ಸುಬ್ಬನೂ ಜೋಯಿಸನೂ !

ಸುಬ್ಬನೂ ಜೋಯಿಸನೂ !

 

ಒಂದು ಪಾರ್ಶ್ವದ ಭೂಮಿಯು ತಂಪಾದ, ಕೆಂಪಾದ ಸೂರ್ಯನನ್ನು ಕಾಲಗರ್ಭಕ್ಕೆ ತಳ್ಳುವ ಸಮಯದಲ್ಲಿ ಬೀಸುವ ತಂಗಾಳಿಗೆ ಮೈ ಒಡ್ಡಿ ಹಾಯಾಗಿ ಈಸಿ ಚೇರ್’ನಲ್ಲಿ ಫಿಲ್ಟರ್ ಕಾಫಿ ಕುಡಿಯುತ್ತ, ಯಾವುದೇ ಟೆನ್ಷನ್ ಇಲ್ಲದೇ ಪೇಪರ್ ನೋಡುತ್ತ ಹಾಗೇ ಕುಳಿತಿರಲು ... ಸುಬ್ಬ’ನ ವದನ ಸ್ಮೃತಿಪಟಲದಲ್ಲಿ ಹಾದು ಹೋಯಿತು !!!

 

ಥತ್ತೇರಿಕೆ!!! ನೆಗೆದು ಬಿತ್ತು ನೆಮ್ಮದಿ ... ಸುಬ್ಬ ಅಂದ್ರೆ ಹಾಗೆ ... ಸುಬ್ಬನ ವಿಷಯ ಅಂದ್ರೆ ಹಾಗೆ ... ಹೊತ್ತು ಗೊತ್ತು ಇಲ್ಲದೆ ಮನದಲ್ಲಿ ಉದ್ಭವಿಸುವ ಮನೋಮೂರ್ತಿಯೇ ಸುಬ್ಬ!!! ಸುದೀಪನ ಕಾಡೊ ’ಈಗ’ದ ಹಾಗೆ ....

 

ಇದ್ದಕ್ಕಿದ್ದ ಹಾಗೆ ಸುಬ್ಬನ ಬಗ್ಗೆ ಯೋಚನೆ ಬಂದದ್ದಾದರೂ ಯಾಕೆ ? 

 

ಇಲ್ಲ, ಸುಬ್ಬ ಸಿಕ್ಕಿರಲಿಲ್ಲ, ಮತ್ತು ಸುಬ್ಬ ’sick’ ಇರಲಿಲ್ಲ ... ಸುಬ್ಬನ ಮನೆ ಕೆಲಸದವಳು ಅಂದರೆ ಸುಬ್ಬನ ಮನೆ ಜೂನಿಯರ್ ಯಜಮಾನಿ ’ಮಿಸ್. ಚೆಲುವಿ’ ಸಿಕ್ಕಿದ್ದಳು ... ಚೆಲುವಿ ವಿಷಯನೇ ಬೇರೆ ನೋಡಿ ... ’ಮಿಸ್’ ಅಂತ ಯಾಕೆ ಅಂದೆ ಅಂತ ಮೊದಲು ಹೇಳ್ತೀನಿ ...

 

ಅದೊಂದು ದಿನ ಸುಬ್ಬ ಕೆಲಸದಿಂದ ಮನೇ ಕಡೆ ಹೊರಟಿದ್ದ ... ಅವನ ಕಛೇರಿಗೆ ಶನಿವಾರ ಅರ್ಧ ದಿನ ಅಂತ ಅಂದೇ ಹೇಳಿದ್ನಲ್ಲ .... ಮಧ್ಯಾನ್ನದ ಉರಿ ಬಿಸಿಲಿನಲ್ಲಿ, ಬೆವರು ಮತ್ತಿತರ ವಾಸನೆಗಳಿಂದ ತುಂಬಿದ್ದ ಬಸ್ಸಿನಲ್ಲಿ ಜೋಲಾಡಿಕೊಂಡು ಮನೆ ಸೇರಿದ್ದ. ಮನೆ ಸೇರಿದ ಕೂಡಲೆ ಒಂದು ಕಪ್ ಕಾಫಿ ಕುಡಿಯಬೇಕು ಅಂತ ನಿರ್ಧಾರವೂ ಮಾಡಿದ್ದ ... 

