ಸಂಸ್ಕೃತಿ - ವಿಕೃತಿ

ಸಂಸ್ಕೃತಿ - ವಿಕೃತಿ

ಯಾವುದೇ ವಸ್ತುಗಳು ಸಂಸ್ಕರಣೆಗೊಳಗಾದರೆ ಸಂಸ್ಕಾರ ಪಡೆಯುತ್ತವೆ. ವಿಕಾರಗೊಂಡರೆ ವಿಕೃತ ಎಂದೆಣಿಸುತ್ತದೆ. ತುಪ್ಪವು ಹಾಲಿನ ಸಂಸ್ಕರಿತ ರೂಪ. ಅದರ ಗುಣ ಹಾಲಿಗಿಂತ ಮಿಗಿಲು. ತುಪ್ಪದ ಬಾಳುವಿಕೆ ದೀರ್ಘ. ಹಾಲನ್ನು ಸಂಸ್ಕರಿಸದೆ ಹಾಗೇ ಬಿಟ್ಟರೆ ಕೆಲವೇ ಘಂಟೆಗಳಲ್ಲಿ ಕೆಟ್ಟು ತಿಪ್ಪೆಯನ್ನೋ ಗೊಬ್ಬರದ ಗುಂಡಿಯನ್ನೋ ಸೇರುತ್ತದೆ. ಹಾಲಿಗೆ ಒಂದು ಚೂರು ಲವಣ ಅಥವಾ ಆಮ್ಲ ಬಿದ್ದರೆ ಕೆಡುವ ವೇಗ ಹೆಚ್ಚುತ್ತದೆ. ಸಂಸ್ಕರಿಸುವುದು ಶ್ರಮದಾಯಕ. ಆದರೆ ವಿಕೃತಗೊಳಿಸುವುದು ಬಲು ಸುಲಭ. “ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ” ಎಂಬ ಮಾತಿನ ಹಿಂದೆ ಸಂಸ್ಕರಿಸಲು ವಿರಾಮರಹಿತ ಶ್ರಮವಿದೆ ಎಂಬ ಧ್ವನಿಯೇ ಅಡಗಿದೆ.

ಸಂಸ್ಕೃತಿ ಮತ್ತು ವಿಕೃತಿಗಳಲ್ಲಿ ಭಾವನೆಗಳ ಭೂಮಿಕೆಯೇ ಪ್ರಧಾನ. ಧನಾತ್ಮಕ ಭಾವನೆಗಳು ಸಂಸ್ಕೃತಿಗೆ ಕಾರಣವಾದರೆ, ಋಣಾತ್ಮಕ ಭಾವನೆಗಳು ವಿಕೃತಿಯನ್ನೇ ಬೆಂಬಲಿಸುತ್ತವೆ. ರೋಗಿಗೆ ಸಹಕರಿಸ ಬೇಕೆಂಬ ಭಾವನೆ ನಮ್ಮಲ್ಲಿ ಚಿಗುರಿದರೆ ಅದು ಸಂಸ್ಕೃತಿ. ಪ್ರಜಾತಂತ್ರದ ದೇವಮಂದಿರವೆಂದು ಆರಾಧಿಸಲ್ಪಡುವ ಸಂಸತ್ತಿನೊಳಗೆ ಇತ್ತೀಚೆಗೆ ನುಸುಳಿ ವರ್ಣ ಧೂಮ ಪ್ರಸರಣದ ಮೂಲಕ ಉಲ್ಲೋಲ ಕುಲ್ಲೋಲಗಳಿಗೆ ಕಾರಣರಾದ ವಿಕೃತ ಮತಿಗಳನ್ನು ಗಮನಿಸಿದ್ದೇವೆ. ಸಮಾಜದಲ್ಲಿ ಸುಸಂಸ್ಖೃತರೂ ಇರುತ್ತಾರೆ; ವಿಕೃತರೂ ಇರುತ್ತಾರೆ. ವಿಕೃತರ ಬಾಹುಳ್ಯದಿಂದ ಸಮಾಜ ನಾಶವಾಗುತ್ತದೆ. ವಿಕೃತಿಗಳನ್ನು ಮಟ್ಟ ಹಾಕುವ ಮೂಲಕ ಸಂಸ್ಕೃತಿಯನ್ನು ಸಂರಕ್ಷಣೆ ಮಾಡಬೇಕಾದುದು ಮಾನವ ಪ್ರೇಮಿಯ ಸಹಜ ಧರ್ಮವಾಗಬೇಕು. ಸಜ್ಜನರ ಕರ್ತವ್ಯವಾಗಬೇಕು.

