ವಿಶ್ವ ಹೃದಯ ದಿನದ ನೆನಪಿನಲ್ಲಿ…
ಒಂದೇ ಹೃದಯ
ಮೊದಲ ಓರೆ ನೋಟಕೆ ಸೋತೆ
ನೆನಪಿನಲಿ ಭಾವಗಳ ಸಂತೆ|
ಮೊಳಕೆಯೊಡೆದು ಚಿಗುರಿ ಕಂತೆ ಕಂತೆ
ಸೆಳೆಯಿತೆಂದು ಭ್ರಮಿಸಿ ಆದೆ ಭ್ರಾಂತೆ||
ಪುಟ್ಟ ಹೃದಯದ ಧ್ವನಿಯ ಸಪ್ಪಳ
ಕೇಳಿ ಒಲವ ಹೂ ಹಾಸಿದೆ|
ಬರಸೆಳೆದು ಸಾಂತ್ವನಿಸುವೆ ಎಂದು
ಆಸೆಯಲಿ ಹಂಬಲಿಸಿದೆ||
ನನಸಾಯಿತೆಂದು ತಿಳಿದೆದ್ದು ನೋಡಿದರೆ
ಎಲ್ಲವೂ ಮರೀಚಿಕೆ ಎಂದರಿತೆ|
ಸಹಿಸಲಾರದ ಘಾಸಿಗೊಳಿಸಿದೆ ಇನಿಯ
ನಿನ್ನ ನಡೆ ಅಂಕುಡೊಂಕಿನ ಕವಲು ಹಾದಿ ತಿಳಿದೆ||
ಎಲ್ಲಾದರು ಇರು ಸುಖವಾಗಿರು
ಇನ್ನಾರಿಗೂ ಹೀಗೆ ಮಾಡದಿರು|
ಜೀವಿತದಿ ಒಂದು ಜನ್ಮ ದೇವನವರ
ಒಂದೇ ಹೃದಯ ಬದುಕಿನ ಉಸಿರು||
***
‘ಲಬ್-ಡಬ್’
ಹೃದಯದ ಲಬ್-ಡಬ್
ಕೇಳಿಸಿತೇ ಸಖ ನಿನಗೆ
ತಲ್ಲಣಿಸಿದ ಹೊತ್ತು ಗಳಿಗೆ
ಭಾಷ್ಯವ ಬರೆಯುವೆಯಾ ಸಖ
ಮನದ ವನದೊಳಗೆ
ಪುಷ್ಪವೊಂದು ಘಮಲನು
ಹಬ್ಬಿಸಿ ಹರವಿ ಉಲಿದಾಗ
ಗಮನಿಸದೆ ಹೋದೆಯಾ
ಚೈತನ್ಯದ ಚಿಲುಮೆಯಾಗಿ
ನನ್ನ ಹೃದಯ ಗುಡಿಯಲಿ
ತನುವೆಲ್ಲ ತಂಪಾಗಿಸಿ ಕೈಹಿಡಿದು
ನೆಲೆಸಿಹ ದೇವನಲ್ಲವೇ ಸಖ
ಕನಸುಗಳ ಹಾದಿಯಲಿ
ಚೆಲುವ ಮಹಲನು ಕಟ್ಟಿ
ಒಲವನ್ನು ಚೆಲ್ಲಿ ಆವರಿಸಿದ
ನನ್ನೆದೆ ಗುಡಿಯ ಸರದಾರ
(ಸೆಪ್ಟೆಂಬರ್ ೨೯ ವಿಶ್ವ ಹೃದಯ ದಿನ. ಆ ಸಂದರ್ಭದಲ್ಲಿ ಬರೆದ ಕವನಗಳು)
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