 

ತಾನೊಂದು ಬಗೆದರೆ ದೈವ .... ಹೋಗ್ಲಿ ಬಿಡಿ

 

ಮನೆ ಬಾಗಿಲು ಬಡಿದಿದ್ದೇ ಬಂತು ಭಾಗ್ಯ ... ಮುಚ್ಚಿದ ಬಾಗಿಲು ತೆರೆಯಲೇ ಇಲ್ಲ. ಸುಬ್ಬೀಗೆ ಏನಾದರೂ ಆಗಿದೆಯಾ? ಆದರೂ ಚೆಲುವಿ ಅಂತೂ ಮನೆಯಲ್ಲಿ ಇದ್ದಾಳಲ್ಲ?  ಎಲಾ ಇವನ, ಚೆಲುವಿ ಒಳಗೆ ಇರೋದು ಇವನಿಗೆ ಹೇಗೆ ತಿಳೀತು ಅಂದ್ರಾ? ಅದೇನು ದೊಡ್ಡ ವಿಷ್ಯ ಬಿಡಿ ... ಸುಬ್ಬನೇ ಕೊಡಿಸಿದ್ದ ಹೈ-ಹೀಲ್ಸ್ ಚಪ್ಪಲಿ ಹೊರಗೆ ಇತ್ತಲ್ಲ?

 

ಯಪ್ಪಾ ಶಿವನೇ .. ಚೆಲುವಿಗೆ ಸುಬ್ಬ ಕೊಡಿಸಿದ್ದನಾ? ಅವಳು ಆ ಚಪ್ಪಲಿ ಹಾಕಿಕೊಂಡು ಅವನ ಮನೆಗೇ ಬರೋದೆ? ಹಾಗೇನಿಲ್ಲ ... ಅರ್ಥ ಮಾಡಿಕೊಳ್ಳಿ "ಸುಬ್ಬ ಕೊಡಿಸಿದ್ದ ಚಪ್ಪಲಿ" ಅಂತ ಅಂದೆನೇ ಹೊರತು ಯಾರಿಗೆ ಅಂತ ಹೇಳಲಿಲ್ಲವಲ್ಲ? ನೀವು ತಪ್ಪು ತಿಳಿದರೆ ನಾನೇನು ಮಾಡಲಿ?

 

ಸುಬ್ಬಿಯ ಹುಟ್ಟಿದಹಬ್ಬಕ್ಕೆ ಸುಬ್ಬ ಹೈ-ಹೀಲ್ಸ್ ಚಪ್ಪಲ್ಲಿ ತಂದುಕೊಟ್ಟಿದ್ದ. ಸುಬ್ಬಿ ಅದನ್ನು ಹಾಕಿಕೊಂಡು ನೆಡೆಯಲಾರದೆ ಬಿದ್ದು ಎದ್ದು ಎಲ್ಲ ಸರ್ಕಸ್ ಆಗಿ ಕೊನೆಗೆ ಕಾಲನ್ನೂ ಉಳುಕಿಸಿಕೊಂಡಾದ ಮೇಲೆ ಅದನ್ನು ಚೆಲುವಿ’ಗೆ ತಗಲಿ ಹಾಕಿದರು. ತಾನು ಹುಟ್ಟಿರೋದೇ ಹೈ-ಹೀಲ್ಸ್ ಹಾಕಲಿಕ್ಕೆ ಅನ್ನೋ ಹಾಗೆ ಠೀವಿಯಿಂದ ನೆಡೆದೇ ಬಿಟ್ಟಲು ಚೆಲುವಿ. ಸುಬ್ಬಿ ಬಾಯಿಬಿಟ್ಟಿದ್ದೇ ಬಂತು. ಒಟ್ಟಾರೆ ಹೇಳಿದರೆ ಸುಬ್ಬಿ ಹುಟ್ಟುಹಬ್ಬಕ್ಕೆ ಸುಬ್ಬ ಚೆಲುವಿಗೆ ಚಪ್ಪಲಿ ಕೊಡಿಸಿದ್ದ !!

