ವಿಶ್ವ ಹಾವುಗಳ ದಿನ : ಜುಲೈ 16
ಭಾರತೀಯ ಸಂಸ್ಕೃತಿಯಲ್ಲಿ ಹಾವುಗಳಿಗೆ ವಿಶಿಷ್ಟ ಸ್ಥಾನವಿದೆ. ನಾಗರಾಜನೆಂದು ಪೂಜಿಸುತ್ತಾ ಬಂದವರು ನಾವು. ಹಾವುಗಳ ಕುರಿತು ಜನರಲ್ಲಿರುವ ಅನಗತ್ಯ ಭಯವನ್ನು ದೂರ ಮಾಡಿ, ಅವುಗಳ ರಕ್ಷಣೆಗೆ ಜಾಗೃತಿ ಮೂಡಿಸಲು ವಿಶ್ವ ಹಾವು ದಿನ (ಉರಗ ದಿನ) ಆಚರಿಸಲಾಗುತ್ತದೆ. ಹಾವಿನ ಆವಾಸಸ್ಥಾನಗಳನ್ನು ರಕ್ಷಿಸೋಣ. ಅವುಗಳ ಮಹತ್ವ ತಿಳಿಸೋಣ.
ಹಾವುಗಳು ಸರೀಸೃಪ ಗುಂಪಿಗೆ ಸೇರುವ ಪ್ರಮುಖ ಜೀವಿಗಳಾಗಿದ್ದು, ಜೀವಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ನಿರ್ವಸುತ್ತವೆ. ಬಹುಶಃ ಜಗತ್ತಿನಲ್ಲಿ ಹಾವುಗಳ ಬಗ್ಗೆ ಇರುವಷ್ಟು ಮೂಢನಂಬಿಕೆ/ ತಪ್ಪು ಅಭಿಪ್ರಾಯಗಳು ಬೇರೆ
ಯಾವುದೇ ಪ್ರಾಣಿಗಳ ಮೇಲೂ ಇಲ್ಲ ಅನ್ಸುತ್ತೆ! ಅವುಗಳಲ್ಲಿ ಪ್ರಮುಖವಾದವು ಕೆಳಗಿನಂತಿವೆ.
* ಹಾವು ಹಾಲು ಕುಡಿಯುತ್ತವೆ.
* ನಾಗರಹಾವು 12 ವರ್ಷ ದ್ವೇಷ ಸಾಧಿಸುತ್ತವೆ.
* ತಲೆಯಲ್ಲಿ ವಜ್ರದ ನಾಗಮಣಿ ಹೊಂದಿವೆ.
* ಐದು ಹೆಡ, ಏಳು ಹೆಡೆ ಹೊಂದಿದ ಹಾವುಗಳಿವೆ.
* ಕೇರೆ ಹಾವಿನ ಬಾಲದಲ್ಲಿ ವಿಷವಿರುತ್ತವೆ.
* ಮಣ್ಣುಮುಕ್ಕ ಹಾವು ಎರಡು ತಲೆಹೊಂದಿರುತ್ತದೆ.
* ನಾಗರಹಾವು ಕೇರೆಹಾವಿನೊಂದಿಗೆ ಬೆದೆ ಯಾಡುತ್ತದೆ (ಮಿಲನಹೊಂದುತ್ತದೆ),
* ಕೊಳಕು ಮಂಡಲ ಹಾವಿನ ಉಸಿರು ತೆಗಲಿದರೆ ಸಾಕು, ಉಸಿರು ತೆಗಲಿದ ಸ್ಥಳ ಕೊಳೆಯುತ್ತದೆ.
* ಕೇದಿಕೆ, ಸಂಪಿಗೆ ಹೂವಿನ ಪರಿಮಳಕ್ಕೆ ಹಾವುಗಳು ಬರುತ್ತವೆ.
* ಪುಂಗಿ ನಾದ ಕೇಳಿದೊಡನೆ ಹಾವುಗಳು, ಅದರಲ್ಲೂ ನಾಗರಹಾವುಗಳು ಎಲ್ಲಿದ್ದರೂ ಓಡೋಡಿ ಬರುತ್ತವೆ.
ಈ ಪಟ್ಟಿ ಸಾಗುತ್ತಲೇ ಹೋಗುತ್ತದೆ ಹಾವುಗಳ ಬಗೆಗಿನ ಮೂಡನಂಬಿಕೆಯ ಪುಂಗಿಯ ಸರಣಿ. ಅದರಲ್ಲೂ ಇತ್ತೀಚೆಗೆ ಜನ 'ನಾಗಿನಿ' ಸೇರಿ ಹಾವುಗಳ ಬಗ್ಗೆ 'ಕಣಿ' ಹೇಳುವ ಸಾಲುಸಾಲು ಧಾರವಾಹಿಗಳನ್ನು ನೋಡ್ಕೊಂಡು ಈ ತಪ್ಪು ಅಭಿಪ್ರಾಯಗಳನ್ನು ಮತ್ತಷ್ಟು ವೃದ್ದಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಹಾವು ಕಡಿತದಿಂದ ಪ್ರತಿವರ್ಷ 50 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪುತ್ತಿದ್ದು, ಪ್ರಪಂಚದಲ್ಲಿಯೇ ಹಾವು ಕಡಿತದಿಂದ ಅತಿಹೆಚ್ಚು ಜನ ಸಾವನ್ನಪ್ಪುವ ದೇಶ ನಮ್ಮದಾಗಿದೆ.
(ಸಂಗ್ರಹ) - ಅರುಣ್ ಡಿ'ಸೋಜ. ಶಕ್ತಿನಗರ
ಚಿತ್ರ ಕೃಪೆ: ಇಂಟರ್ನೆಟ್ ತಾಣ