ಸುಪ್ರೀತನಿಗೆ

ಸುಪ್ರೀತನಿಗೆ

ಬರಹ

[ಸುಪ್ರೀತನೊಡನೆ ಮಾತನಾಡ ಬೇಕೆಂಬುದು ನನ್ನ ಉದ್ಧೇಶ. ಹಾಗಾಗಿ ಬೇರೆ ಸಂಪದಿಗರು ಇದನ್ನು ಓದಿದರೂ /ನಿಮಗೆ ಅಪಥ್ಯ ವಾದರೂ ದಯಮಾಡಿ ಪ್ರತಿಕ್ರಿಯಿಸ ಬೇಡಿ. ನನಗೆ ಖಾಸಗಿಯಾಗಿ ಸುಪ್ರೀತನನ್ನು ಭೇಟಿಯಾಗಲು ದಾರಿಕಾಣಲಿಲ್ಲ. ಹಾಗಾಗಿ ಇಲ್ಲಿ ಬರೆದಿರುವೆ]

ಮಿತ್ರ ಸುಪ್ರೀತ,
ಯೋಚಿಸಿ ,ಪದ ಜೋಡಿಸಿ ಬರೆಯುವಷ್ಟು ವ್ಯವಧಾನವಿಲ್ಲ. ಈಗ ಬೆಳಿಗ್ಗೆ ೭.೨೦. ನಾನು ೮.೦೦ ಗಂಟೆಗೆ ಬೇರೆ ಕರ್ತವ್ಯ ನಿರ್ವಹಿಸಲೇ ಬೇಕು. ಅಷ್ಟರಲ್ಲಿ ನಿನ್ನನ್ನು ಮಾತನಾಡಿಸ ಬೇಕು. ನಿನ್ನೊಡನೆ ಬಾಯ್ತುಂಬ ಮಾತನಾಡುವ ವರೆಗೂ ನನಗೆ ಸಮಾಧಾನವಿಲ್ಲ. ಕಾರಣ ನೀನೇನೂ ನನ್ನ ಕರುಳ ಸಂಬಂಧಿಯಲ್ಲ. ಆದರೆ ಅದೇಕೋ ನಿನ್ನ ಬಗ್ಗೆ ನನ್ನ ಮನ ಕಾತರಿಸುತ್ತಿದೆ. ಪ್ರಾಯ: ಲವ್ ಅಫೇರ್ ನಲ್ಲಿ ಸಿಲುಕಿದ ಯುವಕನಂತೆ/ಯುವತಿಯಂತೆ.ನನ್ನ ತಲೆಯಲ್ಲಿ ಎಲ್ಲಾ ನೀನೇ.ಸಂಪದಕ್ಕೆ ಪದಾರ್ಪಣೆ ಮಾಡಿದ ಮೇಲೆ ನಿನ್ನಷ್ಟು ಕ್ರಿಯಾಶೀಲನನ್ನು ನಾನು ಕಾಣಲಿಲ್ಲ. ಚಿಕ್ಕ ವಯಸಿನಲ್ಲಿ ಎಲ್ಲವನ್ನೂ ಪ್ರಶ್ನಿಸಿ ತಿಳಿಯುವ ಕಾತುರ.ಎಲ್ಲವೂ ಪ್ರಶ್ನಿಸುವುದರಿಂದಲೇ ತಿಳಿದವರಿಂದ ಉತ್ತರ ಸಿಕ್ಕೀತೆಂಬ ತವಕ. ಆದರೆ ನಿನಗೆ ಗೊತ್ತಿರಲಿಲ್ಲ. ಕೇವಲ ಬುದ್ಧಿಯಿಂದ ಉತ್ತರಿಸುವವರು ಬಹಳ ಮಂದಿ ಯಿದ್ದಾರೆಂದು.ನನಗೊಬ್ಬ ಗುರುಗಳಿದ್ದಾರೆ. ಅವರು ಪುಸ್ತಕ ಓದುವುದೇ ಇಲ್ಲ.ವ್ಯಕ್ತಿಯನ್ನು ನೋಡಿದೊಡನೆ ಅವರ ಜೀವನದ ಹಲವು ಘಟನೆಗಳನ್ನು ತಿಳಿಸಿ ಅವರನ್ನು ಅಚ್ಚರಿಗೊಳಿಸುತ್ತಾರೆ.