ಸ್ಟೇಟಸ್ ಕತೆಗಳು (ಭಾಗ ೧೦೮೩)- ಮಾತುಕತೆ
ಇವತ್ತು ಸಮುದ್ರ ರಾಜ ಮಾತಾಡಿದ. ಅವನಲ್ಲಿ ಮಾತನಾಡದೆ ತುಂಬಾ ದಿನವಾಗಿತ್ತು. ಇತ್ತೀಚಿಗೆ ನನ್ನ ಅವನ ಭೇಟಿ ಆಗಿರಲೇ ಇಲ್ಲದಿದ್ದರೆ. ಆಗಾಗ ಹೋಗಿ ಕುಶಲೊಪರಿ ವಿಚಾರಿಸಿಕೊಂಡು ಅಲ್ಲಿಂದ ಹೊರಟು ಬರ್ತಾ ಇದ್ವಿ. ಇವತ್ತು ಅವನನ್ನ ಭೇಟಿಯಾದಾಗ ನನ್ನ ಮುಂದಿನ ಬದುಕಿನ ಬಗ್ಗೆ ಅವನಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ಅವನಿಂದ ಉತ್ತರವನ್ನು ಬಯಸ್ತಾ ಹೋದೆ. ಅವನು ಮಾತನಾಡುತ್ತಿರಲಿಲ್ಲ. ಆ ಕಾರಣಕ್ಕೆ ನನ್ನ ಆಲೋಚನೆಗಳನ್ನ ಹೇಳಿ ಒಂದು ಕಡೆ ನಿಂತು ಆಲೋಚನೆ ಸತ್ಯವಾದರೆ ನನ್ನ ಪಾದವನ್ನು ಬಂದು ಸೋಕು ಅಂತ ಹೇಳ್ತಾ ಇದ್ದೆ, ಅವನಿಗೆ ನಿರ್ದಿಷ್ಟ ಸಮಯವನ್ನು ನೀಡ್ತಾ ಇದ್ದೆ. ಆತ ಓಡೋಡಿ ಬಂದು ಪಾದವನ್ನು ಸೋಕಿದಾಗ ನನ್ನ ಪ್ರಶ್ನೆಗೆ ಹೌದೆನ್ನುವ ಉತ್ತರ ಸಿಗುತ್ತಾ ಇತ್ತು. ಕೆಲವೊಮ್ಮೆ ಎಷ್ಟೇ ