ಸಶಸ್ತ್ರ ಕ್ರಾಂತಿಯ ಪಿತಾಮಹ- ವಾಸುದೇವ ಫಡ್ಕೆ
ವಾಸುದೇವ ಬಲವಂತ ಫಡ್ಕೆ ಎಂಬ ಹೆಸರು ಕೇಳುತ್ತಲೇ ಅಂದು ಬ್ರಿಟೀಷರ ಕೈಕಾಲುಗಳು ನಡಗುತ್ತಿದ್ದವು. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ದೇಶದ ರಾಜ ಮಹಾರಾಜರೆಲ್ಲರೂ ಆಂಗ್ಲರಿಗೆ ಶರಣಾಗಿ ಈ ದೇಶಕ್ಕೆ ದಾಸ್ಯದಿಂದ ಮುಕ್ತಿಯೇ ಸಿಗುವುದಿಲ್ಲವೇನೋ? ಎಂಬಂತಹ ವಿಷಮ ಪರಿಸ್ಥಿತಿಯಲ್ಲಿ ಭಾರತಮಾತೆಯನ್ನು ಆಂಗ್ಲರ ಸಂಕೋಲೆಯಿಂದ ಮುಕ್ತಿಗೊಳಿಸಲು, ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಕತ್ತಲೆಯನ್ನು ಪರಿಚಯಿಸಲು ಉದಯಿಸಿದ ಸೂರ್ಯನೇ ವಾಸುದೇವ ಬಲವಂತ ಫಡ್ಕೆ.
ಬ್ರಿಟೀಷರನ್ನು ಭಾರತದಿಂದ ಓಡಿಸಲು ಸಶಸ್ತ್ರ ಕ್ರಾಂತಿಯೇ ದಾರಿ ಎಂದು ನಂಬಿ, "ರಾಮೋಶಿ" ಎಂಬ ಗುಡ್ಡಗಾಡು ಜನಾಂಗದವರನ್ನು ಸಂಘಟಿಸಿ ಹೋರಾಡಿ ಆಂಗ್ಲರ ಎದೆಯಲ್ಲಿ ನಡುಕವನ್ನುಂಟು ಮಾಡುವ ಮೂಲಕ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ ವೀರ, ಬ್ರಿಟೀಷರ ದಬ್ಬಾಳಿಕೆಗೆ ಸೆಡ್ಡು ಹೊಡೆದ ಅಪ್ರತಿಮ ದೇಶಭಕ್ತ, ಸಶಸ್ತ್ರ ಕ್ರಾಂತಿಯ ಕಿಡಿ ಹಚ್ಚಿದ ಅಧಮ್ಯ ಕ್ರಾಂತಿಕಾರಿ "ವಾಸುದೇವ ಬಲವಂತ ಫಡ್ಕೆ"ಯವರ ಬಲಿದಾನದ ದಿನ ಫೆಬ್ರವರಿ ೧೭.
೧೮೪೫ರ ನವೆಂಬರ್ ೪ರಂದು ಜನಿಸಿದವರು ವಾಸುದೇವ ಫಡ್ಕೆ. ಇವರು ಹುಟ್ಟಿದ ಊರು ಈಗಿನ ಮಹಾರಾಷ್ಟ್ರದಲ್ಲಿರುವ ಪನ್ವೇಲ್ ತಾಲೂಕಿನ ಶಿರ್ದೋನ್ ಎಂಬ ಗ್ರಾಮ. ಬಾಲ್ಯದಿಂದಲೂ ಫಡ್ಕೆ ಅವರಿಗೆ ಕುಸ್ತಿ ಮೊದಲಾದ ದೈಹಿಕ ಕಸರತ್ತುಗಳನ್ನು ಮಾಡುವ ಕ್ರೀಡೆಗಳಲ್ಲಿ ಆಸಕ್ತಿ. ಈ ಕಾರಣದಿಂದಲೇ ಅವರು ತಮ್ಮ ಪ್ರೌಢ ಶಿಕ್ಷಣದ ಸಮಯದಲ್ಲೇ ಶಾಲೆಯನ್ನು ತ್ಯಜಿಸಿದರು. ವಯಸ್ಸು ಸಣ್ಣದಾದರೂ ಭಾರತದ ಸ್ವಾತಂತ್ರ್ಯಕಾಗಿ ಅವರ ಮನಸ್ಸು ಮಿಡಿಯುತ್ತಿತ್ತು. ಕ್ರಾಂತಿಯಿಂದ ಮಾತ್ರ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತದೆ ಎಂಬ ಬಲವಾದ ನಂಬಿಕೆ ಇವರಿಗೆ ಇತ್ತು. ಅದಕ್ಕಾಗಿ ವಿವಿಧ ಸ್ತರಗಳ ಜನರನ್ನು ಸಂಘಟಿಸಲು ಪ್ರಾರಂಭಿಸಿದರು.
ಪೂನಾಗೆ ತೆರಳಿ ಅಲ್ಲಿಯ ಮಿಲಿಟರಿ ಅಕೌಂಟ್ಸ್ ವಿಭಾಗದಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು. ಸುಮಾರು ೧೫ ವರ್ಷ ಅಲ್ಲಿ ದುಡಿದ ಇವರನ್ನು ಒಂದು ಘಟನೆಯು ಕೆಲಸ ಬಿಡುವಂತೆ ಮಾಡಿತು. ಫಡ್ಕೆಯವರ ತಾಯಿಯವರು ತುಂಬಾನೇ ಅಸ್ವಸ್ಥರಾಗಿದ್ದರು. ರಜೆಗಾಗಿ ಅರ್ಜಿ ಸಲ್ಲಿಸಿದರೂ ಮೇಲಧಿಕಾರಿಗಳು ಇವರ ರಜೆಯನ್ನು ಮಂಜೂರು ಮಾಡುವುದಿಲ್ಲ. ಈ ಕಾರಣದಿಂದ ತಾಯಿಯ ನಿಧನದ ಕೊನೆಯ ದಿನಗಳಲ್ಲಿ ಫಡ್ಕೆಯವರು ಅವರ ಸೇವೆ ಮಾಡುವುದರಿಂದ ವಂಚಿತರಾಗುತ್ತಾರೆ. ಈ ಘಟನೆ ಅವರಿಗೆ ತುಂಬಾನೇ ಬೇಸರ ತರುತ್ತದೆ. ಮಹದೇವ ಗೋವಿಂದ ರಾನಡೆಯವರ ಮಾತುಗಳಿಂದ ಪ್ರಭಾವಿತರಾಗುತ್ತಾರೆ. ಶಿಕ್ಷಣದಿಂದ ಸ್ವರಾಜ್ಯದ ಕನಸು ನನಸಾಗುವುದು ಖಂಡಿತ ಎಂಬ ಅರಿವು ಫಡ್ಕೆಯವರಿಗೆ ಆಗುತ್ತದೆ. ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ. ಪದವಿಯನ್ನು ಗಳಿಸುತ್ತಾರೆ. ಯುವಕರನ್ನು ಶಿಕ್ಷಣದತ್ತ ಸೆಳೆಯಲು ‘ಐಕ್ಯ ವರ್ಧಿನಿ ಸಭಾ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕುತ್ತಾರೆ.
೧೮೬೦ರಲ್ಲಿ ಸಮಾನ ಆಸಕ್ತ ವ್ಯಕ್ತಿಗಳಾದ ಲಕ್ಷ್ಮಣ ಇಂದುಪೂರ್ಕರ್ ಹಾಗೂ ವಾಮನ ಪ್ರಭಾಕರ ಭಾವೆ ಜೊತೆ ಸೇರಿ ಪೂನಾ ನೇಟಿವ್ ಸಂಸ್ಥೆ (Poona Native Institution-PNI) ಸ್ಥಾಪಿಸುತ್ತಾರೆ. ನಂತರದ ದಿನಗಳಲ್ಲಿ ಇದು ಮಹಾರಾಷ್ಟ್ರ ಶಿಕ್ಷಣ ಸೊಸೈಟಿ (Maharashtra Education Society -MES) ಎಂಬ ಹೆಸರನ್ನು ಪಡೆಯಿತು. ಇಂದು ಈ ಸಂಸ್ಥೆಯು ಸುಮಾರು ೭೭ ಶಿಕ್ಷಣ ಸಂಸ್ಥೆಗಳನ್ನು ಮಹಾರಾಷ್ಟ್ರ ರಾಜ್ಯದಲ್ಲಿ ನಡೆಸುತ್ತಿದೆ.
ಸ್ವಾತಂತ್ರ್ಯದ ಚಳುವಳಿಗಾಗಿ ಕ್ರಾಂತಿಕಾರಿಗಳ ಪಡೆಯನ್ನು ಕಟ್ಟುವತ್ತ ಫಡ್ಕೆಯವರು ಆಸಕ್ತಿ ತೋರಿಸುತ್ತಾರೆ. ಆದರೆ ವಿದ್ಯಾವಂತ ವ್ಯಕ್ತಿಗಳು ಇವರ ಈ ಆಸೆಗೆ ತಣ್ಣೀರು ಎರಚುತ್ತಾರೆ. ಆದುದರಿಂದ ಫಡ್ಕೆಯವರು ಗುಡ್ಡಗಾಡು ಜನಾಂಗವಾದ ‘ರಾಮೋಶಿ'ಯ ಜನರನ್ನು ತಮ್ಮ ಪಡೆಗೆ ಸೇರಿಸಿಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಕೊಲೀಸ್ , ಭಿಲ್ ಹಾಗೂ ಧಂಗ ಜನಾಂಗದವರು ಫಡ್ಕೆಯವರ ತಂಡವನ್ನು ಸೇರಿಕೊಳ್ಳುತ್ತಾರೆ. ನೋಡ ನೋಡುತ್ತಾ ಸುಮಾರು ೩೦೦ ಜನರ ಪಡೆ ತಯಾರಾಗುತ್ತದೆ. ಫಡ್ಕೆಯವರು ಖುದ್ದಾಗಿ ಬಂದೂಕು ಚಲಾಯಿಸುವುದು, ಕುದುರೆ ಸವಾರಿಯನ್ನು ಕಲಿಯುತ್ತಾರೆ. ತಂಡವನ್ನು ಇನ್ನಷ್ಟು ದೊಡ್ಡದು ಮಾಡುವ ಆಶೆ ಇದ್ದರೂ ಅವರ ಬಳಿ ಸಾಕಷ್ಟು ಹಣ ಇರುವುದಿಲ್ಲ. ಅದಕ್ಕಾಗಿ ಬ್ರಿಟೀಷ್ ಖಜಾನೆಯನ್ನು ಲೂಟಿ ಮಾಡುವ ಯೋಜನೆ ಮಾಡುತ್ತಾರೆ.
