ವಿಕಿರಣ
ಭಾಸ್ಕರ ತನ್ನ ಡೆಸ್ಕಿನ ಮೇಲಿದ್ದ ಸಣ್ಣ ಗಡಿಯಾರದ ಕಡೆ ನೋಡಿದ. ಸಮಯ ರಾತ್ರಿ ಎಂಟು ಗಂಟೆ. ಕೊನೆಯ ಶಿಫ್ಟ್ ಮುಗಿಯುವುದಕ್ಕೆ ಇನ್ನೂ ಐದು ತಾಸು. ಭಾಸ್ಕರ ಚೇರಿನಲ್ಲಿ ಹಿಂದೆ ವರಗಿಕೊಂಡು ಕಣ್ಣು ಮುಚ್ಚಿದ. ಕಳೆದ ವಾರದ ವಿಜ್ಞಾನಿ ತಂಡದ ಮೀಟಿಂಗ್ ನ ದೃಶ್ಯ ಅವನ ಮನದಲ್ಲಿ ಮೂಡಿತು.
“ಭಾಸ್ಕರ್, ಯುರೇನಿಯಂ ಮಾದರಿ ಎ೧೪೧ ನ ವಿಶ್ಲೇಷಣೆಯ ಫಲಿತಾಂಶ ಬಂದ ಕೂಡಲೇ ನನಗೆ ಕಳಿಸ್ತೀರಾ?”, ಬಾಸ್ ಕೇಳಿದರು.
“ಸರ್, ಇನ್ನು ಹತ್ತು ದಿವಸದಲ್ಲಿ ಅದರ ವಿಶ್ಲೇಷಣೆ ಮುಗಿಯುತ್ತೆ. ಆದ ತಕ್ಷಣ ಕಳಿಸ್ತೀನಿ”, ಎಂದ ಭಾಸ್ಕರ.
“ಒಳ್ಳೇದು. ನಮ್ಮ ಈ ಎಂಟು ವಿಜ್ಞಾನಿಗಳ ನಿರ್ಧಾರದ ಮೇಲೆಯೇ ಸಂಸದೀಯ ಸಮಿತಿ ಎ೧೪೧ ಅನ್ನು ಅನುಮೋದಿಸುತ್ತದೆ ಇಲ್ಲಾ ತಿರಸ್ಕರಿಸುತ್ತದೆ. ಅದಕ್ಕಾಗಿ, ನಿಮ್ಮೆಲ್ಲರ ವರದಿಗಳ ನಿಖರತೆಯ ಬಗ್ಗೆ ಎಚ್ಚರವಿರಲಿ”, ಬಾಸ್ ಸ್ವಲ್ಪ ಗಂಭೀರ ದನಿಯಲ್ಲಿ ತಮ್ಮ ತಂಡವನ್ನು ಎಚ್ಚರಿಸಿದರು.
ಭಾಸ್ಕರನ ಸಹೋದ್ಯೋಗಿ ಸಯದ್ ಮೀಟಿಂಗ್ ಅವಧಿಯಲ್ಲಿ ಮೊದಲ ಬಾರಿಗೆ ಮಾತನಾಡಿದ, “ಸರ್ ಒಂದು ಪ್ರಶ್ನೆ. ನೀವು ಹೇಳಿದ ಸಮಿತಿ, ನಾಗರಿಕ ಪರಮಾಣು ಶಕ್ತಿಗೆ ಸಂಬಂಧ ಪಟ್ಟಿದ್ದು. ಈ ಸಮಿತಿ ಹಾಗಾದರೆ, ಸಂಸತ್ತಿನ ಜೊತೆಗೆ, ರಕ್ಷಣಾ ಸಚಿವಾಲಯಕ್ಕೂ ಕೂಡ ಏಕೆ ವರದಿ ಸಲ್ಲಿಸುತ್ತಿದೆ?”. ಬಾಸ್ ಸಯದನ್ನೇ ಎರಡು ಕ್ಷಣ ನಿರ್ಲಿಪ್ತವಾಗಿ ನೋಡಿದರು. ನಂತರ, “ಇನ್ನು ಹತ್ತು ದಿವಸಕ್ಕೆ ಭೇಟಿಯಾಗೋಣ. ಈಗ ನೀವು ಹೊರಡಬಹುದು”, ಎಂದು ಘೋಷಿಸಿ, ಲ್ಯಾಪ್ಟಾಪ್ ಅನ್ನು ಟಪ್ ಎಂದು ಮುಚ್ಚಿ, ರೂಮಿನ ಹೊರಗೆ ನಡೆದರು.
