ಸಮುದ್ರದಾಳದ ಬುದ್ಧಿವಂತ ರೋಚಕ ಜೀವಿ-ಆಕ್ಟೋಪಸ್

ಸಮುದ್ರದಾಳದ ಬುದ್ಧಿವಂತ ರೋಚಕ ಜೀವಿ-ಆಕ್ಟೋಪಸ್

ಅಷ್ಟಪದಿ ಅಥವಾ ಆಕ್ಟೋಪಸ್ ಎಂದರೆ ಎಲ್ಲರಿಗೂ ಒಂದು ಸೋಜಿಗದ ಸಂಗತಿಯೇ. ಏಕೆಂದರೆ ಆಕ್ಟೋಪಸ್ ಗಳನ್ನು ಕಣ್ಣಾರೆ ಕಂಡವರು ಕಮ್ಮಿ. ಅದರ ೮ ಬಾಹುಗಳು ಹಾಗೂ ಅದರ ಮೇಲಿರುವ ವರ್ಣರಂಜಿತ ಪದರಗಳನ್ನು ನೋಡಲು ಬಹು ಸೋಜಿಗ. ಚಿತ್ರಗಳಲ್ಲಿ ಅಥವಾ ಸಿನೆಮಾಗಳಲ್ಲಿ ಅದರ ೮ ಬಾಹುಗಳ ಮೇಲಿನ ಚಿತ್ರ ವಿಚಿತ್ರವಾದ ಪದರಗಳನ್ನು ನೋಡಿಯೇ ಇರುತ್ತೀರಿ. ಆಕ್ಟೋಪಸ್ ಬಗ್ಗೆ ಹಲವಾರು ಸ್ವಾರಸ್ಯಕರವಾದ ಸಂಗತಿಗಳು ಇವೆ. ಬನ್ನಿ ಕೆಲವನ್ನು ತಿಳಿದುಕೊಳ್ಳೋಣ.

ಆಕ್ಟೋಪಸ್ ಇದರ ವೈಜ್ಞಾನಿಕ ಹೆಸರು ಆಕ್ಟೋಪೋಡಾ. ಸೆಫಾಲೋಪೋಡಾ (Cephalopod) ವರ್ಗಕ್ಕೆ ಸೇರುತ್ತದೆ. ಇವುಗಳು ಮೃದ್ವಂಗಿಗಳ ವಿಭಾಗಕ್ಕೆ ಸೇರಿಸಲಾಗಿದೆ. ಮೀನುಗಳು ಮತ್ತು ಮೃದ್ವಂಗಿಗಳು ಬೇರೆ ಬೇರೆ ವಿಧಗಳು. ಆದುದರಿಂದ ಆಕ್ಟೋಪಸ್ ಗಳು ಮೀನಿನ ಜಾತಿಗೆ ಸೇರುವುದಿಲ್ಲ. ಸ್ಥಳೀಯವಾಗಿ ಬೊಂಡಾಸ್ (Squids) ಎಂದು ಕರೆಯಲ್ಪಡುವ ಸಮುದ್ರ ಜೀವಿಗಳೂ ಇದೇ ವರ್ಗಕ್ಕೆ ಸೇರಿದವುಗಳು. ಮೇಲ್ಮೈ ರಬ್ಬರ್ ತರಹ ಆಗಿರುತ್ತವೆ. ಸುಮಾರು ೩೦೦ ಜಾತಿಯ ಆಕ್ಟೋಪಸ್ ಜಾತಿಗಳನ್ನು ಗುರುತಿಸಲಾಗಿದ್ದು. ಕೆಲವು ತೀವ್ರವಾದ ವಿಷಕಾರಿಗಳೂ ಆಗಿವೆ. ಆಕ್ಟೋಪಸ್ ಗಳಿಗೆ ಎರಡು ಕಣ್ಣುಗಳು ಮತ್ತು ಕೊಕ್ಕಿನ ತರಹದ ಒಂದು ರಚನೆ ಇರುತ್ತದೆ. ಮಧ್ಯಭಾಗದಲ್ಲಿ ಬಾಯಿಯ ರಚನೆಯಿದ್ದು, ಅದರ ಸುತ್ತು ೮ ಬಾಹುಗಳು ಇರುತ್ತವೆ. ಬಾಹುಗಳನ್ನು ಯಾವುದೇ ರೀತಿಯಲ್ಲೂ ಬಾಗಿಸಲು ಸಾಧ್ಯವಿದ್ದು, ಅಷ್ಟಪದಿ ಇದರ ಸಹಾಯದಿಂದಲೇ ತನ್ನ ಆಹಾರವನ್ನು ಹಿಡಿದು ಬಾಯಿಯತ್ತ ತೆಗೆದುಕೊಂಡು ಹೋಗುತ್ತದೆ. ಆಕ್ಟೋಪಸ್ ಜೀವಿಯ ದೇಹದ ಒಳಗಡೆ ಬಹಳ ಸಂಕೀರ್ಣವಾದ ನರಮಂಡಲದ ರಚನೆ ಇದ್ದು, ಇದರ ದೃಷ್ಟಿ ಸಾಮರ್ಥ್ಯ ಬಹಳ ಚೆನ್ನಾಗಿರುತ್ತದೆ. ತನ್ನ ೮ ಬಾಹುಗಳ ಸಹಾಯದಿಂದ ಇದು ಚೆನ್ನಾಗಿ ನೀರಿನಲ್ಲಿ ಈಜುತ್ತದೆ. ಇದೊಂದು ಸಮುದ್ರದಾಳದ ಬುದ್ಧಿವಂತ ಜೀವಿ ಎಂದು ಪರಿಗಣಿತವಾಗಿದೆ.

