ವಿಜ್ಞಾನ ಪ್ರಪಂಚದಲ್ಲಿ ಮಹಿಳೆಯರ ಸಾಧನೆಗಳು
ವೈಜ್ಞಾನಿಕ ಪ್ರಪಂಚದಲ್ಲಿ ಮಹಿಳೆಯರ ಸಾಧನೆಗಳು
“ಕಾರ್ಯೇಷು ದಾಸಿ, ಕರಣೇಷು ಮಂತ್ರಿ,
ರೂಪೇಷು ಲಕ್ಷ್ಮಿ, ಕ್ಷಮಯಾ ಧರಿತ್ರಿ
ಭೋಜ್ಯೇಷು ಮಾತಾ, ಶಯನೇಷು ರಂಭಾ,
ಷಡ್ಗುಣ ಭಾರ್ಯಾ ಕುಲಮುದ್ಧರಂತಿ.”
ಎಂದು ಒಂದು ಶ್ಲೋಕ ರಚಿಸಿ ಹೆಣ್ಣನ್ನು ಒಂದು ಚೌಕಟ್ಟಿನೊಳಗೆ ಬಂಧಿಸಿ ಅವಳನ್ನು ನಿರುಪಯುಕ್ತಳನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಲೇ ಬಂದಿದೆ. ಕೆಟ್ಟ ಸಂಪ್ರದಾಯಗಳ ಒತ್ತಡದಿಂದಾಗಿ ಅನುಪಯುಕ್ತವಾದ ಕಟ್ಟುಪಾಡುಗಳಿಂದಾಗಿ ಎಲ್ಲಾ ಸೌಲಭ್ಯಗಳಿಂದಲೂ ಮಹಿಳೆ ವಂಚಿತಳಾಗಿದ್ದಾಳೆ. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸದ ಅವಶ್ಯಕತೆ ಇಲ್ಲ, ಜಗತ್ತಿನ ಬೆಳಕು ಅವರಿಗೆ ಅನಾವಶ್ಯಕ. ಲೋಕಜ್ಞಾನ ಕಟ್ಟಿಕೊಂಡು ಅವರೇನು ಮಾಡಬೇಕು? ಮನೆ, ಗಂಡ, ಮಕ್ಕಳು ಇವರನ್ನು ಪೋಷಿಸಿಕೊಂಡು ಬದುಕುವುದೇ ಉತ್ತಮ ಮಾರ್ಗ ಎಂದು ಮನೆಯಲ್ಲೇ ಮಹಿಳೆಯನ್ನು ಕೊಳೆಯಬಿಟ್ಟು ಅವಳ ಅನೇಕ ರೀತಿಯ ಪ್ರತಿಭೆಗಳು ಬೆಳಕಿಗೆ ಬಾರದೇ ನಶಿಸಿ ಹೋಗಿ, ಅವಳಿಗೆ ಮಾತ್ರವಲ್ಲದೇ ದೇಶಕ್ಕೂ ಕೂಡ ಅನ್ಯಾಯವೆಸಗಿದ ಹಾಗಾಗಿದೆ. ದೈವ ನಿಯಾಮಕದಲ್ಲಿ ಸರಿಸಮಾನವಾದ ಮಾನಸಿಕ ಸಾಮರ್ಥ್ಯವನ್ನು ಹೊಂದಿರುವ ಮಹಿಳೆ, ಪುರುಷರಂತೆಯೇ ಪ್ರತಿಯೊಂದು ಕ್ಷೇತ್ರದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವ ಅಧಿಕಾರ ಮಹಿಳೆಗೂ ಇದೆ ಎಂಬುದು ಎಲ್ಲರಿಗೂ ಮನವರಿಕೆಯಾಗಬೇಕು. ಮಹಿಳೆಯ ಪರಿಸ್ಥಿತಿ ಈಗ 5 ದಶಕಗಳಿಂದ ಎಷ್ಟೋ ಸುಧಾರಿಸುತ್ತಾ ಬಂದಿದೆ ಎಂದಾದರೂ ಇನ್ನೂ ಸಾಕಷ್ಟು ಮಹಿಳೆಯರು ಅನೇಕ ಕಾರಣಗಳಿಂದ ತಮ್ಮ ಗೂಡಿನಿಂದ ಹೊರ ಬರಲಾರದೇ ತೊಳಲಾಡುತ್ತಿದ್ದಾರೆ. ಸಾಧಾರಣ ವಿಚಾರಗಳಲ್ಲೇ ಹೀಗಿರ ಬೇಕಾದರೆ ಇನ್ನು ಪ್ರಗತಿಪರ ವಿಜ್ಞಾನ ಪ್ರಪಂಚದಲ್ಲಿ ಸಾಧನೆಗಳನ್ನು ಸಾಧಿಸಲು ಅವರಿಗೆಲ್ಲಿ ಅವಕಾಶವಿತ್ತು? ಹೀಗಾಗಿ ಈ ಸಮಾಜದೊಂದಿಗೆ ಹೋರಾಡುತ್ತಲೇ ವಿಜ್ಞಾನ ಪ್ರಪಂಚದಲ್ಲಿ ಸಾಧನೆಗೈದ ಮಹಿಳೆಯರು ಎಂದರೆ ಬೆರಳೆಣಿಕೆಯಷ್ಟು ಮಾತ್ರ. ಅವರಲ್ಲೂ ಕೂಡ ಅ ಉನ್ನತ ಮಟ್ಟವನ್ನು ತಲುಪಲು ಹೆಣಗಾಡಿ ತೊಳಲುತ್ತಿರುವ ಭಾರತೀಯ ಮಹಿಳೆಯರ ಬಗ್ಗೆ ಓದಿದಾಗ (ನೇಮಿ ಚಂದ್ರರವರ ಮಹಿಳಾ ಅಧ್ಯಯನ) ಮನಸ್ಸಿಗೆ ಖೇದವೆನಿಸಿತು. ಬಹುಷಃ ಇನ್ನೊಂದು 50,60 ವರ್ಷಗಳಲ್ಲಾದರೂ ನಮ್ಮ ಈ ಕೊರಗು ನೀಗಬಹುದೇನೋ.
ವಿಜ್ಞಾನ ಪ್ರಪಂಚದಲ್ಲಿ ಮಹಿಳೆಯರ ಸಾಧನೆ ಎಂದರೆ ನಮಗೆ ಮೊದಲು ನೆನಪು ಬರುವ ಹೆಸರು ಎಂದರೆ ಮೇಡಮ್ ಮೇರಿ ಕ್ಯೂರಿ. ಕೇವಲ 10 ವರ್ಷದ ಬಾಲಕಿಯಾಗಿದ್ದಾಗಲೇ ತನ್ನ ತಾಯಿಯನ್ನು ಕಳೆದುಕೊಂಡ ಮೇರಿ ಬಡತನದ ಹಿಡಿತದಿಂದ ತನ್ನ ಸಂಸಾರವನ್ನು ತಪ್ಪಿಸಲು ಬೇರೆಯವರ ಮನೆಯ ದಾದಿಯಾಗಿ ಕೆಲಸ ನಿರ್ವಹಿಸಿದಳು. ಜರ್ಮನ್, ಇಂಗ್ಲಿಷ್, ಫ್ರೆಂಚ್, ರಷ್ಯನ್ ಭಾಷೆಗಳ ಪರಿಚಯವಿದ್ದು ಅತಿ ಬುದ್ಧಿವಂತೆಯಾದ ಅವಳು ತಾನು ಕೆಲಸ ಮಾಡುತ್ತಿದ್ದ ಮನೆ ಮಕ್ಕಳಿಗೆ ಅಲ್ಲದೇ ಕೆಲಸಗಾರರ ಮಕ್ಕಳಿಗೂ ಕೂಡ ತನ್ನ ಖರ್ಚಿನಿಂದಲೇ ಪಾಠ ಹೇಳುತ್ತಿದ್ದಳು. ನಂತರ ಅಕ್ಕನ ಸಹಕಾರದಿಂದ ಪ್ಯಾರಿಸ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಯಾಗಿ ಓದುತ್ತಿದ್ದಾಗ ಮೇಧಾವಿ ವಿಜ್ಞಾನಿ ಪೀರಿಕ್ಯೂರಿಯ ಮಾರ್ಗದರ್ಶನ ದೊರೆಯಿತು. ಮೇರಿಯ ಅಸಾಧಾರಣ ಬುದ್ಧಿವಂತಿಕೆ ಕ್ಯೂರಿಯವರ ಮೆಚ್ಚುಗೆ ಗಳಿಸಿದ್ದಲ್ಲದೇ ಅವರ ಜೀವನ ಸಂಗಾತಿಯಾಗುವಂತೆಯೂ ಮಾಡಿತು. ಮದುವೆ, ಮನೆ ಕೆಲಸಗಳ ನಡುವೆಯೇ ಮೇರಿಕ್ಯೂರಿಯ ಸಂಶೋಧನಾ ಒಲವು, ಹೊಸ ಅನ್ವೇಷಣೆಯ ತುಡಿತ ಹೆಚ್ಚುತ್ತಲೇ ಹೋಯಿತು. ವೈಜ್ಞಾನಿಕ ಲೇಖನಗಳ್ನ್ನು ಆಸಕ್ತಿಯಿಂದ ಓದುತ್ತಿದ್ದಳು. ರಾಂಟ್ಜೆನ್ ಎಂಬಾತ ಹೊಸಬಗೆಯ ಕಿರಣವನ್ನು ಕಂಡು ಹಿಡಿದಿದ್ದ. ಬೆಳಕು ವಸ್ತುಗಳನ್ನು ಹಾಯ್ದು ಅ ವಸ್ತುಗಳ ಒಳ ರಚನೆಯನ್ನು ಬಿಂಬಿಸುವ ಶಕ್ತಿ ಆ ಕಿರಣಗಳಿಗಿತ್ತು. ಆಶಕ್ತಿಯುತ ಕಿರಣಗಳಿಗೆ x-rays ಎಂದು ಹೆಸರಾಗಿತ್ತು. ಇದನ್ನು ಓದಿದಾಗ ಈಬಗೆಯ ವಿಕಿರಣ ಶಕ್ತಿ ಸ್ವಯಂಪ್ರಭೆ ಬೀರುವ ಖನಿಜಗಳಲ್ಲೂ ಇರಬಹುದಲ್ಲವೇ? ಇಂತಹ ವಿಕಿರಣ ಶಕ್ತಿ ಯುರೇನಿಯಂನಲ್ಲಿರುವುದನ್ನು ಬೆಕೆರೆಲ್ ಎಂಬಾತ ಕಂಡು ಹಿಡಿದಿದ್ದ. ಇಂಥ ವಿಕಿರಣ ಶಕ್ತಿ ಯುರೇನಿಯಂನಲ್ಲಿ ಮಾತ್ರ ಏಕೆ ಕಾಣಿಸಿಕೊಳ್ಳಬೇಕು? ಈಕಿರಣಗಳ ಲಕ್ಷಣಗಳೇನು? ಈ ಪ್ರಶ್ನಗಳಿಗೆ ಉತ್ತರ ಕಂಡು ಹಿಡಿಯುವ ಅಭಿಲಾಷೆ ಮೇರಿಯ ಮನಸಿನಲ್ಲಿ ಮೊಳೆಯಿತು. ಯುರೇನಿಯಂನೊಂದಿಗೆ ಬೇರೆ ರಾಸಾಯನಿಕ ವಸ್ತುಗಳಲ್ಲಿ ಈ ಬಗೆಯ ಶಕ್ತಿ ಇದೆಯೋ ಇಲ್ಲವೋ ಎಂದು ಕಂಡು ಹಿಡಿಯಲು ಪ್ರಯೋಗಗಳನ್ನು ಮುಂದುವರೆಸಿದಳು. ಯುರೇನಿಯಂ ಧಾತುವಿನಲ್ಲಿ ಕಂಡಂತಹ ಶಕ್ತಿ ಬೇರೆ ಧಾತುಗಳಲ್ಲಿ ಪಡೆಯಲು ಪಿಚ್ ಬ್ಲೆಂಡ್ ವಿಶ್ಲೇಷಣೆಯಲ್ಲಿ ಕ್ಯೂರಿ ದಂಪತಿಗಳು ತೊಡಗಿದರು. ಇದರಲ್ಲಿ ತಾವು ಹುಡುಕ ಹೊರಟಿರುವ ಧಾತು ಒಂದಲ್ಲ ಎರಡು ಎಂದು ತಿಳಿದು ಜುಲೈ 1898ರ ಹೊತ್ತಿಗೆ ಒಂದನ್ನು ಬೇರ್ಪಡಿಸಿದರು. ತನ್ನ ತಾಯ್ನಾಡು ಪೋಲೆಂಡಿನ ಮೇಲಿನ ಅಭಿಮಾನದಿಂದ ಮೇರಿ ಅದಕ್ಕೆ ’ಪೊಲೋನಿಯಂ’ ಎಂದು ಹೆಸರಿಟ್ಟಳು. 