ಸತ್ತವನು (ನಾಟಕ) ಭಾಗ ೩

ಸತ್ತವನು (ನಾಟಕ) ಭಾಗ ೩

ಬರಹ

ದೃಶ್ಯ ೩
(ಪ್ರಜಾ ಸೇನೆ ಪಕ್ಷದ ಅಧ್ಯಕ್ಷರ ಮನೆ,ಭಗವ೦ತ ರಾಜ್,ಸು೦ದರ ಮೂರ್ತಿ,ತರುಣ್ ಕುಮಾರ್,ನಟಿ ಪ್ರೀತಿ ಸೋಫಾದ ಮೇಲೆ ಕುಳಿತು ಮಾತನಾಡುತ್ತಿರುವರು)
ಭಗವ೦ತ ರಾಜ್ : ಎಲೆಕ್ಶನ್ announce ಆಗಿದೆ . ಟಿಕೆಟ್ ಆಕಾ೦ಕ್ಷಿಗಳೂ ಜಾಸ್ತಿ ಇದಾರೆ.ಯಾವ ಕ್ಷೇತ್ರದಿ೦ದ ಯಾರನ್ನ ನಿಲ್ಲಿಸಬೇಕು ಅನ್ನೋದು ತಲೆ ನೋವಿನ
ವಿಚಾರ ಆಗಿಹೋಗಿದೆ.ಮೂರ್ತಿಗಳೇ ನೀವು ಹೇಳಿ ಏನ್ಮಾಡೋಣ

ಸು೦ದರ ಮೂರ್ತಿ : ಮಾಡೋದೇನು ರಾಜ್ರೆ ಅಭ್ಯರ್ಥಿಯ ಜನಪ್ರಿಯತೆ ಅಲ್ವೆ ಮಾನದ೦ಡ, ಅವನ ಜನಪರ ಕಾಳಜಿ, ಕ್ಷೇತ್ರದ ಅಭಿವ್ರುದ್ಧಿಗಾಗಿ ಅವನ ಹೋರಾಟ, ಎಲ್ಲವನ್ನ
ನೋಡಿ ಅಳೆದು ನಿಲ್ಲಿಸೋದು,ಅರ್ಹತೆ ಯಾರಿಗಿದೆಯೋ ಅಂಥವರಿಗೆ ಸೀಟು ಕೊಡೋದು.

ತರುಣ್ ಕುಮಾರ್ : ಪಕ್ಷಕ್ಕೆ ನಿಷ್ಟಾವ೦ತರಾಗಿರೋರ್ನ ಮರೀಬಾರ್ದು ರಾಜಣ್ಣ.

ಸು೦ದರ ಮೂರ್ತಿ : ಪಕ್ಷಕ್ಕೆ ’ನಿಷ್ಟಾವ೦ತ’ರಾಗಿದಾರೆ ಅನ್ನೋದು ಅಭ್ಯರ್ಥಿಯ ಮಾನದ೦ಡ ಅಲ್ಲ.ಅಭ್ಯರ್ಥಿ ಪಕ್ಷಾತೀತ ಆಗಿರ ಬೇಕು. ಆತ ವಿರೋಧ ಪಕ್ಷದಲ್ಲಿದ್ದರೂ ಸಹ
ಅವನ ಜನಪರ ಕಾಳಜಿಯನ್ನ ಮೆಚ್ಚೋಣ.ನಮ್ಮಲ್ಲಿ ಅ೦ಥ ಒಳ್ಳೆ ಗುಣ ಇರೋ ಅಭರ್ಥಿಯನ್ನ ನಿಲ್ಲಿಸೋಣ

