ವಿಡಿಯೋ ಆಟ ಆಡುವ ಮಾರುತಿ! ಇ-ಲೋಕ-18 (13/4/2007)
ಅಟ್ಲಾಂಟಾದ ಮೃಗಾಲಯದಲ್ಲಿ ಸುಮಾತ್ರಾದ ವಾನರಗಳಿಗೆ ವಿಡಿಯೋ ಗೇಂ ಆಡುವ ಸೌಭಾಗ್ಯ ಪ್ರಾಪ್ತವಾದರೆ,ಮೃಗಾಲಯಕ್ಕೆ ಬರುವ ಪ್ರವಾಸಿಗಳಿಗೆ ವಾನರನ ಮಂಗನಾಟದ ದರ್ಶನಭಾಗ್ಯ ಲಭಿಸುತ್ತದೆ! ಸುಮಾತ್ರಾದ ವಾನರ ಜಾತಿ ಒರಂಗುಟಾನ್‌ನ ಕೌಶಲ,ಕಲಿಕೆ ಮತ್ತಿತರ ವಿಷಯಗಳ ಬಗೆಗೆ ಅಭ್ಯಾಸ ಮಾಡುವ ಸಂಶೋಧಕರು ಮಾಡಿರುವ ವ್ಯವಸ್ಥೆಯಿದು.ವಾನರಗಳು ವಾಸವಾಗಿರುವ ಮರದ ಮೇಲೆಯೇ ವಿಡಿಯೋ ತೆರೆಯಿಟ್ಟಿದ್ದಾರೆ. ಇದು ಸ್ಪರ್ಶ ಸಂವೇದಿ ತೆರೆಯಾದ್ದರಿಂದ, ವಾನರಗಳ ಸ್ಪರ್ಶಕ್ಕೆ ದೃಶ್ಯಗಳಲ್ಲಿ ಬದಲಾವಣೆಯಾಗಬಹುದು. ಚಿತ್ರಗಳನ್ನು ತೋರಿಸಿ, ವಾನರವು ಒಂದೇ ರೀತಿ ಇರುವ ಎರಡು ಚಿತ್ರಗಳನ್ನು ಗುರುತಿಸಲು ಸಫಲವಾಗುತ್ತದೋ ಎಂಬುದನ್ನು ಪರೀಕ್ಷಿಸುವಂತಹ ಆಟಗಳನ್ನು ಅದರಿಂದ ಆಡಿಸಿ, ವಾನರಗಳು ತಮ್ಮ ಅನುಭವದಿಂದ ಕಲಿಯುತ್ತವೋ ಎಂಬುವುದನ್ನು ಅಭ್ಯಸಿಸುವುದು ಸಂಶೋಧಕರ ಪ್ರಯತ್ನ. ಜತೆಗೆ ವಾನರಗಳ ಕ್ಲೋಸ್ ಅಪ್ ಚಿತ್ರಗಳು ಪ್ರವಾಸಿಗಳ ಮನತಣಿಸುವಂತೆ ಇಲ್ಲಿ ಕ್ಯಾಮರಾ ಮೂಲಕ ಅವುಗಳ ಚಟುವಟಿಕೆಗಳನ್ನು ಸೆರೆ ಹಿಡಿದು, ತೋರಿಸುವ ವ್ಯವಸ್ಥೆಯೂ ಇಲ್ಲಿದೆ.
