ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.

ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.

ಬರಹ

ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಿಂದ ರಾಮನಗರಕ್ಕೆ ಹೋಗುವ ರಸ್ತೆ. ಗಣೇಶಗುಡಿ ಮುಖ್ಯ ರಸ್ತೆ ಸಹ ಇದೆ. ಈ ಹಾದಿಯ ಮೇಲೆ ೧೬ ಮೈಲಿ ಕ್ರಮಿಸಿದರೆ ಬಲಬದಿಗೆ ಶಿಂಗರಗಾಂವ್ ಕ್ರಾಸ್. ಈ ಕತ್ತರಿಯಲ್ಲಿ ಸುಮಾರು ೬ ಮೈಲಿ ಹೋದರೆ ಜಗಲಬೇಟ್ ಕ್ರಾಸ್. ಇಲ್ಲಿಂದ ಬಲಬದಿಗೆ ೮ ಮೈಲಿ ನಡೆದರೆ ಸಿಗುವ ಹಳ್ಳಿ ಕೂಡಲ್ ಗಾಂವ್. ಇದೊಂದು ರೀತಿ ನಮ್ಮ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ ಕ್ರಾಸ್ ಇದ್ದಂತೆ!

ಅದೊಂದು ಸುಂದರ ಹಳ್ಳಿ. ಸ್ವಚ್ಛಂದ ಪರಿಸರ. ಸಮೃದ್ಧ ಕಾಡು. ಪ್ರಾಣಿ-ಪಕ್ಷಿಗಳ ಕಲರವದ ರಮಣೀಯ ವಾತಾವರಣ. ಅಲ್ಲಲ್ಲಿ ಹರಿಯುವ ಸುಂದರ ಝರಿಗಳು. ನೀರಿನ ತೊರೆಗಳು. ಕಾಡನ್ನು ಸೀಳಿಕೊಂಡು ಹೋಗಿರುವ ಕಾಲು ದಾರಿಗಳು. ಹತ್ತಾರು ಮೈಲಿಗಳನ್ನು ಗದ್ದೆಯ ಬದುಗಳ ನಡುವಿನ ‘ಸುಂದರಿಯ ಬೇತಲೆ ಮಣಿ!’ ಮೇಲೆ ಕಾಲ್ನಡಿಗೆಯಲ್ಲೇ ಕ್ರಮಿಸುವ ಜನ. ಅಬ್ಬಾ ಮೈನವಿರೇಳಿಸುವ ಅನುಭವ!

‘ಇಲ್ಲೊಂದು ಹಳ್ಳಿ ಇದೆ, ೩೦ ಹೆಂಚಿನ ಮನೆಗಳಿವೆ, ಸುಮಾರು ೧೦೦ ಜನರ ವಸತಿ ಇದೆ’ ಎಂದು ಪತ್ತೆ ಹಚ್ಚಿದ ಪರಿಸರವಾದಿ, ಕ್ರಿಯಾಶೀಲಗೆಳೆಯರು ಬಳಗದ ಅಧ್ಯಕ್ಷ ಮುಕುಂದ ಮೈಗೂರ ಅವರಿಗೆ ‘ಹ್ಯಾಟ್ಸ್ ಆಫ್’.

ಸುಮಾರು ೪ ವರ್ಷಗಳ ಹಿಂದಿನ ಮಾತು. ‘ಸ್ಥಳೀಯ ಆರೋಗ್ಯ ಪರಂಪರೆಗಳ ಪುನರುತ್ಥಾನ ಪ್ರತಿಷ್ಟಾನ’ (ಎಫ್.ಆರ್.ಎಲ್.ಎಚ್.ಟಿ.), ಮೈಗೂರ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ನಾಟಿ ವೈದ್ಯರ ಸಂಘಟನೆಯ ಜವಾಬ್ದಾರಿ ವಹಿಸಿ, ಪ್ರಾಚಾರ್ಯ ಅನ್ವೇಷಕನನ್ನಾಗಿ ನೇಮಕ ಮಾಡಿತ್ತು. ಕೂಡಲ್ ಗಾಂವ್ ಕ್ಕೆ ಆಗ ರಸ್ತೆ ಇರಲಿಲ್ಲ. ಭತ್ತದ ಗದ್ದೆಯ ಬದುಗಳ ಮೇಲೆ ಕಾಡು ಹಾದಿ ಸೀಳಿಕೊಂಡು ಹೋಗಬೇಕಿತ್ತು. ನದಿ-ಹಳ್ಳಗಳು ತುಂಬಿ ಹರಿಯುತ್ತಿದ್ದವು. ನಾಗರ ಹಾವು, ಕಾಳಿಂಗ ಸರ್ಪ, ಕರಡಿ, ಚಿರತೆ, ಆನೆ, ಜಿಂಕೆಯ ಹಿಂಡು ಎಲ್ಲವನ್ನು ಎದುರಿಸಿ ಗ್ರಾಮ ತಲುಪಬೇಕಿತ್ತು. ಇಂದಿಗೂ ಅಲ್ಲಿನ ನಿತ್ಯದ ಬದುಕು ಅವುಗಳೊಂದಿಗೆಯೇ!

ಮರಾಠಿ ಭಾಷಿಕ ಗೌಳಿ ಸಮುದಾಯದ ಜನ ಅಲ್ಲಿ ವಾಸವಾಗಿದ್ದಾರೆ. ಭತ್ತದ ಗದ್ದೆಗಳನ್ನು ಮಾಡಿಕೊಂಡು, ಜಾನುವಾರುಗಳನ್ನು ಸಾಕಿಕೊಂಡು ಬದುಕಿನ ಬಂಡಿ ಓಡಿಸುತ್ತಿದಾರೆ. ತಲೆಯ ಮೇಲೆ ರಾಜಸ್ಥಾನಿ ಭಾಯಿಗಳು ಸುತ್ತುವಂತೆ ಬಿಳಿ ರುಮಾಲು, ಉದ್ದನೆಯ ತೋಳಿನ ಬಿಳಿ ನೆಹರೂ ಅಂಗಿ ಹಾಗು ನೀಲಿ ಬಣ್ಣದ ಹಾಫ್ ಪ್ಯಾಂಟ್ ಗಂಡಸರ ದಿರಿಸು. ಹೆಣ್ಣುಮಕ್ಕಳು ಮೊಣಕಾಲುಗಳ ಮೇಲೆ ಸೀರೆ ಬರುವಂತೆ ಕಚ್ಚೆ ಹಾಕಿ ಹಸುರು ಸೀರೆ ಉಡುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ.

ಅವಶ್ಯಕತೆಗೆ ಅನುಗುಣವಾಗಿ ಕಡನ್ನು ಕಡಿದು, ಭತ್ತದ ಗದ್ದೆಗಳನ್ನು ಮಾಡಿಕೊಂಡು ಬದುಕುವ ಈ ಜನರಿಗೆ ಸೀಮೆ ಎಣ್ಣೆಯೇ ಮುಖ್ಯ ಇಂಧನ. ವಿದ್ಯುತ್ ಶಕ್ತಿಯ ಮುಖ ದರ್ಶನ ಇಂದಿಗೂ ಈ ಗ್ರಾಮಕ್ಕಿಲ್ಲ. ಮುಖ್ಯ ಆಹಾರ ಬೆಳೆ ಭತ್ತ. ವಸ್ತು ವಿನಿಮಯ ಪದ್ಧತಿಯಲ್ಲಿ ವ್ಯವಹಾರ. ಈ ಜನಕ್ಕೆ ಕನ್ನಡ ಪರಕೀಯ ಭಾಷೆ. ಗಡ್ಡೆ, ಗೆಣಸು ಹಾಗು ಸಾಕು ಪ್ರಾಣಿಗಳಾದ ಆಡು, ಕುರಿ, ಕೋಳಿ, ಮೊಲ ಮುಂತಾದವುಗಳ ಮಾಂಸವೇ ಉಪ ಆಹಾರ.