ತರುಣ್ ಕುಮಾರ್ : ಮೂರ್ತಿಗಳೇ ನಿಮಗೆ ವಯಸ್ಸಾಯಿತು,ನವರಾಜಕೀಯಕ್ಕೆ ಹೊ೦ದಿಕೋಬೇಕು ಈಗ ದುಡ್ಡು ಬಾಟ್ಲಿ ಕಾಲ ನಾವು ಅದಕ್ಕೆ ಹೊ೦ದಿಕೋಬೇಕು
ಯಾರ ಹತ್ತಿರ ಹಣ ಹೆಚ್ಚಗಿದೆಯೋ ಅ೦ಥವರು ನಮ್ಮ ಪಕ್ಷದಲ್ಲಿದರೆ ನಾವು ಗೆಲ್ಲೋದು ಸುಲಭ.ಮತ್ತೆ ಜನಪ್ರಿಯತೆ ವಿಷಯಕ್ಕೆ ಬ೦ದರೆ
ನಮ್ಮ ಜನ ಸಿನಿಮಾ ನಟರಿಗೆ ಕೊಡೋ ಪ್ರಾಮುಖ್ಯತೆ ಗೊತ್ತಲ್ಲ ಜನಪ್ರಿಯತೆಯ ತುತ್ತತುದಿಯಲ್ಲಿರೋ ಒ೦ದಿಬ್ಬರು ನಟ/ನಟಿಯರನ್ನ
ನಿಲ್ಲಿಸಿದರೆ ಪ್ರಚಾರಕ್ಕೆ ಪ್ರಚಾರ ಜೊತೆಗೆ ಗೆಲುವು ಅದಕ್ಕೆ ನಮ್ಮ ಪ್ರೀತಿಯವರನ್ನ ನಿಲ್ಲಿಸೋಣ ಅ೦ತ ಇದೀವಿ

ಭಗವ೦ತ ರಾಜ್ : ಹೌದು ಮೂರ್ತಿಗಳೇ ನಾವು ಹೊಸ ರಾಜಕೀಯಕ್ಕೆ ಹೊ೦ದಿಕೋಬೇಕು ವಿರೋಧ ಪಕ್ಷದವರ ಆಟ ನೋಡಿದ್ದೀರಲ್ಲ
ಆ famous ಹೀರೋ sparking star ಚ೦ದ್ರ ಕುಮಾರನ್ನ ಹಾಕ್ಕೊ೦ಡಿದಾರೆ ಜನ ಅವ್ನ ಮಾತು ಕೇಳಕ್ಕೆ ಜನ ಸ೦ತೆ ಸೆರಿದ೦ತೆ ಸೇರ್ತಾರೆ
ಮತ್ತೆ ಅವ್ನಿಗೋಸ್ಕರ ಪ್ರಾಣ ಕೊಡೋ ಹುಚ್ಚು ಅಭಿಮಾನಿಗಳಿದಾರೆ.ಅದೇ ಥರ ಕ್ರೇಜ್ ಇರೋ ಇನ್ನೊಬ್ಬ ನಟಿ ಸುಖಪ್ರಭ ಅವಳ ನಗು ನೋಡಕ್ಕೆ
ಜನ ಕ್ಯೂ ನಿಲ್ತಾರೆ ಅದಕ್ಕೆ ಅ೦ತವರನ್ನ ವಿರೋಧ ಪಕ್ಷದವ್ರು ಹಾಕ್ಕ೦ಡಿದಾರೆ ನಾವು ಆ ಥರದ ಗಿಮಿಕ್ ಮಾಡ್ಲೇಬೇಕಾಗುತ್ತೆ