ವಾಸ್ತವವಾಗಿ, ಸಯದ್ ಕೇಳಿದ ಪ್ರಶ್ನೆಗೆ ಉತ್ತರ ಪರಮಾಣು ಶಕ್ತಿ ಇಲಾಖೆ (ಡಿಎಇ) ಪದಾರ್ಥ ವಿಭಾಗದ ಎಲ್ಲಾ ವಿಜ್ಞಾನಿಗಳಿಗೂ ಗೊತ್ತೇ ಇತ್ತು. ಆಸ್ಟ್ರೇಲಿಯಾಯಿಂದ ಆಮದಾದ ಯುರೇನಿಯಂ ಅನ್ನು ವಿದ್ಯುತ್ ಉತ್ಪಾದನೆಗಾಗಿ ಉಪಯೋಗಿಸಲು ಸಂಸತ್ತು ಇತ್ತೀಚೆಗೆ ಅನುಮತಿ ನೀಡಿತ್ತು. ಈ ನಿರ್ಧಾರದ ಹಿಂದಿನ ನೇರ ಕಾರಣ ಭಾಸ್ಕರ ಮತ್ತು ಅವನ ಸಹೋದ್ಯೋಗಿಗಳ ಸಂಶೋಧನೆ, ವಿಶ್ಲೇಷಣೆಯ ಫಲಿತಾಂಶ. ಇದಾದ ಎರಡು ತಿಂಗಳಿಗೆ, “ಈ ಯುರೇನಿಯಂ ಮಾದರಿಯನ್ನು ಇನ್ನೂ ಪುಷ್ಟೀಕರಿಸಲು ಸಾಧ್ಯವಾ?”, ಎಂಬ ನಿಗೂಢ ಸಂದೇಶ ರಕ್ಷಣಾ ಮಂತ್ರಿಗಳ ಕಚೇರಿಯಿಂದ ಭಾಸ್ಕರನ ಬಾಸಿಗೆ ಬಂದಿತ್ತು. ಮಾಮೂಲು ಯುರೇನಿಯಂ ಅನ್ನು ಸ್ವಲ್ಪ ಪುಷ್ಟೀಕರಿಸಿ ಅಣು ಸ್ಥಾವರದಲ್ಲಿ ಉಪಯೋಗಿಸಿದರೆ, ಒಂದು ಮಧ್ಯಮ ಗಾತ್ರದ ಊರಿಗೆ ಆಗುವಷ್ಟು ವಿದ್ಯುತ್ ಉತ್ಪಾದನೆ ಮಾಡಬಹುದು. ಇನ್ನೂ ಹೆಚ್ಚು ಪುಷ್ಟೀಕರಿಸಿದರೆ, ಅದೇ ಊರನ್ನು ಆವಿಕರಿಸುವ ಅಣು ಬಾಂಬ್ ತಯಾರಾಗುವುದು. ಸರ್ಕಾರದಿಂದ ಬಂದ ಸಂದೇಶ ಯಾವ ದಿಕ್ಕಿನ ಕಡೆ ತೋರುತ್ತಿದೆ ಎಂಬುದರಲ್ಲಿ ಭಾಸ್ಕರನಿಗೆ ಯಾವ ಸಂದೇಹವೂ ಇರಲಿಲ್ಲ.