ಆಕ್ಟೋಪಸ್ ಎಂಬುದು ಗ್ರೀಕ್ ಭಾಷೆಯ ಪದವಾಗಿದ್ದು ಆಕ್ಟೋ ಎಂದರೆ ಎಂಟು ಎಂದೂ ಪಸ್ ಎಂದರೆ ಬಾಹುಗಳು ಎಂದು ಅರ್ಥ ಕೊಡುತ್ತದೆ. ಇವುಗಳಿಗೆ ೩ ಹೃದಯಗಳಿರುತ್ತವೆ ಹಾಗೂ ಇದರ ರಕ್ತದ ಬಣ್ಣ ನೀಲಿಯಾಗಿರುತ್ತದೆ. ಇದು ಡೈನೋಸಾರಸ್ ಸಮಯಕ್ಕಿಂತಲೂ ಹಳೆಯ ಜೀವಿಯಾಗಿದೆ. ವಾತಾವರಣಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಗುಣವನ್ನೂ ಇದು ಹೊಂದಿದೆ. ಮೂಳೆಗಳಿಲ್ಲದ ಮೈ ರಚನೆಯಾಗಿರುವುದರಿಂದ ಆಕ್ಟೋಪಸ್ ತನ್ನ ದೇಹವನ್ನು ಸಂಕುಚಿಸಿ ಅಥವಾ ಹಿಗ್ಗಿಸಿಕೊಳ್ಳ ಬಲ್ಲದು. ಇದರ ಬಾಹುಗಳಲ್ಲಿ ರಂಧ್ರದಂತಹ ಹೀರು ರಚನೆಗಳು ಇರುವುದರಿಂದ ಇದು ವಾಸನೆಯನ್ನೂ ಗ್ರಹಿಸುವ ಶಕ್ತಿ ಹೊಂದಿದೆ. ಅಚ್ಚರಿಯ ಸಂಗತಿಯೆಂದರೆ ಏನಾದರೂ ಅವಘಡಕ್ಕೆ ತುತ್ತಾಗಿ ಇದರ ದೇಹದ ಯಾವುದಾದರೂ ಭಾಗ ಕತ್ತರಿಸಿಹೋದರೆ, ಅದು ಮತ್ತೆ ಬೆಳೆಯುತ್ತದೆ. 

