ಶಿಕ್ಷಣದ ವ್ಯವಸ್ಥೆ ಹೇಗಿರಬೇಕು?

ಶಿಕ್ಷಣದ ವ್ಯವಸ್ಥೆ ಹೇಗಿರಬೇಕು?

ಬರಹ

ಶಿಕ್ಷಣದ ವ್ಯವಸ್ಥೆ ಹೇಗಿರಬೇಕು?
ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಕಡ್ಡಾಯವೇ? ಹೈಕೋರ್ಟಿನ ತೀರ್ಪು ಎಷ್ಟರ ಮಟ್ಟಿಗೆ ಸರಿ?
ಹೈ ಕೋರ್ಟ್ ನಮ್ಮ ಮಕ್ಕಳನ್ನು ಈ ಮಾಧ್ಯಮದಲ್ಲೇ ಓದಿಸಿ ಆ ಮಾಧ್ಯಮದಲ್ಲೇ ಓದಿಸಿ ಎಂದು ಯಾವುದೇ ಕಟ್ಟಪ್ಪಣೆ ಮಾಡಿಲ್ಲ.ಇದನ್ನು ಇಂಗ್ಲಿಷ್ ಮಾಧ್ಯಮಗಳ ಶಾಲೆಗಳ ಜಯ ಅಥವಾ ಕನ್ನಡ ಶಾಲೆಗಳ ಸೋಲು ಎಂದಾಗಲಿ ನಾವು ಪರಿಗಣಿಸಬೇಕಾಗಿಲ್ಲ. ನಮ್ಮ ಮಕ್ಕಳ ಜವಾಬ್ದಾರಿ ನಮಗೆ ಸೇರಿದ್ದು. ಹೀಗಾಗಿ ಚಿಂತಿಸಬೇಕಾದವರು ನಾವು. ಮಗುವಿನ ಹಕ್ಕು ಮತ್ತು ಆಸಕ್ತಿಯನ್ನೂ ಗೌರವಿಸಿ ನಿರ್ಧಾರ ತೆಗೆದುಕೊಳ್ಳಬೇಕಾದವರು ನಾವು.
ಎಳೆಯ ಮಕ್ಕಳ ಮೆದುಳಿನ ಶಕ್ತಿ ಅಪಾರವಾಗಿರುತ್ತದೆ ಎನ್ನುತ್ತಾರೆ ತಜ್ಞರು. ಹೀಗಾಗಿ ಹಲವು ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಮಕ್ಕಳು ಹೊಂದಿರುತ್ತಾರೆ ಎನ್ನುತ್ತಾರೆ ಅವರು. ಆದರೂ ಎಲ್ಲಾ ಮಕ್ಕಳೂ ಒಂದೇ ರೀತಿಯ ಸಾಮರ್ಥ್ಯ ಹೊಂದಿರುವುದಿಲ್ಲ. ಅವುಗಳಿಗೆ ಅವುಗಳದ್ದೇ ಆದ ನೂರಾರು ಕಾರಣಗಳಿರುತ್ತವೆ. ಆದಕಾರಣ ತಮ್ಮ ಮಕ್ಕಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾದವರು ಅವರ ಪೋಷಕರು. ಹಾಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಪೋಷಕರು ಗಮನಿಸಬೇಕಾದ ಮೂರು ಅಂಶಗಳಿವೆ. ಅವು,
೧. ತಮ್ಮ ಮಕ್ಕಳ ಬಗ್ಗೆ ಕುರುಡು ವ್ಯಾಮೋಹಕ್ಕೆ ಒಳಗಾಗದೇ ಅವರ ಸಾಮರ್ಥ್ಯದ ನಿಜವಾದ ಅರಿವು ಪೋಷಕರು ಹೊಂದಿದವರಾಗಿರಬೇಕು. ಪೋಷಕರು ತಮ್ಮ ಮಕ್ಕಳಿಗೆ ಯಾವ ಮಾಧ್ಯಮದಲ್ಲಾದರೂ ಮಾರ್ಗದರ್ಶನ ನೀಡುವ ಸಾಮರ್ಥ್ಯ ತಮಗೆ ಇದೆಯೇ ಎಂಬುದನ್ನೂ ತಿಳಿದಿರಬೇಕು. ಏಕೆಂದರೆ ಒಮ್ಮೊಮ್ಮೆ ಶಾಲೆಯಲ್ಲಿ ಒಟ್ಟಿಗೆ ಎಲ್ಲಾ ಮಕ್ಕಳಿಗೂ ಶಿಕ್ಷಕರು ಹೇಳಿಕೊಟ್ಟಾಗ ಬಾರದ ಅನುಮಾನ ಮನೆಯಲ್ಲಿ ಬರಬಹುದು. ಆಗ ಸ್ವಲ್ಪವಾದರೂ ಮಕ್ಕಳಿಗೆ ಹೀಗಲ್ಲ ಹೀಗೆ ಎಂದು ತಿಳಿಸುವಷ್ಟಾದರೂ ಜ್ಞಾನ ಇರಬೇಕು. ತಮ್ಮ ಹೆತ್ತವರು ಅಜ್ಞಾನಿಗಳು ಎಂದು ತಿಳಿದರೆ ಮಕ್ಕಳು ಅವರನ್ನು ಮೋಸ ಮಾಡುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಮಕ್ಕಳ ಸಾಮರ್ಥ್ಯ ತಿಳಿಯುವುದರೊಂದಿಗೆ ಪೋಷಕರು ತಮ್ಮ ಸಾಮರ್ಥ್ಯವನ್ನೂ ಓರೆಗಲ್ಲು ಹಚ್ಚಿ ತಿಳಿದುಕೊಂಡಿರುವುದು ಒಳ್ಳೆಯದು. ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿ ಆತಂಕಗಳನ್ನು ಒಡ್ಡದ ಸ್ವಚ್ಚ ವಾತಾವರಣವಿರಬೇಕು. ಹೆತ್ತವರು ಮತ್ತು ಮಕ್ಕಳ ನಡುವೆ ಪ್ರೀತಿ ವಿಶ್ವಾಸ ಹಾಗೂ ಸ್ನೇಹಮಯ ವಾತಾವರಣವಿದ್ದರೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಹೆತ್ತವರು ಮತ್ತು ಮಕ್ಕಳು ಇಬ್ಬರಲ್ಲೂ ಸಾಮರ್ಥ್ಯ ಸಾಕಷ್ಟು ಇದೆ ಎಂದು ನಿಶ್ಚಿತವಾದಲ್ಲಿ ಮಕ್ಕಳನ್ನು ಯಾವ ಮಾಧ್ಯಮದಲ್ಲಾದರೂ ಸೇರಿಸಬಹುದು. ಅವರ ಸರ್ವತೋಮುಖ ಬೆಳವಣಿಗೆಗೆ ಯಾವುದೇ ರೀತಿಯ ಕುಂದು ಬರುವುದಿಲ್ಲ.
೨. ಮಕ್ಕಳು ಯಾವ ಮಾಧ್ಯಮದಲ್ಲಿ ಬೇಕಾದರೂ ಕಲಿಯಲಿ, ಆದರೆ ತಮ್ಮ ಮಾತೃಭಾಷೆಗೆ ಪ್ರಥಮ ಸ್ಥಾನ ಕೊಡುವುದನ್ನು ಮರೆಯಬಾರದು. ಇದರಲ್ಲಿ ಮಕ್ಕಳ ಪಾತ್ರಕ್ಕಿಂತ ಪೋಷಕರ ಪಾತ್ರ ದೊಡ್ಡದು. ಇಲ್ಲಿ ಪೋಷಕರೊಂದಿಗೆ ಶಾಲೆಗಳ ಮುಖ್ಯಸ್ಥರೂ ಕೈಜೋಡಿಸಬೇಕಾಗುತ್ತದೆ. ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವಿದ್ದಲ್ಲಿ ಪ್ರಥಮ ಭಾಷೆ ಕನ್ನಡವಾಗಿರಬೇಕು. ಉತ್ತಮ ಸಾಹಿತ್ಯಾಭಿರುಚಿಯನ್ನು ತರಿಸುವಂಥ ಪಠ್ಯ ಪುಸ್ತಕಗಳನ್ನು ಅಳವಡಿಸಿಕೊಳ್ಳಬೇಕು. ಯಾವ ಮಾಧ್ಯದಲ್ಲಿ ಮಿಕ್ಕ ವಿಚಾರಗಳನ್ನು ಕಲಿತರೂ ಪ್ರಥಮ ಭಾಷೆ ಕನ್ನಡದಲ್ಲಿ ಪಡೆವ ಅಂಕಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಮಕ್ಕಳಿಗೆ ಹೆಚ್ಚು ಆಸಕ್ತಿ ಬರುವಂತೆ ಮಾಡುವುದು ಶಿಕ್ಷಕರ ಕೈಯಲ್ಲಿದೆ. ಆಗ ತಾನೇ ತಾನಾಗಿ ಮಕ್ಕಳಲ್ಲಿ ಕನ್ನಡಾಭಿಮಾನ ಬರುತ್ತದೆ.
