ಶ್ರಾವಣ, ನೀ ಮಾಡಿದ್ದು ಸರಿಯೆ?
ಋತುಗಳ ಹಂಗಿಲ್ಲದೆ ಸದಾ ಸರ್ವದಾ ಒಂದೆ ರೀತಿಯ ಹವಾಮಾನದ ನಿತ್ಯ ಬೇಸಿಗೆಯನ್ನೆ ಹಾಸಿ ಹೊದ್ದು ಮಲಗುವ ಸಿಂಗಪುರಕೆಲ್ಲಿ ಬರಬೇಕು ಆಷಾಢ, ಶ್ರಾವಣ, ಭಾದ್ರಪದ ಮಾಸಗಳ ಸೊಗಡು? ಸದಾ ಸುರಿಯುವ ಬಿಸಿಲ್ಮಳೆಯ ಜತೆಗೆ ಆಗೀಗಷ್ಟು ತಂಪಾಗಿಸುವ ಮಳೆ ಸುರಿದುಕೊಂಡರೆ ಮುಗಿಯಿತಷ್ಟೆ; ತನ್ನ ಬಿರುಸಿನ ಸೆಕೆಗೆ ತಾನೆ ಬೇಸತ್ತು ಸ್ನಾನ ಮಾಡಿಕೊಂಡ ಬಿಸಿಲಮ್ಮನ ಮೈತೊಳೆದ ನೀರೇನೊ ಎಂಬಂತೆ ಒಂದಷ್ಟು ಮಳೆಯ ನೀರು ಚೆಲ್ಲಾಡಿದಂತೆ ಮಾಡಿ ನಂತರ ಮತ್ತೆ ಬಿಸಿಲ ಬಿರುಮಳೆಯನ್ನು ಆಶ್ರಯಿಸುವ ಈ ಹವಾಗುಣಕ್ಕೆ ಅಷಾಢ, ಶ್ರಾವಣ, ಭಾದ್ರಪದಗಳ ವೈವಿಧ್ಯತೆಯ ತಾಳಮೇಳವನ್ನು ಅರ್ಥ ಮಾಡಿಸುವುದು ಕಷ್ಟ. ಆದರೆ ಆ ಸೊಗಸಿನಲ್ಲೆ ಹುಟ್ಟಿ ಬೆಳೆದ ಕವಿ ಮನಸುಗಳು ಕೇಳಬೇಕಲ್ಲ ? ವಾತಾವರಣದಲಿರದಿದ್ದರೆ ಏನಂತೆ - ಕವನಗಳಲ್ಲಿ ಬರಬಾರದೆಂದೇನೂ ಇಲ್ಲವಲ್ಲ? ಇಲ್ಲದ ಋತುಮಾನಗಳನ್ನು ಬರಲಿಲ್ಲದ ಕಾರಣ ನೀಡಿ ಛೇಡಿಸಲು ಸಿಂಗಪುರವಾದರೇನು? ಮರಳುಗಾಡಿನ ಸೌದಿಯಾದರೇನು? ಅಂತದ್ದೊಂದು ಭಾವದಲ್ಲಿ ಕೈ ಕೊಟ್ಟು ಹೋದ ಆಷಾಢದ ಬೆನ್ನಲ್ಲೆ, ಮುಖ ತೋರಿಸದೆ ಮುನಿಸಿಕೊಂಡು ನಿಂತ ಶ್ರಾವಣ ಪ್ರಬುದ್ಧೆಯನ್ನು ದಬಾಯಿಸಿ, ಕಿಚಾಯಿಸುತ್ತ ಭಾದ್ರಪದದ ಆತಂಕದತ್ತ ಇಣುಕಿ ನೋಡುವ ತುಂಟ ಕವನೆ - 'ಶ್ರಾವಣ, ನೀ ಮಾಡಿದ್ದು ಸರಿಯೆ?'
