ಸಂಪಾದಕೀಯ: ನಮ್ಮ ವಿಶ್ವಾಸಾರ್ಹತೆ ನಾಶಕ್ಕೆ ಹುನ್ನಾರ!

ಸಂಪಾದಕೀಯ: ನಮ್ಮ ವಿಶ್ವಾಸಾರ್ಹತೆ ನಾಶಕ್ಕೆ ಹುನ್ನಾರ!

ಬರಹ

ಹಿಂದೆ ಜನರು ಧಾರ್ಮಿಕ ಗ್ರಂಥಗಳಿಗೆ, ಪ್ರವಾದಿಗಳ ಉಪದೇಶಕ್ಕೆ ನೀಡುತ್ತಿದ್ದ ಬೆಲೆಯ
ಬಗ್ಗೆ ತಿಳಿದವರಿಗೆ ಆ ಜಾಗದಲ್ಲಿ ಜನರು ಕ್ರಮೇಣವಾಗಿ ಪತ್ರಿಕೆಗಳನ್ನು ತಂದು
ನಿಲ್ಲಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯಲಿಕ್ಕೆ ಕಷ್ಟ ಪಡಬೇಕಿಲ್ಲ. ಉದಾಹರಣೆಗೆ
ಎಸ್.ಎಸ್.ಎಸ್.ಸಿ, ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತದೆ ಎಂದುಕೊಳ್ಳಿ. ನೀವು
ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದರೂ ಡಿಸ್ಟಿಂಕ್ಷನ್ನಿನಲ್ಲಿ ಪಾಸಾಗಿರುವುದಾಗಿ
ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿಕೊಂಡು ನಿಮ್ಮನ್ನು ನೀವು ಅಭಿನಂದಿಸಿಕೊಳ್ಳಬಹುದು.
ನಿಮ್ಮನ್ನು ವೈಯಕ್ತಿಕವಾಗಿ ಬಲ್ಲವರನ್ನು ಹೊರತು ಪಡಿಸಿ ಬೇರೆ ಯಾರೂ ಸಹ ಅದನ್ನು
ಅಲ್ಲಗಳೆಯುವುದಿಲ್ಲ. ಒಂದು ವೇಳೆ ನೀವು ಪತ್ರಿಕೆಯನ್ನು ಹಿಡಿದು ನಿಮ್ಮ ಗುರುತಿರದ
ಬೀದಿಯಲ್ಲಿ ನಾಲ್ಕು ಬಾರಿ ತಿರುಗಿದರೆ ಸಾಕು ಹಲವರು ಹಿಂತಿರುಗಿ ನಿಮ್ಮ ಮುಖವನ್ನು
ಪರೀಕ್ಷಿಸಿ ಮನೆಗೆ ಹೋಗಿ ಪೇಪರ್ ತಿರುವಿ ಹಾಕುತ್ತಾರೆ. ಶಂಖದಿಂದ ಬಂದದ್ದೆಲ್ಲವೂ
ತೀರ್ಥದ ಮಹಿಮೆಯನ್ನು ಪಡೆದುಕೊಳ್ಳುವಂತೆ ಪತ್ರಿಕೆಗಳಲ್ಲಿ ಬಂದದ್ದೆಲ್ಲವೂ ಸತ್ಯದ
ಮಹಿಮೆಯನ್ನು ಪಡೆಯುತ್ತಿರುವುದು ಇಪ್ಪತೊಂದನೆತ ಶತಮಾನದ ಸೋಜಿಗ.

ಅಮೇರಿಕಾದಲ್ಲಿ ಬೈಬಲ್ಲಿಗೆ ಅದೆಷ್ಟು ಜನರು ಬೆಲೆ ಕೊಡುತ್ತಾರೋ ಇಲ್ಲವೋ, ಅಲ್ಲಿನ
ಪತ್ರಿಕೆಗಳಿಗೆ ಖಂಡಿತಾ ಬೆಲೆ ಕೊಡುತ್ತಾರೆ. ಅದರಲ್ಲೂ ನ್ಯೂಯಾರ್ಕ್ ಟೈಮ್ಸ್ ಎಂದರೆ
ಕೇಳಬೇಕಿಲ್ಲ. ಅದರ ಘೋಷವಾಕ್ಯ ಹೀಗಿದೆ: All the news that’s fit to print ಎಂದ
ಮೇಲೆ ಕೇಳಬೇಕೆ? ಆ ಪತಿಕೆಯಲ್ಲಿ ಪ್ರಕಟವಾಗಿರುವುದೆಲ್ಲಾ ನ್ಯೂಸೇ. ಇಂಥ ಪತ್ರಿಕೆಯು
ಗಳಿಸಿಕೊಂದಿರುವ ವಿಶ್ವಾಸಾರ್ಹತೆಯಿಂದ ಒಂದು ವೇಳೆ ದೇವರೂ ಸಹ ಅಸೂಯೆ ಪಟ್ಟಾನು. ತನ್ನ
ಹಳೆಯ ಧಾರ್ಮಿಕ ಗ್ರಂಥಗಳ ಹೊಸ ಆವೃತ್ತಿಯ ಪ್ರಕಟಣೆಗಾಗಿ ಈ ಪತ್ರಿಕೆಗಳನ್ನೇ
ಆಯ್ದುಕೊಂಡಾನು.

ಇಷ್ಟೆಲ್ಲಾ ಆದರೂ ಸರ್ವಶಕ್ತ ಪತ್ರಿಕೆಗಳನ್ನೇ ನಡುಗಿಸುವ ಪ್ರಳಯಾಂತಕರು ಸಹ ಆ ದೇವನ
ಸೃಷ್ಟಿಯಲ್ಲಿರುತ್ತಾರೆ ಎಂಬುದನ್ನು ಮರೆಯಬಾರದು. ‘ಅಮೇರಿಕಾ ಇರಾಕ್ ಯುದ್ಧವನ್ನು
ಅಂತ್ಯಗೊಳಿಸಿದೆ’ ಎಂದು ನ್ಯೂಯಾರ್ಕ್ ಟೈಮ್ಸಿನ ಮುಖಪುಟದಲ್ಲಿ ವರದಿಯಾದರೆ ಅಳ್ಳದೆಯವರೇ
ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ‘ದೇವೇಗೌಡರು ಹೇಳಿದ ಜೋಕಿಗೆ ಖರ್ಗೆಯವರು ಬಿದ್ದು
ಬಿದ್ದು ನಕ್ಕರು’ ಎಂಬ ವಾರ್ತೆ ನಮ್ಮ ರಾಜ್ಯದ ಜನರಿಗೆ ಹೇಗೆ ಕರ್ಣಾನಂದದಾಯಕವೋ ಹಾಗೆಯೇ
ಈ ಸುದ್ದಿ. ಮುಂಜಾನೆಯ ಪತ್ರಿಕೆಯಲ್ಲಿ ಇಂಥ ಸುದ್ದಿ ಪ್ರಕಟವಾದರೆ ಏನನ್ನಿಸಬಹುದು?
ಕೆಲವು ಬುದ್ಧಿವಂತರು ಕ್ಯಾಲಂಡರನ್ನು ಎರಡೆರಡು ಬಾರಿ ತಿರುಗಿಸಿ ನೋಡಿ ಅಂದು ಏಪ್ರಿಲ್
ಒಂದು ಅಲ್ಲ ಎಂದು ಖಾತ್ರಿ ಪಡಿಸಿಕೊಳ್ಳಬಹುದು. ಮತ್ತೊಂದಷ್ಟು ಮಂದಿ ಸಂ-ಚೋಧನೆಯ
ಒಲವಿದ್ದವರು ಉಳಿದ ಪತ್ರಿಕಗಳತ್ತ ಕಣ್ಣು ಹಾಯಿಸಿ ಕ್ರಾಸ್ ಚೆಕ್ ಮಾಡಿಕೊಳ್ಳಬಹುದು.
ಸಾಮ್ರಾಟರಂತಹ ಅತೀ ಬುದ್ಧಿವಂತರು ತಮಗಿಂತ ಬುದ್ಧಿವಂತರ ಬಳಿ ಹೋಗಿ ‘ಇವತ್ತಿನ ಪೇಪರ್
ಇದ್ಯಾ’ ಅಂತ ಪಕ್ಕದ ಮನೆಯವರ ಬಳಿ ಕೇಳಿ ‘ಏನು ವಿಶೇಷ ಇವತ್ತು ಪೇಪರಿನಲ್ಲಿ...’ ಎಂದು
ಹಲ್ಲು ಗಿಂಜಿ ನಾಲ್ಕೈದು ಮಂದಿ ಕನ್‌ಫರ್ಮ್ ಮಾಡಿದ ನಂತರವೇ ನಂಬಬಹುದು.