1898ರ ಡಿಸೆಂಬರ್ 26ರಲ್ಲಿ ಮತ್ತೊಂದು ಹೊಸಧಾತು ’ರೇಡಿಯಂ’ನ ಆವಿಷ್ಕಾರವಾಯಿತು. ಇದು ಹೆಚ್ಚು ವಿಶೇಷ ವಿಕಿರಣ ಶಕ್ತಿಯನ್ನು ಹೊಂದಿರುವ ಹೊಸ ಧಾತುವಾಗಿತ್ತು. ಅದರ ವಿಲಕ್ಷಣ ವಿಕಿರಣ ಶಕ್ತಿಯ ನಾನಾ ಮುಖಗಳನ್ನು ಗುರುತಿಸುವ ಕಾರ್ಯದಲ್ಲಿ ಪ್ರೊಫೆಸರ್ ಕ್ಯೂರಿ, ಮೇರಿ ಕ್ಯೂರಿಗೆ ಅಪಾರ ನೆರವನ್ನಿತ್ತರು. ರೇಡಿಯಂ ಧಾತುವಿನ ವಿದ್ಯುತ್ ವಿಕಿರಣ ಶಕ್ತಿ ಅತ್ಯಧಿಕವಾದುದು ಎಂದು ಕಂಡು ಹಿಡಿದರು. ಇದಕ್ಕೂ ಮೊದಲು ಮೊಟ್ಟ ಮೊದಲನೆಯದಾಗಿ ಯುರೇನಿಯಂನಲ್ಲಿ ಕಂಡಂತಹ ಶಕ್ತಿ ಥೋರಿಯಂನಲ್ಲಿರುವುದನ್ನು ಮೇರಿ ಮನಗಂಡಿದ್ದಳು. ಹಾಗೆಯೇ ಅದು ಯುರೇನಿಯಂ ಧಾತುವಿನಲ್ಲಿ ಕಂಡ ಶಕ್ತಿಯಷ್ಟೇ ಪ್ರಖರವಾಗಿತ್ತು. ಹೀಗೆ ಗುರುತಿಸಿದ ಶಕ್ತಿಗೆ ಅಣು ವಿಕಿರಣ ಕ್ರಿಯೆ (Radioactivity) ಎಂದು ನಾಮಕರಣ ಮಾಡಿದಳು. ಈ ಶಕ್ತಿಯನ್ನು ಹೊಂದಿರುವ ಖನಿಜಗಳಿಗೆ ಅಣು ವಿಕಿರಣ ಕನಿಜಗಳು (Radioactive elements) ಎಂದು ಹೆಸರಿಟ್ಟಳು. ರೇಡಿಯಂ ಆವಿಷ್ಕಾರವು ಫ್ರೆಂಚ್ ಅಕಡಮಿಯವರ ಗಮನ ಸೆಳೆಯಿತು. ಫ್ರೆಂಚ್ ಅಕಡಮಿಯವರು ಅದು ವರೆವಿಗೂ ಯಾವ ಮಹಿಳೆಗೂ ಪ್ರಶಸ್ತಿಯನ್ನು ಕೊಟ್ಟವರಲ್ಲ. ಈಗೆ ಮೇರಿ ನಡೆಸಿದ ಶೋಧನೆಯ ಮಹತ್ವವನ್ನು ಗಮನಿಸಿ ಅಭಿನಂದಿಸುವಾಗಲೂ ಮೇರಿಗೆ ನೇರವಾಗಿ ತಿಳಿಸುವ ಸೌಜನ್ಯ ತೋರಲಿಲ್ಲ. ಅದು ಅವರ ಘನತೆಗೆ ಕುಂದು ಎಂದು ಭಾವಿಸಿದ್ದರೋ ಏನೋ! ಹೀಗಾಗಿ ಪ್ರೊಫೆಸರ್ ಪೀರಿಯವರಿಗೆ ಅಕಡಮಿಯ ಅಧ್ಯಕ್ಷರು, “ನನ್ನ ಮನಃಪೂರ್ವಕ ಅಭಿನಂದನೆಗಳು. ತಮ್ಮ ಶ್ರೀಮತಿಯವರಿಗೆ ನನ್ನ ಮರ್ಯಾದೆಯುತ ಶುಭಾಶಯಗಳನ್ನು ತಿಳಿಸಿ.” ಎಂದು ಪತ್ರ ಬರೆದಿದ್ದರು. ಮುಂದುವರಿದ ಜನಾಂಗವೆಂದು ಹೆಸರು ಪಡೆದಿದ್ದ ಫ್ರಾನ್ಸ್ ದೇಶ ಕೂಡ ಮಹಿಳೆಯರಿಗೆ ಸರಿಯಾದ ಸ್ಥಾನಮಾನ ನೀಡುವುದರಲ್ಲಿ ಹಿಂದೆ ಬಿದ್ದಿತ್ತು. ಪಿಚ್ ಬ್ಲೆಂಡ್ ಖನಿಜದಿಂದ ರೇಡಿಯಂ ಧಾತುವನ್ನು ಪ್ರತ್ಯೇಕಿಸಿ ಅದರ ಅಟಾಮಿಕ್ ತೂಕ 225 ಎಂದು ಕಂಡುಹಿಡಿದಳು. Research on Radioactive substances ಎಂಬ ಪ್ರಭಂದ ಮಂಡಿಸಿ ಭೌತ ಶಾಸ್ತ್ರದ ಡಾಕ್ಟರೇಟ್ ಪದವಿಯನ್ನು ಪಡೆದ ಮೊದಲ ಮಹಿಳೆಯಾದಳು ಮೇರಿ ಕ್ಯೂರಿ. 1903ರ ಡಿಸೆಂಬರ್ ಹೊತ್ತಿಗೆ ಸ್ಟಾಕ್ ಹೋಮಿನ ಸ್ವೀಡಿಷ್ ವಿಜ್ಞಾನ ಅಕಡಮಿಯವರು ತಮ್ಮ ಅತ್ಯುನ್ನತ ಪ್ರಶಸ್ತಿಯಾದ ನೋಬೆಲ್ ಪಾರಿತೋಷಿಕವನ್ನು ಕ್ಯೂರಿ ದಂಪತಿಗಳಿಗೆ ನೀಡಿದರು. ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ ಮೇರಿ ಕ್ಯೂರಿ ಮತ್ತೆ ಬಹು ವರ್ಷಗಳ ವರೆಗೆ, ಅವರ ಮಗಳೇ ಆದ ಐರಿನ್ ಅದೇ ಪಾರಿತೋಷಿಕವನ್ನು ಪಡೆಯುವ ವರೆಗೂ ಈ ಕೀರ್ತಿ ಮೇರಿಯೊಬ್ಬಳದ್ದೇ ಆಗಿತ್ತು. 1911 ಡಿಸೆಂಬರ್ ನಲ್ಲಿ ರಾಸಾಯನಿಕ ವಸ್ತುವಾದ ರೇಡಿಯಂ ಧಾತುವನ್ನು ಬೆಳಕಿಗೆ ತಂದು ಅದರ ಎಲ್ಲಾ ಲಕ್ಷಣಗಳನ್ನೂ ವಿವರಿಸಿ ಮಹತ್ತರವಾದ ಉಪಕಾರ ಮಾಡಿದ್ದರ ಕುರುಹಾಗಿ ಎರಡನೆಯ ಬಾರಿ ನೋಬೆಲ್ ಪ್ರಶಸ್ತಿ ಪಡೆದಳು. ಇದರಿಂದ ಮೇರಿ ಈ ಮಹೋನ್ನತ ಪ್ರಶಸ್ತಿಯನ್ನು ಎರಡು ಬಾರಿ ಪಡೆದ ವ್ಯಕ್ತಿಗಳಲ್ಲಿ ಮೊದಲಿಗಳಾದಳು.