೩. ಒಂದುವೇಳೆ ಇಂಗ್ಲಿಷ್ ಮಾಧ್ಯಮದಲ್ಲೇ ಓದಿಸಬೇಕೆಂದು ಪೋಷಕರು ನಿರ್ಧರಿಸಿದರೆ ಹೈಕೋರ್ಟ್ ಅನುದಾನರಹಿತ ಶಾಲೆಗಳಿಗೆ ಮಾತ್ರ ಇಂಗ್ಲಿಷ್ ಮಾಧ್ಯಮಗಳಲ್ಲಿ ಶಿಕ್ಷಣ ನೀಡಲು ಅನುಮತಿ ನೀಡಿರುವುದರಿಂದ ಮಕ್ಕಳ ವಿದ್ಯಾಭ್ಯಾಸದ ಖರ್ಚು ದುಬಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆಗ ತಮ್ಮ ಹಣಕಾಸಿನ ವ್ಯವಸ್ಥೆಯ ಪರಿಸ್ಥಿತಿಯ ಅಂದಾಜೂ ಪೋಷಕರಿಗಿರಬೇಕು.
ಇಂದು ವಿದ್ಯೆ ಮಕ್ಕಳ ಉನ್ನತಿಗಾಗಿ ಮಾತ್ರವಲ್ಲ. ಅವರ ಭವಿಷ್ಯ ರೂಪಿಸುವಲ್ಲಿ ಅದು ಮುಖ್ಯ ಪಾತ್ರ ವಹಿಸುತ್ತದೆ. ಅವರ ಮುಂದಿನ ವೃತ್ತಿ ಜೀವನಕ್ಕೆ ಇದು ಅಡಿಪಾಯವಾಗುತ್ತದೆ. ಹೀಗಾಗಿ ಮಾತೃಭಾಷೆಯೊಂದು ಕಲಿತರೆ ಮಾತ್ರ ಸಾಕಾಗುವುದಿಲ್ಲ. ಜೊತೆಗೆ ಎಲ್ಲರೊಡನೆ ಬೆರೆವಂತಹಾ ಸಾಮಾನ್ಯ ಭಾಷೆಯೊಂದರ ಅವಷ್ಯಕತೆ ಇಂದಿನ ಮಕ್ಕಳಿಗೆ ಇದೆ. ಹೀಗಾಗಿ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಕಲಿಸಿದರೂ ಇಂಗ್ಲಿಷ್ ಕಲಿಸುವ ಅವಶ್ಯಕತೆ ಶಾಲೆಗಳಲ್ಲಿ ಇದೆ. ಇಂದಿನ ಪೋಷಕರ ಆತಂಕ ಅದೇ ಆಗಿದೆ. ಅಕಸ್ಮಾತ್ ತಮ್ಮ ಮಕ್ಕಳು ಇಂಗ್ಲಿಷ್ ಕಲಿಯದ ಒಂದೇ ಕಾರಣಕ್ಕಾಗಿ ಭವಿಷ್ಯದಲ್ಲಿ ತಮ್ಮ ಅವಕಾಶಗಳನ್ನು ಕಳೆದುಕೊಳ್ಳುವಂತಾದರೆ ಎಂಬ ಭಯ ಅವರನ್ನು ಕಾಡುತ್ತಿದೆ. ಹೀಗಾಗಿ ಇವರು ಕಷ್ಟವೋ ನಿಷ್ಟೂರವೋ ಮಕ್ಕಳಿಗೆ ಆದಷ್ಟು ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಸಲು ಬಯಸುತ್ತಾರೆ. ಹೀಗಾಗಿ ಮಾಧ್ಯಮ ಯಾವುದೇ ಆಗಲಿ ಎರಡೂ ಭಾಷೆಗಳನ್ನೂ ಕಲಿಯುವ ಅವಕಾಶವಿದ್ದಲ್ಲಿ ಪೋಷಕರು ನೆಮ್ಮದಿಯ ನಿಟ್ಟುಸಿರಿಡುತ್ತಾರೆ.
ಯಾವ ಭಾಷೆಯನ್ನೇ ಆಗಲಿ ಒತ್ತಾಯದಿಂದ ಹೇರಲು ಸಾಧ್ಯವಿಲ್ಲ. ಆ ಭಾಷೆಯ ಮೇಲೆ ಪ್ರೀತಿ ಇರಬೇಕು ಅದಕ್ಕಾಗಿ ಶ್ರಮಿಸಬೇಕು. ಅದನು ಮಾಡುವ ನಿಟ್ಟಿನಲ್ಲಿ ಇಂದಿನ ದೊಡ್ಡವರು ಮಾದರಿಯಾಗಿ ಮಕ್ಕಳಿಗೆ ಮಾರ್ಗದರ್ಶನ ನೀಡಿ ಮಕ್ಕಳಲ್ಲಿ ಕನ್ನಡಾಭಿಮಾನ ತುಂಬಬಹದೇನೋ ಎಂದು ನನ್ನ ಅನಿಸಿಕೆ. ನೀವೇನಂತೀರಾ?