ಮಾಡಲು ಕೆಲಸವಿಲ್ಲದ ದ ಎಸ್ ಮೆನ್ (ಹೌದು ಗಂಡಸರು!) ಎಂಬ ಹೆಸರಿನ ಗುಂಪಿನ ಸದಸ್ಯರು ನವೆಂಬರ್ ಹದಿನಾಲ್ಕರಂದು ಅಂದರೆ ನಿನ್ನೆ, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಅಣಕು ಪ್ರತಿ ಮಾಡಿ ಅದನ್ನು ೧.೨ ಮಿಲಿಯನ್ ಕಾಪಿಗಳಾಗಿ ಮುದ್ರಿಸಿ ಹಂಚಿದ್ದಾರೆ.
ಅದರಲ್ಲಿ ಅಮೇರಿಕಾದ ಪ್ರಜೆ ಹುಬ್ಬೇರಿಸಿ ಓದಬಹುದಾದ ವರದಿಗಳೇ ತುಂಬಿದ್ದವಂತೆ.
‘ಅಮೇರಿಕಾ ಇರಾಕಿ ಯುದ್ಧವನ್ನು ಕೊನೆಗೊಳಿಸಿದೆ’ ಎಂಬ ವರದಿಯ ಪಕ್ಕದಲ್ಲಿ ಜಾರ್ಜ್
ಬುಶ್‌ರನ್ನು ಬಂಧಿಸಲಾಗಿದೆ ಎಂದು ಪ್ರಕಟವಾಗಿತ್ತಂತೆ. ಒಳ ಪುಟಗಳಲ್ಲಿ ಕಾಂಡಲೀನ ರೈಸ್
ತಪ್ಪೊಪ್ಪಿಗೆ... ಹೀಗೆ ರಸವತ್ತಾದ ವರದಿಗಳು. ಪ್ರಜೆಗಳು ಕನಸಿನಲ್ಲಿ ಮಾತ್ರ
ಕಲ್ಪಿಸಿಕೊಳ್ಳಬಹುದಾದ ಘಟನೆಗಳು ವರದಿಯಾಗಿವೆಯಂತೆ. ಇದರಿಂದ ನ್ಯೂಯಾರ್ಕ್ ಟೈಮ್ಸ್
ಪತ್ರಿಕೆಯ ವರ್ಚಸ್ಸಿಗೇನು ಧಕ್ಕೆಯಾಗದು. ಈ ಪ್ರ್ಯಾನ್ಕ್‌ಸ್ಟರರು ಪತ್ರಿಕೆಯ
ದಿನಾಂಕವನ್ನು ಜುಲೈ ೪ ೨೦೦೯ ಎಂದು ಮುದ್ರಿಸಿದ್ದರೆ ಘೋಷವಾಕ್ಯವನ್ನು ತಿದ್ದಿ All the
news we hope to print ಎಂದು ಮುದ್ರಿಸಿ ತಮ್ಮ ಉದ್ದೇಶವನ್ನು ಸಾರಿದ್ದಾರೆ.

ಈ ನಡುವೆ ಹಿಂದೊಮ್ಮೆ ನಾವು ಕೇಳಿದ್ದ ಜೋಕು ನೆನಪಾಗಿ ನಗೆ ನಗಾರಿಯ
ಸಿಬ್ಬಂದಿಯೆಲ್ಲಾ ನೆಲದ ಮೇಲೆ ಉರುಳುರುಳಿ ನಗುತ್ತಿದ್ದಾರೆ. ಪತ್ರಿಕೆಯು
ಸುದ್ದಿಯಾಗಬಹುದನ್ನೆಲ್ಲಾ ಮುದ್ರಿಸುತ್ತೇವೆ ಎಂದು ಘೋಷವಾಕ್ಯ
ಇಟ್ಟುಕೊಳ್ಳುತ್ತಾರೆಂದರೆ ಜಗತ್ತಿನಲ್ಲಿ ಪ್ರತಿ ದಿನ ಇವರ ಪತ್ರಿಕೆಯ ಇಪ್ಪತ್ತು
ಚಿಲ್ಲರೆ ಪುಟಗಳು ತುಂಬುವಷ್ಟು ಮಾತ್ರ ಘಟನೆಗಳು ನಡೆಯುತ್ತವೆ ಎಂತಲೇ? ಒಂದು
ಹೆಚ್ಚಿಲ್ಲ, ಕಡಿಮೆ ಇಲ್ಲ!

ಕೆಲ ದಿನಗಳ ಹಿಂದೆ ಸಾಮ್ರಾಟರಾದ ನಮ್ಮ ಹಾಗೂ ನಗೆ ನಗಾರಿಯ ವಿಶ್ವಾಸಾರ್ಹತೆಯನ್ನು
ನಾಶ ಪಡಿಸುವುದಕ್ಕಾಗಿ ಬಹುದೊಡ್ಡ ಹುನ್ನಾರ ನಡೆದಿತ್ತು. ನಮ್ಮ ಪತ್ರಿಕೆಯಲ್ಲಿ
ಹೆಸರಿನಲ್ಲಿ ದೇವೇಗೌಡರು ಬರೆದ ಹಾಸ್ಯ ಲೇಖನ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ
ಹನಿಗವನವನ್ನು ಮುದ್ರಿಸುವ ಅತಿರಂಜಕ ಯೋಜನೆ ವಿಫಲವಾಯಿತು ಎಂದು ತಿಳಿಸುವುದಕ್ಕೆ
ಹರ್ಷಿಸುತ್ತೇವೆ. ಈ ಹುನ್ನಾರವನ್ನು ಪತ್ತೆ ಹಚ್ಚಿ ನಮ್ಮ ಓದುಗರನ್ನು ಹೃದಯಾಘಾತ,
ಶಾಕ್‌ನಿಂದ ಕಾಪಾಡಿದ ಡಿಟೆಕ್ಟಿವ್ ಚೇಲ ಕುಚೇಲನಿಗೆ ನಾವು ಸನ್ಮಾನಿಸಿದ್ದು ಯಾವ
ಪತ್ರಿಕೆಯಲ್ಲೂ ವರದಿಯಾಗಲಿಲ್ಲ.