ಭಾಸ್ಕರ ಕಣ್ಣು ತೆರೆದು ಮುಂದೆ ಇದ್ದ ಕಂಪ್ಯೂಟರ್ ಎಡೆಗೆ ನೋಡಿದ. ಅದು ಇನ್ನೂ ಕೆಲಸ ಮಾಡುತ್ತಲೇ ಇತ್ತು. ಭಾಸ್ಕರ ದೀರ್ಘ ಉಸಿರು ತೆಗೆದುಕೊಳ್ಳುತ್ತಾ ಎದ್ದು ನಿಂತು, ಆಫೀಸಿನ ಹೊರಗೆ ನಡೆದ. ಹೊರದ್ವಾರದಲ್ಲಿ ನಿಂತ ಸೇನಾ ಸಿಪಾಯಿ, “ಆಜ್ ನೈಟ್ ಶಿಫ್ಟ್ ಕರ್ ರಹೇ ಹೇ ಸಾಬ್?”, ಎಂದು ಕೇಳಿದ. ಭಾಸ್ಕರ ಅವನ ಕಡೆ ನೋಡಿ ಮುಗುಳ್ನಗುತ್ತಾ ತನ್ನ ಐಡಿಯನ್ನು ದ್ವಾರದ ಪಕ್ಕ ಸ್ಕ್ಯಾನ್ ಮಾಡಿ ಹೊರಗೆ ನಡೆದ. ಹೊರಗೆ ಕೃಷ್ಣಪಕ್ಷದ ಕತ್ತಲಿನ ರಾತ್ರಿಯಲ್ಲಿ ತಂಪಾದ ಗಾಳಿ ಬೀಸುತ್ತಿತ್ತು. ಬೆಳಗಿನ ಶಿಫ್ಟಿನ ವಿರಾಮದ ವೇಳೆಯಲ್ಲಿ ತಾನು ಪ್ರತಿನಿತ್ಯ ಕೂರುವ ಪುಟ್ಟ ಕಟ್ಟೆಯ ದಿಕ್ಕಿನಲ್ಲಿ ಭಾಸ್ಕರ ನಡೆದನು. ಕಟ್ಟೆಯ ಮೇಲೆ ಆಸೀನನಾದ ನಂತರ, ದೂರದಲ್ಲಿ ಮಸುಕಾಗಿ ಕಾಣುತ್ತಿದ್ದ ಚಾಮುಂಡಿ ಬೆಟ್ಟದ ಬಾಹ್ಯರೇಖೆಯನ್ನು ನೋಡಿದ. ಅವನು ಕೂತಿದ್ದ ಕಟ್ಟೆಯ ಹಿಂದೆ, “Rare Materials Plant, Mysore”, ಎಂದು ಬೆಳಗಿಸಲಾಗಿದ್ದ ಒಂದು ಬೋರ್ಡು ಸಣ್ಣ ಅಕ್ಷರಗಳಲ್ಲಿ ಘೋಷಿಸುತ್ತಿತ್ತು.
ಮುಂಬೈನಿಂದ ಇತ್ತೀಚೆಗೆ ಮೈಸೂರಿಗೆ ಬಂದ ಭಾಸ್ಕರನಿಗೆ ಮತ್ತು ಅವನ ಪುಟ್ಟ ಕುಟುಂಬಕ್ಕೆ ಹೊಸ ಊರು ಹಿಡಿಸಿತ್ತು. ತನಗೆ ಮುಂಬೈಯಿನ ದೈನಂದಿನ ಟ್ರಾಫಿಕ್ ಕದನ ತಪ್ಪಿತ್ತು. ಮಡದಿಯ ತವರೂರು ಬೆಂಗಳೂರು ಆದ್ದರಿಂದ ಅವಳಿಗೂ ಒಳಿತು. ಒಂದು ವರ್ಷದ ಪುಟಾಣಿ ಹೊಸ ಜಾಗದ ಬಗ್ಗೆ ಅದರ ಅನಿಸಿಕೆಯನ್ನು ಇನ್ನೂ ವ್ಯಕ್ತಪಡಿಸಿರಲಿಲ್ಲ.
