ಸಂಸ್ಕೃತದ ರಕಾರ. ಕನ್ನಡದ ರಕಾರ ಮತ್ತು ಱಕಾರ

ಸಂಸ್ಕೃತದ ರಕಾರ. ಕನ್ನಡದ ರಕಾರ ಮತ್ತು ಱಕಾರ

ಬರಹ

ಒಟ್ಟು ಮೂಱು ತೆಱನಾದ ರಕಾರಗಳು ಒಂದು ಸಂಸ್ಕೃತದ ರಕಾರ ಅಥವಾ ರೇಫ. ಇದು ಋಟುರಷಾಣಾಂ ಮೂರ್ಧಾ ಎಂಬಂತೆ ಮೂರ್ಧನ್ಯ ರಕಾರ. ಅಂದರೆ ಪ್ರತಿವೇಷ್ಟಿತ ರ. ಕನ್ನಡದ ರಕಾರ ದಂತಮೂಲೀಯ ತಾಡಿತ. ಅಂದರೆ ಹಲ್ಲಿನ ಬುಡವನ್ನು ತಟ್ಟುವ ರ. ಇನ್ನೊಂದು ಱಕಾರ ದಂತಮೂಲೀಯ ಕಂಪಿತ. ಅಂದರೆ ಹಲ್ಲಿನ ಬುಡದಲ್ಲಿ ನಾಲಿಗೆ ಱಕಾರ ಉಚ್ಚರಿಸುವಾಗ ಕಂಪಿಸುತ್ತದೆ. ಹಾಗಾಗಿ ತೆನ್ನುಡಿಗಳಲ್ಲಿ ರಕಾರ ಮತ್ತು ಱಕಾರ ಎರಡೂ ದಂತಮೂಲಕ್ಕಿಂತ ಮೇಲಕ್ಕೆ ಹೋಗುವುದಿಲ್ಲ. ಇದು ಎಲ್ಲಾ ತೆನ್ನುಡಿಗರು ರಕಾರವನ್ನು ಉಚ್ಚರಿಸುವ ಪರಿ. ಸಂಸ್ಕೃತ ಮೂರ್ಧನ್ಯವಾದ ರಕಾರ ಇದಕ್ಕಿಂತ ಭಿನ್ನ ಮತ್ತು ತೆನ್ನುಡಿಗರು ಇದನ್ನು ದಂತಮೂಲೀಯ ತಾಡಿತವಾಗಿ ರ ಎಂದು ಉಚ್ಚರಿಸುತ್ತಾರೆ. ಱಕಾರ ಉಚ್ಚರಿಸುವಾಗ ನಾಲಿಗೆ ನಡುಗಬೇಕು. ಱ ಮತ್ತು ೞ ಗೊತ್ತಿಲ್ಲದ ಕನ್ನಡಿಗ ಕನ್ನಡತನ ಕಳೆದುಕೊಂಡಂತೆ. ಹಾಗಾಗಿ ಮರಾಠಿಭಾಷೆಯ ಪ್ರಭಾವವಿರುವ ಉತ್ತರ ಕರ್ಣಾಟಕದ ಮಂದಿಗೆ ಈ ಱ ಮತ್ತು ೞ ಕನ್ನಡದವೇ ಆಗಿದ್ದು ಅಪರಿಚಿತವಾಗಿರುವುದು ಒಂದು ಸೋಜಿಗ. ಅಲ್ಲಿಯ ಕವಿಗಳೇ ಆದ ಪಂಪ, ರನ್ನ, ಪೊನ್ನ, ನಾಗಚಂದ್ರ ಹಾಗೂ ಕವಿರಾಜಮಾರ್ಗಕಾರ ಇವರು ಱ ಮತ್ತು ೞ ಬೞಸಿರುವಾಗಲೂ ಹಾಗೆಯೇ ಅಲ್ಲಿಯವರೇ ಆದ ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮ (ಇವರಿಬ್ಬರೂ ಶಿವಮೊಗ್ಗದವರಾದರೂ ಕಲ್ಯಾಣಕ್ಕೆ ಹೋದವರು), ಚಾಮರಸ, ಕುಮಾರವ್ಯಾಸ ಮುಂತಾದವರು ಅವರ ಕಾವ್ಯಗಳಲ್ಲಿ ಱಕಾರ ಬೞಸಿದ್ದರೂ ಅಲ್ಲಿನ ಜನಗಳಿಗೆ ಈ ಱ ಮತ್ತು ೞ ಅಪರಿಚಿತವಾಗಿರುವುದು ಸೋಜಿಗದ ವಿಷಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet