'ವರ್ಧಕ'ದೊಳಗಿನ 'ಧ್ವನಿ'
"ಹಲೋ...ಹಲೋ...ಮೈಕ್ ಚೆಕ್..ಮೈಕ್ ಚೆಕ್.." ಹುಂ.ಶುರುವಾಯ್ತು,ಇವ್ರ ಪ್ರವರ.ಇನ್ನು ಇಡೀ ದಿನ ಬಿಡುವಿಲ್ಲ ನಂಗೆ. ಬಂದು,ಬಂದು ಬಡ್ಕೊಳ್ಳೋರ್ಗೆಲ್ಲಾ ತಲೆಯೊಡ್ಡಿ ನಿಲ್ಬೇಕು. ಅಂದ್ ಹಾಗೆ,ನಾನ್ಯಾರು ಅಂತ ಗೊತ್ತಾಯ್ತಾ? ನಾನು ರೀ,ನೀವ್ ಭಾಷ್ಣ ಬಿಗಿಯೋವಾಗ,ಹಾಡೋವಾಗ,ನಿಮ್ ಧ್ವನೀನ ಊರಾಚೆಗೂ ಕೇಳೋ ಹಾಗ್ ಮಾಡೋವಲ್ಲಿ ಪ್ರಮುಖ ಪಾತ್ರ ವಹಿಸೋನು. ಧ್ವನಿವರ್ಧಕ ಅಲಿಯಾಸ್ ಮೈಕ್. ನಾನಿಲ್ದಿರೋ ಸಭೆ ಸಮಾರಂಭಗಳುಂಟೇ? "ಎಲ್ಲೆಲ್ಲಿ ನೀವ್ ನೋಡಿರೀ...ನನ್ನನೇ ಕಾಣ್ವಿರೀ..." ಹುಂ,ನಾನೇನೋ ಹೀಗಂತ ಹಾಡ್ತಾ ಇದೀನಿ. ಆದ್ರೆ ಸಂತೋಷ್ದಿಂದ ಏನಲ್ಲ ಬಿಡಿ,ನನ್ ಮನಸ್ಸಿನ್ ದುಃಖನ ಮರೆಮಾಚೋಕೆ. ಇವತ್ತ್ ಏನೇ ಆಗ್ಲಿ,ಎಲ್ಲಾ ನಿಮ್ ಹತ್ರ ಹೇಳ್ಬೇಕೂಂತಿದೀನಿ. ಅವ್ನೊಬ್ಬ,ಇಪ್ಪತ್ತೈದ್ ಸಲ ಬಂದು "ಮೈಕ್ ಚೆಕ್ ಮೈಕ್ ಚೆಕ್" ಅನ್ನೋಷ್ಟ್ರೊಳ್ಗೆ ಮುಗುಸ್ಬಿಡ್ತೀನಿ.
ಮೊದ್ ಮೊದ್ಲು ಜನ್ರೆಲ್ಲ ನನ್ನನ್ನ ಆಶ್ಚರ್ಯದಿಂದ ನೋಡ್ತಿದ್ರು. ಅವ್ರ್ಗೆಲ್ಲಾ ನಾನೊಬ್ಬ ವಿಶಿಷ್ಟ ವಸ್ತು ಆಗಿದ್ದೆ. ಅದೇನೋ ಒಂದ್ ರೀತಿ ಗೌರವ ಇತ್ತು. ಅವಾಗ್ಲೆ ಚೆನ್ನಾಗಿತ್ತು. ಈಗ್ ನನ್ ಕೇರ್ ಮಾಡೋರೇ ಇಲ್ಲ. ಶೀತ,ತಲೆನೋವ್ ಏನಾದ್ರು ಬಂದು,ನಾನ್ ಸರಿಯಾಗ್ ಕೆಲ್ಸ ಮಾಡ್ದೆ ಹೋದ್ರೆ,ಡಬ್ ಡಬ್ ಅಂತ ನನ್ ತಲೇಗ್ ಸರ್ಯಾಗ್ ಹೊಡೀತಾರೆ. ನಾನ್ ಸರಿಯಾಗ್ ಇದ್ರೂನು,ಹಲವು ಜನ,ಮಾತ್ ಶುರುಹಚ್ಕೊಳ್ಳೋಕ್ ಮೊದ್ಲು ನನ್ಗೆರಡ್ಸಾರಿ ಹೊಡೀದೇ ಇಲ್ಲ ನೋಡಿ. ದಿನಾ ಸುಮ್ ಸುಮ್ನೇ ಪೆಟ್ ತಿಂತೀನಿ. ನನ್ ಸಹೋದ್ಯೋಗಿಗಳ್ಗೆ(ಬ್ಯಾಟರಿ,ಸ್ಪೀಕರ್...)ನನ್ನಷ್ಟು ಕಷ್ಟ ಇಲ್ಲ. ನನ್ಗೆ ಇಲ್ಲಿಂದ ಭಡ್ತೀನೂ ಇಲ್ಲ!
