ಸುಡುವ ಮರುಭೂಮಿಯಲ್ಲಿ ಬೀಸಿದ ತಂಗಾಳಿ!

ಸುಡುವ ಮರುಭೂಮಿಯಲ್ಲಿ ಬೀಸಿದ ತಂಗಾಳಿ!

"Muhammad was the soul of kindness, and his influence was felt and never forgotten by those around him" - Diwan Chand Sharma, The Prophets of the East, Calcutta, 1935, p.22

ನಾಲ್ಕನೇ ಶತಮಾನದ ಪ್ರಾರಂಭ ಮತ್ತು ಮಧ್ಯಯುಗದಲ್ಲಿ ಅರೇಬಿಯಾದ ಯುದ್ಧಗ್ರಸ್ತ ಮರುಭೂಮಿಯು ರಕ್ತದಿಂದ ಜರ್ಜಿತಗೊಂಡಿತ್ತು. ಸಣ್ಣ ಪುಟ್ಟ ವಿಷಯಗಳಿಗೆ ಯುದ್ಧಗಳು ನಡೆಯುವ ಕಾರಣ ರಕ್ತದ ಝರಿಗಳು ತುಂಬಿ ಹರಿಯುತ್ತಿದ್ದವು; ಅಜ್ಞಾನತೆಯಿಂದ ಹೆಣ್ಣು ಮಕ್ಕಳನ್ನು ಜೀವಂತವಾಗಿ ದಫನಗೊಳಿಸಲಾಗುತಿತ್ತು. ಇನೊಂದೆಡೆ, ಐರೋಪ್ಯ ಖಂಡವು ಕ್ರೈಸ್ತ ಧರ್ಮವು ಸೀಸರಿಸಂ ಸಿದ್ಧಾಂತವನ್ನು ಒಪ್ಪಿಕೊಂಡು ಸೀಸರೈಸ್ ಧರ್ಮ ಆಗಿದ್ದರಿಂದ ಕ್ರೈಸ್ತ ಸಮುದಾಯವು ಅದರ ಕಟ್ಟುನಿಟ್ಟಿನಿಂದ ಬೇಸರಗೊಂಡಿತ್ತು. ಅದು ಸುಮಾರು ಮೂರು ಶತಮಾನಗಳ ಹಿಂದೆ ಕಲಿಸಲ್ಪಟ್ಟ ಶುದ್ಧ ಕ್ರೈಸ್ತ ಧರ್ಮವಾಗಿರಲಿಲ್ಲ; ಬದಲಿಗೆ, ಅದೊಂದು ಬಹುಮಟ್ಟಿಗೆ ಅಧ್ಯಾತ್ಮಿಕತೆ ಮತ್ತು ಸಂಭ್ರಮಾಚರಣೆಯನ್ನು ಕಡೆಗಣಿಸಿದ ತೀವ್ರವಾದ ರಾಜಕೀಯ ವಿಚಾರಧಾರೆಯಾಗಿತ್ತು!

ಇದರಿಂದ, ಸಮಗ್ರ ಮಾನವಕುಲವೇ ಅಜ್ಞಾನದ ಅಂಧಕಾರದಲ್ಲಿ ನರಳುತ್ತಿದ್ದಾಗ, ಜ್ಞಾನದ ದೀವಿಗೆಯಾಗಿ ಮನುಕುಲಕ್ಕೆ ಮಾದರಿಯಾದ ಪವಿತ್ರ ಪ್ರವಾದಿ (ಸ) ಅವರು ಮಾನವಕುಲಕ್ಕೆ ಕರುಣೆಯಾಗಿ ಜಗತ್ತಿಗೆ ಆಗಮಿಸಿದರು. ಅಜ್ಞಾನಕ್ಕೆ ಮತ್ತು ನಿಷ್ಕರುಣೆಗೆ ಕುಖ್ಯಾತಿ ಪಡೆದಿದ್ದ ಬಂಜರು ಮರುಭೂಮಿಯಲ್ಲಿ ಹುಟ್ಟಿದ ಮುಹಮ್ಮದ್ (ಸ) ಅವರು, ಅದೇ ನೆಲದ ಮೇಲೆ ಶಾಂತಿ-ಸೌಹಾರ್ದತೆಯನ್ನು ಸಫಲವಾಗಿ ಸ್ಥಾಪಿಸಿದರು.

ಪ್ರವಾದಿ (ಸ) ಅವರ ಧರ್ಮ ಬೋಧನೆಯ ಕೆಲವೇ ವರ್ಷಗಳಲ್ಲಿ, ಇದೆಲ್ಲವೂ ಕೊನೆಗಾಣಿತು; ಕ್ರಿ.ಶ. 650ರ ಹೊತ್ತಿಗೆ ಈ ಪ್ರಪಂಚದ ಒಂದು ದೊಡ್ಡ ಭಾಗವು ಮೊದಲು ಇದ್ದಕ್ಕಿಂತ ವಿಭಿನ್ನವಾದ ಪ್ರಪಂಚವಾಯಿತು. ಇದು ಮಾನವನ ಇತಿಹಾಸದ ಅತ್ಯಂತ ಗಮನಾರ್ಹ ಅಧ್ಯಾಯಗಳಲ್ಲಿ ಒಂದಾಗಿದೆ. ಈ ಅದ್ಭುತ ನಾಟಕೀಯ ಬದಲಾವಣೆಗೆ ಒಂದೇ ಒಂದು ಮುಖ್ಯ ಕಾರಣವಾಗಿದ್ದು ಒಬ್ಬ ವ್ಯಕ್ತಿಯ ಜೀವನವಾಗಿದೆ. ಅದು ಕರುಣೆಗೆ ಹೊಸ ಭಾಷೆಯನ್ನು ಪರಿಚಯಿಸಿದ ಮೆಕ್ಕಾದ ಪ್ರವಾದಿಯ ಶಾಂತಿಯ ಪ್ರಚಾರವಾಗಿತ್ತು. ಅವರ ನುಡಿ ಮತ್ತು ನಡೆಗಳ ಬೆರಳೆಣಿಕೆಯ ಉದಾಹರಣೆಗಳು ಅವರು ಶಾಂತಿಯ ಪ್ರತಿಪಾದಕರು ಎಂದು ಎತ್ತಿ ಹಿಡಿಯಲು ಸಾಧ್ಯವಾಗಿದೆ.

ಮುಹಮ್ಮದ್ (ಸ) ಅವರು ಜಗತ್ತಿನಾದ್ಯಂತ ರಾಜಕೀಯ ವ್ಯಾಪ್ತಿಯ ವಿಷಯದಲ್ಲಿ ಅಸಾಮಾನ್ಯವಾಗಿರಲಿಲ್ಲ; ಅವರು ಪ್ರಮುಖ ನಂಬಿಕೆಗಳ ಇತರ ಸಂಸ್ಥಾಪಕರಿಗಿಂತ ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯ ಮೇಲೆ, ಮತ್ತು ಸಾಮಾಜಿಕ ಯೋಗಕ್ಷೇಮದ ಮೇಲೆ ಮಹತ್ವದ ಪ್ರಭಾವ ಬೀರಿದರು. ಪ್ರವಾದಿ (ಸ) ಅವರ ಶಾಂತಿಯ ಪ್ರತಿಪಾದನೆಯೇ ಅವರನ್ನು ಜಗತ್ತಿನ ಅತ್ಯಂತ ಪ್ರಭಾವಿಶಾಲಿ ವ್ಯಕ್ತಿಯಾಗಿ ರೂಪುಗೊಳಿಸಿತು.

"ಧರ್ಮವನ್ನು ಸುಲಭಗೊಳಿಸಿರಿ; ಕಠಿಣಗೊಳಿಸದಿರಿ. ಸಾಂತ್ವನ ನೀಡಿರಿ; ದ್ವೇಷ ಉಂಟು ಮಾಡದಿರಿ" ಎಂದು ಅವರು ಬೋಧಿಸಿದರು; ತೀವ್ರವಾದನ್ನು ಅವರು ಎಂದಿಗೂ ಸಹಿಸಿರಲಿಲ್ಲ. "Beware of going to extremes in religious matters; For those who came before you were destroyed because of going to extremes in religious matters" ಎಂದು ಅವರು ತಮ್ಮ ಅನುಯಾಯಿಗಳಿಗೆ ಕಲಿಸಿಕೊಟ್ಟರು. ಕರುಣೆ ತೋರಿಸುವವರ ಮೇಲೆ ಪರಮ ಕರುಣಾಳುವಾದ ಅಲ್ಲಾಹನೂ ಕರುಣೆ ತೋರಿಸುವನು; ಭೂಮಿಯಲ್ಲಿರುವವರ ಮೇಲೆ ಕರುಣೆ ತೋರಿಸಿರಿ. ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರಿಸುವನು ಎಂದೂ ವಾಚಿಸಿದರು.

ಮನುಷ್ಯರೆಲ್ಲರೂ ಸಮಾನರು; ಆಡಂ ಮತ್ತು ಹವ್ವ ಅವರ ಸಂತತಿಗಳು. ಕರಿಯ ಬಿಳಿಯನೆನ್ನದೇ ಎಲ್ಲರನ್ನು ಒಂದೇ ಸಾಲಿನಲ್ಲಿ ನಿಲ್ಲಿಸಿ ಹೆಗಲಿಗೆ ಹೆಗಲನ್ನು ಹಚ್ಚಿ ನಮಾಝನ್ನು (ಮುಸ್ಲಿಮರ ಪ್ರಾರ್ಥನೆ) ನೆರವೇರಿಸಲು ಆದೇಶಿಸಿದರು. ಪ್ರವಾದಿ ಅವರು ಬಿಳಿ ವರ್ಣದ ಅರಬ್ ಆದರೂ, ಅವರು ಮೊತ್ತಮೊದಲ ಅಝಾನ್ (ಪ್ರಾರ್ಥನೆಗೆ ಕರೆಯುವ ಪದ್ಯ) ಅನ್ನು ಕರೆಯಲು ಅವರು ಕರಿಯ ಗುಲಾಮನಾಗಿದ್ದ ಬಿಲಾಲ್ (ರ) ಅವರಿಗೆ ಅವಕಾಶ ಮಾಡಿಕೊಟ್ಟರು.

ಹಾಗೆಯೇ, ಸ್ವತಃ ಲಕ್ಷಾಂತರ ಅನುಯಾಯಿಗಳನ್ನು ಹೊಂದರೂ, ಅವರು ಅತ್ಯಂತ ಸರಳ ಜೀವನವನ್ನು ಬದುಕಿದರು. ಅವರು ಎಂದಿಗೂ ಉನ್ನತಮಟ್ಟದ ಆಹಾರವನ್ನು ಬಯಸಲಿಲ್ಲ; ಬದಲಿಗೆ, ವಾರಗಟ್ಟಲೆ ಹಸಿವಿನಿಂದ ಕಳೆಯುತ್ತಿದ್ದರು. ಕೇವಲ ಖರ್ಜೂರಗಳನ್ನು ತಿಂದು ಉಪವಾಸಗಳನ್ನು ಆಚರಿಸುತ್ತಿದ್ದರು. ನೆಲದ ಮೇಲೆ ಹಾಸಿಗೆಯನ್ನು ಚಾಚಿ ಮಲಗುತ್ತಿದ್ದರು. ತಾವು ಹಸಿದಿದ್ದರು ದಾನ ಮಾಡುವುದರಲ್ಲಿ ಅವರು ಎಂದಿಗೂ ಹಿಂದಿರಲಿಲ್ಲ. ಮನೆಯಲ್ಲಿ ಕೇವಲ ಒಂದೇ ಒಂದು ಖರ್ಜೂರವಿದ್ದರೂ, ಅದನ್ನು ಬಡವರಲ್ಲಿ ಹಂಚಲು ಇಷ್ಟಪಡುತ್ತಿದ್ದರು. "ದಾನವು ಸಂಪತ್ತನ್ನು ಕಡಿಮೆಗೊಳಿಸುವುದಿಲ್ಲ; ಒಂದೇ ಒಂದು ಖರ್ಜೂರವಾದರೂ ದಾನ ಮಾಡಿ ನರಕಾಗ್ನಿಯಿಂದ ತಮ್ಮನ್ನು ರಕ್ಷಿಸಿರಿ" ಎಂದು ಹೇಳಿಕೊಟ್ಟರು. ಬಾಯಾರಿದ ನಾಯಿಗೆ ಕೇವಲ ನೀರು ನೀಡಿದಕ್ಕಾಗಿ ಒಬ್ಬ ಮಹಿಳೆಯನ್ನು ಸ್ವರ್ಗವಾಸಿ ಎಂದು ನಮಗೂ ದಾನ ಶ್ರೇಷ್ಠತೆಯನ್ನು ಪರಿಚಯಿಸುತ್ತ, ದಾನ ಮಾಡಲು ಪ್ರೇರಣೆ ನೀಡಿದರು.

ಅವರು ಶಿಕ್ಷಣಕ್ಕೆ ಬಹಳ ಮಹತ್ವವನ್ನು ನೀಡಿದರು. ಇಸ್ಲಾಂ ಧರ್ಮದ ಪ್ರಪ್ರಥಮ ಶ್ಲೋಕವೇ 'ಇಕ್ರಾ' - ಅಂದರೆ 'ಓದಿರಿ' ಆಗಿದೆ. ಓರ್ವ ತಂದೆಯು ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವುದಕ್ಕಿಂತ ಉತ್ತಮವಾದ ಕೊಡುಗೆಯನ್ನು ನೀಡಲಾರನು ಎಂದು ಹೇಳಿ ಶಿಕ್ಷಣದ ಮಹತ್ವವನ್ನು ಜಗತ್ತಿಗೆ ಪರಿಚಯಿಸಿದರು. ಮನುಷ್ಯನು ಸಾಯುವಾಗ ಅವನ ಕರ್ಮಗಳ ಅವಧಿ ಮುಗಿದು ಬಿಡುತ್ತದೆ. ಆದರೆ ಮೂರು ವಿಧದ ಕರ್ಮಗಳ ಪುಣ್ಯ ಆತನ ಮರಣಾ ನಂತರವೂ ಆತನಿಗೆ ಸಿಗುತ್ತಲೇ ಇರುತ್ತದೆ. ಅವುಗಳಲ್ಲಿ ಒಂದು ಆತನು ಜನರಿಗೆ ಬಿಟ್ಟು ಹೋದ ಉಪಯುಕ್ತವಾದ ಜ್ಞಾನವಾಗಿದೆ ಎಂದೂ ಶಿಕ್ಷಣದ ಮಹತ್ವವನ್ನು ತಿಳಿಸಿದರು.

ಅವರು ಮಾನವ ಇತಿಹಾಸದಲ್ಲಿ ಏಕಕಾಲದಲ್ಲಿ ಹಲವಾರು ಪಾತ್ರಗಳಾದ ಆಧ್ಯಾತ್ಮಿಕ ಗುರುಗಳಾಗಿ, ದೇಶದ ಆಡಳಿತಾಧಿಕಾರಿಯಾಗಿ, ಸಾಮಾನ್ಯ ವ್ಯಕ್ತಿಯಾಗಿ, ರಾಜತಾಂತ್ರಿಕನಾಗಿ, ಕುಟುಂಬಸ್ಥ ವ್ಯಕ್ತಿಯಾಗಿ, ಮತ್ತು ಶಿಕ್ಷಣತಜ್ಞರಾಗಿ ಸೇವೆ ಸಲ್ಲಿದರು. ಅವರು ಇತರ ಧರ್ಮಗಳನ್ನು ಗೌರವಿಸುತ್ತಿದ್ದರು. ಪ್ರವಾದಿ (ಸ) ಅವರ ಆಗಮನಕ್ಕಿಂತ ಹಿಂದೆ ಜಗತ್ತಿನಲ್ಲಿ ಧರ್ಮ-ಧರ್ಮಗಳ ನಡುವೆ ರಕ್ತಸಿಕ್ತ ಯುದ್ಧಗಳು ನಡೆಯುತಿತ್ತು; ಉದಾಹರಣೆಗೆ: ಕ್ರೈಸ್ತ ಮತ್ತು ಯಹೂದಿ ಧರ್ಮಗಳ ನಡುವೆ ಶತಮಾನಗಳಿಂದ ಯುದ್ಧಗಳು [Holy Wars] ನಡೆಯುತಿತ್ತು. ಇತರ ಧರ್ಮಿಯರು, ತಮ್ಮ ತಮ್ಮ ಬುಡಕಟ್ಟುಗಳಿಗೆ ದೇವರನ್ನು ಸ್ಥಾಪಿಸಿ, ದೇವರ ನಾಮದಡಿ ಯುದ್ಧವನ್ನು ಮಾಡುತ್ತಿದ್ದರು. ಪ್ರವಾದಿ(ಸ) ಅವರು ಎಲ್ಲರನು ಧರ್ಮದ ಹೆಸರಿನ ಬದಲಿಗೆ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಒಟ್ಟುಗೂಡಿಸಲು ಯತ್ನಿಸಿದರು. ಇದರಿಂದ ಅವರನ್ನು ನಖಶಿಖಾಂತವಾಗಿ ದ್ವೇಷಿಸುವವರೇ ಅವರ ಬೆಂಬಲಿಗರಾದರು. ದ್ವಿತೀಯ ಖಲೀಫರಾದ ಉಮರ್(ರ) ಇದಕ್ಕೆ ಅತ್ಯತ್ತಮ ಉದಾಹರಣೆಯಾಗಿದ್ದಾರೆ. ಪ್ರವಾದಿ(ಸ) ಅವರನ್ನು ಹತ್ಯೆಗೈಯ್ಯಲು ಬಂದಿದ್ದ ಉಮರ್ (ರ) ಅವರು, ಪ್ರವಾದಿ (ಸ) ಅವರ ಮೃದು ಧೋರಣೆಗೆ ಮನಸೋತು, ಅವರ ಅನುಯಾಯಿಯಾದರು.