ವಿಜ್ಞಾನದ ಶೋಧನೆಗಳು ಮೇರಿಯ ಮನೆಯಲ್ಲಿ ಮೇರಿಯೊಂದಿಗೆ ಮುಕ್ತಾಯವಾಗಲಿಲ್ಲ. ಮೇರಿಕ್ಯೂರಿಯ ಮಗಳು ಐರಿನ್ ಮತ್ತು ಅಳಿಯ ಫ್ರೆಡ್ರಿಕ್ ಜೋಲಿಯನ್ ಆ ಸಂಶೋಧನೆಗಳನ್ನು ಮುಂದುವರಿಸಿದರು. ಐರಿನ್ ಮತ್ತು ಜೋಲಿಯನ್ 1934ರಲ್ಲಿ ನಡೆಸಿದ ಸಂಶೋಧನೆಗಳು ಅತ್ಯುತ್ತಮ ಫಲವನ್ನು ಕೊಟ್ಟವು. ಅವರು ರೇಡಿಯಂ ಸಂಬಂಧದ ಶೋಧನೆಗಳನ್ನು ಮುಂದುವರೆಸಿ ಅಣುವಿನ ರಚನೆಯ ಮೇಲೆ ಹೊಸ ಬೆಳಕು ಬೀರುವ ಅದ್ಭುತ ಪರಿಣಾಮಗಳನ್ನು ಕಂಡು ಹಿಡಿದರು. ಅಲ್ಯುಮಿನಿಯಂ ಮತ್ತು ಅದೇ ರೀತಿಯ ಕೆಲವು ಧಾತುಗಳನ್ನು ರೇಡಿಯಂ ಕಿರಣಗಳ ದಾಳಿಗೆ ಒಳಪಡಿಸಿದಾಗ ದಾಳಿಗೆ ತುತ್ತಾದ ಧಾತುಗಳೂ ಕೂಡ ವಿಕಿರಣ ಶಕ್ತಿಯನ್ನು ಪಡೆಯುತ್ತವೆ ಎನ್ನುವ ಅಂಶ ಸಿದ್ಧವಾಯಿತು. ಅಂದರೆ Radioactive ಶಕ್ತಿಯನ್ನು artificialಆಗಿ ನಿರ್ಮಿಸುವುದು ಸಾಧ್ಯ ಎಂಬ ವಿಷಯ ತಿಳಿಯಿತು. ಇದೊಂದು ಮಹತ್ತರ ಶೋಧನೆ. ರಸಾಯನ ಶಾಸ್ತ್ರದಲ್ಲಿ ಹೊಸದೊಂದು ಅಧ್ಯಾಯವನ್ನೇ ತೆರೆಯಲು ಈ ಶೋಧನೆ ಕಾರಣವಾಯಿತು. “ಕ್ಯೂರಿ ಚಿಕಿತ್ಸೆಗೆ ಅಗತ್ಯವಾಗಿ ಬೇಕಾದ ಅಣು ವಿಶೇಷಗಳನ್ನು ಈಗ artificialಆಗಿ ತಯಾರಿಸಲು ಸಾಧ್ಯವಾಯಿತು. ಇದರಿಂದ ವಿಜ್ಞಾನಿಗಳು ಇನ್ನು ಮುಂದೆ ಅಣುಗಳನ್ನು ಛೇದಿಸಬಲ್ಲರು. ಹೊಸದನ್ನು ಹುಟ್ಟಿಸಬಲ್ಲರು. ಅಣು ಪರಿವರ್ತನೆಯನ್ನು ಸಾಧಿಸಿ ಸ್ಪೋಟಕವನ್ನು ಉಂಟು ಮಾಡುವುದು ಸಾಧ್ಯ.” ಎಂದು ತಮ್ಮ ಶೋಧನೆಯ ಮಹತ್ವವನ್ನು ವಿವರಿಸಿದರು. 1935ರಲ್ಲಿ ಸ್ವೀಡನ್ನಿನ ನೋಬೆಲ್ ಕಮಿಟಿಯವರು ಈ ಸಂಶೋಧನೆಗಾಗಿ ಐರಿನ್ ಮತ್ತು ಜೋಲಿಯನ್ ರವರಿಗೆ ನೋಬೆಲ್ ಪ್ರಶಸ್ತಿ ನೀಡಿ ಗೌರವಿಸಿದರು.