ಅವರ ಜೀವನಕ್ಕೆ ದಿಕ್ಕು ತೋರಿಸುತ್ತಾರೆ. ಒಂದು ಚಿಕ್ಕ ಘಟನೆ ಹೇಳುವೆ. ನನ್ನ ಮಗ ಬಿ.ಇ. ಪರೀಕ್ಷೆ ಬರೆದವನು ಒಂದು ಪೇಪರ್ ಬಲು ಕಷ್ಟವಾಗಿತ್ತೆಂದೂ, ಪರೀಕ್ಷೆ ಹಾಲ್ನಲ್ಲಿ ಅನೇಕ ವಿಷಯಗಳು ಮರೆತು ಹೋಯಿತೆಂದೂ[ಟೆನ್ಷನ್ ಗೆ] ಸಪ್ಪೆ ಮೋರೆ ಹಾಕಿಕೊಂಡು ಮನೆಗೆ ಬಂದವನೇ ಹಾಸಿಗೆ ಹಿಡಿದ. ಊಟ ತಿಂಡಿ ಏನೂ ಮಾಡದೆ ಮಲಗಿದ್ದ. ಮಾತನಡಿಸಿದರೂ ಮಾತನಾಡಲಿಲ್ಲ. ಅವನು ಅಳುತ್ತಿದ್ದ. ನನ್ನ ದು:ಖ ಹೇಳ ತೀರದು. ನನಗೆ ಅವನ ಪಾಸ್/ಫೇಲ್ ಬಗ್ಗೆ ಚಿಂತೆ ಇರಲಿಲ್ಲ. ಆದರೆ ಅವನ ಬಗ್ಗೆ, ಅವನು ಸಂತೋಷವಾಗಿಲ್ಲ ವಲ್ಲಾ, ಎಂಬ ಚಿಂತೆ. ರಾತ್ರಿ ೮.೦೦ ಕ್ಕೆ ಮಲಗಿದ್ದವನನ್ನು ಏಳಿಸಿದೆ. ನಮ್ಮ ಗುರುಗಳಹತ್ತಿರ ಕರೆದುಕೊಂಡು ಹೋದೆ. ನಾನು ವಿಷಯ ಅರುಹಿದೆ." ಸುಬ್ಬಣ್ಣಿ, ಆ ಪೇಪರ್ ನಲ್ಲಿ ನಿನಗೆ ೫೭ ಮಾರ್ಕ್ ಬಂದು ಪಾಸ್ ಆಗಿದೆ ಯಲ್ಲಾ ಯಾಕೆ ಅಳುವೆ? "ಎಂದರು
ರಿಸಲ್ಟ್ ಬಂತು ಯಾವ ಪೇಪರ್ ಅತೀ ಕಷ್ಟ ವಾಗಿತ್ತೋ ಅದರಲ್ಲಿ ೫೭. ಉಳಿದದ್ದರಲ್ಲಿ ಒಳ್ಳೆಯ ಮಾರ್ಕ್ ಬಂದು ಉತ್ತಮ ದರ್ಜೆಯಲ್ಲೇ ತೇರ್ಗಡೆ ಹೊಂದಿದ್ದ.
ಇದಕ್ಕೇನು ಹೇಳುವುದು?
ಈ ರೀತಿಯ ಘಟನೆಗಳು ನನ್ನ ಜೀವನದಲ್ಲಿ ಸಾಕಷ್ಟು ನಡೆದಿವೆ. ನಂಬಿಕೆ ಇದ್ದವರಿಗೆ ಜೀವನದಲ್ಲಿ ಮಾರ್ಗದರ್ಶಕರೊಬ್ಬರು ಸಿಕ್ಕೇ ಸಿಗುತ್ತಾರೆ. ನಮ್ಮ ದೇಶದಲ್ಲಂತೂ ಈಗಲೂ ಮಹಾಮಹಿಮರು ಇದ್ದಾರೆ. ಎಲ್ಲರ ಕಣ್ಣಿಗೆ ಕಾಣುವುದಿಲ್ಲ.