ಯಹೂದಿಯೊಬ್ಬರ ಶವಮೆರವಣಿಗೆ ಸಾಗುತ್ತಿದ್ದಾಗ ಪ್ರವಾದಿ(ಸ) ಅವರು ಎದ್ದು ನಿಂತು ಗೌರವ ಸಲ್ಲಿಸಿದ್ದರು. ಹಿರಿಯ ಕ್ರೈಸ್ತ ಪಾದ್ರಿಯೊಬ್ಬರು ನಿಧಾನವಾಗಿ ನಡೆಯುತ್ತಿರುವಾಗ ಪ್ರವಾದಿ ಅವರನ್ನು ಹಿಂದಕ್ಕಿ ಮುಂದೆ ನಡೆಯದೆ, ಅವರ ಹಿಂದೆಯೇ ನಿಧಾನವಾಗಿ ನಡೆದು ಹಿರಿಯ ಪಾದ್ರಿಯವರನ್ನು ಗೌರವ ಸಲ್ಲಿಸಿದರು. ಪ್ರವಾದಿ (ಸ) ಅವರನ್ನು "ಸಾದಿಕ್" ಅಂದರೆ "ಸತ್ಯವಾದಿ" ಮತ್ತು "ಅಮೀನ್" ಅಂದರೆ "ಪ್ರಾಮಾಣಿಕರು" ಎಂದು ಉಪನಾಮದಿಂದ ಕರೆದಿದ್ದು ಮುಸಲ್ಮಾನರಲ್ಲ; ಬದಲಿಗೆ, ಪ್ರವಾದಿ (ಸ) ಅವರ ಪರಮ ಶತ್ರುಗಳೇ!

ಹಾಗಾಗಿ, ಇಂದಿಗೂ ಪ್ರವಾದಿ ಅವರನ್ನು ಮುಸ್ಲಿಮೇತರರು ಬಹಳ ಪ್ರೀತಿಸುತ್ತಾರೆ. ಜಗತ್ತಿನ ನೂರು ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವಗಳಲ್ಲಿ ಪ್ರವಾದಿ ಅವರ ಹೆಸರನ್ನು ಮೊದಲನೆಯದಾಗಿ ಆಯ್ಕೆ ಮಾಡಿದ ಮೈಕಲ್ ಹಾರ್ಟ್ ಅವರು ಒಬ್ಬ ಕ್ರೈಸ್ತರಾಗಿದ್ದರು. ಸುಡುವ ಮರುಭೂಮಿಯಲ್ಲಿ ಬೀಸಿದ್ದ ಆ ತಂಗಾಳಿಯ ಕುರಿತು ಅಧ್ಯಯನ ಮಾಡುತ್ತ, ಶ್ರೇಷ್ಠ ನಾಟಕಕಾರರಾಗಿದ್ದ ಬರ್ನಾಡ್ ಷಾ ಅವರು ತಮ್ಮ ಕೃತಿ 'The Genuine Islam'ನಲ್ಲಿ ಬರೆಯುತ್ತಾರೆ: "I have studied him - The Wonderful Man - and in my opinion far from being an anti-Christ, he must be called the saviour of humanity" 

- ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