ಸಾಧನೆಯ ತಳಪಾಯ
ಶಿಸ್ತು ಮತ್ತು ಸಂಯಮ ಒಂದೇ ತಕ್ಕಡಿಯಲ್ಲಿ ತೂಗಿದರೆ ಎರಡೂ ಸಮಾನ ನಮ್ಮ ಬದುಕಿಗೆ ಎನ್ನಬಹುದು. ಶಿಸ್ತು ಎಂದರೆ ಒಂದು ನಿರ್ದಿಷ್ಟವಾಗಿ ನಿಯಂತ್ರಿಸಲಾದ ಕೆಲಸ, ಕ್ರಿಯೆ ಮತ್ತು ಸಮಾಜದ ನಿರೀಕ್ಷೆ. ನೈತಿಕತೆ, ಸದ್ಗುಣಗಳು, ಸಾಮಾಜಿಕ ನಡವಳಿಕೆಗಳು, ಕರ್ತವ್ಯಗಳು, ಉದ್ದೇಶಗಳು, ನಿಯಮಪಾಲನೆ, ಜೀವನದಲ್ಲಿ ಸಾಗುವ ನೇರ ಉತ್ತಮ ಹಾದಿ ಇವೆಲ್ಲವೂ ಶಿಸ್ತು, ಸಮಯ ಮತ್ತು ಸಂಯಮದ ಪರಿಣಾಮವಾಗಿ ಬಂದವುಗಳು. ನಮ್ಮನ್ನು ನಾವು ನಂಬುವುದು, ಅಂತಃಪ್ರಜ್ಞೆ, ಕಿರಿಕಿರಿಗೆ ಅಂಜದಿರುವುದು,ಮಾನಸಿಕ ಶಕ್ತಿ ಗಟ್ಟಿಯಾಗಿಸುವುದು, ಸರಳತೆ, ನೈಜತಾವರಣ, ಧನಾತ್ಮಕ ಚಿಂತನೆ, ಬದಲಾವಣೆಗೆ ಒಡ್ಡಿಕೊಳ್ಳುವುದು, ಇವೆಲ್ಲಾ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಲು ಶಿಸ್ತು ಮತ್ತು ಸಂಯಮವೇ ಅಡಿಪಾಯ.
ಅಸ್ವಾಭಾವಿಕ ಚಿಂತನೆಗಳು ನಮ್ಮ ಮಿದುಳನ್ನು ಹೊಕ್ಕಿತೆಂದರೆ, ಸದಾ ಚಿಂತೆಯಲ್ಲೇ ಮನಸ್ಸು ಮಿದುಳಿನ ಸುತ್ತ ರಿಂಗಣಿಸುತ್ತ ಇರುತ್ತದೆ. 'ನಾನು ಹೀಗೆ ಇರುವುದು, ಸ್ಥಿತಪ್ರಜ್ಞ' ಎಂದು ಆಲೋಚಿಸಿ ಶಿಸ್ತು ಮತ್ತು ತಾಳ್ಮೆ,ಸಮಯದ ಅರಿವು, ಸಂಯಮ, ನಿಯಂತ್ರಣ ವಿದ್ದಾಗ ಏನನ್ನಾದರೂ ಸಾಧಿಸಬಹುದು. ‘ಗುರಿಯಿಲ್ಲದ ಜೀವನ ನಾವಿಕನಿಲ್ಲದ ನಾವೆಯಂತೆ’ ಯದ್ವಾತದ್ವಾ ಆಗಬಹುದು.
ನಿತ್ಯ ಜೀವನದಲ್ಲಿ ಶಿಸ್ತು ಮತ್ತು ಸಂಯಮ ಎನ್ನುವ ಎರಡು ಮಹಾ ಅಸ್ತ್ರಗಳು ನಮ್ಮ ಬತ್ತಳಿಕೆಯಲ್ಲಿರುವ ಅಮೂಲ್ಯ ರತ್ನಗಳು. ಸಮಯ ಸಂದರ್ಭಕ್ಕೆ ಸರಿಯಾಗಿ ಅದನ್ನು ಉಪಯೋಗಿಸುವ ಚಾಕಚಕ್ಯತೆ ನಮ್ಮಲ್ಲಿದ್ದರೆ,ನಾವು ಬದುಕನ್ನು ಗೆದ್ದಂತೆಯೇ ಸರಿ.
ಮನೆಯಲ್ಲಿ ಅನೇಕ ಸಲ ಬೆಳಗಿನಿಂದ ರಾತ್ರಿಯವರೆಗೆ ಅನಪೇಕ್ಷಿತ ಘಟನೆಗಳು ನಡೆಯಬಹುದು. ಆಗ ಶಿಸ್ತು, ತಾಳ್ಮೆ, ಪ್ರಾಮಾಣಿಕತೆ ಇದ್ದರೆ ಯಾವುದೇ ದುರ್ಘಟನೆ ಹತ್ತಿರ ಸಹ ಬಾರದು. ಎಲ್ಲಿ ಸಸಾರ ಮಾಡಿ ಸಡಿಲ ಬಿಟ್ಟೆವೋ ಮನೆ ರಣರಂಗ. ಒಮ್ಮೆ ತಾಳತಪ್ಪಿದರೆ ಸರಿಪಡಿಸಲು ಕಷ್ಟವಿದೆ. ಇಬ್ಬರು ಜಗಳ ಮಾಡುವಾಗ ನಾವು ಸಹ ತಾಳ್ಮೆ ತಪ್ಪಿ ಪ್ರವೇಶಿಸಿ 'ಏನಕ್ಕೇನ ಪ್ರಕಾರೇಣ' ಆದೀತು. ಜೀವಹೋದ ಮೇಲೆಯೇ ಪ್ರಜ್ಞೆ ಇಳಿಯಬಹುದಷ್ಟೆ. ಹಾಗಾಗಿ ತಾಳ್ಮೆ, ಸಂಯಮ, ಶಿಸ್ತು ಅಳವಡಿಸಿ, ಬದುಕನ್ನು ಹಸನಾಗಿಸೋಣ.
ಕೆಲಸಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ತಾಳ್ಮೆ ತಪ್ಪಿ ರೇಗಿದರೆ, ಇದ್ದ ಕೆಲಸವೂ ಹೋಗಬಹುದು. ಸಿಟ್ಟು ನೆತ್ತಿಗೇರಿದಾಗ ಕಣ್ಣು ಮುಖ ಕಾಣದು. 'ಬಡವನ ಕೋಪ ದವಡೆಗೆ ಮೂಲ' ಆಗಬಹುದು. ನನ್ನ ತಂದೆಯವರು ಹೇಳುತ್ತಿದ್ದ ಒಂದು ವಿಚಾರ ನೆನಪಾಯಿತು. ಸುಮಾರು ೫೮ ವರ್ಷಗಳ ಹಿಂದೆ, ಓರ್ವರಿಗೆ ಮಹಾ ಸಿಟ್ಟಂತೆ, ಮರದ ಮಣೆಯ ಮೇಲೆ ಊಟಕ್ಕೆ ಕುಳಿತಿದ್ದರಂತೆ. ಊಟದಲ್ಲಿ ತಲೆಕೂದಲು ಸಿಕ್ಕಿತೆಂದು, ಕುಳಿತ ಮಣೆಯನ್ನು ತೆಗೆದು ಪತ್ನಿಯೆಡೆಗೆ ಸಿಟ್ಟಲ್ಲಿ ಎಸೆದರಂತೆ, ಪಟ್ ಎಂದು ಮಣೆ ಕೆನ್ನೆಗೆ ಬಡಿದು, ಡಬ್ ಎಂದು ಕೆಳಗೆ ಬಿದ್ದು ಮೂರ್ಛೆ ಹೋದ ಅವರ ಪತ್ನಿಯ ಉಸಿರೇ ನಿಂತು ಹೋಯಿತಂತೆ'. ಕೋಪದ ಕೈಗೆ ಬುದ್ಧಿ ಕೊಟ್ಟು ಅನಾಹುತ ಆಗೇ ಬಿಡ್ತು.
ಶಾಲೆಯಲ್ಲಿ ಸಿಟ್ಟು ಮಾಡಿದರೆ ಹೇಗೆ? ಅಲ್ಲಿ ಪ್ರೀತಿ, ಪ್ರೇಮದಿಂದ ತಿದ್ದಿಹೇಳಬೇಕು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಮೂಡಿಸಿ, ಮುಂದೆ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಬೆಳಿಗ್ಗೆ ಬೇಗನೆ ಏಳುವುದು, ನಿತ್ಯವಿಧಿಗಳನ್ನು ಸಮಯಕ್ಕೆ ಪೂರೈಸುವುದು, ದೇವರ ಸ್ಮರಣೆ, ಓದುವಿಕೆ, ಗುರುಹಿರಿಯರಿಗೆ ಗೌರವ ಕೊಡುವುದು ಎಲ್ಲದರಲ್ಲೂ ಶಿಸ್ತನ್ನು ಅಳವಡಿಸಿಕೊಂಡರೆ, ಅದುವೇ ಭದ್ರ ಬುನಾದಿ ಮಗುವಿನ ಜೀವನಕ್ಕೆ. 'ಹಾದಿ ತಪ್ಪಿದ ಮಗ ಬೀದಿ ವಾಸಕ್ಕೂ ಅಯೋಗ್ಯ'ಆಗದಂತೆ ನೋಡಿಕೊಳ್ಳುವುದು ಹೆತ್ತವರ ಕರ್ತವ್ಯ ಮತ್ತು ಜವಾಬ್ದಾರಿ.
ಗಿಡಕ್ಕೆ ನೀರು, ಗೊಬ್ಬರ, ಉತ್ತಮ ವಾತಾವರಣ ಬೆಳೆಯಲು ಬೇಕು. ಹಾಗೆಯೇ ಮಕ್ಕಳಿಗೆ ಸಹ. ಅಂದಿನ ಕೆಲಸ ಅಂದೇ ಮಾಡಿಸುವುದು, ಪಠ್ಯೇತರ ಚಟುವಟಿಕೆ, ಸಮಯದ ಸದ್ಭಳಕೆ, ಚಾಣಾಕ್ಷತೆ ಇವೆಲ್ಲ ಮೈಗೂಡಿಸಿಕೊಂಡಾಗ ಶಿಸ್ತು, ಸಂಯಮ ತಾನಾಗಿಯೇ ಮೂಡಿ, ವಿನಯವಂತ, ಶೀಲವಂತನಾಗಿ 'ಸಾಧನೆಯ ತಳಪಾಯ' ವನ್ನು ಗಟ್ಟಿಯಾಗಿಸಿ ಯಶಸ್ಸು ಸಾಧಿಸಬಹುದು. ಆಂತರಿಕ ಶಕ್ತಿ, ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಶಿಸ್ತು, ಸಂಯಮದಿಂದ ಬಾಳೋಣ.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ: ಇಂಟರ್ನೆಟ್ ತಾಣ