ಗಂಡು ಹಾಗೂ ಹೆಣ್ಣು ಆಕ್ಟೋಪಸ್ ಗಳು ತಮ್ಮ ಜೀವನದಲ್ಲಿ ಒಮ್ಮೆ ಮಾತ್ರ ಲೈಂಗಿಕ ಸಂಪರ್ಕ ಮಾಡುತ್ತವೆ. ಲೈಂಗಿಕ ಸಂಪರ್ಕದ ನಂತರ ಗಂಡು ಬಳಲಿಕೆಯಿಂದ ಸತ್ತು ಹೋಗುತ್ತದೆ. ಸುಮಾರು ಒಂದು ವಾರದ ಅವಧಿಯಲ್ಲಿ ಹೆಣ್ಣು ಆಕ್ಟೋಪಸ್ ಒಂದು ಲಕ್ಷಕ್ಕೂ ಅಧಿಕ ಮೊಟ್ಟೆಗಳನ್ನು ಇರಿಸುತ್ತದೆ. ಮೊಟ್ಟೆ ಇರಿಸಿದ ಬಳಿಕ ಅವುಗಳನ್ನು ರಕ್ಷಿಸುವ ಸಲುವಾಗಿ ಆಹಾರವನ್ನು ಅರಸದೇ ಮೊಟ್ಟೆಗಳ ಬಳಿಯೇ ಇರುವುದರಿಂದ ಹಸಿವಿನಿಂದ ಹೆಣ್ಣು ಅಕ್ಟೋಪಸ್ ಕೂಡಾ ಸತ್ತು ಹೋಗುತ್ತದೆ. ಆಕ್ಟೋಪಸ್ ಮೊಟ್ಟೆ ಸುಮಾರು ೧೦೦ ದಿನಗಳ ನಂತರ ಒಡೆದು ಹೊರಗೆ ಬರುವಾಗ ಅದರ ತಂದೆ ತಾಯಿ ಇಬ್ಬರೂ ಸತ್ತುಹೋಗಿರುತ್ತಾರೆ ಎಂಬುದು ಈ ಸೃಷ್ಟಿಯ ವೈಚಿತ್ರ. ಲಕ್ಷಕ್ಕಿಂತಲೂ ಅಧಿಕ ಮೊಟ್ಟೆ ಇರಿಸಿದರೂ ಅದರಿಂದ ಹೊರಬರುವ ಮರಿಗಳು ಕೆಲವು ಸಾವಿರದಷ್ಟು ಮಾತ್ರ. ಅವುಗಳಲ್ಲೂ ಹಲವಾರು ಸಮುದ್ರದ ಜೀವಿಗಳ ಬಾಯಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತವೆ. ಪ್ರಾಣ ಉಳಿಸಿಕೊಂಡ ಕೆಲವೇ ಕೆಲವು ಮಾತ್ರ ಬೆಳೆದು ದೊಡ್ಡದಾಗುತ್ತವೆ.

ಫೆಸಿಫಿಕ್ ಮಹಾಸಾಗರದಲ್ಲಿರುವ ದೈತ್ಯ ಆಕ್ಟೋಪಸ್ ಗೆ ೩ ಹೃದಯ ಹಾಗೂ ೯ ಮೆದುಳು ಇದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ದೇಹದ ಮಧ್ಯಭಾಗದಲ್ಲಿ ಒಂದು ಮೆದುಳು ಇದ್ದು, ಇದು ಇಡೀ ದೇಹದ ನರಮಂಡಲವನ್ನು ನಿಯಂತ್ರಿಸುತ್ತದೆ. ಉಳಿದ ಎಂಟು ಮೆದುಳುಗಳು ಅದರ ೮ ಬಾಹುವಿನಲ್ಲಿದ್ದು ಅದರ ಚಲನೆಯನ್ನು ನಿಯಂತ್ರಿಸುತ್ತದೆ ಎನ್ನುತ್ತಾರೆ. 

