ವೆಲಿಬ್ ಎಂಬ ಸೈಕಲ್ ಸವಾರಿ ಯೋಜನೆ

ವೆಲಿಬ್ ಎಂಬ ಸೈಕಲ್ ಸವಾರಿ ಯೋಜನೆ

ಬರಹ


ಪ್ಯಾರಿಸ್‌ನಲ್ಲಿ ನಗರ ಪ್ರದಕ್ಷಿಣೆಗೆ ಸೈಕಲ್ ಬಾಡಿಗೆಗೆ ಸಿಗುತ್ತದೆ. ಇದೀಗ ಅಲ್ಲಿ ಜನಪ್ರಿಯವಾಗುತ್ತಿದ್ದು,ಮೊದಲ ವರ್ಷವೇ ಎಪ್ಪತ್ತೇಳು ದಶಲಕ್ಷ ಜನ ಸೈಕಲ್ ಸವಾರಿ ಮಾಡಿ,ನಗರ ಸುತ್ತಿದ್ದಾರೆ.ಪಾರ್ಕಿಂಗ್ ಸಮಸ್ಯೆ,ವಾಹನ ಸಂದಣಿಯ ನಡುವೆ ಮೋಟಾರು ವಾಹನದಲ್ಲಿ ನಗರ ಸುತ್ತುವುದು ತ್ರಾಸದಾಯಕವಷ್ಟೇ ಇದಕ್ಕಾಗಿಯೇ ಇಲ್ಲಿನ ಸರಕಾರ ಖಾಸಗಿ ಸಹಭಾಗಿತ್ವದಲಿ ಸೈಕಲ್ ಬಾಡಿಗೆಗೆ ಒದಗಿಸುವ ಯೋಜನೆ ಅನುಷ್ಠಾನಕ್ಕೆ ತಂದಿತು.ಮೊದಲರ್ಧ ಗಂಟೆಯಲ್ಲಿ ಸೈಕಲ್ ಮರಳಿಸಿದರೆ,ಯಾವ ಬಾಡಿಗೆಯನ್ನೂ ತೆರಬೇಕಿಲ್ಲ. ಇದು ಯೋಜನೆ ಜನಪ್ರಿಯವಾಗಲು ಮುಖ್ಯ ಕಾರಣ.ಜಾಹೀರಾತು ಆದಾಯ ಲಭ್ಯವಾಗುವುದರಿಂದ,ಗುತ್ತಿಗೆದಾರರಿಗೂ ನಷ್ಟವಾಗದು.ಸೈಕಲ್ ಸವಾರಿ ಮಾಡುವವರ ಜಾಡು ಗುರುತಿಸಲು ಇಲೆಕ್ತ್ರಾನಿಕ್ಸ್ ವ್ಯವಸ್ಥೆಯೂ ಇದೆ.ನಮ್ಮಲ್ಲಿನ ಸೈಕಲ್ ಬಾಡಿಗೆ ಅಂಗಡಿಗಳು,ಸುಣ್ಣ-ಬಣ್ಣ ಹೊಡೆದು ಹೊಸ ಪ್ರಯೋಗಕ್ಕಿಳಿಯಬಾರದೇಕೆ?
ಸಮುದ್ರದಲೆಯಿಂದ ವಿದ್ಯುತ್:ಹೊಸ ಟರ್ಬೈನ್
ಸಮುದ್ರದಲೆಯಿಂದ ವಿದ್ಯುತ್ ತಯಾರಿಸುವುದು,ಅಸಾಂಪ್ರದಾಯಿಕ ಇಂಧನ ಮೂಲಗಳ ಪೈಕಿ ಬಹು ಆಕರ್ಷಕ ಯೋಜನೆ. ಉಡುಪಿಯಲ್ಲೂ ಅಂತಹ ಪ್ರಸ್ತಾಪ ಬಹಳ ಸಮಯದಿಂದ ಕೇಳಿ ಬರುತ್ತಿದೆ. ಆದರೀಗ ವೇವ್‌ಜೆನ್ ಎಂಬ ಕಂಪೆನಿ ಈ ನಿಟ್ಟಿನಲ್ಲಿ ಹೊಸ ಟರ್ಬೈನ್ ತಯಾರಿಸಿದೆ.ಸಮುದ್ರದಲೆಯಿಂದ ವಿದ್ಯುತ್ ತಯಾರಿಸುವುದಕ್ಕೆ ಇದು ಬಳಕೆಯಾದರೂ,ಇದರಲ್ಲಿ ಟರ್ಬೈನ್ ತಿರುಗುವುದು ನೀರಿನಿಂದಲ್ಲ,ಗಾಳಿಯಿಂದ. ಆದರೆ ಈ ಗಾಳಿಯ ಒತ್ತಡ ಏರ್ಪಡಲು ಸಮುದ್ರದಲೆ ಬಳಕೆಯಾಗುತ್ತದೆ. ಸಮುದ್ರದಲೆ ಕಾಂಕ್ರೀಟ್ ರಚನೆಯನ್ನಪ್ಪಳಿಸಿದಾಗ,ಅದು ನಾಲೆಯ ಮೂಲಕ ಹಾಯ್ದು,ಗಾಳಿಯ ಪ್ರವಾಹವನ್ನು ಟರ್ಬೈನ್ ಮೂಲಕ ಹರಿಸುತ್ತದೆ.ಇದರಿಂದ ಟರ್ಬೈನ್ ತಿರುಗಿ,ವಿದ್ಯುಚ್ಛಕ್ತಿಯನ್ನು ಉತ್ಪಾದಿಸುತ್ತದೆ.ಸ್ಕಾಟ್ಲೆಂಡಿನ ಪ್ರಾಯೋಗಿಕ ವಿದ್ಯುಜ್ಜನಕವೀಗ ಒಂದೂವರೆ ಸಾವಿರ ಮನೆಗಳಿಗೆ ಬೇಕಾದಷ್ಟು ವಿದ್ಯುತ್ತನ್ನು ಉತ್ಪಾದಿಸುತ್ತಿದೆ.ಒಟ್ಟು ನಲ್ವತ್ತು ವಿದ್ಯುಜ್ಜನಕಗಳನ್ನು ಸ್ಥಾಪಿಸುವ ಯೋಜನೆಯಿದೆ.