 

ಇರಲಿ, ಐದು ನಿಮಿಷ ಬಾಗಿಲು ಬಡಿದ ಮೇಲೆ, ಬಾಗಿಲು ತೆರೆದುಕೊಂಡಿತು. ಬಾಗಿಲು ತೆರೆದವರು ಸರಕ್ಕನೆ ಒಳಗೆ ಹೋಗಿದ್ದರು. ಗೆಜ್ಜೆ ನಾದ ಕೂಡ ಕೇಳಿಸಲಿಲ್ಲ ... ಅಂದ್ರೆ ಬಾಗಿಲು ತೆರೆದವಳು ಸುಬ್ಬಿಯೇ? ಸುಬ್ಬನ ಮನೆಯಲ್ಲಿ ಗೆಜ್ಜೆ ತೊಡುವ ಕಾಲುಗಳು ಅಂದರೆ ಚೆಲುವಿಯದು ... ಅದನ್ನೂ ಸುಬ್ಬ ಕೊಡಿಸಿದ್ದೇ? ಹೌದ್ರಪ್ಪ! ಸುಬ್ಬಿಯ ಹಳೇ ಸೀರೆಗಳು ಚೆಲುವಿಗೆ ಕೊಡೋದ್ರಿಂದ ’ಉಮೇಶ್’ ಅವರಿಗೆ ಆದ ಹಾಗೆ ಆಗದಿರಲು, ವಾಲಿ-ಸುಗ್ರೀವರನ್ನು ಗುರುತಿಸಲು ಮಾಲೆ ಹಾಕಿದ ಹಾಗೆ ಚೆಲುವಿಗೆ ಗೆಜ್ಜೆ ತೊಡಿಸಲಾಗಿತ್ತು !!!

 

ಚೆಲುವಿಗೆ ಬದಲು ಸುಬ್ಬಿಗೇ ಕೊಡಿಸಬಹುದಿತ್ತಲ್ವಾ? ಇದು ಒಂದು ಮನೆಯ ನಿರ್ಧಾರ ಅಲ್ಲ ! ಚೆಲುವಿ ಎರಡು-ಮೂರು ಮನೆಯಲ್ಲಿ ಕೆಲಸ ಮಾಡುವುದರಿಂದ, ಮೂರೂ ಮನೆಯವರು ಸೇರಿ ದುಡ್ಡು ಹಾಕಿ ಚೆಲುವಿಗೆ ದೀಪಾವಳಿ ಉಡುಗೊರೆ ಅಂತ ಹೇಳಿ ಕೊಟ್ಟಿದ್ದರು .... ಹೋಗ್ಲಿ ಬಿಡಿ, ವಿಷಯ ಎಲ್ಲೆಲ್ಲೋ ಹೋಗ್ತಿದೆ ...

 

ಬಾಗಿಲಂತೂ ತೆರೆಯಿತು ... ಸುಬ್ಬ ಒಳಗೆ ಬಂದು ತನ್ನ ಸಲಕರಣೆಗಳನ್ನು ಒಳಗಿಟ್ಟು ಹಾಗೇ ಕಣ್ಣಾಡಿಸಿದಾಗ ... ಊಟ ಮುಗಿಸಿ ಇನ್ನೂ ತಟ್ಟೆಯ ಮುಂದೆ ಕುಳಿತ ಸುಬ್ಬಿ ಒಂದು ಕಡೆ, ಸೋಫದ ಮೇಲೆ ಚೆಲುವಿ ಇನ್ನೊಂದೆಡೆ ಬಿಟ್ಟ ಕಣ್ಣು ಮಿಟುಕಿಸದೆ ಧಾರಾವಾಹಿ ನೋಡುತ್ತಿದ್ದರು.