ಬಹುಶಃ ನಮ್ಮೂರುಗಳಲ್ಲಿ ತಾನಿದ್ದ ಕಡೆಯಲೆಲ್ಲ, ಈಗಾಗಲೆ ಮನಸ್ವೇಚ್ಛೆ ಹೊಯ್ದುಕೊಂಡು ಜನಪದರನ್ನು ಆಹ್ಲಾದಿಸುತ್ತ ಗೋಳಾಡಿಸುತ್ತಿರಬಹುದಾದ ಶ್ರಾವಣಿಯ ಮೇಲಿನ ಈ ಹುಸಿ ಮುನಿಸು, ದೂರು ಅಲ್ಲಿನ ಸನ್ನಿವೇಶ, ಪರಿಸ್ಥಿತಿಗಳಲ್ಲಿ ಅಸಹಜವೆನಿಸಬಹುದಾದರೂ, ಋತುಮಾನಗಳಿಲ್ಲದ ಅಥವಾ ತನ್ನದೆ ಆದ ವಿಭಿನ್ನ ಋತುಗಾನದ ಗಾಲಿಯನ್ನುರುಳಿಸಿಕೊಂಡು ಹೋಗುವ ಭೂಗೋಳದ ಅನೇಕ ಕಡೆಗಳಲ್ಲಿ ಇದು ಪ್ರಸ್ತುತವಾದ ಕಾರಣ, ಕನಿಷ್ಠ ಅಲ್ಲಿರಬಹುದಾದ 'ಹೋಮ್ ಸಿಕ್' ಮನಗಳಿಗಾದರೂ ಇದು ಆಪ್ತವೆನಿಸುವ ದೂರೆಂದುಕೊಂಡು ಆಸ್ವಾದಿಸಬಹುದೇನೊ? ಹೇಗೂ ಅವುಗಳಂತೂ ನಮ್ಮನ್ನು ದೂರುವಂತಿಲ್ಲ, ಅಥವ ದೂರಿದ್ದಕ್ಕೆ ಬೇಸತ್ತು ತಮ್ಮ ನಿಯಮ ಬದಲಿಸುವಂತಿಲ್ಲ; ಹೆಚ್ಚೆಂದರೆ ಸ್ವಲ್ಪ ತಡ ಮಾಡಿಯೊ ಅಥವಾ ರೌದ್ರಾಕಾರದ ರೂಪ ತಾಳಿಯೊ ಕಾಡಿಸಬಹುದಷ್ಟೆ - ಮಕ್ಕಳ ಮೇಲಿನ ಮಾತೆಯ ಹುಸಿ ಮುನಿಸಿನ ಹಾಗೆ!
ಇದೊ - ಆ ಛೇಡನೆಯ ಪದವಲ್ಲರಿ ಕವನ :-)
ಶ್ರಾವಣ, ನೀ ಮಾಡಿದ್ದು ಸರಿಯೆ?
__________________________
ಶ್ರಾವಣ ನೀ ಮಾಡಿದ್ದು ಸರಿಯೆ?
ಕಟ್ಟಿಬಿಟ್ಟು ತೋರಣ ತಳಿರು ತೆಂಗಿನ ಗರಿಯೆ
ಚಪ್ಪರ ಹಾಕಿ ಬಾಳೆ ಕಂದು ಹೊಂಬಾಳೆ
ವಾದ್ಯ ವಾಲಗ ಸಿದ್ದ ನಿನಗಿನ್ನು ನಿದ್ದೆಯೆ? ||
ಯಾರೊ ಬಿಟ್ಟ ರಂಗವಲ್ಲಿಯು ಚೆಲ್ಲಿ
ಮಸುಕಾಗುತಿದೆ ಅಳಿಸಿ ಆಸೆ ಚಿತ್ತಾರವಲ್ಲಿ
ಬಿಲ್ಲಿನಿಂದ ಬಿಟ್ಟ ಬಾಣದಂತೆ ಹೊರಟು
ಗುರಿ ಸೇರದೆ ಇನ್ಯಾರದೊ ಮನೆಗೆ ಹೊಕ್ಕೆಯ? ||
ಕೊಟಕೊಟನುದುರುವ ಆಷಾಢದ ಮಳ್ಳಿ
ತುಟಿ ಪಿಟ್ಟೆನದೆ ಬಲು ತುಟ್ಟಿ ಮಾಡಿಟ್ಟಳಲ್ಲ?