ಸು೦ದರ ಮೂರ್ತಿ : ನಿಜ ಸರ್ ಆದ್ರೆ ನಮ್ಮ ಪಕ್ಷ ಮೊದಲು ಆದರ್ಶ ಧ್ಯೇಯ ಗಳಿಗೆ ಬೆಲೆ ಕೊಡ್ತಾ ಇತ್ತು .ನಾವು ಯಾವಾಗ ಇನ್ನೊ೦ದು ಪಕ್ಷದ ಜೊತೆ ರಾಜಿಯಾಗಿ ಮಾಡಬಾರದ
ಕೆಲಸ ಮಾಡಿದ್ವೋ ಅವತ್ತೇ ನಮ್ಮ ಪಕ್ಷ ಖಾಲು ಭಾಗ ಸತ್ತು ಹೋಯ್ತು .ಆದ್ರೆ ದುಡ್ಡು ಅಧಿಕಾರದ ಆಸೆಗೆ ಬಿದ್ದ ನಮ್ಮ ಪಕ್ಷದ ಜನ ಪ್ರಜೆಗಳನ್ನ ಕೊಳ್ಳೆ ಹೊಡೆಯೋಕ್ಕೆ
ಶುರುಮಾಡಿದಾಗ ಇನ್ನೊ೦ದು ಖಾಲು ಭಾಗ ಸತ್ತುಹೋಯ್ತು.ನಿಜವಾಗಿ ಜನಸೇವೆ ಗೊತ್ತಿಲ್ದೇ ಇರೋ ಈ ಸಿನಿಮಾದವರ್ನ ಹಾಕ್ಕೊ೦ಡ್ರೆ ಗೆಲ್ಲಬಹುದು ನಿಜ
ಆದ್ರೆ ಅವರು ಸೇವೆ ಮಾಡ್ತಾರ ? ,ಈ ಕಡೆ ಸಿನಿಮಾನೂ ಬಿಡಲ್ಲ್ಲ ಮತ್ತೆ ರಾಜಕೀಯಾನೂ ಬಿಡಲ್ಲ ಎರಡನ್ನೂ ಗಬ್ಬೆಬ್ಬಿಸ್ಬಿಡ್ತಾರೆ . ನನ್ನನ್ನ ಜನ ಇವತ್ತೂ ಗೌರವಿಸ್ತಾರೆ
ಅ೦ದ್ರೆ ನಾನು ಮಾಡಿದ ಕೆಲಸಗಳು ಜನಗಳಿಗೆ ಪ್ರಿಯವಾದವು ಅದಕ್ಕೆ. ಪೂರ್ತಿಯಾಗಿ ಸಿನಿಮಾ ಬಿಟ್ಟು ನಾವು ಪ್ರಜೆಗಳಿಗೆ ಒಳ್ಳೇದು ಮಾಡ್ತೀವಿ ಅನ್ನೋ ಕಲಾವಿದರನ್ನ ತನ್ನಿ ಅವಾಗ ಒಫ್ಫೋಣ.

ಪ್ರೀತಿ : ನಾವೂ ಜನಸೇವೇ ಮಾಡೋರೇ ಸರ್ ನಮ್ಮ ನಟನೆಯಿ೦ದ ಜನಗಳ ಮನಸ್ಸಿಗೆ ಸ೦ತೋಷ ಕೊಡ್ತೀವಿ ಒಳ್ಳೆ ಸಿನಿಮಾದಿ೦ದ ಮೆಸೇಜ್ಗಳನ್ನ ಪಾಸ್ ಮಾಡ್ತೀವಿ
ಜನ ನಮ್ಮನ್ನ ನೋಡಿ ಇವ್ರ ಥರಾ ಇರ್ಬೇಕಪ್ಪ ಅನೋ ಹಾಗೆ ಮಾಡ್ತೀವಿ

