ವೀರ ಯೋಧರಿಗೊಂದು ಗೌರವಪೂರ್ವಕ "ಸೆಲ್ಯೂಟ್".

ವೀರ ಯೋಧರಿಗೊಂದು ಗೌರವಪೂರ್ವಕ "ಸೆಲ್ಯೂಟ್".


"ಏ ಮೇರೆ ವತನ್ ಕೆ ಲೋಗೋ..ಝರಾ ಆಂಖ್ ಮೆ ಭರ್ಲೋ ಪಾನಿ..
ಜೊ ಶಹೀದ್ ಹುಯೇ ಹೈ ಉನ್ಕಿ ..ಝರಾ ಯಾದ್ ಕರೋ ಕುರುಬಾನಿ.."

ಅದೆಷ್ಟು ಅರ್ಥಪೂರ್ಣ ಈ ಹಾಡು, ಕೇಳ್ತಾನೇ ಇರ್ಬೇಕು ಅನಿಸುತ್ತೆ ಅಲ್ವಾ? ತಮ್ಮ ಪ್ರಾಣವನ್ನೇ ದೇಶ ಸೇವೆಗಾಗಿ ಮುಡಿಪಾಗಿಟ್ಟು, ಹಗಲು ರಾತ್ರಿಯೆನ್ನದೆ ಗಡಿಯಲ್ಲಿ ಕಾಯುತ್ತಿರುವ ಅದೆಷ್ಟೋ ವೀರ ಯೋಧರು, ಹುತಾತ್ಮ ಯೋಧರನ್ನು ಒಮ್ಮೆ ನೆನಪಿಸುತ್ತದೆ . ಈ ಹಾಡಿಗೆ ಇಂದಿಗೆ ಐವತ್ತು ವರ್ಷಗಳ ಸಂಭ್ರಮ. ಮಹಾಕವಿ ಪ್ರದೀಪ್ ರಚಿಸಿದ್ದ ಈ ಕವನ 1963ರಲ್ಲಿ ಜನವರಿ 27 ರಂದು ದಿಲ್ಲಿಯ ರಾಷ್ಟ್ರೀಯ ಸಭಾಂಗಣದಲ್ಲಿ  ಗಾನಕೋಗಿಲೆ ಲತಾ ಮಂಗೇಷ್ಕರ್ ಕಂಠಸಿರಿಯಲ್ಲಿ ಮೊದಲ ಬಾರಿಗೆ ಈ ಹಾಡು ಮೂಡಿ ಬಂದಿತ್ತಂತೆ. 1962ರ ಚೀನಾ ಯುದ್ದದ ಘೋರ ಸೋಲಿನ ದಿನಗಳಲ್ಲಿ ಮಹಾಕವಿ ಪ್ರದೀಪ್ ಈ ಕವನವನ್ನು ಬರೆದಿದ್ದರು. ಆ ಕಾರ್ಯಕ್ರಮದಲ್ಲಿದ್ದ   ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂರವರು ಈ ಹಾಡನ್ನು ಕೇಳಿ ಕಣ್ಣೀರಾಗಿದ್ದರಂತೆ.

ದೇಶಪ್ರೇಮವನ್ನು ಉಕ್ಕಿಸುವ ಈ ಹಾಡು ಕೇಳಿದಾಗ ಒಂದು ಕ್ಷಣವಾದರೂ ನಮ್ಮನ್ನು ಕಾಯುತ್ತಿರುವ ಆ ವೀರಯೋಧರ ನೆನಪನ್ನು ತರಿಸುತ್ತದೆ. ಭಾರತಮಾತೆಯ ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡುಪಾಗಿಟ್ಟ ವೀರ ಯೋಧರ ತ್ಯಾಗದ ನೆನಪು ಕಣ್ಣೀರು ತರಿಸುತ್ತದೆ. ನಾವಿಲ್ಲಿ ರಾಜಾರೋಷವಾಗಿ ಮೆರೆಯುತ್ತಿರಬೇಕಾದರೆ, ಯಾವುದೋ ಒಂದು ಸುರಕ್ಷಿತ ಭಾವ ನಮ್ಮಲ್ಲಿ ಮೂಡಿದ್ದರೆ ಅದು ಆ ವೀರಯೋಧರಿಂದ. ಬಂಧು, ಬಳಗ, ರಕ್ತ ಸಂಬಂಧ, ಸ್ನೇಹಿತರು, ಮಕ್ಕಳು,ಹೆತ್ತ ತಾಯಿ ಇವರೆಲ್ಲರ ನೆನಪಿನಿಂದ ದೂರವಾಗಿ ಉಳಿದು ನಮ್ಮನ್ನೆಲ್ಲಾ ಹೊತ್ತ ತಾಯಿಯ ರಕ್ಷಣೆಗಾಗಿ, ಕೊರೆಯುವ ಚಳಿ, ನಿದ್ದೆ, ಯಾವುದನ್ನೂ ಲೆಕ್ಕಿಸದೆ ಗಡಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತನ್ನ ಭವಿಷ್ಯದ ಬಗ್ಗೆ ಚಿಂತಿಸದೆ, "ದೇಶ ಸೇವೆಯೇ ಈಶ ಸೇವೆ" ಎಂಬ ಮಾತಿನಂತೆ ಶತ್ರು ರಾಷ್ಟ್ರಗಳ ಆಕ್ರಮಣದಿಂದ ಭಾರತ ಮಾತೆಯನ್ನು ರಕ್ಷಿಸಲು ಪ್ರತೀ ಕ್ಷಣವೂ ಎಚ್ಚರದಿಂದ, ನಿಷ್ಠೆಯಿಂದ ಕಾಯುತ್ತಿರುತ್ತಾರೆ. ಒಂದು ನಿಮಿಷ ಯೋಧರು ಮೈಮರೆತರೂ ನಾವಿಲ್ಲಿ ಶಾಶ್ವತವಾಗಿ ನಿದ್ರಿಸುವಂತಾಗುತ್ತದೆ. ಇಷ್ಟು ಎಚ್ಚರ ವಹಿಸಿದರೂ ಗಡಿಭಾಗದಲ್ಲಿ ಭಯೋತ್ಪಾದಕರು, ನುಸುಳುಕೋರರು ಬೆನ್ನಿಗೆ ಚೂರಿ ಹಾಕಿ ವೀರಯೋಧರನ್ನು ಬಲಿತೆಗೆದುಕೊಳ್ಳುತ್ತಿದ್ದಾರೆ.

ಇಷ್ಟೆಲ್ಲಾ ವೀರ ಯೋಧರ ತ್ಯಾಗ  ಬಲಿದಾನಗಳಿಂದ  ಪಡೆದ ಸ್ವತಂತ್ರ ಭಾರತದಲ್ಲಿ ಇಂದು ಆಗುತ್ತಿರುವುದೇನು? ಅತಂತ್ರ ರಾಜಕಾರಣ, ಅಲ್ಲಿ ಪ್ರಾಣತೆತ್ತು ಭಾರತಮಾತೆಯನ್ನು ಕಾಪಾಡುತ್ತಿರುವ ಯೋಧ, ಇಲ್ಲಿ ಸಿಕ್ಕಷ್ಟೂ ಗಣಿಯನ್ನು ಅಗೆದು ಹೊತ್ತ ತಾಯಿಯನ್ನೇ ಕೊಳ್ಳೆ ಹೊಡೆಯುತ್ತಿರುವ ಧನದಾಹಿ ಮನುಷ್ಯರು, ಶತ್ರು ರಾಷ್ಟ್ರಗಳಿಂದ ಮಾತೆಯನ್ನು ರಕ್ಷಿಸಲು ಹೆಣಗಾಡುತ್ತಿರುವ ಯೋಧ ಅಲ್ಲಾದರೆ, ಇನ್ನೂ ಜಗತ್ತನೇ ಅರಿಯದ ಮುಗ್ದ ಕಂದಮ್ಮಗಳು, ಒಡಹುಟ್ಟಿದ ಅಕ್ಕ,ತಂಗಿಯನ್ನೂ ಬಿಡದೆ ತನ್ನ ಕಾಮದಾಹವನ್ನು ತೀರಿಸಿಕೊಳ್ಳುತ್ತಾ ಹೆಣ್ಣಿನ ಬಾಳನ್ನೇ ಅಂಧಕಾರಕ್ಕೆ ದೂಡುತ್ತಿರುವ, ಕ್ರೂರ ಮೃಗಗಳಿಗಿಂತಲೂ ಕಡೆಯಾಗಿ ವರ್ತಿಸುತ್ತಿರುವ ಮನುಷ್ಯರು, ಆಡಳಿತವನ್ನು ದುರುಪಯೋಗಪಡಿಸಿಕೊಂಡು ಹಳ್ಳಿಯಿಂದ ದಿಲ್ಲಿಯವರೆಗೂ ಭ್ರಷ್ಟಾಚಾರದ ರಾಜಕಾರಣ ಹೀಗೆ ಒಂದೇ ಎರಡೇ ಸಾಲು ಸಾಲು ಅನ್ಯಾಯ ಅನಾಚಾರಗಳು. ಪ್ರಾಣವನ್ನೇ ತೆತ್ತು ಸ್ವಾತಂತ್ರ್ಯ ತಂದು ಕೊಟ್ಟ ಆ ವೀರರ "ವೀರ ಮರಣ"ಕ್ಕೆ ನಾವು ಸಲ್ಲಿಸುತ್ತಿರುವ ಗೌರವ ಇದೇನಾ? ಎಂದು ಯೋಚಿಸುವಂತಾಗುತ್ತದೆ. 'ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ, ನೆರೆಮನೆಯ ಸುಡದು..ಎಂಬ ವಾಣಿಯೂ ನೆನಪಾಗುತ್ತದೆ.

ಅದೇನೇ ಇರಲಿ ಈ ಹಾಡು "ಅಜರಾಮರ". ವೀರ ಯೋಧರಿಗೊಂದು ಗೌರವಪೂರ್ವಕ "ಸೆಲ್ಯೂಟ್".

ಚಿತ್ರ ಕೃಪೆ

http://www.canstockphoto.com/soldier-with-indian-flag-8238451.html

Comments

Submitted by kavinagaraj Mon, 01/28/2013 - 10:14

ದೇಶಭಕ್ತಿ ಪ್ರಚೋದಿಸುವ ಹಾಡುಗಳು ಪುಳಕಗೊಳಿಸುತ್ತವೆ. ಆದರೆ, ದುರದೃಷ್ಟದಿಂದ ಕಾಮನೆಗಳನ್ನು ಉದ್ರೇಕಿಸುವ ಹಾಡುಗಳ ಪ್ರಚಾರ ಜೋರಾಗಿದೆ.