ತೆರಿಗೆಯನ್ನು ಸಂಗ್ರಹಿಸಿ ಇಟ್ಟಿದ್ದ ಜಾಗಕ್ಕೆ ಫಡ್ಕೆಯವರು ಆಕ್ರಮಣ ಮಾಡುತ್ತಾರೆ. ಸ್ವಲ್ಪ ಹಣವನ್ನು ದೋಚುತ್ತಾರೆ. ಆದರೆ ಈ ದರೋಡೆಯ ಪರಿಣಾಮವಾಗಿ ನಂತರದ ದಿನಗಳಲ್ಲಿ ಬ್ರಿಟೀಷರಿಂದ ಬಂಧನಕ್ಕೊಳಗಾಗುವುದನ್ನು ತಪ್ಪಿಸಲು ಊರೂರು ತಲೆ ತಪ್ಪಿಸಿಕೊಂಡು ತಿರುಗುತ್ತಾರೆ. ಅವರಿಗೆ ದೊರೆತ ಹಣವನ್ನು ಕ್ಷಾಮದಿಂದ ತತ್ತರಿಸುತ್ತಿದ್ದ ರೈತ ಕುಟುಂಬಗಳಿಗೆ ನೀಡುತ್ತಾರೆ. ಹೀಗೆ ಹತ್ತು ಹಲವಾರು ದರೋಡೆಗಳನ್ನು ಮಾಡಿದಾಗ ಬ್ರಿಟೀಷ್ ಸರಕಾರಕ್ಕೆ ಇವರು ತಲೆನೋವಾಗುತ್ತಾರೆ. ಅವರ ಸುಳಿವು ನೀಡಿದವರಿಗೆ ಬಹುಮಾನ ಘೋಷಣೆಯಾಗುತ್ತದೆ.
ಸಾಧನೆಯ ಶಿಖರವನ್ನೇರುವ ತವಕದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿದ್ದ ವಾಸುದೇವ್ ಕೆಲವು ವಿದ್ರೋಹಿಗಳ ದ್ರೋಹಕ್ಕೆ ಬಲಿಯಾಗಿ ಆಂಗ್ಲರ ಬಂಧನದ ಹಕ್ಕಿಯಾಗಿ ದಿನದಿನವೂ ಸ್ವಾತಂತ್ರ್ಯ ದಾಹದಿಂದ ಕೊರಗುತ್ತಾ 1883 ಫೆಬ್ರವರಿ 17 ರಂದು ಕೇವಲ 38 ವರ್ಷಕ್ಕೆ ಹುತಾತ್ಮರಾದರೂ, ಶತಮಾನಗಳ ಕಾಲ ಈ ನಾಡಿನ ದೇಶಭಕ್ತರಿಗೆ ಸ್ಪೂರ್ತಿಯ ಚಿಲುಮೆಯಾಗಿ, ಸಶಸ್ತ್ರ ಹೋರಾಟಕ್ಕೆ ಪ್ರೇರಕರಾಗಿದ್ದರು. ಇವರ ಸಾಹಸಗಾಥೆಯನ್ನು ಖ್ಯಾತ ಕವಿ, ಲೇಖಕ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಇವರು ತಮ್ಮ ಖ್ಯಾತ ಕಾದಂಬರಿ ‘ಆನಂದ ಮಠ'ದಲ್ಲಿ ಉಲ್ಲೇಖಿಸಿದ್ದಾರೆ. ೧೯೮೪ರಲ್ಲಿ ಭಾರತ ಸರಕಾರ ವಾಸುದೇವ ಬಲವಂತ ಫಡ್ಕೆ ಇವರ ಗೌರವಾರ್ಥ ಅಂಚೆ ಚೀಟಿಯನ್ನು ಹೊರತಂದಿದೆ. ೨೦೦೭ರಲ್ಲಿ ಇವರ ಹೆಸರಿನ ಒಂದು ಮರಾಠಿ ಚಲನ ಚಿತ್ರವೂ ಬಿಡುಗಡೆಯಾಗಿದೆ. ತನ್ಮೂಲಕ ಭಾರತದ ಸ್ವಾತಂತ್ರ್ಯಕ್ಕೆ ಕಾರಣೀಭೂತರಾದ ಸಶಸ್ತ್ರ ಕ್ರಾಂತಿಯ ಪಿತಾಮಹ ವಾಸುದೇವ ಬಲವಂತ ಫಡ್ಕೆಯವರ ಸ್ಮೃತಿ ದಿನದ ನಮನಗಳು.
ಚಿತ್ರ ಕೃಪೆ: ಅಂತರ್ಜಾಲ ತಾಣದಿಂದ