ಒಲಿಂಪಿಕ್:ಮಳೆ ಕಾಟ ತಪ್ಪಿಸಲು ಯತ್ನ

ಆಗಸ್ಟ್ ಎಂಟರಂದು ಬೀಜಿಂಗಿನಲ್ಲಿ ಒಲಿಂಪಿಕ್ ಉದ್ಘಾಟನಾ ಸಮಾರಂಭ ನಡೆಯಲಿದ್ದು,ಮಳೆ ಬರುವ ಸಂಭವವಿದೆಯಂತೆ.ಮಳೆ ಬರದಂತೆ ಮೋಡಗಳ ಮೇಲೆ ಸಿಲ್ವರ್ ಅಯೋಡೈಡ್ ರಾಸಾಯಿನಿಕವನ್ನು ಚೆಲ್ಲಲು ಮೂವತ್ತಾರು ಸಾವಿರದ ಪಡೆಯೇ ಸಿದ್ಧವಾಗಿದೆಯಂತೆ.ಇನ್ನೊಂದು ವರದಿಯ ಪ್ರಕಾರ ಬೀಜಿಂಗಿನಲ್ಲಿ ಉದ್ಘಾಟನೆಯ ಮುನ್ನವೇ ಮಳೆ ಬರಿಸಿ,ಮೋಡಗಳನ್ನು ಇಲ್ಲವಾಗಿಸಿ,ಮಳೆಯ ಸಂಭಾವ್ಯತೆಯನ್ನು ಇಲ್ಲವಾಗಿಸುವ ಯೋಚನೆ ಚೀನಾದ ವಿಜ್ಞಾನಿಗಳದ್ದು.ಇದರ ಮೂಲಕ ಆಗಸವನ್ನು ತೊಳೆದು ಸ್ವಚ್ಛಗೊಳಿಸಿ,ಬೀಜಿಂಗಿನ ಪರಿಸರ ಮಾಲಿನ್ಯವನ್ನು ನಿಯಂತ್ರಿಸುವುದು ಅವರ ಯೋಜನೆ. ಮೋಡಗಳಿಗೆ ಸಿಸೇರಿಯನ್ ಚಿಕಿತ್ಸೆ ಮಾಡಿ,ಮಳೆ ಪ್ರಸವಿಸುವ ಸಾಹಸ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ!
ಸೌರಶಕ್ತಿ ಶೇಖರಿಸಲು ಹೊಸ ಮಾರ್ಗ
ಫೊಟೊವೊಲ್ಟಾಯಿಕ್ ಕೋಶಗಳ ಸಹಾಯದಿಂದ ಸೂರ್ಯನ ಬೆಳಕನ್ನು ವಿದ್ಯುತ್ತಾಗಿಸಿ, ಬ್ಯಾಟರಿಯಲ್ಲಿ ಸಂಗಹಿಸಿ,ಬೇಕಾದಾಗ ಅದನ್ನು ಬಳಸಿಕೊಳ್ಳುವ ತಂತ್ರಜ್ಞಾನ ಈಗಲೇ ಇದೆ. ಆದರೆ ಸೌರಶಕ್ತಿಯನ್ನು ಬಳಸಿ,ಜಲಜನಕ ಮತ್ತು ಆಮ್ಲಜನಕ ಅನಿಲ ಉತ್ಪಾದಿಸಿ,ಅದನ್ನು ಬಳಸುವ ಇಂಧನಕೋಶದ ಮೂಲಕ ವಿದ್ಯುಚ್ಛಕ್ತಿಯನ್ನು ಪಡೆಯುವ ವಿಧಾನವನ್ನು ಖ್ಯಾತ ಎಂಐಟಿ ತಾಂತ್ರಿಕ ವಿದ್ಯಾಲಯದ ಸಂಶೋಧಕ ಡೇನಿಯಲ್ ಕಂಡುಹಿಡಿದಿದ್ದಾರೆ.