ವಜ್ರಗಳ ಬಗ್ಗೆ ನಿಮಗೆಷ್ಟು ಗೊತ್ತು?
ವಜ್ರ ಯಾರಿಗೆ ಗೊತ್ತಿಲ್ಲ ಹೇಳಿ? ಅತ್ಯಂತ ಕಠಿಣವಾದ, ಹೊಳೆಯುವ ವಜ್ರವನ್ನು ಆಭರಣಗಳಲ್ಲಿ ಮಾತ್ರವಲ್ಲದೆ ಅನೇಕ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಈ ಬೆಲೆಬಾಳುವ ಹರಳಿನ ಬಗ್ಗೆ ಕೆಲ ಮಾಹಿತಿಗಳು ಇಲ್ಲಿವೆ.
* ವಜ್ರಗಳನ್ನು ಮೊಟ್ಟಮೊದಲು ಭಾರತದಲ್ಲಿ ಸಂಶೋಧಿಸಲಾಯಿತು. ವಜ್ರ ಇಂಗಾಲದ ಒಂದು ಬಹುರೂಪಿ.
* ವಜ್ರ ಅತ್ಯಂತ ಕಠಿಣ ವಸ್ತು. ಇದರ ಕರಗುವ ಬಿಂದು ೩೮೨೦ ಕೆಲ್ವಿನ್ ಗಳು. ಅತ್ಯಂತ ಕಠಿಣವಾದ ವಜ್ರಗಳು ಆಸ್ಟ್ರೇಲಿಯಾದ ಗಣಿಗಳಲ್ಲಿ ಕಂಡುಬರುತ್ತವೆ.
* ಆಭರಣಗಳಲ್ಲಿ ‘ವಜ್ರದ ಆಭರಣಗಳೇ’ ಅತ್ಯಂತ ದುಬಾರಿ.
* ೨೦೦೯ರಲ್ಲಿ ೭.೦೩ ಕ್ಯಾರೆಟ್ ತೂಕದ ವಜ್ರವೊಂದು ೯೪,೯೦,೦೦೦ ಡಾಲರ್ ಗೆ ಮಾರಾಟವಾಗಿ ದಾಖಲೆ ಸ್ಥಾಪಿಸಿದೆ.
* ಒಂದು ವಜ್ರದಿಂದ ಮಾತ್ರವೇ ಮತ್ತೊಂದು ವಜ್ರವನ್ನು ಗೀಚಲು (ಕತ್ತರಿಸಲು) ಸಾಧ್ಯ.
* ಶೇಕಡಾ ೫೦ರಷ್ಟು ಸ್ವಾಭಾವಿಕ ವಜ್ರಗಳು ಆಫ್ರಿಕಾದಿಂದ ಬರುತ್ತಿವೆ. ಕೃತಕ ವಜ್ರವನ್ನು ೫೦ ವರ್ಷಗಳ ಹಿಂದೆ ತಯಾರಿಸಲಾಯಿತು.
* ಉದ್ಯಮಗಳಲ್ಲಿ ಇಂದು ಶೇಕಡಾ ೪೦ರಷ್ಟು ಕೃತಕ ವಜ್ರಗಳನ್ನು ಬಳಸಲಾಗುತ್ತದೆ.
* ಒಂದು ವಜ್ರದ ಬೆಲೆ ಅವುಗಳ ಕೊಯ್ತ, ಬಣ್ಣ, ಪಾರದರ್ಶಕತೆ ಮತ್ತು ಕ್ಯಾರೆಟ್ (ತೂಕ) ಗಳನ್ನು ಅವಲಂಬಿಸಿದೆ. ಅತ್ಯುತ್ತಮ ಪಾರದರ್ಶಕತೆ ಮತ್ತು ಬೆಳಕಿನ ವಿಭಜನೆ ಒಳ್ಳೆಯ ವಜ್ರದ ಗುಣಲಕ್ಷಣ.
* ಕೆಂಪು, ಹಸಿರು, ಗುಲಾಬಿ ಬಣ್ಣದ ಸ್ವಾಭವಿಕ ವಜ್ರಗಳು ಬಹು ಅಪರೂಪದ ವಜ್ರಗಳು. ನಮ್ಮ ಭೂಮಿಯಲ್ಲಿ ಕಂಡು ಬರುವ ಸ್ವಾಭವಿಕ ವಜ್ರಗಳು ಉಲ್ಕಾಶಿಲೆಗಳಿಂದಲೂ ಭೂಮಿಯನ್ನು ತಲುಪಿವೆ.