ಬಾಕಿಯಂತೆ ಜೀವನ ಸರಾಗವಾಗಿ ನಡೆದುಕೊಂಡು ಹೋಗುತ್ತಿದ್ದರೂ, “ನಾನು ಪರಮಾಣು ಇಂಜಿನಿಯರಿಂಗ್ ಕ್ಷೇತ್ರವನ್ನು ಏಕೆ ಆಯ್ದುಕೊಂಡೆ?”, ಎಂದು ಭಾಸ್ಕರ, ಕಳೆದ ವಾರದ ಮೀಟಿಂಗ್ ನಂತರ ಹಲವು ಬಾರಿ ಯೋಚಿಸಿದ್ದನು. ಡಿಎಇ ಇಲಾಖೆಯನ್ನು ಸೇರಿದ ನಂತರದ ಮೂರು ವರ್ಷಗಳಲ್ಲಿ ಈ ಪ್ರಶ್ನೆ ಅವನಲ್ಲಿ ಉದ್ಭವವಾಗಿದ್ದು ಇದೇ ಮೊದಲ ಬಾರಿಗೆ. ಮತ್ತೆ, ಯಾಕೆ ಉದ್ಭವವಾಗಬೇಕು? ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನದ ತುತ್ತ ತುದಿಯಲ್ಲಿರುವ ಸಂಸ್ಥೆಯಲ್ಲಿ ಕೆಲಸ. ಸ್ವತಂತ್ರವಾಗಿ ಸಂಶೋಧನೆ ಮಾಡುವ ಅವಕಾಶ. ನವೀನ ಪರಿಕಲ್ಪನೆಗಳನ್ನು ಪ್ರಚೋದಿಸುವ, ಅವುಗಳನ್ನು ಕಾರ್ಯಗತಗೊಳಿಸಿದರೆ ಮೆಚ್ಚುವ ಮೇಲಧಿಕಾರಿಗಳು. ನಿಕಟಸ್ನೇಹದಿಂದ ಒಟ್ಟಿಗೆ ಕೆಲಸ ಮಾಡುವ ಬುದ್ಧಿವಂತ ಸಹೋದ್ಯೋಗಿಗಳು. ಈ ಅಂಶಗಳ ಜೋಡಣೆಯಿಂದ ಭಾಸ್ಕರ ತನ್ನ ಪ್ರಸ್ತುತ ಹಿರಿಯ ವಿಜ್ಞಾನಿ ಹುದ್ದೆಗೆ ಕಿರಿಯನಾಗೇ ಪದೋನ್ನತಿ ಪಡೆದಿದ್ದ. ಇದರ ಜೊತೆಗೆ, ಭಾರತದ ಇಂಧನ ಸಮಸ್ಯೆಯನ್ನು ಪರಿಹರಿಸುವುದರಲ್ಲಿ ತನ್ನ ಅಳಿಲುಸೇವೆಯನ್ನು ಅಣು ಸಂಶೋಧನೆಯ ಮೂಲಕ ನೀಡುವುದರಲ್ಲಿ ಅವನಿಗೆ ವೃತ್ತಿಪರ ತೃಪ್ತಿಯೂ ದೊರಕಿತ್ತು. ಆದರೆ, ಪರಮಾಣು ಶಕ್ತಿಯನ್ನು ಯುದ್ಧಮಗ್ನ ಕಾರ್ಯಗಳಿಗೆ ಉಪಯೋಗಿಸುವ ಸರ್ಕಾರದ ಉದ್ದೇಶ, ಭಾಸ್ಕರನ ಮನದಲ್ಲಿ ಮೂಡಿದ ಪ್ರಶ್ನೆಗೆ ಕಾರಣವಾಗಿತ್ತು.
