ಶಿಲ್ವೆಪುರ

ಶಿಲ್ವೆಪುರ

ಬರಹ

ಬೆಂಗಳೂರಿನಿಂದ ಹೆಸರಘಟ್ಟಕ್ಕೆ ಹೋಗುವ ದಾರಿಯಲ್ಲಿ ಬಾಣಾವರ ದಾಟಿ ತರಬನಹಳ್ಳಿಯ ಬಳಿ ಬಲಕ್ಕೆ ತಿರುಗಿ ಮೂರು ಕಿಲೋಮೀಟರು ಕ್ರಮಿಸಿದರೆ ಸಿಗುವ ಊರು ಶಿಲ್ವೆಪುರ. ಚಿಕ್ಕಬೆಟ್ಟಳ್ಳಿ ಮಾರ್ಗವಾಗಿ ಶಿವಕೋಟೆಗೆ ಸಾಗುವ ರಸ್ತೆಯಲ್ಲಿ ಬ್ಯಾಲದಕೆರೆ ಬಳಿ ಎಡಕ್ಕೆ ಮೂರು ಕಿಲೋಮೀಟರು ನಡೆದರೂ ಈ ಊರು ಸಿಗುತ್ತದೆ. ಈ ಊರಿನ ಇತಿಹಾಸ ಕೇವಲ ೧೨೦ವರ್ಷಗಳ ಈಚಿನದು. ೧೮೭೬-೭೮ರಲ್ಲಿ ಸಂಭವಿಸಿದ ಭೀಕರ ಬರಗಾಲ ಹಾಗೂ ಪ್ಲೇಗ್ ಹೊಡೆತಕ್ಕೆ ಸಿಕ್ಕಿ ಬದುಕುಳಿದ ಅನಾಥರ ವಸತಿಗಾಗಿ ಈ ಊರನ್ನು ಕಟ್ಟಲಾಯಿತು. ಫ್ರೆಂಚ್ ಪಾದ್ರಿ ಫಿಲಿಪ್ ಸಿಝನ್ರವರ ನೇತೃತ್ವದಲ್ಲಿ ಶೂಲೆಯಲ್ಲಿ ನಡೆಯುತ್ತಿದ್ದ ಅನಾಥಾಶ್ರಮದ ಹುಡುಗರನ್ನು ಹಾಗೂ ಗುಡ್ಷೆಫರ್ಡ್ ಕಾನ್ವೆಂಟಿನಲ್ಲಿ ಆಶ್ರಯ ಪಡೆದಿದ್ದ ಅನಾಥ ಹುಡುಗಿಯರೊಂದಿಗೆ ಮದುವೆ ಮಾಡಿಸಿ ಅವರು ತಮ್ಮ ಕಾಲ ಮೇಲೆ ನಿಲ್ಲುವುದಕ್ಕಾಗಿ ಮೈಸೂರು ಮಹಾರಾಜರ ಸರ್ಕಾರವು ಬೆಂಗಳೂರು ಉತ್ತರ ತಾಲೂಕು ಯಲಹಂಕ ಹೋಬಳಿ ಕಸಘಟ್ಟಪುರ ಗ್ರೂಪ್ ಪಂಚಾಯ್ತಿಗೆ ಸೇರಿದ ಗೋಮಾಳದ ೯೪೧ಎಕರೆ ಜಮೀನನ್ನು ಬಿಟ್ಟುಕೊಟ್ಟು ತಲಾ ಎರಡು ರೂಪಾಯಿಗಳನ್ನು ನೀಡಿತು. (ಅಂದಿನ ಎರಡು ರೂಪಾಯಿ ಇಂದಿನ ಐನೂರು ರೂಪಾಯಿಗೆ ಸಮ.) ಒಂದೊಂದು ಕುಟುಂಬಕ್ಕೂ ಮೂರು ಎಕರೆ ಜಮೀನು, ಮಟ್ಟಾಳೆ ಗುಡಿಸಲು, ಒಂದು ಬಂಡಿ ಹಾಗೂ ಜೊತೆ ಎತ್ತುಗಳನ್ನೂ ಒದಗಿಸಲಾಯಿತು.
ಇಪ್ಪತ್ತಾರು ವರ್ಷಗಳಷ್ಟು ದೀರ್ಘಕಾಲ ಇಲ್ಲಿದ್ದು ಪಾಲನೆ ಮಾಡಿದ ಪಾದ್ರಿ ಈವ್ಸ್ ಮರೀ ಗೋರೇನ್ರವರು ದೀನರಲ್ಲಿ ದೀನರಾಗಿ, ಮಕ್ಕಳಲ್ಲಿ ಮಕ್ಕಳಾಗಿ, ಕಪಟಿಗಳಿಗೆ ಚಾಟಿಯಾಗಿ ಬದುಕಿದವರು. ಪಡೆದ ಆಸ್ತಿಯನ್ನು ಸರಿಯಾಗಿ ನಿಭಾಯಿಸದೇ ದುಂದುಮಾಡಿ, ಮಕ್ಕಳಿಗೆ ಪಾಲುಮಾಡಿ ಸೊರಗಿದ್ದ ರೈತಜನರ ಬವಣೆಯನ್ನು ನಿವಾರಿಸಲು ತಲಾ ಕುಟುಂಬಕ್ಕೆ ಎಂಬತ್ತು ರೂಪಾಯಿಗಳನ್ನು ನೀಡಿದ್ದಲ್ಲದೆ ಗುಡಿಸಲ ಸೋಗೆಯ ಬದಲಿಗೆ ಹೆಂಚಿನ ಸೂರು ಒದಗಿಸಿದ ಪುಣ್ಯಾತ್ಮ ತಮ್ಮ ೮೫ನೇ ವಯಸ್ಸಿನಲ್ಲಿ ಶಿಲ್ವೆಪುರದಲ್ಲಿಯೇ ಮಣ್ಣಾದರು. ಇತರ ಫ್ರೆಂಚ್ ಪಾದ್ರಿಗಳಾದ ಮಾರ್ಕನ್, ತಬೂರೆಲ್, ಕಾಕೀಟ್, ರೋಡ್ರಿಗಸ್ರವರೂ ಇಲ್ಲಿ ಪರಿಪಾಲನೆ ಮಾಡಿದರು. ಇವರೆಲ್ಲರ ಕಾಲದಲ್ಲಿ ಧರ್ಮಸಭೆ ನಿಂತ ನೀರಾಗದೆ ನಿತ್ಯನೂತನವಾಗಿತ್ತು. ತಬೂರೆಲ್ರವರು ಸ್ವತಃ ಇಂಜಿನಿಯರಾಗಿದ್ದು ಇಪ್ಪತ್ತು ವರ್ಷ ಹಳೆಯ ದೇವಾಲಯವನ್ನು ಕೆಡವಿ ಕಲಾನೈಪುಣ್ಯತೆ ತುಂಬಿದ ಹೊಸ ಗುಡಿ ಕಟ್ಟಿದರು. ೧೯೦೪ರಲ್ಲಿ ಬಂದ ಕಾಕೀಟ್ರವರ ಪ್ರಯತ್ನದ ಫಲವಾಗಿ ಶಿಲ್ವೆಪುರವು ಮೈಸೂರು ಪ್ರಾಂತ್ಯದಲ್ಲಿಯೇ ಮೊತ್ತಮೊದಲ ಬಾರಿಗೆ ಟೊಮೇಟೊ, ದಾಲ್ಚಿನ್ನಿ ಮತ್ತು ಸಾರ್ವೆಮರಗಳನ್ನು ಬಳಕೆಗೆ ತಂದರು.
ಗೋರೇನ್ ಸ್ವಾಮಿಗಳ ನಿಧನದ ನಂತರ ಬಂದ ಇಂಡಿಯಾದ ಪಾದ್ರಿಗಳಲ್ಲಿ ಮಾರ್ಸೆಲಸ್ ಡಿಸೋಜ ಪ್ರಮುಖರು. ೧೯೩೭ರಿಂದ ೧೯೬೦ರವರೆಗೆ ಇಲ್ಲಿದ್ದು ಜನಾನುರಾಗಿಯಾಗಿದ್ದ ಇವರನ್ನು ಮರಿಯಾಮಾತೆಯ ಗವಿಯ ಮುಂದೆ ಮಣ್ಣು ಮಾಡಲಾಗಿದೆ. ಸ್ವಾಮಿ ಅಲ್ಫೋನ್ಸ್ ನರೋನರವರು ಈ ಊರಿನ ವಿದ್ಯಾದೂತರಾಗಿ ಬಂದು ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದರು. ಸ್ಫೂರ್ತಿಯ ಚಿಲುಮೆಯಾದ ಸ್ವಾಮಿ ಸ್ಟ್ಯಾನಿಸ್ಲಾಸ್ ಮರಿಯಪ್ಪನವರ ಕಾಲದಲ್ಲಿ ಶಿಲ್ವೆಪುರವು ಬಹುಮುಖ ಬದಲಾವಣೆಗಳನ್ನು ಕಂಡಿತು. ಕೆರೆಕುಂಟೆಗಳು ದುರಸ್ತಿ ಕಂಡವು. ಬೀಳುಬಿಟ್ಟ ನೆಲದಲ್ಲಿ ಸಸಿಗಳು ಮೊಳೆತವು. ಪ್ರಾಥಮಿಕ ಶಾಲೆಯ ಕಟ್ಟಡ ವಿಸ್ತಾರಗೊಂಡಿತು. ಮಕ್ಕಳು ಕೂರಲು ಬೆಂಚುಗಳು ಬಂದವು. ಮಧ್ಯಾಹ್ನ ಉಪಾಹಾರದ ವ್ಯವಸ್ಥೆಯಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಹೊಸ ದೇವಾಲಯ ಹಾಗೂ ಪ್ರೌಢಶಾಲೆಗಳು ತಲೆಯೆತ್ತಿದವು.
ಶತಮಾನೋತ್ಸವದ ಸ್ಮರಣೆಗಾಗಿ ಕಟ್ಟಲಾದ ಶಿಲ್ವೆಪುರದ ಹೊಸ ದೇವಾಲಯದ ಒಂದೊಂದು ಕಲ್ಲೂ, ಇಟ್ಟಿಗೆಯೂ ಒಬ್ಬೊಬ್ಬ ದಾನಿಯ ಹೆಸರು ಹೇಳುತ್ತದೆ. ಜನರ ಶ್ರಮ ಮತ್ತು ಸದ್ಭಾವನೆಗಳಿಂದ ಅವು ಬೆಸೆಯಲ್ಪಟ್ಟಿವೆ. ಗುಡ್ಶೆಫರ್ಡ್ ಕಾನ್ವೆಂಟ್ ಸನ್ಯಾಸಿನಿಯರು ಕೊಡುಗೆಯಾಗಿ ನೀಡಿರುವ "ಪವಿತ್ರ ಹೃದಯದ ಸ್ವಾಮಿ" ಯ ಪ್ರತಿಮೆ ನಯನಮನೋಹರವಾಗಿದ್ದು ಭಕ್ತಿರಸವನ್ನು ಹೊಮ್ಮಿಸುತ್ತಿದೆ. ವಿಶ್ವವಿಖ್ಯಾತ ಕಲಾವಿದ ಜ್ಯೋತಿ ಸಾಯಿಯವರ ಕುಂಚ ಯೇಸುಸ್ವಾಮಿಯನ್ನು ನವೀನ ರೀತಿಯಲ್ಲಿ ಚಿತ್ರಿಸಿದೆ. ಕಲಾವಿದ ಅರುಣ್ರವರ ಕೈಯಲ್ಲಿ ಶಿಲುಬೆಹಾದಿಯ ಮರದ ಚಿತ್ರಪಟಗಳು ಸುಂದರವಾಗಿ ಕೆತ್ತಲ್ಪಟ್ಟಿವೆ. ವಾಸ್ತುಶಿಲ್ಪಿ ಸೌರಾಜ್ರವರ ಪ್ರತಿಭೆ ಕಟ್ಟಡದ ಪ್ರತಿ ಹಂತದಲ್ಲೂ ಪ್ರತಿಬಿಂಬಿತವಾಗಿದೆ.