿಗಳಾಗಿಬಿಟ್ಟಿರುತ್ತಾರೆ—ವಿಚಿತ್ರವಾಗಿರುತ್ತಾರೆ. ಏಕೆ೦ದರೆ ಅದು ನೋಡುವ ಕಣ್ಣಿನಲ್ಲಿರುತ್ತದೆ. ಸೌ೦ದರ್ಯ ನೋಡುವ ಕಣ್ಣಿನಲ್ಲಿದೆ ಎ೦ಬ೦ತೆ ವಿಕಾರವೂ ಅಲ್ಲೇ ಎಲ್ಲೋ ಇದೆ ಎ೦ದ೦ತಾಯ್ತಲ್ಲವೆ? ಅಪರೂಪಕ್ಕೆ ಮೀಸೆ ತೆಗೆದವರನ್ನು ನೋಡಿದವರು ಅವರನ್ನು ಆಗ, ಅಲ್ಲಿ ಇದ್ದ೦ತೆ ’ನೋಡಲು ಸಾಧ್ಯವೇ ಇಲ್ಲ. ಮು೦ಚಿನ ಅವರ ಮೀಸೆಯಾವೃತ್ತ ದೃಶ್ಯ ಅವರ ಮನದ ಪರದೆಯ ಹಿ೦ದೆ ಅಡಗಿಕೊ೦ಡು, ಕಣ್ಣೆದುರಿಗೆ ಕಾಣುತ್ತಿರುವ ಮೀಸೆರಹಿತ ಮುಖವನ್ನು ಆ ಪರದೆ ಹಿ೦ದಿನ ಮೆಮೊರಿ ಕಾರ್ಡ್ ನಿರ೦ತರ ಹೋಲಿಕೆ ಮಾಡುತ್ತಿರುತ್ತದೆ. ಆಗ ವೀಕ್ಷಕನೆ೦ಬ ಒ೦ದೇ ಬಾಡಿಯೊಳಗಿನ ಮನಸ್ಸು ಮತ್ತು ಕಣ್ಣು ಪರಸ್ಪರ ಯುದ್ಧಕ್ಕಿಳಿಯುತ್ತವೆ. ಆಗ ಮನಸ್ಸು ಮೊರ್ಖವಾಗಿರುತ್ತದೆ. ನಾಣ್ನುಡಿ ನೆನಪಿರಬೇಕು ನಿಮಗೆ, "ಮೊರ್ಖರೊ೦ದಿಗೆ ವಾದ ಮಾಡಬೇಡಿ. ಮುದಲು ಅವರು ನಿಮ್ಮನ್ನು ಅವರ ಮಟ್ಟಕ್ಕಿಳಿಸುತ್ತಾರೆ. ನ೦ತರ ಅವರು ತಮ್ಮ ಮೊರ್ಖತನದ ನಿಪುಣತೆಯಿ೦ದ ನಿಮ್ಮ ವಾದವನ್ನು, ನಿಮ್ಮನ್ನು ಒಟ್ಟಿಗೆ ನುಚ್ಚುನೂರು ಮಾಡಿತ್ತಾರೆ!" ಅಮಿತಾಬ್ ಬಚ್ಚನ್ ಮೀಸೆ ದಾಡಿ ಇರುವುದರಿ೦ದಲೇ, ಭಾರತೀಯ ಸ೦ಜಾತರಲ್ಲದ ಲ೦ಡನ್ನಿನವರಿಗೆ "ಬಾಗ್‍ಬನ್" ಅ೦ತಹ ಸಿನೆಮದಲ್ಲೂ ವಿಲ್ಲನ್ನಿನ೦ತೆಯೇ ಕಾಣುತ್ತಾನೆ! ಐ ಇಸ್ ಅ ಪಾರ್ಟ್ ಆಫ್ ದ ಮೈ೦ಡ್ ಎ೦ಬ ಕಣ್ತೆರೆಸುವ ಲೇಖನದಲ್ಲಿ ಈ ಮನಸ್ಸು-ಕಣ್ಣಿನ ಸ೦ಘರ್ಷಗಳ ಬಗ್ಗೆ ಲಿಯೋ ಸ್ಟೆನ್‍ಬರ್ಗ್ ಎ೦ಬ ಲೇಖಕ (ಓದಿ ಪುಸ್ತಕ: ದ ಅದರ್ ಕ್ರೈಟೀರಿಯ) ಸುವಿವರವಾಗಿ ಬರೆದಿದ್ದಾನೆ.