ಇಂಧನಕೋಶವನ್ನು ಬಳಸಿ,ಬೇಕಾದಾಗ ಜಲಜನಕ ಮತ್ತು ಆಮ್ಲಜನಕದಿಂದ ಮತ್ತೆ ವಿದ್ಯುತ್ ಉತ್ಪಾದಿಸಬಹುದು.ಈ ತಂತ್ರಜ್ಞಾನ ಸೌರಶಕ್ತಿಯ ಬಳಕೆಗೆ ಹೆಚ್ಚಿನ ಉತ್ಸಾಹ ಮೂಡಿಸಬಲ್ಲುದೇನೋ?
ಮಹಿಳೆಯರ ಬ್ಲಾಗ್ ತಾಣ
ಮಹಿಳೆಯರ ಬ್ಲಾಗ್‌ಗೇ ಮೀಸಲಾಗಿರುವ ಅಂತರ್ಜಾಲ ತಾಣವೇ www.blogher.com.ಇಲ್ಲೀಗ ಸುಮಾರು ಹನ್ನೆರಡು ಸಾವಿರಕ್ಕೂ ಹೆಚ್ಚು ಮಹಿಳೆಯರು ಬರೆಯುತ್ತಿದ್ದಾರೆ.ವರ್ಷದ ಹಿಂದೆ ಈ ಸಂಖ್ಯೆ ಎರಡುನೂರನ್ನೂ ದಾಟಿರಲಿಲ್ಲ!ತಂತ್ರಜ್ಞಾನದಿಂದ ಹಿಡಿದು ಅಡುಗೆ ವಿಧಾನಗಳ ಬಗೆಗಿನ ತರಹೇವಾರಿ ಬ್ಲಾಗುಗಳಿಗಿಲ್ಲಿ ಬರವಿಲ್ಲ.ಹಲವರು ತಮ್ಮ ಜನಪ್ರಿಯ ಬ್ಲಾಗುಗಳ ಮೂಲಕ ತಿಂಗಳ ಖರ್ಚಿಗೆ ಹಣ ಸಂಪಾದಿಸಲೂ ಸಮರ್ಥರಾಗಿರುವರಂತೆ.
ದೈಹಿಕ ಶಕ್ತಿ ಕೊಯ್ಲು ಮಾಡುವ ಜಿಮ್
ವ್ಯಾಯಾಮ ಮಾಡುವ ಜನರ ಶಕ್ತಿಯಿಂದಲೇ ವಿದ್ಯುತ್ ಪಡೆಯುವ ಜಿಮ್ ಈ ತಿಂಗಳು ಒರೆಗಾನ್‍ನಲ್ಲಿ ಆರಂಭವಾಗಲಿದೆ.ಹಾಗೆಯೇ ಸೆಪ್ಟೆಂಬರಿನಲ್ಲಿ ನೃತ್ಯ ಕಲಿಯುವವರ ಕುಣಿತದಿಂದ ವಿದ್ಯುತ್ ಉತ್ಪಾದಿಸಿ,ಬಳಸುವ ಡ್ಯಾನ್ಸ್ ಕ್ಲಬ್ ನೆದರ್ಲ್ಯಾಂಡಿನಲ್ಲಿ ಶುರುವಾಗಲಿದೆ.ಇವುಗಳಲ್ಲಿ ಬಳಕೆಯಾಗುವ ತಂತ್ರಗಳು ಪೀಜೋ ಇಲೆಕ್ಟ್ರಿಕ್‌ನಿಂದ ಹಿಡಿದು,ಟರ್ಬೈನ್ ಹೀಗೆ ವೈವಿಧ್ಯಮಯವಾಗಿರುತ್ತವೆ.