 

ಬಾಗಿಲು ತೆರೆದವರು ಯಾರು ಅಂಬೋದಂತೂ ಬಗೆ ಹರಿಯಲಿಲ್ಲ !

 

ಟಿ.ವಿ ಮುಂದೆ ಕುಳಿತಿರೋ ಪರಿ ನೋಡಿದರೆ ತನ್ನ ಕಾಫಿ ತಾನೇ ಮಾಡಿಕೊಳ್ಳಬೇಕು ಎಂದು ಅರಿತ ಸುಬ್ಬ. ಹಾಗೆ ಹೊರಡುವಾಗ "ಊಟ ಆಯ್ತಾ?" ಅಂತ ಕೇಳಿದ್ದ "ಆಯ್ತು ... ಮೀನಿನ ಸಾರು ಮಾಡಿದ್ದೆ" ಅಂತ ಉತ್ತರ ಬಂತು. ಇವರತ್ತ ಬೆನ್ನು ಮಾಡಿ ಅಡುಗೆ ಮನೆಯತ್ತ ಸಾಗಿದ್ದ ಸುಬ್ಬ, ಎಗರಿ ಬಿದ್ದ. ಅವನು ಕೇಳಿದ್ದು ಸುಬ್ಬಿಯನ್ನು. ಉತ್ತರ ಕೊಟ್ಟಿದ್ದು ಚೆಲುವಿ. 

 

ಫಿಲ್ಟರ್ ಕಾಫಿ ಮೂರೂ ಜನಕ್ಕೂ ಸಿದ್ದ ಮಾಡಿದ ...

 

ಸುಬ್ಬಿಯ ಮುಂದೆ ಒಂದು ಲೋಟ ಕಾಫಿ ಇಟ್ಟ. ಅವಳು ಅತ್ತ ದೃಷ್ಟಿಯೂ ಸೋಕಿಸಲಿಲ್ಲ. ಮತ್ತೊಂದು ಲೋಟ ಚೆಲುವಿಯ ಮುಂದೆ ತಂದು "ತೊಗೋ" ಅಂದ ... ಉಹುಂ ಉತ್ತರವಿಲ್ಲ ... "ತೊಗೊಳ್ಳಿ" ಊಹುಂ ... "ಮಿಸ್.ಚೆಲುವಿ, ಕಾಫಿ ತೊಗೊಳ್ಳಿ" ಅಂದ ... ಇಬ್ಬರ ತಿವಿತದ ನೋಟ ತಡೆಯಲಾರದೆ ಅಲ್ಲಿಂದ ಸಾಗಿದ್ದ ...

 

ಇದು ಚೆಲುವಿ ’ಮಿಸ್.ಚೆಲುವಿ’ ಆದ ಕಥೆ !

 

ಈಗ ಮತ್ತೆ ಅದೇ ಪ್ರಶ್ನೆ ... ಇದ್ದಕ್ಕಿದ್ದ ಹಾಗೆ ಸುಬ್ಬನ ಬಗ್ಗೆ ಯೋಚನೆ ಬಂದದ್ದಾದರೂ ಯಾಕೆ? ಪೇಪರ್’ನಲ್ಲಿ ಯಾವುದೋ ಕಾರಿನ ಜಾಹೀರಾತು ನೋಡಿದೆ ಅದಕ್ಕೇ !

 

ಮೊದಲು ಈ ವಿಷಯ ಅರ್ಥ ಮಾಡಿಕೊಳ್ಳೋಣ ... ಸುಬ್ಬನ ಜೀವನ ಸ್ವಲ್ಪ ಕಾಂಪ್ಲಿಕೇಟೆಡ್ ಕಣ್ರೀ ...