ಬೋಧನೆ ಮಾಡಿದ ಪಠ್ಯಾಂಶದಲ್ಲಿ ಶಿಕ್ಷಕರು ಮನೆಗೆಲಸ ನೀಡುವುದು ಕಲಿಕೆಯ ದೃಢೀಕರಣದ ಹಿತವನ್ನನುಸರಿಸಿ ಸುಸಂಗತ ಮತ್ತು ಅನಿವಾರ್ಯ. ಆದರೆ ಮನೆಗೆಲಸವನ್ನು ಮಾಡದೆ ವಿದ್ಯಾರ್ಥಿಯು ಮರುದಿನ ಬರಿಗೈಲಿ ತರಗತಿಗೆ ಹಾಜರಾಗುವುದು ಶಿಸ್ತಲ್ಲ. ಕೆಲಸಗಳ್ಳತನವು ವಿದ್ಯಾರ್ಥಿಯಾದವನು ತನಗೆ ತಾನೇ ಮಾಡುವ ಮೋಸವೆಂದೋ ದ್ರೋಹವೆಂದೋ ವ್ಯಾಖ್ಯಾನಿಸಿದರೆ ತಪ್ಪಾಗದು. ಆದರೆ ವಿಪರೀತ ಕೆಲಸದ ಒತ್ತಡ ಅಥವಾ ಅನಾರೋಗ್ಯವಿದ್ದಾಗ ಮನೆಗೆಲಸ ಮಾಡದಿರುವುದಕ್ಕೆ ಕ್ಷಮೆಯಾಚನೆ ತಪ್ಪಲ್ಲ. ಬೋಧಕರು ಇಂತಹ ಸಂದರ್ಭಗಳಲ್ಲಿ ವಿನಾಯಿತಿಯನ್ನು ನೀಡುವರು. ಆದರೆ ಕಲಿಕಾ ಗುಣ ಮಟ್ಟದ ಉತ್ಕರ್ಷಕ್ಕೆ ಮನೆಗೆಲಸ ಮಾಡದೇ ಇರುವುದರಿಂದ ತಡೆಯಾಗುವುದಂತೂ ನಿಶ್ಚಿತ. ಒಬ್ಬ ವಿದ್ಯಾರ್ಥಿಯನ್ನುದ್ದೇಶಿಸಿ, “ಮನೆಗೆಲಸ ಮಾಡದೇ ಬರುವುದು ನಾಚಿಕೆಯಲ್ಲವೇ?” ಎಂದು ಅಧ್ಯಾಪಕರು ಹೇಳಿದಾಗ, ವಿದ್ಯಾರ್ಥಿಯು ಅದಕ್ಕೆ ಪ್ರತಿಯಾಗಿ, “ಮನೆಗೆಲಸ ಕೊಡಲು ನಿಮಗೆ ನಾಚಿಕೆಯಾಗುವುದಿಲ್ಲವೇ?” ಎಂದು ಪ್ರತಿವಾದ ಮಾಡಿದರೆ ಅದು ವಿಕೃತ ಮನಸ್ಸಿನ ಲಕ್ಷಣ. ಇಂತಹ ವಿಕೃತ ಮಾತುಗಳಾಗಲೀ ಕೃತಿಗಳಾಗಲೀ ವರ್ತನೆಗಳಾಗಲೀ ಯಾರನ್ನೂ ಉದ್ಧರಿಸದು. ತಪ್ಪುಗಳನ್ನು ಒಪ್ಪಿ ತನ್ನನ್ನು ತಿದ್ದಿಕೊಂಡು ಸರಿದಾರಿಗೆ ಬರುವುದು ಸಂಸ್ಕೃತಿ. ಪ್ರತಿಯಬ್ಬರೂ ಮೇಲ್ಮಟ್ಟದ ಸ್ಥಾನಮಾನಗಳಿಗೇರಲು ಬಯಸುವರು. ಮೇಲ್ಮಟ್ಟವನ್ನೇರಲು ಸಂಸ್ಕೃತಿಯೇ ಆಧಾರ. ವಿಕೃತಿಯಿಂದ ಹೀನ ಗತಿಯೇ ನಿಶ್ಚಿತ.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