ನಾಗರಿಕ ಕಾರಣಕ್ಕಾಗಲಿ, ಸೇನಾ ಕಾರಣಕ್ಕಾಗಲಿ, ಅಣು ಸ್ಥಾವರಗಳನ್ನು ಕಟ್ಟುವ ನಿರ್ಧಾರ ಯಾವತ್ತಿದ್ದರೂ ಅಪಾಯಕಾರಿ ಪ್ರತಿಪಾದನೆ. ಸ್ಥಾವರದ ಸುತ್ತಮುತ್ತಲಿನ ಊರುಗಳು, ಹಳ್ಳಿಗಳು ಯಾವ ದುರಂತದಿಂದ, ಯಾವಾಗ ಪ್ರೇತಪಟ್ಟಣಗಳಾಗುತ್ತವೋ ಹೇಳಲಾಗುವುದಿಲ್ಲ. ಈ ವಿಷಯ ಜಪಾನೀಯರಿಗೆ ಮತ್ತು ರಷ್ಯನ್ನರಿಗೆ ಚೆನ್ನಾಗಿ ತಿಳಿದಿದೆ. ಪರಮಾಣು ವಿಪತ್ತಿನ ಸಾಧ್ಯತೆ ಹೆಚ್ಚಿಲ್ಲದಿದ್ದರೂ, ಸಾಧ್ಯತೆಯಂತೂ ಇದ್ದೇ ಇರುತ್ತದೆ. ನಾಗರಿಕ ಅಣು ಸ್ಥಾವರಗಳಿಂದ ದೇಶಾಭಿವೃದ್ಧಿಗೆ ಅಗತ್ಯವಾದ ವಿದ್ಯುತ್ ಶಕ್ತಿಯು ಬೃಹತ್ ಪ್ರಮಾಣದಲ್ಲಿ ದೊರಕುತ್ತದೆ ಎಂದು ವಾದಿಸಬಹುದು. ಆದರೆ, ಅಣ್ವಸ್ತ್ರಗಳ ಉಪಯುಕ್ತತೆಯನ್ನು ಹೇಗೆ ಸಮರ್ಥಿಸಿಕೊಳ್ಳುವುದು? “ಅಣ್ವಸ್ತ್ರಗಳು ಬಲಿಷ್ಠ ರಾಷ್ಟ್ರಗಳೊಂದಿಗೆ ಇರುತ್ತವೆ. ಕೆಲವು ವೈರಿ ರಾಷ್ಟ್ರಗಳೊಂದಿಗೂ ಇರುತ್ತವೆ. ಆದ್ದರಿಂದ, ಭಾರತವೂ ಇಂತಹ ಅಸ್ತ್ರಗಳನ್ನು ಉತ್ಪಾದಿಸಬೇಕು”, ಎಂಬ ರಾಷ್ಟ್ರೀಯವಾದಿ ತರ್ಕ, ಭಾಸ್ಕರನಿಗೆ ಸರಿ ಎನಿಸಲಿಲ್ಲ. ಏಕೆಂದರೆ, ಈ ಜಾಗತಿಕ ಜಗತ್ತಿನಲ್ಲಿ ಪರಮಾಣು ಯುದ್ಧ ಆರಂಭವಾದರೆ, ಗೆಲುವು ಯಾವ ರಾಷ್ಟ್ರದ್ದಾಗುತ್ತದೋ ತಿಳಿಯದು, ಸೋಲಂತು ಪ್ರತಿಯೊಂದು ದೇಶಕ್ಕೂ ಸಮವಾಗಿ ವಿತರಿಸಲಾಗುವುದು. ಇಂತಹ ಭಾರೀ ಪ್ರಮಾಣದ ಯುಧ್ಧದ ಪರಿಣಾಮದಿಂದಾಗಿ ಮಾನವನ ಬಲಿದಾನದ ಜೊತೆಗೆ ವಿಶ್ವದ ಆರ್ಥಿಕ ಮತ್ತು ಸಾಮಾಜಿಕ ಘಟಕಗಳು ಬಲು ಬೇಗ ಕುಸಿದುಬೀಳುವುವು.