 

ಸುಬ್ಬ ಈ ನಡುವೆ ಸಾಮಾನ್ಯವಾಗಿ ಒಬ್ಬನೇ ಹೊರಗೆ ಹೋಗೋಲ್ಲ .. ಅಂದರೆ, ಅವನಾಡೋ ರೀತಿಗೆ ರೋಸಿ ಯಾರಾದರೂ ಹಿಡ್ಕೊಂಡ್ ಹೊಡೆದರೆ ಆಸ್ಪತ್ರೆಗೆ ಸೇರಿಸಲು ಮತ್ತೊಬ್ಬರು ಇರಲಿ ಅಂತೇನಲ್ಲ ... ರಸ್ತೆ ಮೂಲೆ ದೊಡ್ಡಾಜೋಯಿಸ ಅನ್ನೋ ಜ್ಯೋತಿಷಿ ಇವನ ಮುಖ ನೋಡಿದ ಕೂಡಲೇ "ನಿಮಗೆ ವಾಹನ ಯೋಗ" ಇದೆ ಅಂತ ಯಾವಾಗ ನುಡಿದನೋ ಆಗಿನಿಂದ ಒಬ್ಬನೇ ಹೊರಗೆ ಹೋಗೋದಕ್ಕೆ ಅವನಿಗೆ ಭಯವಾಗುತ್ತೆ ...

 

ದೊಡ್ಡಾಜೋಯಿಸ ಹಾಗೆ ಹೇಳಿದ ಮರುದಿನ ಸುಬ್ಬಿಯನ್ನು ಕರ್ಕೊಂಡ್ ಕೆಲಸಕ್ಕೆ ಹೋದೆ. ಬಾಸ್ ಅವನನ್ನು ಚೇಂಬರ್’ಗೆ ಬರ ಹೇಳಿದರು. ಅವರ ಛೇಂಬರ್’ಗೆ ಹೋಗಿ, ಅಲ್ಲೇ ಮತ್ತೊಂದು ಕುರ್ಚಿಯಲ್ಲಿ ಕುಳಿತಿದ್ದ ಅವರ ಮೇಡಮ್’ಗೆ ’ಹಲೋ’ ಅಂದ. ಅಷ್ಟರಲ್ಲೇ ಅವನ ಬಾಸ್ ರೇಗಿಕೊಂಡ್ "you cannot work for two bosses at the same time at same place. Do you understand?" ಅಂತ ಟಸ್ಸಾ ಪುಸ್ಸ ಆಂಗ್ಲದಲ್ಲಿ ಬೈದರು ... ಮೊದಲಿಗೆ ಅವನಿಗೆ ಯಾಕೆ ಬೈದರು ಅಂತಲೇ ಅರ್ಥವಾಗಲಿಲ್ಲ ... ಅಲ್ಲದೇ ಕನ್ನಡದಲ್ಲೇ ಬೈಸಿಕೊಂಡು ಅಭ್ಯಾಸ .. ಹಾಗಾಗಿ ಏನು ಹೇಳಬೇಕೋ ಅರ್ಥವಾಗದೆ ತಕ್ಷಣ " same to you  ಅಂದು ಹೊರಬಂದ ... ಆಗಲಿಂದ ಬರೀ ಕೆಲಸಕ್ಕೆ ಮಾತ್ರ ಒಬ್ಬನೇ ಹೋಗ್ತಾನೆ, ಬರ್ತಾನೆ ...

 

ಇಷ್ಟಕ್ಕೂ ಆ ದೊಡ್ಡಾಜೋಯಿಸ ಅನ್ನಬಾರದ್ದು ಅನ್ನಲಿಲ್ಲ ಅಲ್ವೇ? ಅದರ ಹಿಂದೆ ಒಂದು ಕಥೆ ಇದೆ 

 