ವಿಜ್ಞಾನ ಲೋಕದ ಮತ್ತೊಂದು ತಾರೆ ಎಂದರೆ ಡಾ. ವಿಲ್ಮಾ ಪ್ರೊಚೌನಿಕ್. ವಿಲ್ಮಾ ನ್ಯಾಯಾದೀಶರೊಬ್ಬರ ಮಗಳು. ಆರ್ಗಾನಿಕ್ ಕೆಮಿಸ್ಟ್ರಿಯಲ್ಲಿ ಡಾಕ್ಟೊರೇಟ್ ಪಡೆದುಕೊಂಡಿದ್ದಳು. ಪಶು ಆಹಾರ ತಯಾರಿಸುವ ಸಲುವಾಗಿ ಮರಗಳನ್ನು ವಿಘಟಿಸುವ ತಂತ್ರದಲ್ಲಿ ವಿಶೇಷ ಪರಿಣತಿ ಆಕೆಯದಾಗಿತ್ತು. ಡಾ. ವಿಲ್ಮಾ ಅಮೆರಿಕಾದಲ್ಲಿ ಡಾ. ಸುಬ್ಬರಾಯರ ಸಹಾಯಕಿಯಾಗಿ ಸಂಶೋಧನೆ ನಡೆಸಿದವಳು. ಜರ್ಮನಿಯ ಸುಸಜ್ಜಿತ ಪ್ರಯೋಗಾಲಯಗಳಲ್ಲಿ ಕೆಲಸ ಮಾಡಿದ ವಿಲ್ಮಾಗೆ ಡಾ. ಸುಬ್ಬರಾಯರ ಬಳಿ ಇದ್ದ ಸಲಕರಣೆಗಳು ತೀರಾ ಹಳೆಯದಾಗಿ ಕಂಡು ಬಂದವು. ಪ್ರಯೋಗ ಪರೀಕ್ಷೆಗಳು ತೀರಾ ನಿಧಾನಗತಿಯಿಂದ ಜರುಗುತ್ತಿದೆ ಎನ್ನಿಸಿತು. ಚಾರ್ಕೋಲ್ ನಿಂದ ಎ.ಪಿ.ಎ.ಎಫ್. ಅಂಶವನ್ನು ಬೇರ್ಪಡಿಸುವುದಕ್ಕೆ ನಿರ್ವಾತ ಪಂಪುಗಳನ್ನು ಬಳಸಿಕೊಂಡರೆ ಶೀಘ್ರಗತಿಯಲ್ಲಿ ಅದನ್ನು ಪಡೆಯಬಹುದೆಂದು ಅಭಿಪ್ರಾಯಪಟ್ಟಳು. ಆಕೆಯ ಉತ್ಸಾಹ ಸುಬ್ಬರಾಯರನ್ನು ಚುರುಕುಗೊಳಿಸುವಲ್ಲಿ ಯಶಸ್ವಿಯಾಯಿತು. ಆಕೆಯಿಂದ ಅಲ್ಲಿನ ಪ್ರಯೋಗ ಪರೀಕ್ಷೆಗಳು ಇನ್ನೂ ವೈವಿದ್ಯಮಯವಾಗ ತೊಡಗಿದವು. ಅವಳ ಸಹಕಾರದಿಂದಲೇ ಸಾಮಾನ್ಯವಾಗಿ ಲಭ್ಯವಿರುವ ಈಥೈಲ್ ಆಲ್ಕೊಹಾಲನ್ನು ಬಳಸಿಕೊಂಡು ಚಾರ್ಕೋಲ್ ನಲ್ಲಿ ಕಳೆದು ಹೋಗಿದ್ದ ಎ.ಪಿ.ಎ.ಎಫ್. ಅಂಶವನ್ನು ಹೊರತೆಗೆಯಲು ಸಾಧ್ಯವಾಯಿತು. ಈ ಅಂಶ ಫರ್ನಿಷಸ್ ಅನೀಮಿಯಾ ರೋಗಿಗಳಲ್ಲಿ ಒಂದೇ ಸಮನೆ ಒಳ್ಳೆಯ ಪರಿಣಾಮ ಬೀರುತ್ತಿತ್ತು. ಅದರ ಜೊತೆಯಲ್ಲೇ ಲಭ್ಯವಾದ ಮತ್ತೊಂದು ರೀತಿಯ ಸಾಂದ್ರೀಕ್ರುತ ಲಿವರ್ ಸಾರ ನಾಯಿಗಳ ಕಪ್ಪು ನಾಲಿಗೆ ವ್ಯಾಧಿಗೆ ತುಂಬಾ ಪರಿಣಾಮಕಾರಿ ಎನಿಸಿತು. ಎರಡು ಸಾರಗಳಲ್ಲೂ ಇರಬಹುದಾದ ಔಷಧಿಯ ಗುಣಗಳ ಬಗ್ಗೆ ವಿಲ್ಮಾ ರಾಸಾಯನಿಕ ವಿಶ್ಲೇಷಣೆ ಮಾಡುವುದರಲ್ಲಿ ತನ್ನನ್ನು ತೊಡಗಿಸಿಕೊಂಡಳು. ಅಮೆರಿಕೆಯ ಅಲಬಾಮಾ ಪ್ರಾಂತ್ಯದಲ್ಲಿ ನೀಗ್ರೋಗಳಲ್ಲಿ ’ಪೆಲ್ಲಾಗ್ರಾ’ ಎಂಬ ವ್ಯಾಧಿಯ ಹಾವಳಿ ಅತಿ ಹೆಚ್ಚಾಗಿತ್ತು. ಲಿವರ್ ಸಾರ ಪೆಲ್ಲಾಗ್ರಾ ವ್ಯಾಧಿಯು ಗುಣವಾಗುವಂತೆ ಮಾಡಿ ಒಳ್ಳೆಯ ಫಲಿತಾಂಶ ನೀಡಿದವು. ಆದರೆ ವಿಜ್ಞಾನ ಲೋಕದ ದುರ್ದೈವವೋ ಅಥವಾ ವಿಲ್ಮಾಳ ಕೆಟ್ಟ ಗಳಿಗೆಯೋ ಆಕೆಯ ಮನಸ್ಸು ಇದ್ದಕ್ಕಿದ್ದ ಹಾಗೆ ಪುಸ್ತಕ ಭಂಡಾರ ವಿಜ್ಞಾನದ ಕಡೆ ಒಲಿದು ಆಕೆ ಗಳಿಸಿದ ರಸಾಯನ ಶಾಸ್ತ್ರದ ವಿದ್ವತ್ತೆಲ್ಲಾ ಹಾಳಾದುದು ವಿಜ್ಞಾನ ಲೋಕದ ದುರ್ದೈವವೇ ಸರಿ. ವಿಲ್ಮಾ ಮತ್ತು ಸುಬ್ಬರಾಯರ ಜೋಡಿ ಜರುಗಿಸಬಹುದಾದ ಸಂಶೋಧನೆಗಳಿಂದ ವಿಜ್ಞಾನ ಕ್ಷೇತ್ರಕ್ಕೆ ಮೂಲಭೂತ ಕೊಡುಗೆಯನ್ನು ನೀಡಬಹುದಾದ ಒಂದು ಉತ್ತಮ ಅವಕಾಶ ತಪ್ಪಿ ಹೋದುದು ನಿಜಕ್ಕೂ ವಿಷಾಧನೀಯ.
