ಸಂಗತ
“ಸಾಮಾನ್ಯವಾಗಿ ಸಂಸ್ಕೃತ ವಿದ್ವಾಂಸರು ಸಂಸ್ಕೃತ ಲೇಖಕರೂ ಆದಲ್ಲಿ ಇತರ ಭಾಷೆಗಳ ಬಗೆಗೆ ಅದೊಂದು ಬಗೆಯಾದ ಉದಾಸೀನತೆಯಿರುವುದೆಂಬುದು ಲೋಕದಲ್ಲಿ ಪ್ರಚುರವಾದ ಪ್ರಥೆ. ಕೆಲಮಟ್ಟಿಗೆ ಅಪಪ್ರಥೆಯೂ ಹೌದು. ಒಂದು ವೇಳೆ ಅವರು ಸಂಸ್ಕೃತೇತರ ಭಾಷೆಗಳಲ್ಲಿ -ವಿಶೇಷತಃ ದೇಶ ಭಾಷೆಗಳಲ್ಲಿ -ಬರೆದಾಗ ಅವರ ನುಡಿಗಳಲ್ಲಿ ‘ಸಂಸ್ಕೃತ ಘಾಟು’ ಹೆಚ್ಚಾಗಿರುವುದೆಂಬುದು ಮತ್ತೊಂದು ಆಕ್ಷೇಪ. ಆದರೆ ಡಾ. ವಿಶ್ವಾಸ ಅವರು ಈ ಎರಡು ಆಕ್ಷೇಪಗಳಿಂದಲೂ ಮುಕ್ತರು. ಅವರ ಸಂಸ್ಕೃತ - ಕನ್ನಡಗಳೆರಡೂ ತುಂಬ ಪ್ರಸನ್ನ ಮಧುರ, ನಿಸರ್ಗ ಸುಂದರ. ಕೇವಲ ಭಾಷಾ ಸಂಬಂಧಿಯಾದ ಶಾಸ್ತ್ರೀಯ ಲೇಖನಕ್ಕಷ್ಟೇ ಅವರು ಸೀಮಿತರಾಗದೆ ಭಾವ ಸಂಬಂಧಿಯಾದ, ಬಹುಮುಖಿಯೂ ಆದ ಬರೆವಣಿಗೆಯನ್ನು ಉಭಯ ಭಾಷೆಗಳಲ್ಲಿಯೂ ನಡಸಿಕೊಂಡು ಬಂದಿರುವುದು ತುಂಬ ಮುದಾವಹ. ಅವರು ಕನ್ನಡ - ಸಂಸ್ಕೃತಗಳಲ್ಲಿ ಕಥೆ - ಕಾದಂಬರಿ, ಕವಿತೆ - ರೂಪಕ, ಅನುವಾದ - ಅಧ್ಯಯನ, ಪ್ರವಾಸ ಕಥನ - ಪರಾಮರ್ಶನಗಳನ್ನು ಈಗಾಗಲೇ ರಚಿಸಿ ಸಹೃದಯರ ಮನ್ನಣೆ ಗಳಿಸಿದ್ದಾರೆ. ಆ ಸಾಲಿಗೀಗ ‘ಸಂಗತ’ವು ಅಂಕಣ ಲೇಖನಗಳ ಅಡಕವಾಗಿ ಹೊಸ ಸೇರ್ಪಣೆ” ಎಂದು ಮುನ್ನುಡಿಯಲ್ಲಿ ಬರೆದಿದ್ದಾರೆ ಖ್ಯಾತ ಶತಾವಧಾನೀ ಡಾ. ಆರ್ ಗಣೇಶ್.
‘ಸಂಗತ’ ಎನ್ನುವ ಅಂಕಣ ಬರಹಗಳು ಪ್ರಕಟವಾದದ್ದು ‘ಹೊಸ ದಿಗಂತ’ ಪತ್ರಿಕೆಯಲ್ಲಿ. ಈ ಬಗ್ಗೆ ತಮ್ಮ ‘ಪೂರ್ವಭಾಷ್ಯ’ ದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಲೇಖಕರಾದ ಡಾ. ವಿಶ್ವಾಸ. ಅವರು ಹೇಳುವಂತೆ “ ‘ಸಂಗತ’ ಎಂಬ ಶಬ್ಧಕ್ಕೆ ಸಂಸ್ಕೃತದಲ್ಲಿ ಹೃದಯಂಗಮ ಎಂಬ ಅರ್ಥವೂ ಇದೆ. (ಸಂಗತಂ ಹೃದಯಂಗಮಂ - ಅಮರಕೋಶ) ಹಾಗೆಂದು ಇಲ್ಲಿಯ ಬರಹಗಳು ಹೃದಯಂಗಮವಾಗಿರಬಹುದು ಎನ್ನುವ ಧಾರ್ಷ್ಟ್ಯ ನನ್ನದಲ್ಲ. ಏಕೆಂದರೆ ಆ ವಿಷಯದಲ್ಲಿ ಸಹೃದಯ ವಾಚಕರೇ ಪ್ರಮಾಣ, ನಾನಲ್ಲ ! ಆದರೆ ಒಂದಂತೂ ನಿಜ, ಒಂದೆರಡು ಲೇಖನಗಳನ್ನು ಹೊರತುಪಡಿಸಿದಂತೆ ಉಳಿದ ಪ್ರತಿಯೊಂದು ಲೇಖನವೂ ಬರೆಯುವ ಹೊತ್ತಿನಲ್ಲೂ, ಬರೆದು ಮುಗಿಸಿದ ಮೇಲೂ ನನಗೆ ಬರವಣಿಗೆಯ ಸುಖವನ್ನು ಕೊಟ್ಟಿದೆ. ಕನಿಷ್ಟ ಆ ಮಟ್ಟಗಿನ ತೃಪ್ತಿಯಂತೂ ನನಗಿದೆ.” ಎಂದಿದ್ದಾರೆ.
ಈ ಕೃತಿಯಲ್ಲಿ ೩೩ ಅಧ್ಯಾಯಗಳಿವೆ. ವಿವಿಧ ವಿಷಯಗಳನ್ನು ಬಹಳ ಸೊಗಸಾಗಿ ಕಥೆಗಳ ಮೂಲಕ ಹೇಳುತ್ತಾ ಹೋಗಿದ್ದಾರೆ. ಪುಸ್ತಕ ಓದುತ್ತಾ ಓದುತ್ತಾ ಅದರಲ್ಲೇ ಕಳೆದು ಹೋಗುವ ಸಾಧ್ಯತೆ ಇದೆ. ಡಾ. ವಿಶ್ವಾಸರ ಬರಹಳಲ್ಲಿ ಹಳೆಯ ಇಂಕ್ ಪೆನ್, ದೂರದ ನೆಂಟರ ಮನೆ, ತಾಳಮದ್ದಳೆ, ಧಾರಾಕಾರ ಮಳೆ, ಹಳೆಯ ದೂರದರ್ಶನದ ಸೊಬಗು, ಮೂರ್ಖ ಪ್ರಶ್ನೆಯ ಮರ್ಮ, ಬಿರುದು ಬಾವಲಿಗಳ ಸಂಗ, ಕನ್ನಡದಲ್ಲಿ ಸಹಿ ಮಾಡುವ ಅಂದ, ಆಧುನಿಕ ವಾಲ್ಮೀಕಿ, ಸಾಹಿತ್ಯ ತಪಸ್ವಿ, ಪಂಡಿತ ಕವಿಗೆ ಪುರಸ್ಕಾರ ಮೊದಲಾದ ಪ್ರಸಂಗಗಳು ಮೇಳೈಸಿವೆ.