ತುಪುತುಪುನುದುರುವ ನೀ ಚಾವಣಿಯ ಬಳ್ಳಿ
ಮಲ್ಲೆಯಾಗಿಯಾದರು ಉದುರಬೇಕಿತ್ತಲ್ಲ ಮರುಗಿ? ||
ನೀ ಏನೆ ಹೇಳು ಸರಿಯಿಲ್ಲ ಬಿಡು ಬಿಂಕ
ಋತುಮತಿಯಾದ ಹೊತ್ತು ಪ್ರೌಢತೆ ಬರಬೇಕು
ಗಂಭೀರ ಗಾಂಭೀರ್ಯ ಧೀಮಂತಿಕೆ ಗತ್ತಲಿ
ಸುರಿದಿರಬೇಕಿತ್ತಲ್ಲಾ ಬಿಡದೆ ಮೂರು ಹೊತ್ತಲಿ.. ||
ಚೆಲ್ಲು ಚೆಲ್ಲು ಬಾಲೆ ಎಳೆ ಮನಸಿನ ಆಷಾಢ
ಬರಲಿಲ್ಲವೆಂದತ್ತವರಾರು ಬಿಡು ಹುಡುಗಾಟದವಳು
ನೀ ಪಕ್ವ ಪ್ರಬುದ್ಧೆ ಹೀಗೆ ಮಾಡದೆ ಕೂತರೆ ಸದ್ದೆ
ಯಾಕೊ ಸರಿಯಿಲ್ಲ ಬಿಡು, ಭಾದ್ರಪದಕಿಲ್ಲ ನಿದ್ದೆ ||
-----------------------------------------------------------
ನಾಗೇಶ ಮೈಸೂರು, ಸಿಂಗಪುರ
-----------------------------------------------------------
Comments
ಉ: ಶ್ರಾವಣ, ನೀ ಮಾಡಿದ್ದು ಸರಿಯೆ?
ನಾಗೇಶ್ ಜಿ ನಮಸ್ಕಾರ. ಶ್ರಾವಣ ಕವನ ತುಂಬ ಸೊಗಸಾಗಿದೆ, ಶ್ರಾವಣಿಯ ಒಳಪದರುಗಳ ಸುರುಳಿ ಬಿಚ್ಚುತ್ತ ರಂಗೋಲಿಯಾಗಿ ಮೂಡಿದೆ. ಧನ್ಯವಾದಗಳು ಮತ್ತೊಮ್ಮೆ..
In reply to ಉ: ಶ್ರಾವಣ, ನೀ ಮಾಡಿದ್ದು ಸರಿಯೆ? by lpitnal
ಉ: ಶ್ರಾವಣ, ನೀ ಮಾಡಿದ್ದು ಸರಿಯೆ?
ಇಟ್ನಾಳರೆ ನಮಸ್ಕಾರ, ಶ್ರಾವಣಿಯ ಛೇಡಿಕೆಯನ್ನು ಮೆಚ್ಚಿದ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಜ ಹೇಳಬೇಕೆಂದರೆ ಇದನ್ನು ಬರೆದದ್ದು ಕೇಳಿಸಿಕೊಂಡಳೋ ಏನೊ ಎಂಬಂತೆ ಇಂದು ಬೆಳ್ಳಂಬೆಳಿಗ್ಗೆಯೆ ಧಾರಾಕಾರವಾದ, ರೋಷಪೂರ್ಣ ಮಳೆ ಸಿಂಗಪುರದಲ್ಲಿ! ಶ್ರಾವಣಿ ತನ್ನ ಸಿಟ್ಟನ್ನೆಲ್ಲ ಒಂದೆ ಮಳೆಯಲ್ಲಿ ತೀರಿಸಿಕೊಂಡುಬಿಡುವ ಹಾಗೆ ಎರಡು ಗಂಟೆ ಕಾಲ ಹೊಡೆದು ಹೋದಳು!
In reply to ಉ: ಶ್ರಾವಣ, ನೀ ಮಾಡಿದ್ದು ಸರಿಯೆ? by nageshamysore
ಉ: ಶ್ರಾವಣ, ನೀ ಮಾಡಿದ್ದು ಸರಿಯೆ?
>>ನಿಜ ಹೇಳಬೇಕೆಂದರೆ ಇದನ್ನು ಬರೆದದ್ದು ಕೇಳಿಸಿಕೊಂಡಳೋ ಏನೊ ಎಂಬಂತೆ ಇಂದು ಬೆಳ್ಳಂಬೆಳಿಗ್ಗೆಯೆ ಧಾರಾಕಾರವಾದ, ರೋಷಪೂರ್ಣ ಮಳೆ ಸಿಂಗಪುರದಲ್ಲಿ!
-ನಾಗೇಶರೆ, ಮಳೆಗಾಲ ಪ್ರಾರಂಭಕ್ಕೆ ಮೊದಲೇ ೧೨೦೦ರೂ. ಕೊಟ್ಟು ಹೊಸ ರೈನ್ ಕೋಟ್ ತೆಗೆದುಕೊಂಡಿದ್ದೆ. ರೈನ್ ಕೋಟ್ ಹೊರತೆಗೆಯುವುದರೊಳಗೆ ಮಳೆ ನಿಲ್ಲುತ್ತದೆ ಇಲ್ಲಿ :(. ತಾವು ಪರ್ಮಿಷನ್ ಕೊಟ್ಟರೆ ನಿಮ್ಮ ಕವನವನ್ನು ಹಾಡಬೇಕೆಂದಿದ್ದೇನೆ- ಮಳೆಗಾಗಿ).
