ವಿನೋಬಾ ಭಾವೆಯವರ ಪಪ್ಪಾಯಿ ಹಣ್ಣಿನ ಕತೆ

ವಿನೋಬಾ ಭಾವೆಯವರ ಪಪ್ಪಾಯಿ ಹಣ್ಣಿನ ಕತೆ

ವಿನಾಯಕ ನರಹರಿ ಭಾವೆಯೇ ನಮಗೆಲ್ಲಾ ಚಿರಪರಿಚಿತರಾಗಿರುವ ವಿನೋಬಾ ಭಾವೆ. ವಿನೋಬಾಬಾವೆಯವರು ಮಹಾತ್ಮಾ ಗಾಂಧಿಯವರ ಒಡನಾಡಿಯಾಗಿದ್ದರು. ಉತ್ತಮ ಲೇಖಕರೂ, ಬಹುಭಾಷಾ ಪಂಡಿತರೂ ಆಗಿದ್ದರು. ಹುಟ್ಟಿದ್ದು ಮಹಾರಾಷ್ಟ್ರದಲ್ಲಾದರೂ ಅವರಿಗೆ ಕನ್ನಡ ಭಾಷೆಯ ಅರಿವು ಚೆನ್ನಾಗಿಯೇ ಇತ್ತು. ಕನ್ನಡ ಲಿಪಿಯನ್ನು ಅವರು ‘ಲಿಪಿಗಳ ರಾಣಿ' ಎಂದು ಕರೆಯುತ್ತಿದ್ದರು. ಸೆಪ್ಟೆಂಬರ್ ೧೧, ೧೮೯೫ರಲ್ಲಿ ಜನಿಸಿದ ಇವರು ‘ಭೂದಾನ’ ಚಳುವಳಿಯ ಹರಿಕಾರರೆಂದೇ ಖ್ಯಾತಿ ಪಡೆದಿದ್ದಾರೆ. ಶ್ರೀಮಂತ ಜಮೀನ್ದಾರರ ಮನವೊಲಿಸಿ ಎಕರೆಗಟ್ಟಲೆ ಭೂಮಿಯನ್ನು ದಾನವಾಗಿ ಪಡೆದು ಬಡ ರೈತರಿಗೆ ಹಸ್ತಾಂತರ ಮಾಡಿದ ಕೀರ್ತಿ ಇವರದ್ದು. ನವೆಂಬರ್ ೧೫, ೧೯೮೨ರಲ್ಲಿ ತಮ್ಮ ೮೭ನೇ ವಯಸ್ಸಿನಲ್ಲಿ ನಿಧನಹೊಂದುತ್ತಾರೆ. ಇವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ. 

ವಿನೋಬಾ ಭಾವೆಯವರ ಬಾಲ್ಯ ಜೀವನದಲ್ಲಿ ನಡೆದ ಒಂದು ಘಟನೆ ಅವರಿಗೆ ಭೂದಾನ ಚಳುವಳಿ ನಡೆಸಲು ಪ್ರೇರಣೆ ನೀಡಿತಂತೆ. ವಿನೋಬಾ ಭಾವೆಯವರು ಪುಟ್ಟ ಹುಡುಗನಾಗಿದ್ದಾಗ ಅವರ ತಾಯಿ ರುಕ್ಮಿಣಿ ದೇವಿಯವರು ಮನೆಯ ಆವರಣದಲ್ಲಿ ಒಂದು ಪಪ್ಪಾಯಿಯ ಗಿಡ ನೆಟ್ಟಿದ್ದರು. ಅದನ್ನು ಅವರು ಗೊಬ್ಬರ, ನೀರು ಹಾಕಿ ಚೆನ್ನಾಗಿ ನೋಡಿ ಕೊಳ್ಳುತ್ತಿದ್ದರು. ಇದರಿಂದ ಪಪ್ಪಾಯಿ ಸಸಿ ಬೇಗನೇ ಬೆಳೆಯಿತು. ಅದರಲ್ಲಿ ದೊಡ್ಡದಾದ ಪಪ್ಪಾಯಿ ಹಣ್ಣುಗಳು ಬೆಳೆದವು. ಕಾಲಕ್ರಮೇಣ ಪಪ್ಪಾಯಿ ಹಣ್ಣು ಬೆಳೆದು ಹಣ್ಣಾದಾಗ ವಿನೋಬಾ ತನ್ನ ತಾಯಿಯ ಅನುಮತಿ ಕೇಳಿ ಅದನ್ನು ಕಿತ್ತರು.