* ಸೂಕ್ತವಾದ ಒತ್ತಡ ಮತ್ತು ಉಷ್ಣತೆಗಳಿಂದ ನಿಮ್ಮಲ್ಲಿರುವ ಪೆನ್ಸಿಲ್ಲಿನ ಮದ್ದನ್ನೇ ವಜ್ರವಾಗಿ ಪರಿವರ್ತಿಸಬಹುದು. ವಜ್ರಗಳಿಗೆ ಅತ್ಯುತ್ತಮ ಹೆಚ್ಚು ಬೆಳಕಿನ ವಕ್ರೀಭವನ ಸಾಮರ್ಥ್ಯವಿದೆ.
* ಗಣಿಗಳಲ್ಲಿ ದೊರಕಿದ ಕಚ್ಛಾ ವಜ್ರಗಳನ್ನು ಸಾಣೆ ಹಿಡಿದು ಪಾಲೀಶ್ ಮಾಡಿದಾಗಲೇ ಅವುಗಳನ್ನು ಆಭರಣಗಳಲ್ಲಿ ಬಳಸಲು ಸಾಧ್ಯ
* ಹೆಚ್ಚು-ಹೆಚ್ಚು ಮುಖಗಳನ್ನು ಹೊಂದಿದಷ್ಟು ವಜ್ರದ ಬೆಲೆ ಹೆಚ್ಚುತ್ತಾ ಹೋಗುತ್ತದೆ. ಅತ್ಯಂತ ಹೆಚ್ಚು ಮುಖಗಳನ್ನು ಹೊಂದಿರುವ ವಜ್ರ ೫೭ ಮುಖಗಳನ್ನು ಹೊಂದಿದೆ.
* ವಜ್ರದ ಕಠಿಣತೆ ಸಾಮಾನ್ಯ ರೂಬಿ ಹರಳಿಗಿಂತ ೧೪೦ ಪಟ್ಟು ಹೆಚ್ಚಾಗಿರುತ್ತದೆ. ಅತ್ಯಂತ ಶುದ್ಧ ವಜ್ರಗಳು ಅತ್ಯಂತ ಕಠಿಣವಾಗಿರುತ್ತವೆ. ಅತ್ಯಂತ ಹೆಚ್ಚು ಜನಪ್ರಿಯ ವಜ್ರವೆಂದರೆ ‘ನೀಲಿ ವಜ್ರ'.
* ಆಸ್ಟ್ರೇಲಿಯಾದ ವಜ್ರದ ಗಣಿ ಅತ್ಯಂತ ಹೆಚ್ಚು ಗುಲಾಬಿ ಹಾಗೂ ಕೆಂಪು ಬಣ್ಣದ ವಜ್ರಗಳನ್ನು ಉತ್ಪಾದಿಸಿದೆ. ಪ್ರಪಂಚದ ಅತ್ಯಂತ ಹೆಚ್ಚು ಪ್ರಸಿದ್ಧ ಗುಲಾಬಿ ಬಣ್ಣದ ವಜ್ರವೆಂದರೆ ದರ್ಯಾನೂರ್ - ೧ ವಜ್ರ.
* ಪ್ರಪಂಚದ ಅತ್ಯಂತ ಪ್ರಸಿದ್ಧ ಹಳದಿ ಬಣ್ಣದ ವಜ್ರವೆಂದರೆ ಕಿಂಬರ್ಲಿ ಆಕ್ಟಾಹೆಡ್ರನ್ ವಜ್ರ.
* ಪ್ರಪಂಚದ ಅತ್ಯಂತ ಪ್ರಾಚೀನ ವಜ್ರ ೪೦೦ ಕೋಟಿ ವರ್ಷಗಳ ಹಿಂದಿನದು. ಇದು ಪ. ಆಸ್ಟ್ರೇಲಿಯಾದಲ್ಲಿ ಕಂಡು ಬಂದಿದೆ.
* ಲಾವಾರಸ ಚಿಮ್ಮುವ ಬೆಟ್ಟದ ಬಾಯಿಯ ಮೂಲಕ ಬಹುತೇಕ ವಜ್ರಗಳು ಉತ್ಪಾದನೆಯಾಗಿವೆ.
* ಇಂಗಾಲದ ಪರಮಾಣುಗಳು ಅತ್ಯಂತ ಒತ್ತೊತ್ತಾಗಿ ಜೋಡಣೆಯಾಗುವ ಮೂಲಕ ವಜ್ರಕ್ಕೆ ಈ ಕಠಿಣತೆ ಬಂದಿದೆ.