ಇನ್ನು ನನ್ಮುಂದೆ ನಿಂತ್ ಮಾತಾಡೋರ್ ಕಥೆ...ಅಬ್ಬಾ!ಅದೇನಂತ ಹೇಳ್ಲಿ ನನ್ ಅವಸ್ಥೆನಾ! ಕರ್ಣಕಠೋರ ಭಾಷ್ಣ ಮಾಡೋ ರಾಜಕೀಯ ವ್ಯಕ್ತಿಗಳಂತೂ,ಅವಿರತವಾಗಿ ಮಾತಾಡ್ತಾನೇ ಇರ್ತಾರೆ. ಅವ್ರೇನ್ ಮಾತಾಡ್ತಾರೋ ಅವ್ರ್ಗೇ ಗೊತ್ತಿರೋದಿಲ್ಲ. ನೀವ್ ಏನೋ ಕೇಳೋಕಾಗ್ದೆ ಕಿವಿ ಮುಚ್ಕೋಬಹುದು. ಆದ್ರೆ ನಾನು..ಊಹೂಂ. ಒಂದ್ ಶಬ್ಧಾನೂ ಬಿಡ್ದೆ ಎಲ್ಲವನ್ನೂ ಸ್ವೀಕರ್ಸಿ,ವೃದ್ಧಿಸ್ಬೇಕು.
ಇನ್ನೂ ಕೆಲವ್ರಿದಾರೆ. ಅವ್ರ್ಗೆ ಭಯ ಆಗುತ್ತೆ ಅಂತ್ಲೋ ಅಥ್ವಾ ಮಾತಿನ್ ಭರ್ದಲ್ಲೋ,ನನ್ ಕುತ್ಗೇನ ಗಟ್ಟಿಯಾಗ್ ಹಿಡ್ಕೊಂಡು ಮಾತಾಡ್ತಾರೆ. ಹೆಣ್ಮಕ್ಳಾದ್ರೂ ಪರ್ವಾಗಿಲ್ಲ,ಮೆದುವಾಗ್ ಹಿಡೀತಾರೆ.(ಅವ್ರು ಗಟ್ಟಿಯಾಗ್ ಹಿಡ್ಕೊಂಡ್ರೂ ಅದೇ 'ಪರ್ವಾಗಿಲ್ಲ') ಘಟಾನುಘಟಿ ಗಂಡಸ್ರು ವೆದ್ಕೆ ಮೇಲ್ ಬರೋವಾಗ್ಲೆ ಭಯ್ವಾಗುತ್ತೆ. ಅವ್ರ್ ಮಾತು ಮುಂದ್ವರೀತಿದ್ದಂತೆ,ತನ್ನಷ್ಟಕ್ಕೇ ರೋಷ-ದ್ವೇಷಗಳೆಲ್ಲ ಬರೋಕ್ ಶುರುವಾಗುತ್ತೆ. ಪರಿಣಾಮ ಮಾತ್ರ ಬಡಪಾಯಿಯಾದ್ ನನ್ ಮೇಲೆ. "ನಾನು ಅವ್ರನ್ನ ಸುಮ್ನೆ ಬಿಡೋದಿಲ್ಲ..."-ಅಂತೇನೇನೋ ಹೇಳ್ತಾರೆ. ಇಲ್ಲಿ ಸಾಯೋನು ನಾನು! ಹಿಂಡ್ ಹಿಪ್ಪೇಕಾಯ್ ಮಾಡ್ಬಿಡ್ತಾರೆ. ನನ್ನನ್ನ ಲಕ್ಷಣ್ವಾಗಿ ಸ್ಟ್ಯಾಂಡ್ ಮೆಲೆ ಕೂರ್ಸಿದ್ದ್ ನ್ನ ಇವ್ರ್ಗೆಲ್ಲಾ ಸಹಿಸೋಕಗೊಲ್ಲ. ಅಲ್ಲಿಂದ ಎತ್ತಿ ತೆಗ್ದು ಕೈನಲ್ಲೇ ಹಿಡ್ಕೊಂಡ್ ಮಾತಾಡ್ಬೇಕು.