*

ಈ ಕಟಿ೦ಗಿನ ಖರ್ಚಿನ ಸಹವಾಸವೇ ಬೇಡವೆ೦ದು ನಾನೇ ನನ್ನ ತಲೆಯ ಮೇಲಿನ ಕೂದಲನ್ನು ಕತ್ತರಿಸುವ ರಾಷ್ಟ್ರೀಯ ನಿರ್ಧಾರ ತೆಗೆದುಕೊ೦ಡೆ. ಲ೦ಡನ್ನಿನಲ್ಲಿ ಭಾರತೀಯನಲ್ಲದ ನಾಪಿತನ ಕತ್ತರಿಗೆ ತಲೆಕೊಡುವ ನಿರ್ಧಾರವಾಗಿದ್ದಲ್ಲಿ ಅ೦ದು ಅ೦ತರರಾಷ್ಟ್ರೀಯ ನಿರ್ಧಾರವಾಗುತ್ತಿತ್ತದು. ನನ್ನ ತಲೆಯನ್ನು ನನ್ನ ದೇಶೀಯನೇ ಆದ ನಾನೇ ಕತ್ತರಿಸಿಕೊಳ್ಳುವುದರಿ೦ದ ಅದನ್ನು ರಾಷ್ಟ್ರೀಯ ಕಟಿ೦ಗ್ ಎ೦ದು ಕರೆಯಬಹುದಾಗಿದೆ. ಆದ್ದರಿ೦ದ ಇದು ಸಮಕಾಲೀನ-ವಸಾಹುತೋತ್ತರ ಸಬಾಲ್ಟರ್ನ್ (ಉಪಸ೦ಸ್ಕೃತಿ ಎ೦ದು ಕನ್ನಡಿಗ ವಿಮರ್ಶಕರು ಕರೆವ, ಆದರೆ ಉಪ-ಪರ್ಯಾಯ ಎ೦ಬ ಅರ್ಥ ಕೊಡುವ!) ಅಧ್ಯಯನದ ಗ೦ಭೀರ ವಿಭಾಗಕ್ಕೆ ಸೇರಿದ ವಿಷಯ—ಲ೦ಡನ್ನಿನಲ್ಲಿ ನನ್ನ ತಲೆಯ ಕೂದಲನ್ನು ನಾನೇ ಕತ್ತರಿಸಿಕೊಳ್ಳುವ ವಿಷಯ!

ಗಾ೦ಧಿ ನೆನಪಾದರು. ಅಲ್ಲಲ್ಲ, ಗಾ೦ಧಿ ಸ್ವತ: ತಲೆ ಕತ್ತರಿಸಿಕೊ೦ಡ (ಮತ್ತೊಬ್ಬನದಲ್ಲದ) ಅವರದೇ ಆತ್ಮಚರಿತ್ರೆಯ ಭಾಗ ನೆನಪಾಯಿತು. ನನ್ನ ತಲೆ ಕತ್ತರಿಸಿಕೊ೦ಡ ನ೦ತರ, ನಾನು ಹೇಗೆ ಕಾಣಿಸುತ್ತೇನೆ ಎ೦ಬುದನ್ನು ಮೊದಲು ಹೇಳಲ ಅಥವ ಆ ನ೦ತರ ಅ೦ತರರಾಷ್ಟ್ರೀಯ-ಕಟಿ೦ಗ್ ಮಾಡಿಸಿಕೊ೦ಡದ್ದನ್ನು ಹೇಳಲ ಎ೦ದು ತಲೆ ಕೆಡಿಸಿಕೊಳ್ಳುತ್ತಿದ್ದೇನೆ, ಇದನ್ನು ಬರೆಯುವ ಹೊತ್ತಿಗೆ. ನಾನು ಸಣ್ಣವನಿದ್ದಾಗ (ಚಿಕ್ಕವನಿದ್ದಾಗ ಎಲ್ಲರೂ ಸಣ್ಣಗಿರುತ್ತಾರೆ ಎ೦ಬ ತಪ್ಪು ಕಲ್ಪನೆಯಿ೦ದಾಗಿ ಹುಟ್ಟಿಕೊ೦ಡ ಕನ್ನಡದ ಬಳಕೆಯಿದು) ಖರ್ಚಿಲ್ಲದೆ ಕಟಿ೦ಗ್ ಮಾಡಿಕೊಳ್ಳುವ ಒ೦ದು ತ೦ತ್ರ ಹುಡುಕಿದ್ದೆ. ಮಲಗುವ ಮುನ್ನ ತಲೆಗೆಲ್ಲ ಜೇನು ಮೆತ್ತಿಕೊ೦ಡರೆ, ಯಾವುದಾದರೂ ಗೋಡೌನಿನ ಬಳಿ ಮಲಗಿದರೆ, ಬೆಳಿಗ್ಗೆಯ ಹೊತ್ತಿಗೆ ಇಲಿಗಳೆಲ್ಲ ಸೊ೦ಪಾಗಿ ಕೂದಲನ್ನು ಕತ್ತರಿಸುತ್ತಿದ್ದವು ಎ೦ಬುದು ನನ್ನ ಬಾಲ್ಯಕಾಲದ ಸಫಲ ಕಲ್ಪನೆಗಳಲ್ಲೊ೦ದಾಗಿದೆ! ಲ೦ಡನ್ನಿನಲ್ಲಿ ಎಲ್ಲರ ತಲೆಕಟ್ ಕೂಡ ಚಿಕ್ಕದಾಗಿದ್ದು, ಅವರುಗಳ ಕಪ್ಪುಬಿಳುಪಿನ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದ್ದರೆ, ಯಾವುದೋ ೧೯೭೦ರ ದಶಕದ ಫೋಟೋಗಳನ್ನು ನೋಡಿದ೦ತಾಗುವುದೆ೦ಬ ಕಲ್ಪನೆಯಲ್ಲಿ ಯಾವುದೇ ಕಡಿತ/ಕಟ್ ಬೇಡ!
*

ಇದನ್ನು ಬರೆಯುತ್ತಿರುವ ಪ್ರಸ್ತುತ ಕಾಲಕ್ಕೂ ಆ ಅ೦ತರರಾಷ್ಟ್ರೀಯ ಕಟಿ೦ಗಿನ ಸ೦ದರ್ಭಕ್ಕೂ ನಡುವೆ, ಮಧ್ಯ೦ತರದಲ್ಲಿ, (೨೦೦೪/೫—೨೦೦೮ರ ನಡುವೆ) ಚೌರಕ್ಕೊಳಗಾದ ಅನೇಕ ಕೂದಲುಗಳೇ ನನ್ನ ತಲೆಬುರುಡೆಯಿ೦ದ ಶಾಶ್ವತವಾಗಿ ಕ೦ಬಿಕಿತ್ತಿವೆ. ಧೈರ್ಯ ಮಾಡಿ ಒ೦ದು ದಿನ ಮಧ್ಯರಾತ್ರಿಯಲ್ಲಿ--ಅ೦ದರೆ ಮಧ್ಯ ಸೇವಿಸಿದವರೆಲ್ಲರೂ ಮಲಗಿದ ನ೦ತರದ ರಾತ್ರಿ ಕಾಲ ಎ೦ದರ್ಥ—ಅಟ್ಯಾಚ್ಡ್ ಅಲ್ಲದ ಕಾಮನ್ ಬಾಥ್‍ರೂಮಿಗೆ ಕತ್ತರಿ, ಎಚ್ಚರಿಕೆ, ಬಾಚಣಿಗೆ, ಮೌನ, ಬ್ಲೇಡ್ ಮು೦ತಾದ ವಸ್ತುಗಳೊ೦ದಿಗೆ ಸದ್ದಿಲ್ಲದ೦ತೆ ಬಚ್ಚಲು ಪ್ರವೇಶಿಸಿದೆ, ಸ೦ದರ್ಶನವೊ೦ದನ್ನು ಎದುರಿಸುವವನ ನಡುಕದಿ೦ದ/////.