ಇವರೆಲ್ಲರಿಗಿಂತ ಮೊದಲೇ ಖಗೋಳ ಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ ಮತ್ತೊಬ್ಬ ಮಹಿಳೆ ಬ್ರಿಟನ್ ದೇಶದ ಹರ್ಶೆಲ್ ಕ್ಯರೋಲಿನ್ ಲುಕ್ರೇಷಿಯಾ. ಇವಳ ಕಾಲ 18ನೇ ಶತಮಾನ. ಅವಳು ಪ್ರಪಂಚಕ್ಕೆ 8 ಧೂಮಕೇತುಗಳನ್ನು ಪರಿಚಯಿಸಿದಳು. ರಾಯಲ್ ಅಸ್ಟ್ರಾನಾಮಿಕಲ್ ಸೊಸೈಟಿಯವರು ಅವಳು ತಯಾರಿಸಿದ ನಕ್ಷತ್ರಗಳ ಗುಂಪಿನ ವಿವರಣೆಯ ಪಟ್ಟಿ ಮತ್ತು ನಿಹಾರಿಕೆಗಳ ಅಧ್ಯಯನಕ್ಕಾಗಿ ಚಿನ್ನದ ಪದಕ ನೀಡಿ ಗೌರವಿಸಿದರು. ಆದರೆ ಕ್ಯೆರೋಲಿನ್ಳ ಶ್ರಮವೆಲ್ಲಾ ಅವಳ ದುರ್ಬಲ ಮನಸ್ಸಿನಿಂದ ನೀರಿನಲ್ಲಿ ಮಾಡಿದ ಹೋಮದಂತಾಯಿತು. ಅವಳ ಸಹೋದರ ಪ್ರೇಮ ಖಗೋಳ ಶಾಸ್ತ್ರಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿತು. ತನ್ನ ಸಹೋದರನ ಕೆಲಸಗಳಲ್ಲೆಲ್ಲಾ ತನ್ನನ್ನು ತೊಡಗಿಸಿಕೊಂಡು ಹಗಲು ಇರುಳೆನ್ನದೇ ಖಗೋಳಶಾಸ್ತ್ರದ ವಿಸ್ತಾರವಾದ ಲೆಕ್ಕಗಳನ್ನೆಲ್ಲಾ ಮಾಡಿ ಇಡುತ್ತಿದ್ದಳು. ಆ ಸಹೋದರನಿಗಾಗಿ ಅಷ್ಟು ಮಾಡಿದ ಅವಳು ಸ್ವಂತವಾಗಿ ಪ್ರಯತ್ನಿಸಿದ್ದರೆ ಏನನ್ನಾದರೂ ಸಾಧಿಸಬಹುದಾಗಿತ್ತು. ಅವಳ ದುರಂತವೆಂದರೆ ಅವಳ ಸಹೋದರ ಮದುವೆ ಮಾಡಿಕೊಂಡು ಅವಳಿಂದ ದೂರವಾದಾಗ ಅವಳಿಗಾದ ಆಘಾತ ಅತಿ ದೊಡ್ಡದಾಯಿತು. ಅವಳು 1788ರಿಂದ 1798ರ ವರೆಗೆ ತಾನು ತಯಾರಿಸಿಟ್ಟಿದ್ದ ಅತ್ಯಂತ ಅಮೂಲ್ಯವಾದ ಖಗೋಳ ವಿಜ್ಞಾನದ ಆಧಾರಾಂಶಗಳನ್ನು ತಾನೇ ನಾಶಪಡಿಸಿದಳು.
ಜೆಕೋಸ್ಲವೇಕಿಯಾದ ಯಹೂದಿ ಕುಟುಂಬದಲ್ಲಿ 1896ರಲ್ಲಿ ಜನಿಸಿದ ಗರ್ಟಿ ತೆರೇಸಾ ಕೋರಿ ವೈದ್ಯ ರಂಗದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ. ಅಗಾಧ ಪ್ರತಿಭೆ ಹಾಗೂ ಸಾಧನೆಯ ನಂತರವೂ ಸಹಾ ಅತಿ ಕಡಿಮೆ ಸಂಬಳಕ್ಕೆ ದುಡಿದ ಮಹಿಳಾ ವಿಜ್ಞಾನಿ. ಆದರೆ ಅವಳ ಪುಣ್ಯವೋ ಎಂಬಂತೆ ಅವಳನ್ನು ಆಧರಿಸುವ, ಪ್ರೀತಿಸುವ ಉತ್ತಮ ಪತಿಯನ್ನು ಅವಳು ಪಡೆದಿದ್ದಳು. ಅವಳಿಗಾದ ಅನ್ಯಾಯಕ್ಕಾಗಿ ತಾನು ತನಗೆ ಸಿಕ್ಕ ದೊಡ್ಡ ನೌಕರಿಗಳ ಅವಕಾಶಗಳನ್ನೆಲ್ಲಾ ತ್ಯಾಗ ಮಾಡಿದ್ದ. ಪತಿ ಕಾರ್ಲ್ ಕೋರಿಯ ಸಹಾಯದೊಂದಿಗೆ “ಕೋರಿ ಚಕ್ರ”ವನ್ನು ಕಂಡುಹಿಡಿದಳು. ನಮ್ಮ ದೇಹದಲ್ಲಿ ಶಕ್ತಿಯು ಮಾಂಸಖಂಡಗಳಿಂದ ಪಿತ್ತ ಜನಕಾಂಗಕ್ಕೆ, ಪಿತ್ತ ಜನಕಾಂಗದಿಂದ ಮಾಂಸಖಂಡಗಳಿಗೆ ಚಲಿಸುವ ಬಗೆಯನ್ನು ಕೋರಿ ಚಕ್ರ ವಿವರಿಸಿತು. ನಮ್ಮ ದೇಹದ ಜೀವಕೋಶಗಳು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಬಗೆಯನ್ನು ತಿಳಿಯುವತ್ತ ತಳಪಾಯ ಹಾಕಿದ ವಿಜ್ಞಾನಿ ಗರ್ಟಿ ಕೋರಿ. ಕಿಣ್ವಗಳ ಹಾಗೂ ಹಾರ್ಮೋನುಗಳ ಬಗ್ಗೆ ಅಧ್ಯಯನ ಮಾಡಿದ ಮಹಾನ್ ವಿಜ್ಞಾನಿ ಅವಳು. ಗರ್ಟಿ ಮತ್ತು ಕಾರ್ಲ್ ಜೊತೆ ಜೊತೆಯಾಗಿಯೇ ಸಂಶೋಧನೆ ನಡೆಸಿ ಸಾಧಿಸದರೂ ಸಹಾ ಕಾರ್ಲ್ಗೆ ಕೆಲಸ ಕೊಡಲು ಸಿದ್ಧವಾದ ವಿಶ್ವವಿದ್ಯಾನಿಲಯಗಳು ಗರ್ಟಿಗೆ ಕೆಲಸ ಕೊಡಲು ನಿರಾಕರಿಸಿದವು. ತನ್ನ ಪತ್ನಿಯ ಪ್ರತಿಭೆಯನ್ನು ಗುರುತಿಸಲು ನಿರಾಕರಿಸಿದ ವಿಶ್ವವಿದ್ಯಾನಿಲಯಗಳ ಉನ್ನತ ದರ್ಜೆ ನೌಕರಿಗಳನ್ನೂ ನಿರಾಕರಿಸಿದ ಕಾರ್ಲ್. ಒಮ್ಮೆ ಅಮೆರಿಕಾದ ರಾಶೆಸ್ಟರ್ ವಿಶ್ವವಿದ್ಯಾನಿಲಯದ ಆಹ್ವಾನವನ್ನೂ ತಿರಸ್ಕರಿಸಿದಾಗ ಅಲ್ಲಿನವರು ಗರ್ಟಿಯೊಂದಿಗೆ, “ನೀನು ನಿನ್ನ ಪತಿಯ ಹುದ್ದೆಯ ಅವಕಾಶಗಳನ್ನು ಹಾಳು ಮಾಡುತ್ತಿದ್ದೀಯ” ಎಂದು ಎಚ್ಚರಿಸಿದರು. ಆದರೆ ಕಾರ್ಲ್ ನ ಹಟಕ್ಕೆ ಸೋತು ವಾಷಿಂಗ್ಟನ್ ವಿಶ್ವವಿದ್ಯಾನಿಲಯವು ಇಬ್ಬರನ್ನೂ ಕೆಲಸಕ್ಕೆ ತೆಗೆದುಕೊಳ್ಳುವ ನಿರ್ಧಾರ ಮಾಡಿತು. ಆದರೆ ಅಲ್ಲೂ ಲಿಂಗ ತಾರತಮ್ಯದ ಕಾಟ ತಪ್ಪಲಿಲ್ಲ. ಕಾರ್ಲ್ ನನ್ನು ಔಷಧ ಶಾಸ್ತ್ರ ವಿಭಾಗದ್ದ ಮುಖ್ಯಸ್ಥನೆಂದೂ ಗರ್ಟಿಯನ್ನು ಸಂಶೋಧನಾ ಸಹಾಯಕಿ ಎಂದೂ ಹೇಳಿ ಗರ್ಟಿಯ ಪ್ರತಿಭೆಯನ್ನು ಮಟ್ಟ ಮಾಡಿತು. ಗರ್ಟಿಯ ಸಂಬಳದ 5 ಪಟ್ಟು ಸಂಬಳ ವಿಶ್ವವಿದ್ಯಾಲಯ ಕಾರ್ಲ್ ಗೆ ನೀಡಿತು.ಈ ತಾರತಮ್ಯದ ಬೇಗೆಯಲ್ಲಿ ಬೆಂದ ಗರ್ಟಿಗೆ ಎರಡನೇ ಮಾಹಾಯುದ್ಧದ ಸಂದರ್ಭದಲ್ಲಿ ಕಾರ್ಲ್ ಮತ್ತು ಇತರೇ ಗಂಡು ವಿಜ್ಞಾನಿಗಳು ರಕ್ಷಣಾ ದಳದ ಯೋಜನೆಗಳಡಿ ಹೋಗಬೇಕಾಗಿ ಬಂದಾಗ ಮಹಿಳಾ ವಿಜ್ಞಾನಿಗಳಿಗೆ ಅವಕಾಶ ದೊರೆತು ಗರ್ಟಿಗೆ ಸಹಾ ಪ್ರೊಫೆಸರ್ ಹುದ್ದೆ ದೊರಕಿತು. 1947ರಲ್ಲಿ ಗರ್ಟಿ ಮತ್ತು ಕಾರ್ಲ್ ಗೆ ನೋಬೆಲ್ ಪ್ರಶಸ್ತಿ ದೊರಕಿತು. ನೋಬೆಲ್ ಪ್ರಶಸ್ತಿ ದೊರಕಿದ ಮೇಲೂ ಕಾರ್ಲ್ ನನ್ನು ಸನ್ಮಾನಿಸಿದ ವಿಶ್ವವಿದ್ಯಾಲಯಗಳು ಗರ್ಟಿಯನ್ನು ಸನ್ಮಾನಿಸಲಿಲ್ಲ. ಕಾರ್ಲ್, “ನೋಬೆಲ್ ಪಾರಿತೋಷಿಕ ನನ್ನೊಂದಿಗೆ ನನ್ನ ಪತ್ನಿಗೂ ದೊರಕಿದ್ದು ನನಗೆ ಸಮಾದಾನ ತಂದಿದೆ. ಏಕೆಂದರೆ ಎಲ್ಲಾ ಸಂಶೋಧನೆಗಳಲ್ಲೂ ನನ್ನ ಸಮಕ್ಕೂ ದುಡಿದಿರುವ ಅವಳಿಗೆ ಈ ಸನ್ಮಾನ ದೊರೆಯಲೇಬೇಕಿತ್ತು.” ಎಂದು ಸಂತೋಷದ ನಿಟ್ಟುಸಿರೆಳೆದನಂತೆ.