ವ್ಯಾಯಾಮಕ್ಕೋಸ್ಕರ ಸೈಕಲ್ ತುಳಿದಾಗ,ಡೈನಮೋ ತಿರುಗಿಸಿ,ಅದರ ಮೂಲಕ ಬ್ಯಾಟರಿ ಚಾರ್ಜ್ ಮಾಡಿ,ನಂತರ ಟಿವಿ ನೋಡಲು ಬ್ಯಾಟರಿಯ ವಿದುಚ್ಛಕ್ತಿ ಸಂಗ್ರಹವನ್ನು ಬಳಸುವಂತಹ ಸಾಧನಗಳು ಲಭ್ಯವಾದರೆ,ಜಾಸ್ತಿ ಟಿವಿ ನೋಡಲು,ಜಾಸ್ತಿ ವ್ಯಾಯಾಮ ಮಾಡಬೇಕಾಗಿ ಬಂದು,ಟಿವಿಯ ಮುಂದೆ ಝಂಡಾ ಊರುವ ಅಭ್ಯಾಸಕ್ಕೆ ಕಡಿವಾಣ ಹಾಕುವ ಯೋಚನೆ ಕೆಲವರಿಗಿದೆ.
ನಡಿಗೆ ನಡುಕ ಹುಟ್ಟಿಸುವಂತದ್ದೇ?
ವೃದ್ಧರು ಗಂಟುನೋವು,ಮೂಳೆಸವೆತದಂತಹ ಕಾರಣಗಳಿಂದ ತಮ್ಮ ಸಮತೋಲನವನ್ನು ಕಾಯ್ದುಕೊಳ್ಳಲು ಕಷ್ಟಪಡುವುದಿದೆ. ಆದರಿದು ಒಂದೇ ಸಲಕ್ಕೆ ಜರಗುವ ಪ್ರಕ್ರಿಯೆ ಅಲ್ಲ. ನಿಧಾನವಾಗಿ ಅವರ ದೇಹ ತನ್ನ ಸಮತೋಲನ ಕಾಯ್ದುಕೊಳ್ಳಲು ವಿಫಲವಾಗುತ್ತಾ ಹೋಗುತ್ತದೆ.ಇದರ ಕಡೆ ಗಮನ ನೀಡಲು ಸಹಾಯ ಮಾಡುವ ಐ-ಸೋಲ್ ಎಂಬ ಸಾಧನವನ್ನು ಎಂಐಟಿಯ ವಿದ್ಯಾರ್ಥಿ ಲಿಬರ್‌ಮನ್ ಸಂಶೋಧಿಸಿದ್ದಾರೆ.ನಿಜಕ್ಕಾದರೆ,ಇದು ನಾಸಾದ ಬಾಹ್ಯಾಕಾಶಯಾನಿಗಳ ಬಳಕೆಗಾಗಿ ಇರುವಂತದ್ದು.ಆದರಿದನ್ನು ವಯೋವೃದ್ಧರಿಗೆ ನೆರವಾಗಲು ಬಳಸಬಹುದೆನ್ನುವುದು ಎಂಐಟಿಯ ವಿದ್ಯಾರ್ಥಿಯ ಯೋಚನೆಯ ಫಲ.ಈ ಐ-ಸೋಲನ್ನು ಶೂವಿನ ಒಳಗೆ ಅಳವಡಿಸಬಹುದು.ಇದರಲ್ಲಿರುವ ಸಂವೇದಕವು ಪಾದದ ಬೇರೆ ಬೇರೆ ಬಿಂದುಗಳಲ್ಲಿ ಎಷ್ಟು ಒತ್ತಡ ಬೀಳುತ್ತಿದೆ ಎನ್ನುವುದನ್ನು ಸಂಗ್ರಹಿಸಿಡುತ್ತದೆ. ಈ ದತ್ತಾಂಶವನ್ನು ವೈದ್ಯರು ಕಂಪ್ಯೂಟರ್ ತಂತ್ರಾಂಶ ಬಳಸಿ,ವಿಶ್ಲೇಷಿಸಿ ರೋಗಿಗೆ ನೆರವಾಗಬಲ್ಲರು.
*ಅಶೋಕ್‌ಕುಮಾರ್ ಎ

uadayavani

Ashokworld

(ಇ-ಲೋಕ-86)(4/8/2008) 
Ashokworld