ಶೇಷ ಪ್ರಶ್ನೆ...!?

ಶೇಷ ಪ್ರಶ್ನೆ...!?

ಕವನ

ಯಾವ ಸೂತ್ರದ ಮೇಲೆ

ನಿಂತಿದೆ ಈ ಜೀವನ ಯಂತ್ರ?

ಇದಕೇನಿಹುದೋ... ಯಾರಿಗೂ

ಹೊಳೆಯದ ಪರಿಹಾರದ ಮಂತ್ರ...

ಕಾಣದ ಗಾಳಿಯಂತಿಹುದು-

ಒಮ್ಮೊಮ್ಮೆ ಸುಂಟರಗಾಳಿ

ಮಗದೊಮ್ಮೆ ಹಿತದ ತಂಗಾಳಿ...

ಓ ಮುಗ್ಧ ಮನವೇ ಬಾ

ಇದರ ಪರಿಹಾರವನರಿಯು ಬಾ

ವಿವಿಧ ಸಂಬಂಧಗಳ ಅನುಬಂಧವಾಗಿ

ಅನವರತ ಕಾಡುತಿಹುದೀ ಜೀವನ...

ಬಿಟ್ಟೆನೆಂದರೂ ಬಿಡದೀ ಮಾಯೆ-

ಎಳೆಯ ಚಿಗುರುಗಳ ಮೋಹದ ಸೆಳೆತ

ಬಲಿತ ಮನಗಳ ತಿರಸ್ಕಾರದ ಮಿಡಿತ...

ಕಣ್ಣಿದ್ದೂ ಕಾಣದ ನೋಟ;

ವಾಸನೆಯನೇ ಗ್ರಹಿಸದ ನಾಸಿಕ;

ಕಿವಿಯಿದ್ದೂ ಕೇಳದ ಶಬ್ದ;

ರುಚಿಯನರಿಯದ ನಾಲಗೆ;

ಮೃದು ಸ್ಪರ್ಶವನರಿಯದ ಚರ್ಮ;

ವಿಕಲ್ಪಗೊಂಡ ಈ ಬುದ್ಧಿ...

ಏಕಿಂತು ಏಕಿಂತು ಎನ್ನುವ ಪ್ರಶ್ನೆ?

ಪರಿಹಾರ ಕಾಣದ ಪ್ರಶ್ನೆಗಳ ದಂಡು...

ಈ ಗೋಜಲುಗಳ ಬಿಡಿಸಲಾಗದ

ಅಸಹಾಯಕ ಮನದ ಅಳಲು;

ಬಳಲಿ ಬಳಲಿ ಬೆಂಡಾದ

ಗಾಣದ ಕೋಣದ ಸ್ಥಿತಿಯ ಜೀವನ...

ಕೊನೆಗೆ ನಿಂತದ್ದೇ ತಿಳಿಯದ

ಎಲ್ಲರಾಂತಿಮ ಪಯಣ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್