ತುಂಬಾ ದೊಡ್ಡದಾಗಿದ್ದ ಹಣ್ಣನ್ನು ನೋಡಿ ವಿನೋಬಾಗೆ ತುಂಬಾ ಖುಷಿ ಆಯಿತು. ತಾಯಿಯ ಬಳಿ ತಾನು ಆ ಹಣ್ಣನ್ನು ತುಂಡು ಮಾಡಿ ತಿನ್ನಲೇ? ಎಂದು ಕೇಳಿದಾಗ ಅವರ ತಾಯಿ ಮೊದಲು ಅದನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯುವಂತೆ ಹೇಳಿದರು. ಆನಂತರ ಅದನ್ನು ಕತ್ತರಿಸಿ ಅದರ ಒಳಗಿನ ಬೀಜಗಳನ್ನು ತೆಗೆದು ಸಣ್ಣದಾಗಿ ಕತ್ತರಿಸಲು ಹೇಳಿದರು. ಬಾಲಕ ವಿನೋಬಾ ಹಣ್ಣನ್ನು ತಿನ್ನುವ ಆಶೆಯಿಂದ ತನ್ನ ತಾಯಿ ಹೇಳಿದಂತೆ ಅದನ್ನು ಚೆನ್ನಾಗಿ ಶುಚಿ ಮಾಡಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿದರು. ಇನ್ನು ತಿನ್ನ ಬಹುದೇ ಎಂದು ಅಮ್ಮನನ್ನು ಕೇಳಿದರು.

ಆದರೆ ವಿನೋಬಾ ಅವರ ತಾಯಿ ಕೇಳಿದರು ‘ ನಮ್ಮ ಊರಿನಲ್ಲಿ ಎಷ್ಟು ಪಪ್ಪಾಯಿ ಗಿಡಗಳಿವೆ?. ‘ನಮ್ಮ ಊರಿನಲ್ಲಿ ಇದ್ದ ಪಪ್ಪಾಯಿ ಗಿಡ ಇದೊಂದೇ. ತಮ್ಮ ಊರಿನವರು ಕಾಣುತ್ತಿರುವ ಮೊದಲ ಪಪ್ಪಾಯಿ ಹಣ್ಣೂ ಸಹಾ ಇದೇ’ ಎಂದು ಉತ್ತರಿಸಿದರು. ಆಗ ಅವರ ತಾಯಿಯು ಹಾಗಾದರೆ ಈ ಪಪ್ಪಾಯಿ ಗಿಡದಲ್ಲಿ ಬೆಳೆದ ಈ ಹಣ್ಣು ನಮ್ಮದು ಮಾತ್ರ ಎಂದು ಹೇಳಲು ಹೇಗಾಗುತ್ತದೆ? ಈ ಪಪ್ಪಾಯಿ ಹಣ್ಣು ಇಡೀ ಊರಿನ ಎಲ್ಲಾ ಜನರದ್ದೂ ಆಗಿರುತ್ತದೆ. ಆದುದರಿಂದ ನಮ್ಮ ಇಡೀ ವಠಾರಕ್ಕೆ ಮೊದಲು ಹಂಚಿ ನಂತರ ನಮ್ಮ ಪಾಲಿನ ಹಣ್ಣಿನ ತುಂಡು ಉಳಿದರೆ ನಾವು ತಿನ್ನ ಬೇಕು ಎಂದರು. ತಮ್ಮ ತಾಯಿಯವರ ಮಾತನ್ನು ವಿನೋಬಾ ಅವರು ಪಾಲಿಸಿದರು.

ಇದರಿಂದ ಬಾಲಕ ವಿನೋಬಾ ಭಾವೆಯವರು ಒಂದು ಪಾಠ ಕಲಿತರು. ಅದೇನೆಂದರೆ ಇತರರೊಡನೆ ಹಂಚಿಕೊಳ್ಳುವುದು ಹಾಗೂ ಒಬ್ಬರನೊಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳುವುದು. ನಂತರದ ಮುಂದಿನ ದಿನಗಳಲ್ಲಿ ಆಚಾರ್ಯ ವಿನೋಬಾ ಭಾವೆಯವರು ತಮ್ಮ ಬಾಲ್ಯದ ಈ ಘಟನೆಯಿಂದಲೇ ‘ಭೂದಾನ' ಚಳುವಳಿಯನ್ನು ಪ್ರಾರಂಭಿಸಲು ಪ್ರೇರಣೆಯಾಯಿತು ಎಂದು ಹೇಳಿಕೊಳ್ಳುತ್ತಾರೆ. ಅವಶ್ಯಕ್ಕಿಂತ ಅಧಿಕವಿದ್ದ ಜಮೀನನ್ನು ಹೊಂದಿರುವ ಭೂಮಾಲೀಕರಿಂದ ಬಡವರಿಗೋಸ್ಕರ ದಾನ ಮಾಡಲು ಪ್ರೇರೇಪಿಸುವುದೇ ಈ ಚಳುವಳಿಯ ಮುಖ್ಯ ಧ್ಯೇಯವಾಗಿತ್ತು.

 

(ಹಳೆಯ 'ಕಸ್ತೂರಿ' ಮಾಸಿಕದ ಪ್ರೇರಣೆ)