ಸೂಡಾನ್‌ನ ನರಮೇಧ ಬಹಿರಂಗ ಪಡಿಸಿದ ಗೂಗಲ್ ಅರ್ಥ್
ಗೂಗಲ್ ಅರ್ಥ್ ತಂತ್ರಾಂಶವು ಇಪ್ಪತ್ತು ಕೋಟಿ ಕಂಪ್ಯೂಟರುಗಳಲ್ಲಿ ಅನುಸ್ಥಾಪಿತವಾಗಿದೆ. ಗೂಗಲ್‌ನ ಈ ಜನಪ್ರಿಯ ಸೇವೆಯ ಮೂಲಕ ಉಪಗ್ರಹಗಳ ಮೂಲಕ ತೆಗೆದ ಮೂರು ಆಯಾಮದ ಭೂಮಿಯ ಚಿತ್ರಗಳನ್ನು ಬಳಸಿಕೊಂಡು ಸೂಡಾನಿನಲ್ಲಿ ಕಳೆದ ನಾಲ್ಕು ವರ್ಷಗಳಿಂದೀಚೆಗೆ ನಡೆಯುತ್ತಿರುವ ನರಮೇಧ ಮತ್ತು ಆಸ್ತಿ-ಪಾಸ್ತಿಗಳಿಗೆ ಹಾನಿಯನ್ನು ಗೂಗಲ್ ಬಯಲು ಪಡಿಸಿ, ಜನಮತವನ್ನು ರೂಪಿಸಿದೆ. ಸುಮಾರು ಎರಡು ಲಕ್ಷ ಜನರ ಮಾರಣ ನಡೆದಿರುವ ಸೂಡಾನ್‌ನ ಸಹಸ್ರಾರು ಹಳ್ಳಿಗಳು ನಾಶವಾದದ್ದನ್ನು ಗೂಗಲ್ ಅರ್ಥ್‌ನ ಮ್ಯಾಪ್‌ಗಳು ತೋರಿಸುತ್ತವೆ. ಲಕ್ಷಕ್ಕೂ ಅಧಿಕ ಮನೆಗಳು ನೆಲಸಮವಾಗಿವೆ. ಮಿಲಿಯಗಟ್ಟಲೆ ಜನರು ಗುಳೇ ಹೋಗಿದ್ದಾರೆ. ಸೈನ್ಯ ಮತ್ತು ಸರಕಾರದ ವಿರೋಧಿಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ.ಸೂಡಾನಿನ ಈ ಪ್ರದೇಶವನ್ನು ಡಾರ್ಫರ್ ಪ್ರದೇಶ ಎಂದು ಗೂಗಲ್ ಗುರುತಿಸಿದೆ. ಈ ಕೆಲಸದಲ್ಲಿ ಗೂಗಲ್‌ಗೆ ಸಹಯೋಗ ನೀಡಿರುವ ಅಮೆರಿಕಾದ ಹೋಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ. ಪುಟವನ್ನು ಬ್ರೈಲ್ ಲಿಪಿಗೆ ಪರಿವರ್ತಿಸಿ ಕೊಡುವ ಸೇವೆ ರೊಬೋಬ್ರೈಲ್ ಎನ್ನುವ ಡ್ಯಾನಿಶ್ ಕಂಪೆನಿಯು ಅಂಧರಿಗೆ ವಿನೂತನ ಸೇವೆ ನೀಡುತ್ತಿದೆ. ಯಾವುದೇ ಪದಸಂಸ್ಕಾರಕ ತಂತ್ರಾಂಶದ ಕಡತವನ್ನು ಅಥವ ಅಂತರ್ಜಾಲ ಪುಟವನ್ನು ಕಂಪೆನಿಯ ಇ-ಮೇಲ್ ವಿಳಾಸಕ್ಕೆ ಕಳುಹಿಸಿದರೆ, ಅದರ ಎಂಪಿತ್ರೀ ಕಡತ ಅಥವ ಇಲೆಕ್ಟ್ರಾನಿಕ್ ಬ್ರೈಲ್ ಲಿಪಿಯ ಕಡತವಾಗಿ ಬದಲಾಯಿಸಿ ಮರಳಿಸುವ ಸೇವೆಯನ್ನು ಕಂಪೆನಿಯು ಉಚಿತವಾಗಿ ನೀಡುತ್ತದೆ. ಎಂಪಿತ್ರಿ ಕಡತವನ್ನು ನುಡಿಸಿ,ಆಲಿಸಬಹುದು. ಬ್ರೈಲ್ ಲಿಪಿ ಕಡತವನ್ನು ಬಳಸಲು ಸಾಧನವೊಂದರ ಅವಶ್ಯಕತೆಯಿದೆ.ಸಾಧನವು ಹಲವು ಪಿನ್‌ಗಳನ್ನ ಹೊಂದಿದ್ದು, ಬ್ರೈಲ್ ಲಿಪಿಯಲ್ಲಿ ಅಕ್ಷರವನ್ನು ಮೂಡಿಸಿ, ಸ್ಪರ್ಶದ ಮೂಲಕ, ಅಕ್ಷರವನ್ನು ಅರಿಯಲು ಅವಕಾಶವಾಗುತ್ತದೆ.ಮುಂದೆ ಪಿಡಿಎಫ್ ಕಡತಗಳಿಗೂ ಈ ಸೇವೆ ಒದಗಿಸಲು ಕಂಪೆನಿ ತಯಾರಿ ನಡೆಸುತ್ತಿದೆಯಂತೆ.
ಶೌಚಾಲಯದ ಮೂಲಕ ಅಂತರ್ಜಾಲ?
