ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..

ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..

ಬರಹ

ಆಹಾರ ಹುಡುಕಿಕೊಂಡು ನಾಡಿಗೆ ಬಂದ ಮೂರು ಕರಡಿಗಳು ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಾಗಡಿ ತಾಲ್ಲೂಕು ದೊಡ್ಡೇರಿ ಗ್ರಾಮದಲ್ಲಿ ಜರುಗಿರುವುದಾಗಿ ಮಾಧ್ಯಮಗಳಲ್ಲಿ ಇಂದು ಅತ್ಯಂತ ಚಿಕ್ಕ ಸುದ್ದಿಯಾಗಿ ವರದಿಯಾಗಿದೆ. ಚಿಕ್ಕದಾದರೂ ಕರಡಿ ಬಗ್ಗೆ ಕಳಕಳಿಯಿಂದ ಕೆಲ ಮಾಧ್ಯಮಗಳಾದರೂ ಜವಾಬ್ದಾರಿಯಿಂದ ಸುದ್ದಿ ಮಾಡಿವೆ ಎಂಬುದೇ ಸಮಾಧಾನ.

ಸ್ಥಳೀಯರ ಪ್ರಕಾರ ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದ ಮೂರು ಕರಡಿಗಳು ಗ್ರಾಮದ ಹೊರವಲಯದಲ್ಲಿದ್ದ ಬಾವಿಗೆ ಕತ್ತಲಲ್ಲಿ ಆಕಸ್ಮಿಕವಾಗಿ ಬಿದ್ದು ಸತ್ತಿವೆ. ದನ ಕಾಯಲು ಆ ಪ್ರದೇಶಕ್ಕೆ ಹೋಗಿದ್ದ ಗ್ರಾಮದ ಕೆಲವರು ಬಾವಿಯಿಂದ ಬರುತ್ತಿದ್ದ ದುರ್ವಾಸನೆಯನ್ನು ಪತ್ತೆ ಹಚ್ಚಿ, ಕರಡಿಗಳು ಮೃತಪಟ್ಟಿರುವುದನ್ನು ಗುರುತಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಈ ಕರಡಿಗಳು ಸತ್ತು ೩ ದಿನಗಳಾಗಿವೆ ಎಂದು ಶಂಕಿಸಲಾಗಿದೆ.

ಸುಮಾರು ನಾಲ್ಕು ವರ್ಷಗಳ ಕೆಳಗೆ ಇರಬಹುದು. ಪ್ರಜಾವಾಣಿ ದಿನಪತ್ರಿಕೆಯ ‘ಕರ್ನಾಟಕ ದರ್ಶನ’ ಪುರವಣಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ನಾಗೇಶ ಹೆಗ್ಗಡೆ (ನನ್ನ ವೃತ್ತಿ ಹಾಗು ವಿದ್ಯಾ ಗುರುಗಳು ಎಂದು ಸೂಚ್ಯವಾಗಿ ಹೇಳಬಹುದು) ನನ್ನಂತಹ ನೂರಾರು ಬರಹಗಾರರಿಗೆ ಜೀವದಾಯಿಯಾಗಿದ್ದರು. ಬಹುಶ: ನನ್ನ ಜಾಯಮಾನದ ಒಂದು ಪೀಳಿಗೆಯನ್ನೇ ಕಟ್ಟುತ್ತ ಹರ್ಷಿಸಿದ ಮಹನೀಯ ಅವರು. ಹಾಗೆ ಅವರು ಕೊಟ್ಟ ಕೆಲ ‘ಅಸೈನ್ ಮೆಂಟ್’ ಗಳಲ್ಲಿ ಧರೋಜಿ ಕರಡಿ ಧಾಮದ ಭೇಟಿಯೂ ಸೇರಿದೆ. ಆ ಅನುಭವ ಹಾಗು ಅವರು ತಿದ್ದಿ, ಪೋಷಿಸಿದ ನುಡಿಚಿತ್ರದಲ್ಲಿ ಅಗಾಧವಾದ ಅವರ (ನನ್ನದಲ್ಲ!) ಕರಡಿ ಪ್ರೀತಿ ವ್ಯಕ್ತವಾಗಿದೆ.

‘ನಾವೊಂದು ವಿಲಕ್ಷಣ ಹೊಲದಲ್ಲಿ ಕಾಲಿರಿಸಿದ್ದೆವು. ಅಲ್ಲಿ ಮೆಕ್ಕೆ ಜೋಳ ಬೆಳೆದಿತ್ತು. ಗಜ್ಜರಿ, ಬೀಟ್ರೂಟ್, ಬಟಾಟೆಯ ಸಸಿಗಳಿದ್ದವು. ಸಂಜೆಯ ಇಳಿ ಬಿಸಿಲಿನಲ್ಲಿ ಸೂರ್ಯಕಾಂತಿ ಮಿನುಗುತ್ತಿತ್ತು. ಬೆರ್ಚಪ್ಪ ಮಾತ್ರ ಎಲ್ಲಿ ತಿರುಗಾಟಕ್ಕೆ ಹೋಗಿದ್ದನೋ? ಈ ಹೊಲ ಮಾತ್ರ ಮನುಷ್ಯರಿಗಾಗಿ ಅಲ್ಲ! ಸಾಕು ಪ್ರಾಣಿಗಳಿಗೂ ಅಲ್ಲ; ಇಲ್ಲಿನ ಫಸಲು ಕರಡಿಗಳಿಗೆ ಮಾತ್ರ, ಮೀಸಲು. ಗೀಜಗ, ಕಾಜಾಣ, ಗೂಬೆ, ನವಿಲುಗಳಿಗೂ ಇಲ್ಲಿ ಪಾಲಿದೆ. ಧೈರ್ಯ ಇದ್ದರೆ ಮೊಲ, ನರಿ, ಮಂಗಗಳೂ ಬಂದು ತಿಂದು ಹೋಗಬಹುದು. ಮನುಷ್ಯ ಮಾತ್ರ ಇಲ್ಲಿ ಏನನ್ನೂ ಕೀಳುವ ಹಾಗಿಲ್ಲ’.

‘ಎಂಥಾ ಉಲ್ಟಾ ಜಗತ್ತು ನೋಡಿ!’

-ಹೊಸಪೇಟೆ ಬಳಿಯ ದೇಶದ ಏಕೈಕ ಕರಡಿ ಧಾಮದ ಬಗ್ಗೆ ಅವರ ಮೂಸೆಯಲ್ಲಿ ಮೂಡಿಬಂದ ನುಡಿಚಿತ್ರ. ಬರೆದವರ ಹೆಸರು ಮರೆತಿದೆ. ಆದರೆ ಓದಿದ್ದು ಮಾತ್ರ ನೆನಪಿದೆ. ಅದಿರಲಿ. ದೊಡ್ಡೇರಿ ಗ್ರಾಮದ ೩ ಕರಡಿಗಳ ಸಾವು ಈ ಲೇಖನವನ್ನು ನನಗೆ ನೆನಪಿಸಿತು. ಹಾಗಾದರೆ ಆ ಭಾಗದಲ್ಲಿ ಈ ಕೆಳಗಿನಂತೆ ಪರಿಹಾರ ಕೈಗೊಳ್ಳಲು ಸಾಧ್ಯವೇ? ಯೋಚಿಸಬಹುದು. ಪ್ರಯತ್ನಿಸಿಯೂ ನೋಡಬಹುದು.

ಈ ಪ್ರಯೋಗ ಓದಿ..ಸಾಧ್ಯವಾದರೆ ಒಮ್ಮೆ ನೋಡಿ ಬನ್ನಿ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಇತ್ತೀಚೆಗೆ ಪಕ್ಷಿ ಸಂಕುಲಕ್ಕಾಗಿ ಮೀಸಲಿರಿಸಿ ನಿರ್ಮಿಸಲಾದ ‘ಚಿನ್ನದ ಬೆಳಸು’ ಹಣ್ಣಿನ ತೋಟವನ್ನು ಮಂಜೇಶ್ವರದ ಸಾವಯವ ಕೃಷಿ ತಜ್ನ ಡಾ.ಡಿ.ಸಿ.ಚೌಟ ಉದ್ಘಾಟಿಸಿದ್ದಾರೆ. ೪ ಎಕರೆ ಜಮೀನಿನಲ್ಲಿ ೧೨ ವಿಧದ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದ್ದು, ಈ ತೋಟದಲ್ಲಿ ಬೆಳೆದ ಹಣ್ಣುಗಳೆಲ್ಲ ಪಕ್ಷಿಗಳ ಆಹಾರಕ್ಕಾಗಿಯೇ ಬಳಕೆಯಾಗಲಿವೆ!

ದಾಳಿಂಬೆ, ಅಂಜೂರು, ಸೀತಾಫಲ, ಮಾವು, ಚೆರ್ರಿ, ನಿಂಬೆಹಣ್ಣು, ಬಾಳೆಗಿಡ ಮತ್ತು ಬಾರಿ ಹಣ್ಣಿನ ಗಿಡಗಳು ಸೇರಿದಂತೆ ಇತರೆ ಗಿಡಗಳನ್ನು ಬೆಳೆಸಲಾಗುತ್ತಿದೆ. ಯಾವುದೇ ರಾಸಾಯನಿಕ ಗೊಬ್ಬರವಾಗಲಿ ಮತ್ತು ಔಷಧಗಳನ್ನಾಗಲಿ ಬಳಸದೇ ಕೇವಲ ಜೈವಿಕ ಮತ್ತು ಸಾವಯವ ಗೊಬ್ಬರ ಮಾತ್ರ ಬಳಸಿ, ಬೆಳೆಸಿದ ಈ ಹಣ್ಣಿನ ತೋಟದ ಹಣ್ಣುಗಳನ್ನು ಮಾರಾಟ ಮಾಡಲಾಗುವುದಿಲ್ಲ. ಜೀವ ಸಂಕುಲದ ರಕ್ಷಣೆಗಾಗಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಪಕ್ಷಿಗಳನ್ನು ಆಕರ್ಷಿಸಲು ಈ ತೋಟ ನೆಡಲಾಗಿದೆ.

ಈ ತೋಟದ ಪಕ್ಕದಲ್ಲಿಯೇ ಒಂದು ಸಣ್ಣ ಕಾಲುವೆ ಹರಿಯುತ್ತಿದ್ದು ಇಲ್ಲಿಗೆ ಆಹಾರಕ್ಕಾಗಿ ಬರುವ ಪಕ್ಷಿಗಳಿಗೆ ನೀರು ಕುಡಿಯಲು ಸಹ ಅನುಕೂಲವಿದೆ. ಹಣ್ಣಿನ ಗಿಡಗಳನ್ನು ಬೆಳೆಸಲು ಕೊಳವೆ ಬಾವಿ ಹಾಕಿಸದೇ ಕೇವಲ ಒಂದು ಬಾವಿಯನ್ನು ತೋಡಲಾಗಿದೆ. ಈ ಬಾವಿಯಿಂದಲೇ ಗಿಡಗಳಿಗೆ ನೀರು ಹರಿಸಲಾಗುತ್ತಿದೆ. ವಿಶ್ವವಿದ್ಯಾಲಯದ ೭ ಜನ ಸಿಬ್ಬಂದಿ ತೋಟದ ಉಸ್ತುವಾರಿಗಿದ್ದಾರೆ.