ಬಹುತೇಕ ಆಕ್ಟೋಪಸ್ ಗಳು ವಿಷಕಾರಿಯಾಗಿದ್ದು, ಅದರಲ್ಲೂ ಕೆಲವು ಪ್ರಕಾರಗಳು ಮಾನವನ್ನು ಕೊಲ್ಲುವಷ್ಟು ವಿಷ ಹೊಂದಿರುತ್ತವೆ. ಅದರಲ್ಲೂ ಬೃಹತ್ ನೀಲಿ ಉಂಗುರ ಆಕ್ಟೋಪಸ್ ಗಳು ಒಂದು ಸಲಕ್ಕೇ ಹತ್ತು ಮನುಷ್ಯರನ್ನು ಕೊಲ್ಲುವಷ್ಟು ವಿಷಕಾರಿಯಾಗಿದೆ ಎಂದು ವರದಿಗಳು ಹೇಳುತ್ತವೆ. ಆಕ್ಟೋಪಸ್ ಗಳಲ್ಲಿ ಕೆಲವು ವಿಷಕಾರಿ ಅಲ್ಲವಾದರೂ ಅವುಗಳನ್ನು ಮುಟ್ಟಿದಾಗ ನಮ್ಮ ಮೈಗೆ ಅಲರ್ಜಿಯಾಗುವ ಸಾಧ್ಯತೆ ಇದೆ. ಆಕ್ಟೋಪಸ್ ಸರಿಯಾಗಿ ಬೆಳೆದಾಗ ಸುಮಾರು ೧೫ ಕೆ.ಜಿ.ಗಳಷ್ಟು ತೂಕ ಹೊಂದಿರುತ್ತದೆ. ಆದರೆ ಸಂಶೋಧಕರಿಗೆ ಸಿಕ್ಕಿದ ಆಕ್ಟೋಪಸ್ ಪಳೆಯುಳಿಕೆಯನ್ನು ಗಮನಿಸಿದಾಗ ೭೧ ಕೆ.ಜಿ.ಯಷ್ಟು ತೂಕ ಹೊಂದುತ್ತದೆ ಎಂಬ ವಿವರಗಳು ದೊರೆಯುತ್ತವೆ. 

ಆಕ್ಟೋಪಸ್ ಜೀವಿ ತನ್ನ ಒಡಲೊಳಗೆ ಹಲವಾರು ಕೌತುಕಗಳನ್ನು ಅಡಗಿಸಿ ಇಟ್ಟುಕೊಂಡಿದೆ. ಹಲವಾರು ಬಾಲಿವುಡ್ ಚಿತ್ರಗಳಲ್ಲಿ ಆಕ್ಟೋಪಸ್ ಬಗ್ಗೆ ತಿಳಿಸಲಾಗಿದೆ. ಡಾ। ರಾಜ್ ಕುಮಾರ್ ನಟಿಸಿದ ‘ಒಂದು ಮುತ್ತಿನ ಕತೆ'ಯಲ್ಲೂ ಆಕ್ಟೋಪಸ್ ಬಗ್ಗೆ ವಿವರಗಳಿವೆ. ಕೆಲವು ದೇಶಗಳಲ್ಲಿ ಆಕ್ಟೋಪಸ್ ಗಳನ್ನು ಆಹಾರಕ್ಕೂ ಬಳಸುತ್ತಾರೆ. ವಿಷಕಾರಿಯಲ್ಲದ ಕೆಲವು ಜಾತಿಯ ಆಕ್ಟೋಪಸ್ ಗಳು ಮೀನುಗಳಂತೆ ಆಹಾರಕ್ಕಾಗಿ ಉಪಯೋಗಿಸುತ್ತಾರೆ.

ಏನಾದರಾಗಲಿ ಆಕ್ಟೋಪಸ್ ಎಂಬ ವಿಲಕ್ಷಣ ಜೀವಿಯ ಬದುಕು ಅತ್ಯಂತ ರೋಚಕ. ಬಿಡುವಾದಾಗ ಇವುಗಳ ಬಗ್ಗೆ ಓದಿ. ಮಕ್ಕಳಂತೂ ಆಕ್ಟೋಪಸ್ ಬಗ್ಗೆ ಉತ್ತಮ ಮಾಹಿತಿಯುಳ್ಳ ಚಲನ ಚಿತ್ರಗಳನ್ನು ನೋಡಲೇ ಬೇಕು. ನಮಗೆ ಇವುಗಳನ್ನು ಪ್ರತ್ಯಕ್ಷವಾಗಿ ನೋಡಲು ಸಿಗುವ ಸಾಧ್ಯತೆ ತುಂಬಾ ಅಪರೂಪ. ಆದರೆ ಇದನ್ನು ಚಿತ್ರಗಳಲ್ಲಿ, ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿ, ಅನಿಮಲ್ ಪ್ಲಾನೆಟ್ ನಂತಹ ಚಾನೆಲ್ ಗಳಲ್ಲಿ ವೀಕ್ಷಿಸುವುದು ನಮ್ಮ ಜ್ಞಾನಾಭಿವೃದ್ಧಿಗೆ ಬಹಳ ಅವಶ್ಯಕ. ಪೋಷಕರೂ ಈ ಬಗ್ಗೆ ಗಮನ ಹರಿಸಬೇಕಾಗಿದೆ. 

ಚಿತ್ರ: ಅಂತರ್ಜಾಲ ತಾಣ