ಕವನ, ಬರಹ ಎರಡೂ ಬಹಳ ಚೆನ್ನಾಗಿದೆ.
In reply to ಉ: ಶ್ರಾವಣ, ನೀ ಮಾಡಿದ್ದು ಸರಿಯೆ? by ಗಣೇಶ
ಉ: ಶ್ರಾವಣ, ನೀ ಮಾಡಿದ್ದು ಸರಿಯೆ?
ಗಣೇಶ್ ಜಿ ನಮಸ್ಕಾರ. ದುಡ್ಡು ಕೊಟ್ಟು ತಂದದ್ದನ್ನು, ತಂದ ಕಾರ್ಯ ಕಾರಣಕ್ಕೆ ಬಳಕೆಯಾಗುವಂತೆ ಉಪಯೋಗಿಸಲಾಗದಿದ್ದರೆ ವಿಪರೀತ ಖೇದವಾಗುವುದು ಸಹಜ. ಈ ಕವನ ಅಲ್ಲೂ ಕೆಲಸ ಮಾಡುವುದೊ ಇಲ್ಲವೊ ಗೊತ್ತಿಲ್ಲ - ಅದರೆ ಬಳಸಲಂತೂ 'ಫ್ರೀ ಲೈಸನ್ಸ್' ; ಧಾರಳವಾಗಿ ಹಾಡಿ. ಅಪ್ಪಿ ತಪ್ಪಿ ಅಲ್ಲೂ ಶ್ರಾವಣಿ ಕೇಳಿಸಿಕೊಂಡು 'ಸರಿ'ಯಾಗಿ ಗುನು(ಡು)ಗಿದರೆ ಇಲ್ಲೂ ಹಂಚಿಕೊಳ್ಳಿ :-)
ಉ: ಶ್ರಾವಣ, ನೀ ಮಾಡಿದ್ದು ಸರಿಯೆ?
ಶ್ರಾವಣ ಇಂದು ಕಾಲಿರಿಸಿದ್ದಾಳೆ. ನೋಡೋಣ ಏನು ಮಾಡುತ್ತಾಳೆಂದು! ಆಮೇಲೆ ಸರಿಯೋ, ತಪ್ಪೋ ಹೇಳಲು ಮತ್ತೊಮ್ಮೆ ಸಿದ್ಧರಾಗಬೇಕು, ನಾಗೇಶರು. :)
In reply to ಉ: ಶ್ರಾವಣ, ನೀ ಮಾಡಿದ್ದು ಸರಿಯೆ? by kavinagaraj
ಉ: ಶ್ರಾವಣ, ನೀ ಮಾಡಿದ್ದು ಸರಿಯೆ?
ಕವಿಗಳೆ ನಮಸ್ಕಾರ - ಈಗಲೂ ತಂಪಾಗಿ ಗಾಳಿ ಬೀಸುತ್ತ ಮುದ ಕೊಡುತ್ತಿದ್ದಾಳೆ ಶ್ರಾವಣಿ - ಈ ಮುಸ್ಸಂಜೆಯ ಮುಸುಕಲ್ಲು. ಆದರೆ ಸರಿಯೊ ತಪ್ಪೊ ಹೇಳಲು ಮುಂದಿನತನಕ ಕಾಯಬೇಕಾಗಿಲ್ಲ ಕವಿಗಳೆ. ಏನೊ ಒಂದು ಬಾರಿ ಕೆಕ್ಕರುಗಣ್ಣಲ್ಲಿ ನೋಡಿ ಏಮಾರಿಸಲೆಂದು ಒಂದಷ್ಟು ಸುರಿದು ಹೋಗಿದ್ದಾಳಷ್ಟೆ - ಬಾಯಿ ಮುಚ್ಚಿಕೊಂಡಿರು ಎಂದು ಎಚ್ಚರಿಸಲು. ನಿಸರ್ಗ ಮಾತೆಯ ಎದುರು ಪಂಥ ಕಟ್ಟಿ ಗೆದ್ದವರುಂಟೆ? ನಾನಂತೂ ಸೋತು ಶರಣು ತಾಯಿ ಎನ್ನುವವನೆ ! :-)