ಸದಾಶಯ.....
ಈಗ್ಗೆ ಎರಡು ದಿನಗಳಿಂದ ಸಂಪದದಲ್ಲಿ ಮೂಡಿರುವ ಲೇಖನಗಳು ಮತ್ತು ಖಾರವಾದ ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ನನಗೆ ಈ ಲೇಖನವನ್ನು ಬರೆಯಲೇಬೇಕೆಂದು ಅನಿಸಿತು.
ಅಯೋಧ್ಯ ವಿವಾದವು ಹಲವಾರು ವರ್ಷಗಳಿಂದ ದೇಶದ ನಿದ್ದೆ ಕೆಡಿಸಿದ ಒಂದು ಗಂಭೀರ ಸಮಸ್ಯೆ. ಈ ಸಮಸ್ಯೆಗೆ ಒಂದು ಪರಿಹಾರದಂತೆ ಅಲಹಾಬಾದ್ ಮುಖ್ಯ ನ್ಯಾಯಾಲಯದ ತೀರ್ಪು ಬಂದಿತ್ತು. ಆದರೂ ಈ ಸಮಸ್ಯೆ ಬಗೆ ಹರಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇಲ್ಲಿ ಮುಖ್ಯವಾಗಿ ಧರ್ಮಕ್ಕೆ ಸಂಬಂಧಿಸಿದಂತೆ ನಿಜಕ್ಕೂ ಸಂಘರ್ಷವಿಲ್ಲ. ಯಾವುದೋ ಪಟ್ಟ ಭದ್ರ ಶಕ್ತಿಗಳು ತಮ್ಮ ಅಹಮ್ಮಿನ ಬೇಳೆ ಬೇಯಿಸಿಕೊಳ್ಳಲು ನಡೆಸುತ್ತಿರುವ ಹುನ್ನಾರ ಇದು ಎಂದು ಯಾರಿಗೂ ತಿಳಿಯದೆ ಇರಲಾರದು.
ಎಲ್ಲರಿಗೂ ತಿಳಿದಂತೆ, ಈ ಅಲಹಾಬಾದ್ ನ್ಯಾಯಾಲಯದ ತ್ರಿ ಸದಸ್ಯ ಪೀಠದಲ್ಲಿ, ಜಸ್ಟಿಸ್ಸ್ ಸುಧೀರ್ ಅಗರ್ವಾಲ್, ಜಸ್ಟಿಸ್ಸ್ ಡಿ.ವಿ. ಶರ್ಮಾ ಮತ್ತು ಜಸ್ಟಿಸ್ಸ್ ಸಿಬ್ಘತ್ ಉಲ್ಲಾ ಖಾನ್ ಇದ್ದರು. ಈ ತ್ರಿಸದಸ್ಯ ಪೀಠದಲ್ಲಿ, ಬಹುಮತದ ತೀರ್ಪು ಬಂದದ್ದು ಕೇವಲ ಜಸ್ಟಿಸ್ಸ್ ಅಗರ್ವಾಲ್ ಮತ್ತು ಜಸ್ಟಿಸ್ಸ್ ಸಿಬ್ಘತ್ ಉಲ್ಲಾ ಖಾನ್ ರವರಿಂದ. ಈ ತೀರ್ಪು ಬಂದ ಮರು ದಿನವೇ, ಜಸ್ಟಿಸ್ಸ್ ಖಾನ್ ರವರ ಸಂದರ್ಶನ, Times Of India ಪತ್ರಿಕೆಯಲ್ಲಿ ಬಂದಿತ್ತು. ಆ ಸಂದರ್ಶನದಲ್ಲಿ ಜಸ್ಟಿಸ್ಸ್ ಖಾನ್ ತಮ್ಮ ತೀರ್ಪು ಯಾವುದನ್ನು ಆಧರಿಸಿತ್ತು ಎಂಬುದನ್ನು ಉಲ್ಲೇಖಿಸಿದ್ದರು. ಅಲ್ಲದೇ ಅವರ ಮುಂದಿನ ಮಾತುಗಳು ಬಹು ಸ್ಪಷ್ಟವಾಗಿತ್ತು. " ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿ ನೋಡಿದಾಗ, ಭಾರತದಲ್ಲಿನ ಮುಸ್ಲಿಂ ಬಾಂಧವರು ನಿಜಕ್ಕೂ ಪುಣ್ಯ ಮಾಡಿರಬೇಕು. ಭಾರತ ದೇಶದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರು ಎಂದು ತಿಳಿದೂ ಅವರಿಗೆ ಎಲ್ಲ ಹಕ್ಕುಗಳನ್ನು ದೇಶ ನೀಡಿದೆ, ಅಲ್ಲದೇ ಅವರು ಎಲ್ಲರಂತೆಯೇ ಜೀವನ ನಡೆಸುತ್ತಿದ್ದಾರೆ. ಅವರಿಗೂ ಎಲ್ಲ ರೀತಿಯ ಅನುಕೂಲತೆಗಳಿವೆ. ಎಲ್ಲ ರೀತಿಯಲ್ಲಿಯೂ ಮುಸ್ಲಿಮರು ಇಲ್ಲಿ ಸಶಕ್ತರಾಗಿದ್ದಾರೆ. ಮುಸ್ಲಿಂ ರಾಷ್ಟ್ರಗಳಲ್ಲಿ ಮುಸ್ಲಿಮರೆ ಬಹುಸಂಖ್ಯಾತರಾದ್ದರಿಂದ, ಅವರಿಗೆ ಎಲ್ಲ ವಿಧವಾದ ಸವಲತ್ತುಗಳಿವೆ. ಆದರೆ ಮುಸ್ಲಿಮೇತರ ರಾಷ್ಟ್ರಗಳಲ್ಲಿನ ಮುಸ್ಲಿಂ ಬಾಂಧವರ ಯಾತನೆ ಹೇಳತೀರದು. ಅಲ್ಲಿ ಅವರು ಸಾಮಾಜಿಕ ನ್ಯಾಯಕ್ಕಾಗಿಯೂ ಹೋರಾಟ ನಡೆಸುವ ಪರಿಸ್ಥಿತಿ ಇದೆ. ಆದರೆ ಭಾರತದಲ್ಲಿ, ಶಾಲೆಗಳಲ್ಲಿನ ಸೀಟುಗಳಿಂದ ಮೊದಲಾಗಿ ದೇಶದಲ್ಲಿನ ಜನರನ್ನು ಪ್ರತಿನಿಧಿಸುವ ಸಂಸತ್ವರೆಗೂ ನಮಗಾಗಿ ಮೀಸಲಾತಿ ಇದೆ. ಇನ್ನಾದರೂ ಮುಸ್ಲಿಂ ಬಾಂಧವರು ವಿಶ್ವಕ್ಕೆ ಮುಸ್ಲಿಂ ಯಾವ ಸಂದೇಶವನ್ನು ನೀಡ ಬಯಸುತ್ತದೆ ಎಂದು ಸ್ಪಷ್ಟಪಡಿಸಬೇಕಿದೆ" ಎಂದು ಕೇಳಿದ್ದಾರೆ.
ಇಷ್ಟೆಲ್ಲಾ ಹೋರಾಟದ ನಡುವೆಯೂ ಹಿಂದೂ ಮುಸ್ಲಿಂ ಭಾವೈಕ್ಯದ ಉದಾಹರಣೆಗಳು ನಮ್ಮ ಕರ್ನಾಟಕದಲ್ಲೇ ಬಹಳಷ್ಟಿವೆ. ಇಲ್ಲಿ ಯಾರಿಗೇ ಅನ್ಯಾಯವಾದರೂ ನಮ್ಮ ನ್ಯಾಯಾಲಯಗಳು ಅವರ ಪರವಾಗಿವೆ ಎಂಬುದನ್ನು ನಾವು ಮನಗಾಣಬೇಕಿದೆ. ಕೇವಲ ಒಂದು ಜಾತಿ ಅಥವಾ ಜನಾಂಗಕ್ಕಾಗಿ ಮಾತ್ರ ನಮ್ಮ ನ್ಯಾಯಾಲಯಗಳಿಲ್ಲ, ಅನ್ಯಾಯವಾದರೆ ಅನ್ಯಾಯದ ವಿರುದ್ಧ, ಆ ವ್ಯಕ್ತಿಯ ವಿರುದ್ಧ ನಮ್ಮ ಹೋರಾಟವೇ ಹೊರತು ಆ ವ್ಯಕ್ತಿಯ ಜಾತಿಯ ಮೇಲಲ್ಲ.
ಎಲ್ಲ ಜಾತಿಯಲ್ಲೂ ಒಳ್ಳೆಯವರೂ ಇರುತ್ತಾರೆ ಅಂತೆಯೇ ಕೆಟ್ಟವರೂ ಇರುತ್ತಾರೆ. ಆದ್ದರಿಂದ ನಮ್ಮೆಲ್ಲ ಹೋರಾಟವನ್ನು ಅನ್ಯಾಯದ ವಿರುದ್ಧ ಕೇಂದ್ರೀಕರಿಸೋಣ. ಎಲ್ಲರೂ ಒಂದಾಗಿ ನೆಮ್ಮದಿಯಿಂದ ಬಾಳೋಣ ಎಂಬುದೇ ಈ ಲೇಖನದ ಆಶಯ.