ಗೂಗಲ್ ಕಳೆದ ಮಾಸಾಂತ್ಯದ ದಿನ ಪತ್ರಿಕಾ ಗೋಷ್ಠಿ ನಡೆಸಿತು. ಗೂಗಲ್ ಕಂಪೆನಿಯ ಪತ್ರಿಕಾ ಗೋಷ್ಠಿ ಎಂದರೆ,ಏನಾದರೂ ಹೊಸ ಸೇವೆ ಆರಂಭಿಸುವ ಬಗೆಗೆ ಮಾಹಿತಿ ಎನ್ನುವುದು ಖಾತರಿ.ಅಂದೂ ಕೂಡಾ ಹಾಗೇ ಆಯಿತು. ಶೌಚಾಲಯದ ಪೈಪು ವ್ಯವಸ್ಥೆಯ ಮೂಲಕ ಅಂತರ್ಜಾಲ ಒದಗಿಸುವ ಸೇವೆ ಆರಂಭಿಸಲಿರುವುದಾಗಿ ಕಂಪೆನಿಯ ಹಿರಿಯ ಅಧಿಕಾರಿ ವಿವರಣೆ ನೀಡಿದರು. ಅದರ ಜತೆ, ಈ ಸೇವೆ ಪಡೆಯಲು ಯಾವ ಅಂತರ್ಜಾಲ ತಾಣವನ್ನು ಬಳಸಬೇಕು, ಅನುಸರಿಸಬೇಕಾದ ಕ್ರಮ ಯಾವುದು ಎನ್ನುವುದರ ಬಗೆಗೆ ವಿವರಣೆಯೂ ಇತ್ತು. ನಂತರವಷ್ಟೇ ಇದು ಎಪ್ರಿಲ್‌ಫೂಲ್ ಹುಸಿಸುದ್ದಿ ಎನ್ನುವುದು ಪತ್ರಕರ್ತರಿಗೆ ತಿಳಿಯಿತು.
ಗೂಗಲ್‌ನಿಂದ ಪಾವತಿಸೇವೆ
ಇಂಗ್ಲೆಂಡಿನ ಬಳಕೆದಾರರಿಗೆ ಇದುವರೆಗೆ ಲಭ್ಯವಾಗಿಲ್ಲದೆ ಸೇವೆಯನ್ನು ಗೂಗಲ್ ಈಗ ನೀಡಲಾರಂಭಿಸಿದೆ. ಗೂಗಲ್ ಚೆಕೌಟ್ ಎಂಬ ಈ ವ್ಯವಸ್ಥೆ ಇ-ವಾಣಿಜ್ಯದ ಮೂಲಕ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವವರಿಗೆ ಉಪಯುಕ್ತ.ಖರಿದಿಸಿದ ಮೇಲೆ ಹಣ ಪಾವತಿಸಲು ಬಳಕೆದಾರರು ಕ್ರೆಡಿಟ್ ಕಾರ್ಡ್ ಬಳಸುತ್ತಾರೆ ತಾನೇ? ಈ ಪಾವತಿ ವ್ಯವಸ್ಥೆಯಲ್ಲಿ ಬಳಕೆದಾರರು ಮತ್ತು ಸರಕು ಮಾರಿದ ಕಂಪೆನಿಗಳ ಬ್ಯಾಂಕುಗಳ ನಡುವೆ ಗೂಗಲ್ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಈಗಾಗಲೇ ಇಂತಹ ಸೇವೆ ನೀಡುವ ಪೇಪಾಲ್(ಇಬೇ ಕಂಪೆನಿಯ ಸೇವೆ)ಗೆ ಹೋಲಿಸಿದರೆ, ಗೂಗಲ್ ತನ್ನ ಜಾಹೀರಾತುದಾರರಿಗೆ ಕಡಿಮೆ ಶುಲ್ಕ ವಿಧಿಸಲಿದೆ.ಇದುವರೆಗೆ ಗೂಗಲ್ ಪಾವತಿ ಸೇವೆ ಅಮೆರಿಕಾದ ಬಳಕೆದಾರರಿಗೆ ಮಾತ್ರಾ ಲಭ್ಯವಿದೆ.ಪಾವತಿ ವ್ಯವಸ್ಥೆಯಲ್ಲಿ ನಡೆಯುವ ಅಕ್ರಮಗಳ ಮೂಲಕ ಬಳಕೆದಾರರಿಗೆ ಸಂಭವಿಸುವ ನಷ್ಟವನ್ನು ಇಳಿಸುವ ಖಾತರಿಯನ್ನು ಗೂಗಲ್ ನೀಡುತ್ತಿದೆ. *ಅಶೋಕ್‌ಕುಮಾರ್ ಎ