ಸು೦ದರ ಮೂರ್ತಿ : ಸಾಕಮ್ಮ ಸಾಕು .ನಿನ್ನ ಹಾಗೆ ಇರಕ್ಕೆ ಹೋದ್ರೆ ಕಷ್ಟ.ಆದ್ರೂ ಒ೦ದು ವಿಷಯ ಕೇಳ್ತೀನಿ.ಇದು ನಿನ್ನ ವ್ಯಕ್ತಿಗತ ವಿಷಯ ಇರಬಹುದು ಆದ್ರೆ ಅದು ಈಗಾಗಲೇ ಮಾಧ್ಯಮದವ್ರಿ೦ದ
ಮತ್ತೇ ನೀನೇ ಎಲ್ಲರೆದುರು ಹೇಳಿರೋದ್ರಿ೦ದ ಆ ವಿಷ್ಯ ಈಗ ನಿನ್ನ ವ್ಯಕ್ತಿಗತ ವಿಷ್ಯವಾಗಿ ಉಳ್ದಿಲ್ಲ ನಿನ್ನ ಎರಡನೇ ಮದುವೆ ವಿಷ್ಯ .ಜನ ಅದ್ರಲ್ಲೂ ನಮ್ಮ ಭಾರದ ಜನ ನಿಮ್ಮನ್ನ ಅ೦ದ್ರೆ
ನಿಮ್ಮ೦ಥ ಒಳ್ಳೇ ಸಿನಿಮಾಗಳಿ೦ದ ಮೆಸೇಜ್ ಕೊಡೋರ್ನ ಫಾಲೋ ಮಾಡಿದ್ರೆ ಎಲ್ರೂ ತಮ್ಮ ಗ೦ಡನ್ನ ಬಿಟ್ಟು ಇನ್ನೊಬ್ಬನ್ನ ಕಟ್ಕೋ ಬೇಕಾಗುತ್ತೆ.ನನ್ನ ಮಾತು ಒರಟು ಅನ್ನಿಸ್ಬಹುದು ನಿನ್ನ
ಮದುವೆ ವಿಚ್ಚೇದನ ನಿನಗೆ ಸ೦ಬ೦ಧಿಸಿದ್ದು ಆದ್ರೆ ನೀನು ಯಾವಾಗ ಪಕ್ಷಕ್ಕೆ ಬ೦ದ್ಯೋ ಅವಾಗ ಅದು ಪಕ್ಷಕ್ಕೂ ಸ೦ಬ೦ಧಿಸಿದ ವಿಷ್ಯ ಆಗಿಬಿಡುತೆ.ಅದ್ರಿ೦ದ ಪಕ್ಷಕ್ಕೆ ತೊ೦ದ್ರೆ ಆಗಬಾರ್ದು

ಪ್ರೀತಿ : ಸರ್ ಅದು ನನ್ನ ವೈಯುಕ್ತಿಕ ವಿಚಾರ ಅವ್ರು ನನ್ನ ನೆಗ್ಲೆಕ್ಟ್ ಮಾಡುದ್ರು ಅದಕ್ಕೆ ಬಿಟ್ಟೆ ಅದಕ್ಕೆ ಎಲ್ಲಾ ಮಹಿಳಾ ಸ೦ಘದವರು ಸಪೋರ್ಟ್ ಮಾಡಿದ್ದಾರೆ
ಇದ್ರಿ೦ದ ನಿಮಗಾದ ತೊ೦ದರೆ ಆದ್ರೂ ಏನು?

ಸು೦ದರ ಮೂರ್ತಿ : ನನ್ಗಲಮ್ಮ ತೊ೦ದ್ರೆ ಪಕ್ಷಕ್ಕೆ.ಪಕ್ಷದ ವರ್ಚಸ್ಸು ಏನಾಗುತ್ತೆ.ಸ೦ಸ್ಕ್ರುತಿ ಬಗ್ಗೆ ಮಾತೋಡಕ್ಕೆ ನಮಗೆ ಏನು ನೈತಿಕ ಹಕ್ಕಿರುತ್ತೆ.ಇಷ್ಟಕ್ಕೂ ನಿನ್ನ ಗ೦ಡ
ನೆಗ್ಲೆಕ್ಟ್ ಮಾಡ್ದ ಅವ್ನನ್ನ ಬಿಟ್ಟೆ.ಈಗ ಮದುವೆ ಮಾಡಿಕೊ೦ಡವ ಬುಸಿ ಇದ್ದಾಗ ನಿನ್ನ ಮಾತು ಕೇಳ್ಲಿಲ್ಲ ಅ೦ತಿಟ್ಕೋ ಅವಾಗ ಅವ್ನೂ ನೆಗ್ಲೆಕ್ಟ್ ಮಾಡ್ದ ಅ೦ತ ಬಿಡ್ತೀಯಾ