ಭಾಸ್ಕರನಿಗೆ ಯೋಚನೆಗಳಿಂದ ತಲೆತಿರುಗಿತು. ಎಷ್ಟೇ ಯೋಚಿಸಿದರೂ, ಈ ಹುದ್ದೆಯನ್ನು, ಈ ಕ್ಷೇತ್ರವನ್ನು ತಾನು ಆಯ್ದು ಏನು ಪ್ರಯೋಜನವಾಯಿತು, ಎಂಬ ಪ್ರಶ್ನೆಗೆ ಅವನಿಗೆ ಉತ್ತರ ಸಿಗಲಿಲ್ಲ. ರಾತ್ರಿಯ ಗಾಳಿ ಈಗ ಹೂ ಎಂದು ಮೆದುವಾಗಿ ಸದ್ದು ಮಾಡುತ್ತಾ ಜೋರಾಗಿ ಬೀಸುತ್ತಿತ್ತು. ಭಾಸ್ಕರ ಹಣೆಯನ್ನು ಮಸಾಜ್ ಮಾಡಿಕೊಂಡು ಬೆಟ್ಟದ ಕಡೆ ನೋಡಿದ. ಇತ್ತೀಚಿನವರೆಗೂ ಆ ಬೆಟ್ಟ ಅವನಿಗೆ ಆಶಾವಾದ ಮತ್ತು ಪರಿಶ್ರಮದ ಸಂಕೇತವಾಗಿರುವ ಸ್ನೇಹಿತನಾಗಿತ್ತು. ಅದೇ ಈ ರಾತ್ರಿ ಅವನಿಗೆ ಅಲ್ಲಿ ಕಾಣುತ್ತಿದ್ದದ್ದು ಕತ್ತಲ ನೆರವಿನಲ್ಲಿ ಅಡಗಿಕೊಂಡ ಅಪರಿಚಿತ. ಆ ಅಸ್ಪಷ್ಟ ವ್ಯಕ್ತಿ ಇದ್ದಕ್ಕಿದ್ದಂತೆ ಕಣ್ಣು ತೆರೆದಂತೆ ಭಾಸವಾಯಿತು. ಅದು ಎಂತಹ ಕಣ್ಣು! ಸೇಡಿಗಾಗಿ ಚಡಪಡಿಸುತ್ತಿರುವ ಕೊಲೆಗಾರನ ಕೆಂಗಣ್ಣು. ಆ ಕಣ್ಣನ್ನು ಭಾಸ್ಕರ ಎಲ್ಲಿಯೋ ನೋಡಿದ್ದ. ಥಟ್ಟನೆ ಅವನಿಗೆ ತಿಳಿಯಿತು - ಅದು ತನ್ನದೇ ಕಣ್ಣು! ಅವನು ಆ ಕ್ಷಣವೇ ಒಂದು ನಿರ್ಧಾರವನ್ನು ತೆಗೆದುಕೊಂಡು ಎದ್ದು ನಿಂತನು.
ಆಫೀಸಿನ ದಿಕ್ಕಿನಲ್ಲಿ ಭಾಸ್ಕರ ಬಿರುಸಾಗಿ ನಡೆದ. ಪ್ರವೇಶದ್ವಾರದಲ್ಲಿದ್ದ ಸಿಪಾಯಿ ಏನನ್ನೋ ಕೇಳಿದ. ಭಾಸ್ಕರ ಉತ್ತರಿಸದೆ ತನ್ನ ಡೆಸ್ಕಿನ ಕಡೆ ನಡೆದು, ಕಂಪ್ಯೂಟರ್ ಮುಂದೆ ಕುಳಿತನು. ಕಂಪ್ಯೂಟರ್ ಯುರೇನಿಯಂ ಮಾದರಿಯ ವಿಶ್ಲೇಷಣೆಯ ಪರಿಶೀಲನೆಯನ್ನು ಮುಗಿಸಿತ್ತು. ಭಾಸ್ಕರ ಅದರ ಫಲಿತಾಂಶವನ್ನು ನೋಡದೆ, ತನ್ನ ಬಾಸಿಗೆ ಒಂದು ಇ-ಮೇಲ್ ಸಂದೇಶವನ್ನು ಹತ್ತು ನಿಮಿಷ ಟೈಪ್ ಮಾಡಿದ. “ಕಳಿಸು” ಆಯ್ಕೆಯನ್ನು ಒತ್ತುವ ಮುನ್ನ, ತನ್ನ ಸಂದೇಶವನ್ನು ಒಮ್ಮೆ ಓದಿದ. ಪಿಂಗ್! ಅದೇ ಸಮಯಕ್ಕೆ ಒಂದು ಹೊಸ ಇ-ಮೇಲ್ ಸಂದೇಶ ಆಗಮಿಸಿತು. ಈ ಹೊತ್ತಿನಲ್ಲಿ ಯಾರು ತನಗೆ ಇ-ಮೇಲ್ ಕಳಿಸಿದ್ದಾರೆ, ಎಂದು ಸ್ವಲ್ಪ ಆಶ್ಚರ್ಯದಿಂದ ಭಾಸ್ಕರ ಸಂದೇಶವನ್ನು ತೆಗೆದು ನೋಡಿದ. ಇ-ಮೇಲ್ ತನ್ನ ಬಾಸ್ ನಿಂದ ಬಂದಿತ್ತು. ಅವರು ಈ ರೀತಿಯಾಗಿ ಬರೆದಿದ್ದರು:
“ಗೆಜೆಟ್ ಆದೇಶ ೪೮೭ ರಕ್ಷಣಾ ಸಚಿವಾಲಯದಿಂದ ಬಂದ ಆಜ್ಞೆಯ ಪ್ರಕಾರ, ಐದು ಗಂಟೆಗಳ ಹಿಂದೆ ಸಂಭವಿಸಿದ ಚೀನಾ ಸೈನ್ಯಕ್ಕೆ ಸೇರಿದ ಅಣು ಸ್ಥಾವರದ ಸ್ಫೋಟ ಮತ್ತು ಅದರ ನಂತರದ ವಿಕಿರಣ ಪರಿಣಾಮಗಳ ಸಲುವಾಗಿ, ಭಾರತದ ಎಲ್ಲಾ ಸಂಶೋಧನಾ ಕೇಂದ್ರಗಳಲ್ಲಿ ನಡೆಸುತ್ತಿರುವ ಯುರೇನಿಯಂ ಪುಷ್ಟೀಕರಣ ಚಟುವಟಿಕೆಗಳನ್ನು ಸದ್ಯಕ್ಕೆ ನಿಲ್ಲಿಸಬೇಕಾಗಿದೆ. ಉಳಿದ ಯುರೇನಿಯಂ ಮಾದರಿಗಳನ್ನು ಕ್ರಮಬದ್ಧ ರೀತಿಯಲ್ಲಿ ಶೇಖರಿಸಿಡಬೇಕಾಗಿದೆ. ಈ ವಿಷಯದಲ್ಲಿ ಮುಂದಿನ ಹೆಜ್ಜೆಗಳನ್ನು ಚರ್ಚಿಸಲು ಸೋಮವಾರ ಭೇಟಿಯಾಗೋಣ. ಎಚ್ಚರವಿರಲಿ, ಈ ಸಂದೇಶ ನಿಮ್ಮ ಕಣ್ಣಿಗೆ ಮಾತ್ರ”.
ಭಾಸ್ಕರ ಬಂದ ಇ-ಮೇಲ್ ಸಂದೇಶವನ್ನು ಎರಡು ಬಾರಿ ಓದಿದ. ನಂತರ ತನ್ನ ಡೆಸ್ಕಿನ ಮೇಲಿದ್ದ ಪತ್ನಿ ಮತ್ತು ಮಗುವಿನ ಫೋಟೋವನ್ನು ನೋಡಿದ. ತಾನು ಬಾಸಿಗೆ ಬರೆಯುತ್ತಿದ್ದ ಸಂದೇಶವನ್ನು ಡಿಲೀಟ್ ಮಾಡಿ, ಲ್ಯಾಪ್ಟಾಪ್ ಅನ್ನು ಮುಚ್ಚಿದ. ಡೆಸ್ಕಿನ ಪಕ್ಕದಲ್ಲೇ ಇದ್ದ ಕಿಟಕಿಯಲ್ಲಿ ಬೆಟ್ಟದ ಆಕಾರ ಮಂದವಾಗಿ ಕಾಣುತ್ತಿತ್ತು. ಸ್ನೇಹಿತನ ಸೌಮ್ಯ ಕಣ್ಣು ನಕ್ಷತ್ರದಂತೆ ಹೊಳೆಯುತ್ತಿತ್ತು. ಇದನ್ನು ನೋಡಿದ ಭಾಸ್ಕರ, ಮುಗುಳ್ನಗುತ್ತಾ ತನ್ನ ಚೀಲವನ್ನು ತೆಗೆದುಕೊಂಡು, ಆಫೀಸ್ ದೀಪವನ್ನು ಆರಿಸಿ, ಹೊರಗೆ ನಡೆದನು.
Comments
ಉ: ವಿಕಿರಣ
ಚಿಂತನಾರ್ಹ ಕಥೆ. ಧನ್ಯವಾದಗಳು.