ಮೊನ್ನೆ ಹೇಗೇ ಒಬ್ರು ಭಾಷ್ಣ ಮಾಡ್ತಾ ಇದ್ರು. ನಾನು ನನ್ ಕೆಲ್ಸ ಮಾಡ್ತಾ ಇದ್ದೆ. ಆದ್ರೆ,ಏನೋ ಹನಿ ಹನಿ ಬಿದ್ದ್ ಹಾಗಾಗಾಯ್ತು,ತಲೆಮೇಲೆ. "ಇದೇನಿದು,ಮಳೆ ಬರ್ತಿದ್ಯಾ?" ಅಂತ ಹಾಗೆ ಮೆಲ್ಗೆ ಮೇಲ್ ನೋಡ್ತೀನಿ...ವ್ಯಾಕ್..ಈ ಮನುಷ್ಯ,ಅದೇ ಮಾತಾದ್ತಿದ್ದಾರಲ್ಲ,ಅವ್ರ ಬಾಯಿಂದ ಜಲಪ್ರೋಕ್ಷಣೆ! ಬೆಳ್ ಬೆಳ್ಗೆ ಒಳ್ಳೆ ಅಭಿಷೇ! ಅಯ್ಯೋ ಯಾರ್ ಹತ್ರ ಹೇಳ್ಕೊಳ್ಳಿ ನನ್ ಕಷ್ತಾನಾ. "...ಏನು ನಿನ್ನ ಹನಿಗಳ ಲೀಲೆ.."ಅಂತ ಗುನುಗ್ತಾ ಕೂತ್ಕೊಂಡೆ,ಬೆರೆ ವಿಧಿ ಇಲ್ದೆ.
ಗುನುಗೋದು ಅಂದಾಗ ನೆನ್ಪಾಯ್ತು ನೋಡಿ. ಕೆಲವ್ ಜನ ಬರ್ತಾರೆ,ನನ್ ಮುಂದೆ ಅಲ್ಲಲ್ಲ ನನ್ ಹಿಡ್ಕೊಂಡು ಹಾಡೋಕೆ. ಆಹಾ!ಅದೇನ್ ಸುಶ್ರಾವ್ಯವಾಗ್(?) ಹಾಡ್ತಾರೆ...ಅದ್ಕಿನ್ನ ಭಾಷ್ಣಾನೇ ಲೇಸನ್ಸುತ್ತೆ. ಇಂಪಾಗ್ ಹಾಡೋರೂ ಬಹಳ ಜನ ಇದಾರೆ ಅನ್ನಿ. ಅಂಥೋರ್ ಸಿಕ್ಕಿದ್ರೆ ದಿನ ಪೂರ್ತಿ ಒಂಥರಾ ನೆಮ್ದಿ.
