ವಿಖ್ಯಾತನಾದ
ಕವನ
ಬೇರೆಯವರ ಸಾಹಿತ್ಯಕೆ
ಜರಡಿಯ ಹಿಡಿಯುತ ತಾನು
ತನ್ನದೆನುತಲೆ ಬರೆದು
ವಿಖ್ಯಾತನಾದ !
ಆ ನುಡಿ ಮುನ್ನುಡಿ
ಹಿತನುಡಿಯೆನುತ
ಸ್ವಂತಿಕೆ ಮರೆಯುತ
ವಿಖ್ಯಾತನಾದ !
ಸಾಧನೆಯಿರದೆಲೆ
ಬರೆವುದು ಸಾಧ್ಯವು
ಎನುತಲೆ ನುಡಿಯುತ
ವಿಖ್ಯಾತನಾದ !
ಮೊದಲ ಚರಣವದು
ಯಾರದೊ ಏನೋ
ನಂತರದಲ್ಲಿ ಕಸವನು ಹೊಸೆದು
ವಿಖ್ಯಾತನಾದ !
ಈಗಿನ ಕಾಲದ ಪಂಡಿತರೆಲ್ಲ
ಹಿಂದಿನ ಸಾಹಿತ್ಯ ತಿಳಿದವರಲ್ಲ
ಕಾಲದ ಮಹಿಮೆಯ ನಡುವೆಯೇ
ವಿಖ್ಯಾತನಾದ !
ತನ್ನದೆ ನೀತಿಯು ಸರಿಯಿದೆಯೆನುತ
ಉಳಿದಿಹ ಕವಿಗಳ ಅರೆಬರೆಯೆನುತ
ಜಂಭದ ಕೋಳಿಯ ರೀತಿಯೆ ತಿರುಗಿ
ವಿಖ್ಯಾತನಾದ !
ಉಪಕರಿಸಿದವರ ಮರೆಯುತ ಸಾಗಿ
ತನ್ನದೆ ಅರಮನೆ ಕಟ್ಟುತ ಕುಳಿತ
ಮೋಹದ ಮಾಯೆಯ ಹರಡುತ ನಡೆದ
ವಿಖ್ಯಾತನಾದ !
ಹೀಗೆಯೆ ಸಾಗಲು ಮುಂದಕೆ ಹೋಗಲು
ಕಾಲದ ಚಕ್ರವು ಉರುಳಿತು ನೋಡು
ಮಾಡಿದ ಪಾಪಕೆ ಮಣ್ಣನು ಸೇರುತ
ವಿಖ್ಯಾತನಾದ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್