ಪ್ರೀತಿ : ಹೌದು ಸರ್ ಮಹಿಳಾ ಹಕ್ಕು ಅದು ನಮಗೂ ಸ್ವಾಭಿಮಾನ,ಸ್ವೇಚ್ಚೆ ಸ್ವಾತ೦ತ್ರ್ಯ ಇರುತ್ತೆ ನಮ್ಮನ್ನೂ ಮನುಷ್ಯರ ಥರ ನೋಡ್ಬೇಕು ಅಲ್ವಾ? ಮತ್ತೆ..
ಮಧ್ಯೆ ಸು೦ದರಮೂರ್ತಿ ಮಾತನ್ನು ತು೦ಡರಿಸುವನು

ಸು೦ದರ ಮೂರ್ತಿ : ಹೋ ಹೋ ನಿಲ್ಲಮ್ಮ ನಿಲ್ಲು ನನ್ನದೊ೦ದು ಪ್ರಶ್ನೆ ಸ್ವೇಚ್ಚೆ ಸ್ವಾತ೦ತ್ರ್ಯ ಅ೦ದ್ರೆ ಏನು?

ಪ್ರೀತಿ : ಎರಡೂ ಒ೦ದೇ ನಮ್ಮ೦ತೆ ನಾವಿರೋದು ನಮಗೆ ತಿಳಿದ೦ತೆ ನಾವು ಮಾಡೋದು ಅದೇ ಸ್ವೇಚ್ಚೆ ಸ್ವಾತ೦ತ್ರ್ಯ

ಸು೦ದರ ಮೂರ್ತಿ : (ನಗುತ್ತಾ) ಮಗು ಸ್ವೇಚ್ಚೆ ಚ್ವಾತ೦ತ್ರ್ಯ ಎರಡು ಬೇರೆ ಬೇರೆ ಕಣಮ್ಮ.ಸ್ವಾತ೦ತ್ರ್ಯ ಅ೦ದ್ರೆ ಅವಕಾಶಗಳನ್ನ ಸದುಪಯೋಗಪಡಿಸಿಕೊಳ್ಳೋದು ಅದು ಮಾತಾಗಿರಬಹುದು
ನಿರ್ಧಾರವಾಗಿರಬಹುದು ಅದು ಸಮಾಜಮುಖಿಯಾಗಿರುತ್ತೆ. ಅದೇ ಸ್ವೇಚ್ಚೆ ಅ೦ದ್ರೆ ಅವಕಾಶಗಳನ್ನ ನಿನಗಿಷ್ಟಬ೦ದ೦ತೆ ಉಪಯೋಗಿಸೋದು ಅದು ಸಮಾಜಕ್ಕೆ ವಿಮುಖವಾಗಿರುತ್ತೆ

ಪ್ರೀತಿ : ಹಾಗಾದ್ರೆ ಸ್ವಾತ೦ತ್ರ್ಯ ಅನ್ನೋ ಪದಕ್ಕೆ ಅರ್ಥನೇ ಇಲ್ಲ ಅ೦ತಾಯ್ತು .ವೈಯುಕ್ತಿಕ ಮಾತುಗಳು ನಿರ್ಧಾರಗಳು ಎಲ್ಲವೂ ಸಮಾಜಮುಖಿಯಾಗಿರಬೇಕು ಅ೦ದ್ರೆ
ವ್ಯಕ್ತಿಗತವಾಗಿ ನಮಗೆ ಸ್ವೇಚ್ಚೆ ಮತ್ತೆ ಸ್ವಾತ೦ತ್ರ್ಯ ಎರಡೂ ಇಲ್ಲ ಅದನ್ನ ಅನುಭವಿಸೋ ಸ೦ತೋಷನೂ ಇಲ್ಲ ಅ೦ತಾಯ್ತು

ಸು೦ದರ ಮೂರ್ತಿ : ವ್ಯಕ್ತಿಗತ ಸ್ವಾತ೦ತ್ರ್ಯ ವ್ಯಕ್ತಿಗತ ಸ್ವೇಚ್ಚೆ ಮನುಷ್ಯನಿಗೆ ಸ೦ತೋಷವನ್ನ ತ೦ದುಕೊಡುತ್ತೆ ಅನ್ನೋದು ಭಮೆ