ಹತ್ತನೇ ಕ್ಲಾಸ್ ಹತ್ತನೇ ಬಾರಿ ಮಾಡುತ್ತಿದ್ದ ಸಿದ್ದಪ್ಪನಿಗೆ ಇದೇ ದೊಡ್ಡಾಜೋಯಿಸ "ವಾಹನಗಳ ಯೋಗ ಇದೆ. ಇವನ ಸುತ್ತಲೂ ಗಾಡಿಗಳು ಕಾಲ ಕಸದ ಹಾಗೆ ಓಡಾಡಿಕೊಂಡಿರುತ್ತೆ" ಅಂತ ಹೇಳಿದ್ದ. ಆತ ಅಂದಿದ್ದೇ ವೇದವಾಕ್ಯ ಎಂದುಕೊಂಡು ಆ ದಿನಕ್ಕಾಗಿ ಎದುರು ನೋಡಿಕೊಂಡಿದ್ದರು ಅವರಪ್ಪ-ಅಮ್ಮ ... ಅಂತೂ ಆ ಸುಯೋಗ ಬಂದೇ ಬಂತು ... ಕಳೆದ ವರ್ಷ ತಾನೇ ಸಿದ್ದಪ್ಪನಿಗೆ ಟ್ರಾಫಿಕ್ ಪೋಲೀಸ್ ಕೆಲಸ ಸಿಕ್ತು ... ಒಂದು ನಿಮಿಷಕ್ಕೇ ನೂರಾರು ವಾಹನಗಳನ್ನು ಕಾಲು ಕಸದಂತೆ ಕಾಣುತ್ತ ಉರಿ ಬಿಸಿಲಲ್ಲಿ ಕೆಲ್ಸ ಮಾಡಿಕೊಂಡಿರ್ತಾನೆ .... ಪಾಪ, ಅನ್ನಲ್ಲ ... ಅದೂ ಕೆಲಸ ತಾನೇ?

 

ಸಿಕ್ಕಾಪಟ್ಟೆ ಅನುಭವ ಇರೋ ಈ ನಮ್ ದೊಡ್ಡಾಜೋಯಿಸಗೆ ಸ್ವಲ್ಪ ದೊಡ್ಡ ಮನುಷ್ಯರ ಸಂಪರ್ಕವೂ ಇದೆ ಎನ್ನಿ ! ಅತೀ ದೊಡ್ಡ ಮನುಷ್ಯರಿಗೆ ಫ್ರೀಯಾಗಿ ಕೈ ನೋಡುತ್ತಾನೆ !! ಇವನನ್ನು ಆ ಜಾಗದಿಂದ ಎತ್ತಂಗಡಿ ಮಾಡಬೇಕು ಅಂತ ಯಾರಾದರೂ ನೋಡಿದರೆ, ದೊಡ್ಡ ಮನುಷ್ಯರಿಂದ ಪ್ರಭಾವ ತೋರಿಸಿ ಬಾಯಿ ಮುಚ್ಚಿಸುತ್ತಾನೆ ... ಯಾವ ಹುತ್ತದಲ್ಲಿ ಯಾವ ಹಾವೋ? 

 

ಹೀಗೇ, ಸಿರಿವಂತನೊಬ್ಬನಿಗೆ ’ನಾಲ್ಕು ಚಕ್ರದ ವಾಹನ ಯೋಗ’ ಇದೆ ಅಂತ ಹೇಳಿದ್ದ. ಆತ "ನನ್ ಹತ್ತಿರ ಈಗಾಗ್ಲೇ ನಾಲ್ಕು ಕಾರು ಇದೆ ... ಮತ್ತೊಂದೇ?’ ಅಂತ ವೈರಾಗ್ಯ ತೋರುವ ಹಾಗೆ ಹೇಳಿದ್ದ ಸಿರಿವಂತ .. ಆದರೂ ದೊಡ್ಡಾಜೋಯಿಸನ ಮಾತು ನಿಜವಾಯ್ತು ನೋಡಿ ... ಸಿರಿವಂತನ ಮನೆಯನ್ನು ಪೋಲೀಸ್ ರೈಡ್ ಮಾಡಿದ ಮೇಲೆ ಆತನಿಗೆ ’ನಾಲ್ಕು ಚಕ್ರದ ವಾಹನ’ ಅರ್ಥಾತ್ "ಪೋಲೀಸ್ ಜೀಪ್’ನ ಯೋಗ ಲಭಿಸಿಯೇಬಿಡ್ತು !! ಅಂದಿನಿಂದ ನಂ ದೊಡ್ಡಾಜೋಯಿಸನ ಬಗ್ಗೆ ಜನರಿಗೆ ’ಭಯ’ ಕಮ್ ’ಭಕ್ತಿ’ ...