ಈ ಜನರ ‘ಹಿರಿಯ’ ಗೋವಿಂದ ನಾಗಪ್ಪ ಹುಂದ್ರೆ, ಉತ್ತಮ ನಾಟಿ ವೈದ್ಯ. ಉರಿ ಮೂತ್ರ, ಕರುಳಿನ ಹರಳು, ಜಾನುವಾರುಗಳ ಆರೋಗ್ಯ ಸಮಸ್ಯೆಗೆ ಈ ವೈದ್ಯನೇ ಮದ್ದು ಅರೆಯುವವ. ಗೋವಿಂದಪ್ಪ ಅವರ ಮನವೊಲಿಸಿ ಮುಕುಂದ ಮೈಗೂರ್ ೨೦ ಜನ ಸದಸ್ಯರಿರುವ ಎರಡು ಸ್ವ-ಸಹಾಯ ಸಂಘಗಳನ್ನು ರೂಪಿಸಿ, ಆರ್ಥಿಕ ಸ್ವಾವಲಂಬನೆ ತಂದು ಕೊಡುವಲ್ಲಿ ಶ್ಲಾಘ್ನನೀಯ ಕಾರ್ಯ ಮಾಡಿದ್ದಾರೆ.

ಈಗ ಇಲ್ಲಿ ಕಾಳಮ್ಮದೇವಿ ಸ್ವ-ಸಹಾಯ ಸಂಘ ಹಾಗು ಹಂಡಿಬಡಗನಾಥ ಸ್ವ-ಸಹಾಯ ಸಂಘ ಚಾಲನೆಯಲ್ಲಿವೆ. ಸಕ್ರಿಯವಾಗಿರುವ ಸಂಘದ ಸದಸ್ಯೆಯರಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಇತ್ತೀಚೆಗೆ ೨೫ ‘ಐಶ್ವರ್ಯಾ’ ಸೌರ ವಿದ್ಯುತ್ ಚಾಲಿತ ಚಿಕ್ಕ ದೀಪಗಳ ಕೊಡುಗೆ ನೀಡಿತು. ಕತ್ತಲೆಯ ಕೋಣೆಗಳಂತಿರುವ ಮನೆಗಳಲ್ಲಿ ಚಿಮಣಿ ದೀಪ ಉರಿಸಿಕೊಂಡು ಬದುಕುತ್ತಿದ್ದವರಿಗೆ ಈ ಪರಿಸರ ಸ್ನೇಹಿ ಕೊಡುಗೆ ಬ್ಯಾಂಕ್ ವತಿಯಿಂದ.

ನೋಬಲ್ ಎನರ್ಜಿ ಸೋಲಾರ ಟೆಕ್ನೋಲೋಜಿಸ್ ಲಿಮಿಟೆಡ್ (ನೆಸ್ಟ್) ಕಂಪೆನಿಯ ಸೌರ ವಿದ್ಯುತ್ ದೀಪಗಳಿವು. ಇದು ಬ್ಯಾಂಕಿನ ವ್ಯವಹಾರ ಕ್ಶೇತ್ರವಾಗಿರದಿದ್ದರೂ ಕೂಡಲ್ ಗಾಂವ್ ಗ್ರಾಮಸ್ಥರಿಗೆ ಈ ಕೊಡುಗೆ ನೀಡಿ ತನ್ನ ಸಾಮಾಜಿಕ ಕಳಕಳಿ ಹಾಗು ಬದ್ಧತೆ ಪ್ರದರ್ಶಿಸಿದೆ.

