ಸುಮಧುರ ಗಝಲ್ ಗಳು

ಸುಮಧುರ ಗಝಲ್ ಗಳು

ಕವನ

ಗಝಲ್- ೧

ಹೊಸನಾಡ ಕಟ್ಟಲು ಹೊರಡುವೆವು ನಾವಿಂದು 

ಸ್ವಾರ್ಥತೆಯ ಕೆಡವುತಲಿ ಬಾಳುವೆವು ನಾವಿಂದು 

 

ಜೀವಿಗಳ ಹಿತದೊಳಗೆಯೇ ಒಂದೆನುತ ಹೋಗೋಣ

ಒಲುಮೆಯಾ ಉಳುಮೆಗೆ ನಡೆಯುವೆವು ನಾವಿಂದು

 

ಜಗದೊಳಗಿನ ಜನರೊಳು ಸಮತೆಯನು ಸಾರೋಣ

ಪ್ರಗತಿಯಾಳದ ಜೊತೆಯೇ ಬೆಳೆಯುವೆವು ನಾವಿಂದು

 

ತಾರತಮ್ಯದ ಗೆಲುವನ್ನು ಬೇಡವದು ಹೇಳೋಣ

ನೆಮ್ಮದಿಯ ಬದುಕಲ್ಲಿ ನಲಿಯುವೆವು ನಾವಿಂದು

 

ನನ್ನದೆನುವುದನು ಮರೆಯುತ ಅರಿಯೋಣ ಈಶಾ

ಪಯಣದೊಳು ಸವಿಯಾಗಿ ಸಾಗುವೆವು ನಾವಿಂದು

***

ಗಝಲ್- ೨  

ಮನವು ಇರುವಿಕೆಗಳ ನಡುವೆ ಸಾಗಲಿ ಹೀಗೆಯೆ

ಧ್ಯಾನಗಳ ಎಡೆಯಲ್ಲಿ ತನುವು ಮಾಗಲಿ ಹೀಗೆಯೆ

 

ಯೋಗದೊಳಗಿನ  ಕ್ಷಣಗಳ ಜೊತೆಯಲ್ಲಿ ಬಾಳಬೇಕು ನಾವೆಲ್ಲ

ಪ್ರಾಣಯಾಮದ  ಮಿಂಚದು ಕಣದೊಳಗೆ ಹೋಗಲಿ ಹೀಗೆಯೆ

 

ಆತ್ಮದುಸಿರಿನ ಪಯಣ ನಾಡಿಗಳಲ್ಲಿ ವಿದ್ಯುತ್ತಿನಂತೆ ಹೊಮ್ಮಲಿ

ಚೈತನ್ಯ ಚಿಂತನೆಗಳಾಳ ಹೃದಯದಾಳದಿ ಮೊಳಗಲಿ ಹೀಗೆಯೆ

 

ಸಂತೋಷಗಳ ಬದುಕಿನಾಳದ ಉಸಿರಲ್ಲಿ ಚೇತನ ಹರಡಲಿ

ಸವಿಸ್ತಾರ ನಡೆಯೊಳಗೆ ಸವಿನುಡಿಯು ಬಾಗಲಿ ಹೀಗೆಯೆ

 

ಆರೋಗ್ಯದೊಳಗಿನ ಸಂಸ್ಕೃತಿಯೊಳು ಸಾಮರಸ್ಯ ಚಿಮ್ಮಲಿ ಈಶಾ

ಸದಾಶಯವು ಸಕಾರಣದ ಸಂಯೋಗದೊಳು ಬೆಳಗಲಿ ಹೀಗೆಯೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್