ನಿಮ್ ಹಳ್ಳೀನಲ್ಲಿ ನಾಟ್ಯ,ಯಕ್ಷಗಾನ ಇದೆ ಅಂದ್ರೆ ನಿಮ್ಗೆಲ್ಲಾ ಅದೆಷ್ಟು ಖುಷಿ ಅಲ್ವಾ? ಆದ್ರೆ ನನ್ ಪಾಡು! ಕುತ್ಗೇಗೊಂದ್ ಹಗ್ಗ ಕಟ್ಟಿಟ್ಟು ವಾದ್ಕೆ ಮೇಲ್ಗಡೆ ನೇತ್ಹಾಕ್ತಾರೆ. ಇಡೀ ರಾತ್ರಿ,ತಲೆ ಕೆಳ್ಗಾಗಿ ನಿಂತ್ಕೊಂಡು,"ಇದು ಯಾರು ಬರೆದ ಕಥೆಯೋ..."ಅಂತ ನನ್ಗಾಗೇ ಇರೋ ಸಾಲುಗಳನ್ನ ನೆನಪ್ ಮಾಡ್ಕೊಂಡು ಇರೋ ಪರಿಸ್ಥಿತಿ! ನಿಮ್ಗೆಲ್ಲಾ ಪಾತ್ರಧಾರಿಗಳ ಮಾತುಗಳನ್ನ ಚೆನ್ನಾಗ್ ಕೇಳ್ಸಿದೀನಲ್ಲ ಅನ್ನೋ ತೃಪ್ತಿ ಮಾತ್ರ ಖಂಡಿತಾ ಇರುತ್ತೆ.
ಆಮೇಲೆ ನಂಗೆ ಈ ಪುಟಾಣಿ ಮಕ್ಳು ಮಾತಾಡೋದು ಅಂದ್ರೆ ತುಂಬಾ ಇಷ್ಟ. ಅವ್ರು ಆ ಪುಟ್ಟ ಕೈಯಲ್ಲಿ,ನಾನು ಪೂರ್ತಿ ಹಿಡೀದೇ ಇದ್ರೂ,ತಮ್ ಎರಡೂ ಕೈಗಳನ್ನ ಬಳಸಿ ನನ್ನನ್ನ್ ಹಿಡ್ಕೊಂಡು ಮುದ್ದ್ ಮುದ್ದಾಗಿ ಮಾತಾಡ್ತಾರೆ. ಅವ್ರು ಹಾಡೋದಂದ್ರೆ ಮತ್ತೂ ಚಂದ್ವೆ. ಹಾಡೋವಾಗ ತಾವೂ ಆ ಕಡೆ ಈ ಕಡೆ ಓಲಾಡ್ತಾ,ನನ್ನನ್ನೂ ಜೋಕಾಲಿ ಆದಿಸ್ತಾರೆ. ಕೆಲವು ಮಕ್ಳು,ಪಾಪ ಮನೇನಲ್ಲಿ ಚೆನ್ನಾಗ್ ಭಾಷ್ಣ ಬಾಯ್ಪಾಠ ಮಾಡ್ಕೊಂಡ್ ಬಂದಿರ್ತಾರೆ. ಆದ್ರೆ,ಸಭೆ ನೋಡ್ದಾಗ ಅದೆಲ್ಲ ಮರ್ತೇ ಹೋಗ್ಬಿಡುತ್ತೆ. ಮಾತೇ ಬರ್ದ್ ಹಾಗ್ ಆಗಿ,ಅತ್ತ್ ಬಿಡ್ತಾರೆ. ಆಗ ನಂಗೂ ತುಂಬಾ ಬೇಜಾರಾಗುತ್ತೆ. ಛೆ,ನಂಗ್ ಮಾತ್ ಬರ್ತಿದ್ರೆ,ಖಂಡಿತಾ ಮೆಲ್ಗೆ ಏನಾರು ಹಾಳ್ಕೊಡ್ತಿದ್ದೆ-ಅಂತ ಅದೆಷ್ಟೋ ಸಾರಿ ಅಂದ್ಕೊಂಡಿದೀನಿ.
ಈ ಜನನಾಯಕರ ಸಭೆ ಅಂತಂದ್ರೆ ನಂಗೆ ಎಲ್ಲಿಲ್ಲದ್ ಭಯ. ಅವ್ರು ಮಾತ್ ಮುಗುಸ್ತಾ,ಜನ್ರ್ ಚಪ್ಪಾಳೆ ಗಿಟ್ಟಿಸೋಕೆ ದೊಡ್ದಾಗಿ ಕೈ ಮುಗಿತಾರೆ. ನಾನು ಅವ್ರ ಮುಗಿದ(?) ಕೈಯಲ್ಲಿ! ಎಷ್ಟ್ ಹೊತ್ತಾದ್ರೂ ತಲೆ ಮೇಲಿನ್ ಕೈ ಕೆಳ್ಗಿಳಿಯೋದೇ ಇಲ್ಲ! ಯಾವ್ ಕ್ಷಣ್ದಲ್ಲಿ ಬಿದ್ದ್ ಸಾಯ್ತೀನೋ ಅಂತ ಭಯ ನಂಗೆ. ಅಲ್ಲ,ಅಷ್ಟ್ ಹೊತ್ತ್ ನಿಂದ,ಅಷ್ಟೂ ಜನಕ್ಕೆ ಅವ್ರ ಭಾಷ್ಣ ಕೇಳೋ ಹಾಗ್ ಮಾಡಿದ್ ನನ್ ಬಗ್ಗೆ ಅವ್ರ್ಗೆ ಕಿಂಚಿತ್ತೂ ಕಾಳ್ಜಿ ಇಲ್ಲ!
ಈಗೀಗ್ ಮಾತ್ರ,ತಂತ್ರಜ್ಞಾನ ಬೆಳೆದ್ ಹಾಗೆ ನನ್ ಸ್ಥಾನಾನ ನನ್ ಹೊಸ ಹೊಸ ತಮ್ಮಂದ್ರು ತುಂಬ್ತಿದಾರೆ. ಡಯಟ್ ಮಡೋ ಜನಕ್ಕೆ ದಪ್ಪ್ ಗಿರೋ ನಾನ್ ಬೇಡ್ವಂತೆ. ಹಾಗಾಗಿ ಸ್ಲಿಮ್ ಆಗಿರೋ ಅವ್ರೇ ಇವಾಗ ಹೆಚ್ಚಿನ್ ಕಡೆ ಬಳಸಲ್ಪಡ್ತಿದಾರೆ. ನಾನೇನಿದ್ರೂ ಸಾಮಾನ್ಯ ಸಭೆ ಸಮಾರಂಭಗಳಿಗಷ್ಟೇ ಸೀಮಿತ್ವಾಗ್ಬಿಡ್ತ ಇದೀನಿ. ನಾನು ಮ್ಯೂಸಿಯಂನಲ್ಲಿ ತೆಪ್ಪಗ್ ಕೂರೋ ಕಾಲ ಹತ್ರದಲ್ಲೆ ಇದೆ.
ಹುಂ,ನನ್ ಕಥೆ ಹೇಳ್ ಮುಗಿಯೋಂಥದ್ದಲ್ಲ ಬಿಡಿ. ಅದೋ ಯಾರೋ ಒಬ್ಬ್ ಧಾಂಡಿಗ ಬರ್ತಿದ್ದಾನೆ,ಕೊರ್ಯೋಕೆ. ಇನ್ಮುಂದೆ ನನ್ ಕಂಡಾಗ ನನ್ ಈ ಕಥೆ-ವ್ಯಥೆ ನೆನ್ಪಿಸ್ಕೊಳ್ತೀರಾ ಅಂತಂದ್ಕೊಳ್ತೀನಿ. ಇನ್ನೊಮ್ಮೆ ಮಾತಾಡೋಣ,ನಮ್ ಸ್ಕಾರ.