 

ಈಚೆಗೆ ಅವನ ಮಗನೂ ಅವನೊಂದಿಗೆ ಪಕ್ಕದಲ್ಲಿ ಕುಳಿತಿರುತ್ತಾನೆ ... ಅಪ್ಪ ಜ್ಯೋತಿಷಿ ಕಾಲ ಮುಗಿಯಿತು ಅಂದ್ರೆ ಮಗನ ರಾಜ್ಯಭಾರ ಶುರುವಾಗಲಿದೆ ಅನಿಸುತ್ತಿದೆ .... 

 

ಪ್ರತಿಯೊಬ್ಬರಿಗೂ ಯಾವುದೋ ಒಂದು ಕೆಲಸದಲ್ಲಿ ಅವರದೇ ಒಂದು expertise ಇರುತ್ತದೆ ಅಂತಾರಲ್ಲ ಹಾಗೆ, ಈ ಇಬ್ಬರು ಜ್ಯೋತಿಷಿಯರದು ಕೂಡ ... ಬೇರೆ ಯಾವುದು ನಿಜ ಆಗುತ್ತೋ ಸುಳ್ಳಾಗುತ್ತೋ, ’ವಾಹನ ಯೋಗ’ ಅಂತೂ ಸತ್ಯದ ತಲೇ ಮೇಲೆ ಹೊಡೆದ ಹಾಗೆ ನಿಜವಾಗುತ್ತದೆ ... ಅಥವಾ ... ನಿಜ ಆಗೋ ಹಾಗೆ ಇವರೇ ಮಾಡಿಸುತ್ತಾರೋ ಹೇಗೆ? ಇರಲಿ ...

 

ಕಳೆದ ತಿಂಗಳು ಯಾರಿಗೋ ’ದೊಡ್ಡ ವಾಹನದ ಯೋಗವಿದೆ’ ಅಂತ ಪುಟ್ಟಾಜೋಯಿಸ ಅಂದಿದ್ದನಂತೆ ... ಕೇಳಿದವರು ಅದೇ ಗುಂಗಿನಲ್ಲಿ ರಸ್ತೆ ದಾಟುವಾಗ, ರಭಸವಾಗಿ ನುಗ್ಗಿದ ಕಾರೊಂದು ಗುದ್ದಿ, "ಆಂಬುಲೆನ್ಸ್’ ಯೋಗ ಲಭಿಸಿತು .... 

 

ಪುಟ್ಟಾಜೋಯಿಸ ಸುಬ್ಬನಿಗೆ ಅದೇ ಮಾತು ಹೇಳಿದ ಮೇಲೆ ಅವನಿಗೆ ಭಯ ... ಸುಬ್ಬ ಜಾಗ ಬಿಟ್ಟು ಕದಲದೆ, ಜೋಯಿಸನ ಮೊಬೈಲ್’ನಲ್ಲೇ ನನಗೆ ಕರೆ ಮಾಡಿ ತನಎ ಮನೆಗೆ ಡ್ರಾಪ್ ಕೊಡೆಂದು ದಂಬಾಲು ಬಿದ್ದಿದ್ದ. ನಾನು ಕಾರು ತೆಗೆದುಕೊಂಡು ಹೋದೆ ... ಅರ್ಧ ಘಂಟೆ ಹಿಡಿಯಿತು ಹೋಗಿ ತಲುಪಲು ... ಸುಬ್ಬ ಮಾತನಾಡುತ್ತಿದ್ದ, ಪುಟ್ಟಾಜೋಯಿಸ ತಲೆ ಮೇಲೆ ಕೈ ಹೊತ್ತು ’ದಯವಿಟ್ಟು ತೊಲಗು’ ಎನ್ನೋ ಮುಖವಾ ಹೊತ್ತಿದ್ದ ... ನಾನು ಹೋಗಿ ಸುಬ್ಬನ್ನ ಕರೆದುಕೊಂಡು ಹೋರಟ ಮೇಲೇ ಪುಟ್ಟಾಜೋಯಿಸನ ಮುಖದಲ್ಲಿ ಗೆಲುವು ಕಂಡಿದ್ದು ... ದಾರಿ ಉದ್ದಕ್ಕೂ ತನಗೇನೋ ಆಗುತ್ತೆ ಅನ್ನೋ ಕೊರೆತ ಮೊರೆತ ಕೇಳಿಸಿಕೊಂಡೇ ನನ್ ಕಿವಿ ತೂತಾಗಿತ್ತು ...