ವಿಷಯ ದಾರಿ ತಪ್ಪಿತೇನೋ, ಇರಲಿ. ಅಂದರೆ ಎಲ್ಲವನ್ನೂ ತರ್ಕದಲ್ಲಿ ತಿಳಿದುಕೊಳ್ಳುವುದಕ್ಕಿಂತ ಸ್ವತ: ಅನುಭವದಿಂದ/ಧ್ಯಾನ ಸ್ಥಿತಿಯಿಂದ ಅರಿತು ಕೊಳ್ಳುವ ಮಾರ್ಗ ಸರಿ. ಬುದ್ಧಿವಂತನಾಗುವುದಕ್ಕೆ ನೀನು ಇಲ್ಲಿಯವರೆಗೂ ಅನುಸರಿಸುತ್ತಿದ್ದ ಮಾರ್ಗ ಸರಿ. ಆದರೆ ಉತ್ತಮ ಮಟ್ಟಕ್ಕೇರುವುದಕ್ಕೆ[ ಈ ಸ್ಥರಕ್ಕಾಗಿ ಪದವನ್ನು ಹುಡುಕುವುದಿಲ್ಲ] ತಪಸ್ಸು ಬೇಕು. ಒಳಗಿನ ಕಣ್ಣು ತೆರೆದುಕೊಳ್ಳಬೇಕು.
ನಿನಗೇನೂ ಉಪದೇಶದ ರೀತಿಯಲ್ಲಿ ಮಾತನಾಡಬಾರದೆಂದು ಕೊಂಡರೂ ಅದೇಕೋ ನನ್ನ ಮಕ್ಕಳೊಡನೆ ಇರುವಷ್ಟೇ ಸಲುಗೆ ನಿನ್ನ ಮೇಲೂ. ಅದರಿಂದ ನಿನ್ನೊಡನೆ ಮಾತನಾಡುವಾಗ ಅದನ್ನು ಉಪದೇಶವೆಂದು ತಿಳಿಯಬೇಡ. ನಿನ್ನನ್ನು ಸಂಪರ್ಕಿಸಲು ನಿನ್ನ ಪ್ರೊಫೈಲ್ ಎಲ್ಲಾ ಹುಡುಕಿದೆ. ಎಲ್ಲವನ್ನೂ ಅಳಿಸಿ ಹಾಕಿಬಿಟ್ಟಿರುವೆ, ಸನ್ಯಾಸ ತೆಗೆದುಕೊಳ್ಳುವಾಗ ಎಲ್ಲಾ ಬಟ್ಟೆಯನ್ನೂ ನದಿಯ ಮಧ್ಯೆ ಬಿಚ್ಚಿ ಬಿಸಾಕುವಂತೆ.
ಅದೇಕೋ ನಿನ್ನಲ್ಲಿ ಅತಿಯಾದ ವಿಶ್ವಾಸ ಮೂಡಿದೆ.ಯಾವುದೋ ಉತ್ತಮ ಕೆಲಸಕ್ಕಾಗಿ ನಿನ್ನ ಜನ್ಮ ವಾಗಿದೆ, ಎಂದೇ ನನ್ನ ಭಾವನೆ.
ಅಮಂತ್ರಮ್ ಅಕ್ಷರಮ್ ನಾಸ್ತಿ
ನಾಸ್ತಿಮೂಲಮನೌಷಧಮ್
ಅಯೋಗ್ಯ: ಪುರುಷೋ ನಾಸ್ತಿ
ಯೋಜಕಸ್ತತ್ರ ದುರ್ಲಭ:

ಈ ಶ್ಲೋಕ ನೆನಪಾಯ್ತು, ಬರೆದೆ. ಯಾರೂ ಅಯೋಗ್ಯರಲ್ಲ. ದಿಕ್ಕುತೋರುವ ಗುರು ಒಬ್ಬ ಸಿಗಬೇಕು.
ಭಗವಂತ ನಿನಗೆ ತುಂಬಾ ಶಕ್ತಿ ಕೊಟ್ಟಿದ್ದಾನೆ.ನಿನ್ನಿಂದ ನೂರಾರು/ಸಾವಿರರು ಜನರಿಗೆ ಬೆಳಕು ಸಿಗಲಿ. ಈ ದಿಕ್ಕಿನಲ್ಲಿ ನಿನ್ನ ಜೀವನ ಸಾಗಲಿ, ನಿನಗೆ ಒಬ್ಬ ಸಮರ್ಥ ಗುರು ಸಿಗಲಿ, ಎಂದು ಹಾರೈಸುವೆ.
ಪ್ರೀತಿಯ
ಶ್ರೀಧರ್