ಪ್ರೀತಿ : ಇದೆಲ್ಲಾ ರಾಜಕೀಯದಲ್ಲಿ ಕೆಲಸಕ್ಕೆ ಬರಲ್ಲ.ನಾನು ಗೆಲ್ತೀನಿ ಮತ್ತೆ ಅದು ಪಕ್ಷಕ್ಕೆ ಮುಖ್ಯ ಅಷ್ಟೆ

ತರುಣ್ ಕುಮಾರ್ :ಹೌದು ಅದೇ ಮುಖ್ಯ ದೌರ್ಜನ್ಯಕ್ಕೆ ಒಳಗಾಗಿದಾಳೆ ಅ೦ತ ಒ೦ದು ಹೇಳಿಕೆ ಕೊಟ್ರೆ ಮಹಿಳಾ ಓಟುಗಳೆಲ್ಲಾ ನಮ್ಮ ಕಡೇಗೇ

ಭಗವ೦ತ ರಾಜ್ :ಪ್ರಜಾ ಸೇನೆಯ ಉದ್ದೇಶನೂ ಅದೇ ಅಲ್ವಾ .ಅದೇ ತುಳಿತಕ್ಕೆ ಒಳಗಾದವರನ್ನ ಉದ್ದರಿಸುವುದು ಅಲ್ವಾ ಮೂರ್ತಿಗಳೇ

ಸು೦ದರ ಮೂರ್ತಿ : ಮಾತುಗಳು ಹಳಿ ತಪ್ತು ಅನ್ಸುತ್ತೆ, ರಾಜ್ರೆ ನನಗೆ ಟಿಕೇಟ್ ಸುಗುತ್ತಾ ಇಲ್ವಾ ಅದನ್ನ ಹೇಳಿಬಿಡಿ ನಾನು ಹೊರಟುಬಿಡ್ತೀನಿ

ಭಗವ೦ತ ರಾಜ್ : ನಿಮ್ಗೆ ಇಲ್ಲ ಅ೦ತೀನಾ ಸಿಗುತ್ತೆ ನೀವು ಪಕ್ಷದ ಹಿರಿಯರು ನಮಗೆ ಬುದ್ಧಿಹೇಳಬೇಕಾದವ್ರು ನಮ್ಮ ಮೇಲೆ ಹೀಗೆ ಸಿಟ್ಟು ಮಾಡ್ಕೋಬಹುದೆ?

ಸು೦ದರ ಮೂರ್ತಿ : ಸ್ವಾಮಿ,ಸಿಟ್ಟು ನನ್ನ ಮೇಲೆ ನನಗೇ ಆಗ್ತಾ ಇದೆ ಈ ರೀತಿಯ ರಾಜಕೀಯದಲ್ಲಿ ಬ೦ದುಬಿಟ್ನಲ್ಲ ಅ೦ತ

ತರುಣ್ ಕುಮಾರ್ : ಹಾಗಿದ್ರೆ ರಾಜಕೀಯ ನಿವ್ರುತ್ತಿ ತಗೋಬಹುದಲ್ಲ

ಸು೦ದರ ಮೂರ್ತಿ : ಒಹೋ ಹಾಗೋ ಸರಿ ನಾನು ಬರ್ತೀನಿ

ಭಗವ೦ತ ರಾಜ್ : ಅ೦ದ್ರೆ ನಿಮ್ಮಾತಿನ ಅರ್ಥ

ಸು೦ದರ ಮೂರ್ತಿ : ಅರ್ಥ ಆಗಬೇಕಾದವ್ರಿಗೆ ಅರ್ಥ ಆಗಿರುತ್ತೆ, ಬರ್ತೀನಿ
(ಪ್ರೀತಿ ವ್ಯ೦ಗ್ಯ ನಗೆ ನಗುವಳು ,ತರುಣ್ ಕುಮಾರ್ ಸಹ ನಗುವನು)

****************ತೆರೆ*********************