ಇನ್ನು 20ನೇ ಶತಮಾನದ ಬಾರ್ಬರಾ ಮ್ಯಾಕ್ ಕ್ಲಿಂಟಾಕ್ 1983ರಲ್ಲಿ ನೋಬೆಲ್ ಪ್ರಶಸ್ತಿ ಪಡೆದ ತಳಿಶಾಸ್ತ್ರಜ್ಞೆ. ಅವಳು “ಒಂದು ಸಸ್ಯದ ಜೀನ್ಗಳು ತಾವಿರುವ ವರ್ಣತಂತುವಿನ (chromosomes) ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುತ್ತವೆ. ಅದು ಮುಂದಿನ ಪೀಳಿಗೆಗಳಲ್ಲಿ ಬದಲಾವಣೆ ಉಂಟು ಮಾಡುತ್ತವೆ” ಎಂಬುದನ್ನು ಕಂಡುಹಿಡಿದಳು. 1931ರಲ್ಲಿ ಹಾರಿಯಟ್ ಕ್ರಿಗೋಟನ್ ಜೊತೆಗೆ ಒಂದು ಕಾಳಿನ ಎರಡು ಜೀವಕೋಶಗಳು ಸೇರಿ ಹೊಸ ಜೀವಕೋಶ ಉತ್ಪತ್ತಿಯಾಗುವಾಗ ಅವು ವರ್ಣತಂತುವಿನ ಗುಣಗಳನ್ನು ಬದಲಾಯಿಸಿಕೊಳ್ಳುತ್ತವೆ ಎಂದು ಕಂಡುಹಿಡಿದಳು. ಇದನ್ನು crossing over ಎಂದು ಹೇಳುತ್ತಾರೆ. ನಂತರ ಅವಳು ಸ್ಥಳಾಂತರೀ ಜೀನ್ಸ್ (jumping genes) ಎಂದು ತಾನೇ ಹೆಸರಿಟ್ಟ ಒಂದು ಹೊಸ ವಿದ್ಯಮಾನವನ್ನು ಬೆಳಕಿಗೆ ತಂದಳು. ಇದನ್ನು 1944ರಲ್ಲಿ ಪ್ರಕಟಿಸಿದಳು. ಆದರೆ ಉಳಿದ ತಳಿಶಾಸ್ತ್ರಜ್ಞರು ಇದನ್ನು ಒಪ್ಪಿಕೊಳ್ಳಲು ಅವಳು 20 ವರ್ಷಗಳು ಕಾಯಬೇಕಾಯಿತು. ಅದಕ್ಕಾಗಿ ನೋಬೆಲ್ ಪ್ರಶಸ್ತಿ ಪಡೆಯಲು ಇನ್ನೂ 20 ವರ್ಷ ಕಾದು ತನ್ನ 77ನೇ ಇಳಿವಯಸ್ಸಿನಲ್ಲಿ ಪಡೆಯುವಂತಾಯಿತು.
ಇನ್ನು endocrinologyಯಲ್ಲಿ ಕ್ರಾಂತಿ ತಂದ ಆರ್.ಇ.ಎ. ತಂತ್ರ ಕಂಡೂಹಿಡಿದ ರೋಸಲಿನ್ ಯಾಲೋ, ಅಪಕ್ವ ಜೀವಕೋಶಗಳ ವಿಕಾಸದಲ್ಲಿ ಪ್ರಭಾವ ಬೀರುವ ಬೆಳವಣಿಗೆಯ ಘಟಕ (growth factors)ಗಳ ನ್ನು ಕಂಡುಹಿಡಿದ ರೀಟಾ ಲೆವಿ ಮಾಂಟಾಲ್ಚಿನಿ, ಔಷಧ ತಯಾರಿಕಾ ರಂಗದಲ್ಲಿ ಕ್ರಾಂತಿ ತಂದ ವಿಜ್ಞಾನಿ ಗರಟ್ರೂಡ್ ಇಲಿಯನ್, 1995ರಲ್ಲಿ ವೈದ್ಯ ರಂಗದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಕ್ರಿಸ್ಟೀನ್ ನುಸ್ಲಾಯ್ನ್ ವೋಲ್ಹಾರ್ಡ್ ಮುಂತಾದ ಮಹಿಳಾ ವಿಜ್ಞಾನಿಗಳು ವಿಜ್ಞಾನ ಲೋಕದಲ್ಲಿ ಅದ್ಭುತ ಸಾಧನೆಗಳನ್ನು ಸಾಧಿಸಿದ ಮಹಿಳಾಮಣಿಗಳು.
ಹೀಗೆ ವಿಜ್ಞಾನ ಪ್ರಪಂಚದಲ್ಲಿ ಮಹಿಳೆಯರ ಸಾಧನೆಗಳು ನಿಧಾನ ಗತಿಯಲ್ಲಾದರೂ ಸಾಗಿ ಮಹಿಳೆಯರಿಗೆ ಒಂದು ಹಾದಿ ಮೂಡಿಸಿಕೊಟ್ಟಿದೆ. ಹೀಗೆ ಈ ಮೇಧಾವಿ ಮಹಿಳೆಯರ ಸಾಧನೆಗಳು ಇಂದಿನ ಚುರುಕು ಹೆಣ್ಣು ಮಕ್ಕಳ ಮನ ಮುಟ್ಟುವಂತಾಗಲಿ. ನಮ್ಮ ಭಾರತದಲ್ಲೂ ಸಹಾ ಅಂಥಾ ಮಹಾನ್ ಮೇಧಾವಿಗಳ ಜನನವಾಗಲಿ ಎಂದು ಆಶಿಸುತ್ತಾ ವಿಜ್ಞಾನ ಪ್ರಪಂಚದಲ್ಲಿ ಮೇರುಗಳೆನಿಸಿದ, ಮೇರುಗಳೆನಿಸಲಿರುವ ಮಹಿಳೆಯರಿಗೆ ಪು.ತಿ.ನ ಅವರ ನುಡಿಗಳಲ್ಲಿ,
“ಪೂಜ್ಯ ಓ ತಪೋಧನೆ
ನಿಮಗನಂತ ವಂದನೆ
ಪುನರನಂತ ವಂದನೆ”
ಎಂದು ನಮಿಸೋಣ.