ಸಂಗೀತ ನೃತ್ಯೋತ್ಸವ

ಸಂಗೀತ ನೃತ್ಯೋತ್ಸವ

ಬರಹ

ಸಾಂಸ್ಕೃತಿಕ ನಗರ ಮತ್ತು ಉದ್ಯಾನನಗರಗಳ ಮಧ್ಯೆ ಇರುವ ಮಂಡ್ಯ ಹೇಳಿಕೇಳಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿ. ಸಂಕ್ರಾಂತಿಯಲ್ಲಿ ಬೆಳೆದ ಬೆಳೆಗಳ ಜೊತೆಗೆ ಸುಗ್ಗಿಯ ಸಂಭ್ರಮವನ್ನು ಅನುಭವಿಸಿದ್ದ ಬೆನ್ನಲ್ಲೇ ಅನೇಕ ಕಾರ್ಯಕ್ರಮಗಳು ಮಂಡ್ಯದಲ್ಲಿ ಜರುಗುತ್ತಿವೆ. ದಿನಾಂಕ ೨೦.೦೧.೨೦೦೯ ಮತ್ತು ೨೧.೦೧.೨೦೦೯ ರಂದು ೨ ದಿನಗಳ ಕಾಲ ಮಂಡ್ಯ ನಗರದ ಜನತೆಗೆ ಮನರಂಜನೆಯ ಸುಗ್ಗಿ. ಬೆಂಗಳೂರಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಯವರೊಂದಿಗೆ ಮಂಡ್ಯದ ಹೆಸರಾಂತ ಸಂಸ್ಥೆಗಳಾದ ’ಗುರುದೇವ ಲಲಿತ ಕಲಾ ಅಕಾಡೆಮಿ’ ಹಾಗೂ ’ಕರ್ನಾಟಕ ಸಂಘ ’ ಇವರ ಸಂಯುಕ್ತ ಆಶ್ರಯದಲ್ಲಿ "ಸಂಗೀತ ನೃತ್ಯೋತ್ಸವ" ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗುರುದೇವದ ರಾಧಾಕೃಷ್ಣ ರವರು ಹಾಗು ಕರ್ನಾಟಕ ಸಂಘದ ಪ್ರೊ|| ಬಿ.ಜಯಪ್ರಕಾಶಗೌಡರ ಉತ್ಸಾಹದೊಂದಿಗೆ ಮೊದಲ ದಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರಸಿದ್ಧ ಕ್ಲಾರಿಯೋನೇಟ್ ವಾದಕರಾದ ಶ್ರೀಯುತ ಪಂ|| ನರಸಿಂಹಲು ವಡವಾಟಿ ಯವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಂಡ ಕಾರ್ಯಕ್ರಮ ಧಾರವಾಡದ ಖ್ಯಾತ ಹಿಂದೂಸ್ತಾನಿ ಸಂಗೀತ ವಿದ್ವಾಂಸರಾದ ಶ್ರೀ ಎಂ. ವೆಂಕಟೇಶಕುಮಾರರ " ವಚನಗಾಯನ ಹಾಗು ದಾಸರ ಕೀರ್ತನೆಗಳಿಂದ " ಜನಮನ ಸೂರೆಗೊಂಡಿತು. ನಂತರ ಮೈಸೂರಿನ ಶ್ರೀಮತಿ ರೋಹಿಣಿ ಮೋಹನ್ ರವರಿಂದ ಸುಗಮಸಂಗೀತ ಗಾಯನ , ತದನಂತರ ಮಂಡ್ಯದ ’ಗುರುದೇವ ಲಲಿತ ಕಲಾ ಅಕಾಡೆಮಿ’ ಯ ಗುರು ಶ್ರೀಮತಿ ಚೇತನಾ ರಾಧಾಕೃಷ್ಣ ಮತ್ತು ಅವರ ಶಿಷ್ಯವರ್ಗ ನೃತ್ಯರೂಪಕವೊಂದನ್ನು ಪ್ರಸ್ತುತಪಡಿಸಿದರು. ಋತುಗಳನ್ನು ಪರಿಚಯಿಸುತ್ತಾ ಕೃಷ್ಣ ರಾಧೆಯರ ಬಗೆಗಿನ ಮನಮೋಹಕ ನೃತ್ಯಕ್ಕೆ ಮನಸೋತ ಜನ ಘಂಟೆ ಒಂಬತ್ತಾದರೂ ಕದಲಿರಲಿಲ್ಲ. ಅಂದಿನ ಕಾರ್ಯಕ್ರಮ ನೃತ್ಯರೂಪಕದೊಂದಿಗೆ ಮುಗಿದಿತ್ತು.
ದಿನಾಂಕ ೨೧.೦೧.೨೦೦೯ ರಂದು ಗುರುದೇವದ ಮಕ್ಕಳು ಶಿವತಾಂಡವ ಹಾಗೂ ವಚನವೊಂದಕ್ಕೆ ನೃತ್ಯವನ್ನು ಪ್ರದರ್ಶಿಸಿದರು. ಅಂದಿನ ಮುಖ್ಯ ಕಾರ್ಯಕ್ರಮಗಳು ಮೈಸೂರಿನ ಶ್ರೀಮತಿ ವಸಂತಾವೆಂಕಟೇಶ್ ರವರ ಗಮಕ ವಾಚನ ಹಾಗೂ ಶ್ರೀಯುತ ಕುಣಿಗಲ್ ನಾಗಭೂಷಣ್ ರವರ ವ್ಯಾಖ್ಯಾನದೊಂದಿಗೆ ಪ್ರಾರಂಭವಾಯ್ತು. ಸುಮಾರು ೫೦ ನಿಮಿಷಗಳ ಕಾಲ ಗಮಕ ವ್ಯಾಖ್ಯಾನ ನಡೆಯಿತು. ಅದರ ನಂತರ ಬೆಂಗಳೂರು ಆಕಾಶವಾಣಿಯ ಎ ಶ್ರೇಣಿಯ ಕಲಾವಿದರುಗಳಾದ ಶ್ರೀಮತಿ ಗೀತಾ ರಮಾನಂದ ಮತ್ತು ಶ್ರೀಮತಿ ರೇವತಿ ಮೂರ್ತಿಯವರ ವೀಣಾವಾದನ ಕೇಳುಗರಿಗೆ ಸಂಗೀತದ ರಸದೌತಣವನ್ನು ಉಣಬಡಿಸಿತ್ತು. ಆನಂತರ ಅಂತರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಶ್ರೀಮತಿ ಶುಭಾ ಧನಂಜಯ ಮತ್ತು ತಂಡದವರು "ಬೆಳ್ಳಿಚುಕ್ಕಿ ಕಿತ್ತೂರು ರಾಣಿ ಚನ್ನಮ್ಮ " ಎಂಬ ನೃತ್ಯರೂಪಕವೊಂದನ್ನು ಸಾದರಪಡಿಸಿದರು. ಹೀಗೆ ೨ ದಿನ ಮಂಡ್ಯದ ಜನತೆ "ಸಂಗೀತ ನೃತ್ಯೋತ್ಸವ" ವನ್ನು ಆಚರಿಸಿದರು.