ಖ್ಯಾತ ಗ್ರಾಹಕ ತಜ್ಞ, ಪರಿಸರವಾದಿ ಅಡ್ಡೂರು ಕೃಷ್ಣರಾವ್ ದಾಖಲಿಸುವಂತೆ- ಅನೇಕ ನಿರಾಶಾದಾಯಕ ಪ್ರಕರಣಗಳ ನಡುವೆಯೂ ಕೆಲ ಆಶಾದಾಯಕ ಸುದ್ದಿಗಳು ಹಕ್ಕಿಗಳ ಉಳಿವಿನ ಬಗ್ಗೆ ಭರವಸೆ ಮೂಡಿಸುತ್ತವೆ. ಉದಾಹರಣೆಗೆ ಮುಂಬೈದಂತಹ ನಗರಗಳಲ್ಲಿ ಪಾರಿವಾಳಗಳಿಗೆ ಕಾಳು ಎಸೆಯುವುದು ಹಲವರ ನಿತ್ಯದ ಪರಿಪಾಠವಾಗಿದೆ. ದೂರದ ರಾಜಸ್ಥಾನದಲ್ಲಿ ಹಕ್ಕಿಗಳ ಬದುಕುವ ಹಕ್ಕಿನ ರಕ್ಷಣೆಗಾಗಿ ಹಳ್ಳಿಗರು ಸದ್ದಿಲ್ಲದೇ ಕಾರ್ಯವೆಸಗುತ್ತಿದ್ದಾರೆ. ಅಲ್ಲಿಯ ಲಾಪೋಡಿಯಾ (ಅರ್ಥಾತ್ ಗುಜರಾತಿಯಲ್ಲಿ ‘ಹುಚ್ಚರ ಹಳ್ಳಿ’) ಹಾಗು ಸುತ್ತ ಮುತ್ತಲಿನ ೭೦೦ ಹಳ್ಳಿಗಳಲ್ಲಿ ಲಕ್ಶ್ಮಣಸಿಂಗರ ಮುಂದಾಳುತ್ವದಲ್ಲಿ ಕಳೆದೊಂದು ದಶಕದಿಂದ ಜಲ ಸಂರಕ್ಷಣೆಯ ಕೆಲಸ ಸಹ ಪ್ರಚಾರವಿಲ್ಲದೇ ಸಾಗಿ ಬಂದಿದೆ.

ನೆಲ-ಜಲ ಸಂರಕ್ಷಣೆಯ ತಜ್ಞ ಶ್ರೀ ಪಡ್ರೆ ಅವರ ಪ್ರಕಾರ- ಲಾಪೋಡಿಯಾ ಹಾಗು ಇತರೆ ಹಳ್ಳಿಗಳಲ್ಲಿ ಹಲವಾರು ಕೆರೆಗಳಿಗೆ ಮರುಜೀವ ನೀಡಲಾಗಿದೆ. ತುಂಬಿನಿಂತ ಕೆರೆಗಳ ನೀರಿನಲ್ಲಿ ಹಕ್ಕಿಗಳಿಗೂ ಪಾಲಿದೆ ತಾನೆ? ಅಲ್ಲಿನ ಜನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬೇಸಿಗೆಯಲ್ಲಿ ಹಕ್ಕಿಗಳಿಗೆ ಹಣ್ಣು, ಕಾಳು ಎಲ್ಲಿಂದ ಸಿಗಬೇಕು? ಅದಕ್ಕಾಗಿಯೇ ಅವರು ಹಕ್ಕಿಗಳಿಗಾಗಿಯೇ ಒಂದು ಗೋದಾಮು ಸ್ಥಾಪಿಸಿದ್ದಾರೆ. ಪ್ರತಿಯೊಂದು ಕುಟುಂಬವೂ ತನ್ನ ಬೆಳೆ ಕೊಯ್ದ ನಂತರ ಐದೈದು ಕಿಲೋ ಕಾಳು ದೇಣಿಗೆ ನೀಡಬೇಕು. ಇದು ಹಕ್ಕಿಗಳಿಗೆ ಮೀಸಲು!

ರಾಮನಗರದ ಮಾಗಡಿ ತಾಲ್ಲೂಕಿನ ದೊಡ್ಡೇರಿ ಗ್ರಾಮದಲ್ಲಿ ಕರಡಿಗಳ ಉಳಿವಿಗಾಗಿ ಸ್ಥಳೀಯರ ಸಹಭಾಗಿತ್ವದಲ್ಲಿ ಅರಣ್ಯ ಇಲಾಖೆ ಇಂತಹ ಪ್ರಯೋಗಗಳಿಗೆ ಮುಂದಾಗಲಿ ಎಂಬುದೇ ನನ್ನ ಆಶಯ. ಸದಾಶಯವೂ ಇಷ್ಟೇ..ಇನ್ನೊಮ್ಮೆ ಈ ಆಘಾತಕಾರಿ ಘಟನೆ ಅಲ್ಲಿ, ಸುತ್ತಮುತ್ತಲು ಅಥವಾ ಎಲ್ಲಿಯೂ ಮರುಕಳಿಸದಿರಲಿ.