* ವಜ್ರಗಳಿಗೆ ಬಣ್ಣ ಬರುವುದು ಅವುಗಳು ರೂಪಾಂತರಗೊಳ್ಳುವಾಗ ಅವುಗಳ ಜೊತೆಯಲ್ಲಿ ಇತರೆ ರಾಸಾಯನಿಕಗಳು ಸೇರುವುದರಿಂದ.
* ವಜ್ರದ ಆಭರಣಗಳಲ್ಲಿ ಅತ್ಯಂತ ಜನಪ್ರಿಯ ಆಭರಣವೆಂದರೆ ‘ವಜ್ರದ ಉಂಗುರ'.
* ವಜ್ರದ ಉಂಗುರವನ್ನು ‘ನಿಶ್ಚಿತಾರ್ಥಕ್ಕೆ’ ತೊಡಿಸುವ ಸಂಪ್ರದಾಯ ಪ್ರಾರಂಭವಾದದ್ದು ೧೪೭೭ರಲ್ಲಿ ಆಸ್ಟ್ರಿಯಾದ ಆರ್ಕ್ ಡ್ಯೂಕ್ ಮ್ಯಾಕ್ ಮಿಲನ್ ತನ್ನ ಪ್ರೇಯಸಿಗೆ ಈ ವಜ್ರದ ಉಂಗುರವನ್ನು ತೊಡಿಸಿದ್ದ.
* ಅಮೇರಿಕ ಒಂದರಲ್ಲೇ ಪ್ರತಿ ವರ್ಷ ೭೦೦ ಕೋಟಿ ಡಾಲರ್ ಹಣವನ್ನು ವಜ್ರದ ಉಂಗುರಗಳ ಮೇಲೆ ವೆಚ್ಚ ಮಾಡಲಾಗುತ್ತದೆ.
* ಅಮೇರಿಕದಲ್ಲಿ ಪ್ರತಿ ಗಂಡು ತನ್ನ ಮದುವೆಯಾಗುವ ಗೆಳತಿಗೆ ತನ್ನ ಮೂರು ತಿಂಗಳ ಸಂಬಳವನ್ನು ವಜ್ರದ ಉಂಗುರಕ್ಕಾಗಿ ವೆಚ್ಚ ಮಾಡುತ್ತಾನಂತೆ !
* ಕೆಲವು ಆಭರಣಗಳಲ್ಲಿ ವಜ್ರವೆಂದು ‘ಮೊನ್ಯಾಸೈಟ್' ಹರಳನ್ನು ಕೂರಿಸಿ ಮೋಸ ಮಾಡುತ್ತಾರೆ.
* ನೀವು ಶುದ್ಧ ವಜ್ರದ ಆಭರಣಗಳನ್ನು ಕೊಳ್ಳುವಾಗ ಅಂಗಡಿಯವರಿಂದ ಅದರ ಪ್ರಾಮಾಣೀಕೃತ ದಾಖಲೆಯನ್ನು ಕೇಳಿ.
* ಇಂದು ಶೇಕಡಾ ೨೦ರಷ್ಟು ವಜ್ರಗಳು ಮಾತ್ರ ಆಭರಣಗಳಲ್ಲಿ ಬಳಸಲಾಗುತ್ತದೆ. ಶೇಕಡಾ ೮೦ರಷ್ಟು ವಜ್ರಗಳನ್ನು ಉದ್ಯಮಗಳಲ್ಲಿ ಬಳಸಲಾಗುತ್ತದೆ.
* ಪ್ರಪಂಚದ ಅತ್ಯಂತ ಹೆಚ್ಚು ವಜ್ರಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರ ಅಮೇರಿಕ.
* ಪ್ರಾಮಾಣೀಕೃತ ದಾಖಲೆಯಿರುವ ವಜ್ರಕ್ಕೆ ಬೆಲೆ ಹೆಚ್ಚಾದರೂ ಅಂತಹ ವಜ್ರವನ್ನು ಕೊಳ್ಳುವುದು ಹೆಚ್ಚು ಸುರಕ್ಷಿತ.
* ವಜ್ರದ ಶುದ್ಧತೆಯನ್ನು ಪರೀಕ್ಷಿಸಲು ನೆರಳಾತೀತ ವಿಕಿರಣಗಳನ್ನು (Ultraviolet Rays) ಬಳಸುತ್ತಾರೆ.
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