 

ಪುಟ್ಟಾಜೋಯಿಸನ ಹತ್ತಿರಾನೇ ಹೋಗಿ ಒಂದು ತಾಯಿತ ತೆಗೆದುಕೊಂಡು ಸುಬ್ಬನಿಗೆ ಕೊಡೋಣ ಎಂದುಕೊಂಡು ಹೊರಟೆ .. 

 

ರಸ್ತೆ ಮೂಲೆಯ ಮರದ ಹಿಂದೆ ಪುಟ್ಟಾಜೋಯಿಸನ ರಾಜ್ಯಭಾರ ... ಯಾರೋ ಗಿರಾಕಿ ಕುಳಿತಿದ್ದರು ... ಕದ್ದಾಲಿಕೆ ಸುಳ್ಳು ಎಂದು ಗೊತ್ತಿದ್ದರೂ, ಮರದ ಹಿಂದೆ ನಿಂತು, ಕಿವಿ ನಿಮಿರಿಸಿ ಕೇಳಿಸಿಕೊಂಡೆ ... ಮತ್ತೆ ಅದೇ ಹಾಡು ... ಅವರ ಹಸ್ತ ನೋಡಿ ಹೇಳುತ್ತಿದ್ದ "ನಿಮ್ಮ ಹಸ್ತದಲ್ಲಿ ಲಕ್ಷ್ಮಿ ತಾಂಡವ ಆಡ್ತಿದ್ದಾಳೆ ... ದೊಡ್ಡ ವಾಹನದ ಯೋಗ ಇದೆ" ಅಂತ ... ಅಯ್ಯೋ ಪಾಪ, ಈತನನ್ನು ಹೊತ್ತೊಯ್ಯಲು ಕಪ್ಪು ವಾಹನವೇ ಬರುತ್ತದೋ ಏನೋ? ಆತ ನುಡಿದ "ಸ್ವಾಮೀ, ದಿನ ನಿತ್ಯದ ಜೀವನ ಸಾಗಿಸಿದರೆ ಸಾಕು ಅಂತಿರೋ ನನ್ ಹತ್ತಿರ ಗಾಡಿ ಕೊಳ್ಳಲಿಕ್ಕೆ  ದುಡ್ಡೆಲ್ಲಿದೆ?" ಅಂತ ... 

 

ಪುಟ್ಟಾಜೋಯಿಸ ಉವಾಚ "ಯೋಗ ಇರದಿದ್ದ್ರೆ ಬರಿಸಿಕೊಳ್ಳಬೇಕು. ಲೋನ್ ಬೇಕಿದ್ರೆ ನಾನು ಅರೇಂಜ್ ಮಾಡ್ತೀನಿ" ಅಂತ !!!

 

ನನಗೇನೋ ಅರ್ಥ ಆಯ್ತು ಪುಟ್ಟಾಜೋಯಿಸನ ವ್ಯವಹಾರ. ಸುಬ್ಬನಿಗೆ ಹೇಗೆ ಹೇಳಲಿ? ಅದೇ ದೊಡ್ಡ ವಿಷಯ. ನಿಮಗೆ ಗೊತ್ತಿದ್ರೆ ಹೇಳಿ.

 

Comments