ವನವಾಸಿಗಳ ಆನಂದಕ್ಕೆ ಅಂದು ಪಾರವೇ ಇರಲಿಲ್ಲ. ಮನೆಗಳಲ್ಲಿ ಸೌರ ವಿದ್ಯುತ್ ದೀಪ ಬಳಗುತ್ತಿದ್ದುದನ್ನು ಕಂಡು ಅವರ ಕಣ್ಣಂಚು ತೇವಗೊಂಡಿದ್ದವು. ಈ ಹೃದಯಸ್ಪರ್ಷಿ ಸಮಾರಂಭವನ್ನು ಸಾಕ್ಷೀಕರಿಸಿದ ಕೆ.ವಿ.ಜಿ.ಬಿ.ಯ ಸಾರ್ವಜನಿಕ ಸಂಪರ್ಕಾಧಿಕಾರಿ ಉಲ್ಲಾಸ್ ಗುನಗಾ ಅವರು, ‘ಚಿಮಣಿ ರಹಿತ ಗ್ರಾಮ’ ಎಂಬ ವಿನೂತನ ಯೋಜನೆಯ ಅಡಿಯಲ್ಲಿ ಈ ಸೌರ ವಿದ್ಯುತ್ ದೀಪಗಳನ್ನು ಬ್ಯಾಂಕ್ ವತಿಯಿಂದ ಕೊಡಲಾಗುತ್ತಿದೆ. ಈ ದೀಪಗಳು ಪರಿಸರಸ್ನೇಹಿ ಹಾಗು ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಕೆ ಮಾಡಿ ಉಪಯೋಗಿಸುವಂಥಾದ್ದು. ೧೮ ಸಾವಿರ ರೂಪಾಯಿ ಬೆಲೆಗೆ ಲಭ್ಯವಿದ್ದ ಈ ದೀಪವನ್ನು ಬಡವರ ಮನೆ ಬೆಳಗಿಸಲು ಕೇವಲ ೨ ಸಾವಿರ ರೂಪಾಯಿಗಳಿಗೆ ಚಿಕ್ಕ ದೀಪ ದೊರಕುವಂತೆ ಮಾಡಿದ ಹೈದರಾಬಾದಿನ ಧರ್ಮಪ್ಪ ಬಾರ್ಕಿ ಇಂಗ್ಲೆಂಡಿನ ಗ್ರೀನ್ ಆಸ್ಕರ್ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಸರಳ ಬಳಕೆಯ ವಿಧಾನ ಈ ದೀಪದ ವೈಶಿಷ್ಟ್ಯ ಎಂದು ವಿವರಿಸಿದರು. ಮುಕುಂದ ಮೈಗೂರ್ ಈ ಮಾತುಗಳನ್ನು ಮರಾಠಿ ಭಾಷೆಗೆ ತರ್ಜುಮೆ ಮಾಡಿ ಜನರಿಗೆ ಮನವರಿಕೆ ಮಾಡಿದರು.

ವೈದ್ಯ ಗೋವಿಂದಪ್ಪ ಹುಂದ್ರೆ ಉಸ್ತುವಾರಿ ಹೊತ್ತು ಎಲ್ಲ ಮನೆಗಳಿಗೂ ಸೌರ ವಿದ್ಯುತ್ ದೀಪ ಅಳವಡಿಸಿ ‘ಕರುಣಾಳು ಬಾ ಬೆಳಕೆ ಕೈ ಹಿಡಿದು ನಡೆಸೆನ್ನನು’ ಎಂದು ಕೆ.ವಿ.ಜಿ.ಬಿ.ಯ ಕೊಡುಗೆಯನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಗ್ರಾಮಸ್ಥರಿಗೆ ನೆರವಾದರು.

Mukund Maigur aptly said- `If a free society cannot help the many who are poor; it cannot save the few who are rich!'

ಸತ್ಯವಲ್ಲವೇ? ಅನುಭವ ಸತ್ಯ ಅಮೃತ ಸಮಾನವಾದದ್ದು. ಹಾಗೆಯೇ..ಈ ಕೆಳಗಿನ ಮಾತನ್ನು ಸತ್ಯವಾಗಿಸಿದ ಶ್ರೇಯಸಹ ನಮಗೇ ಸಲ್ಲಬೇಕು!

Thomas Alva Edison once said, -`we will make electricity so cheap that only the rich will be able to burn candles!'

ಕೊನೆಯದಾಗಿ ಬದುಕು ಸುಡುವ/ ಸುಡುತ್ತಿರುವ ಸೀಮೆ ಎಣ್ಣೆ ಬಗ್ಗೆ ಎರಡು ಆಘಾತಕಾರಿ ಮಾಹಿತಿ:

ಬಡವರ ಇಂಧನ ಸೀಮೆ ಎಣ್ಣೆಯಿಂದ ಆಗುತ್ತಿರುವ ಅನಾಹುತ ಅಷ್ಟಿಷ್ಟಲ್ಲ. ಜಗತ್ತಿನಾದ್ಯಂತ ೯೬ ಬಿಲಿಯನ್ ಲೀಟರ್ ಸೀಮೆ ಎಣ್ಣೆಯನ್ನು ದೀಪ ಉರಿಸುವುದಕ್ಕಾಗಿಯೇ ವ್ಯಯಿಸಲಾಗುತ್ತದೆ. ಇದರಿಂದಾಗಿಯೇ ಸರಿ ಸುಮಾರ್ರು ೨ ಮಿಲಿಯನ್ ಮಕ್ಕಳು ಪ್ರತಿ ಎರಡೂವರೆ ವರ್ಷ ಉಸಿರಾಟದ ತೊಂದರೆಗೆ ಸಿಲುಕಿ ಮರಣ ಹೊಂದುತ್ತವೆ. ಭಾರತದಲ್ಲಿ ಎರಡೂವರೆ ಮಿಲಿಯನ್ ಜನರಲ್ಲಿ ಮೂರುವರೆ ಲಕ್ಷ ಮಕ್ಕಳು ಶೇ. ೬೦ಕ್ಕೂ ಹೆಚ್ಚು ಸುಟ್ಟುಕೊಂಡು ಮರಣ ಹೊಂದುತ್ತವೆ. ಒಂದು ಚಿಕ್ಕ ಚಿಮಣಿದೀಪ ಪ್ರತಿ ವರ್ಷ ೭೨ ಲೀಟರ್ ಸೀಮೆ ಎಣ್ಣೆ ಸುಡುತ್ತದೆ. ಅರ್ಥಾತ್ ಇದು ವಿದ್ಯುತ್ ದೀಪಕ್ಕಿಂತಲೂ ದುಬಾರಿ!

ಬಡವರ ಗಾಯದ ಮೇಲೆ ಬರೆ ಎಳೆದಂತೆ ನೀಲಿ ಬಣ್ಣದ ಸೀಮೆ ಎಣ್ಣೆ ಈಗ ದೊರಕುವುದು ಕೇವಲ ಕಾಳ ಸಂತೆಯಲ್ಲಿ ಮಾತ್ರ. ಸರಕಾರ ಸಬ್ಸಿಡಿ ದರದಲ್ಲಿ ಬಡವರಿಗೆ ಸೀಮೆ ಎಣ್ಣೆ ದೊರಕಿಸಿಕೊಡಲು ಮುಂದಾದರೂ ನಮ್ಮ ಹಳ್ಳಿಗರ ವಾರ್ಷಿಕ ಆದಾಯದ ಶೇ. ೧೦ ರಿಂದ ೨೫ರಷ್ಟು ವರಮಾನ ಸೀಮೆ ಎಣ್ಣಿಗಾಗಿಯೇ ವ್ಯಯವಾಗುತ್ತದೆ. ಹೀಗೆ ಅಭಿವೃಧ್ಧಿ ಹೊಂದುತ್ತಿರುವ ರಾಷ್ಟಗಳಲ್ಲಿ ಪ್ರತಿ ವರ್ಷ ೨೪೪ ಮಿಲಿಯನ್ ಟನ್ ಇಂಗಾಲದ-ಡೈ-ಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ!..ಇಂದಿಗೂ ಸೇರುತ್ತಿದೆ?