ಸ್ಟೇಟಸ್ ಕತೆಗಳು (ಭಾಗ ೧೦೨೩)- ಜೈಹಿಂದ್
ಶಿಕ್ಷಣವನ್ನ ಮುಗಿಸಿದ್ದರೆಷ್ಟೇ. ಇಬ್ಬರಿಗೂ ಅವರವರ ಕನಸಿನ ಬಗ್ಗೆ ಅದ್ಭುತವಾದ ಆಲೋಚನೆಗಳಿದ್ದವು. ಜೊತೆಗೆ ಸೇರಿ ಏನಾದರೂ ಹೊಸತನ ಮಾಡುವ ಉತ್ಸಾಹವೂ ಅವರಲ್ಲಿತ್ತು. ಆತನ ಪರಿಶ್ರಮಕ್ಕೆ ತಕ್ಕ ಹಾಗೆ ದೇಶ ಸೇವೆ ಮಾಡುವ ಕೆಲಸ ಸಿಕ್ಕಿತು. ಆಕೆಯೂ ಕೂಡ ತನ್ನಿಷ್ಟದ ನೌಕರಿಯನ್ನು ಹುಡುಕಿಕೊಂಡಳು. ಆತ ಗಡಿಯಲ್ಲಿ ಕಾಯುತ್ತಿರುವಾಗ ಆಕೆ ಊರಲ್ಲಿದ್ದು ಊರಿನ ಒಳಿತಿಗಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಳು. ಬದುಕುವುದಾದರೆ ಜೊತೆಗೆ ಬದುಕುವುದು ಅನ್ನೋ ನಿರ್ಧಾರ ಅವರದಾಗಿತ್ತು. ಹಾಗಾಗಿ ಮನೆಯವರನ್ನು ಒಪ್ಪಿಸಿ ಹಲವು ವರ್ಷಗಳ ನಂತರ ತಂಕಣ ಭಾಗ್ಯ ಕೂಡಿ ಬಂತು. ಮುದ್ದಿನ ಮಡದಿ ಕೈ ಹಿಡಿದು ನಡೆದ ಸುಂದರ ಕ್ಷಣಗಳನ್ನು ತನ್ನ ಜೋಳಿಗೆಯಲ್ಲಿ ತುಂಬಿಸಿಕೊಂಡು ಮತ್ತೆ ಗಡಿಯ ಕಡೆಗೆ ನಡೆದ. ಕೆಲವು ದಿನಗಳಿಗೊಮ್ಮೆ ಕುಶಲೊಪರಿಗಳನ್ನ ಮಾತನಾಡುತ್ತ ತಮ್ಮ ಕನಸುಗಳ ಬಗ್ಗೆ ವಿಷಯ ಹಂಚಿಕೊಳ್ಳುತ್ತಿದ್ದರು. ಇಬ್ಬರ ಕನಸುಗಳು ಅದ್ಭುತವಾಗಿತ್ತು. ಬದುಕಿಗೆ ಕೂಡ ಇವರಿಬ್ಬರೂ ಜೊತೆಯಾಗಿದ್ದು ಕನಸುಗಳನ್ನು ನನಸು ಮಾಡಿದರೆ ಹಲವಾರು ಮುಗ್ಧಜೀವಗಳು ಇನ್ನೊಂದಷ್ಟು ಸಾಧನೆ ಮಾಡಬಹುದಲ್ಲ ಅಂತ ಅನ್ನಿಸಿತು ಕೂಡ. ಆದರೂ ವಿಧಿ ಅನ್ನುವವನೊಬ್ಬನಿದ್ದಾನಲ್ಲ? ಶತ್ರುಗಳ ಗುಂಡಿಗೆ ಬಲಿಯಾಗುತ್ತಿರುವ ತನ್ನವರನ್ನು ಉಳಿಸುವುದಕ್ಕೆ ಎದೆಯೊಡ್ಡಿದ ವೀರ ಅಂದು ಪ್ರಾಣವನ್ನು ಅರ್ಪಿಸಿಬಿಟ್ಟ. ಸುದ್ದಿ ಮನೆಗೆ ಮನೆಗೆ ತಲುಪಿದಾಗ ಆಕೆ ನಂಬುವುದಕ್ಕೆ ತಯಾರಿಲ್ಲ. ಯಾಕೆಂದರೆ ನಿನ್ನೆ ರಾತ್ರಿ ಅವರಿಬ್ಬರೂ ನಾಳಿನ ಬದುಕಿನ ಬಗ್ಗೆ ಅದ್ಭುತವಾಗಿ ಮಾತನಾಡಿದ್ದರು. ಇವತ್ತು ಮತ್ತೆ ವಿಷಯ ನಿಖರವಾಯಿತು. ತ್ರಿವರ್ಣ ಧ್ವಜ ಹೊತ್ತ ದೇಹಬಂತು. ಆಕೆ ಸತ್ಯವನ್ನ ಅರಗಿಸಿಕೊಳ್ಳುವುದಕ್ಕೆ ಆರಂಭಿಸಿದಳು. ಕಣ್ಣೀರಿಳಿಯುತ್ತಾ ಇತ್ತು. ಅವನೊಂದಿಗೆ ಕಳೆದ ಅದ್ಭುತ ಕ್ಷಣಗಳು ಹಂಚಿಕೊಂಡ ಕನಸುಗಳು ಮಾತ್ರ ಇನ್ನು ಮುಂದೆ ಆಕೆಯೊಂದಿಗೆ ಬದುಕ್ತದೆ. ಅವನ ನೆನಪುಗಳೊಂದಿಗೆ ಆಕೆ ಎಲ್ಲ ಕನಸುಗಳು ನನಸು ಮಾಡುವುದಕ್ಕೆ ಪಣತೊಟ್ಟು ಜೈ ಹಿಂದ್ ಎನ್ನುವ ಮಾತಿನೊಂದಿಗೆ ಅವನ ಚಿತೆ ಉರಿಯುವುದನ್ನ ಕಣ್ಣೀರುಳಿಸುತ್ತಾ ನೋಡಿದಳು. ಆಕೆಯ ದೇಶಭಕ್ತಿಯ ಮುಂದೆ ಎಲ್ಲರೂ ಮೌನವಾಗಿ ಬಿಟ್ಟರು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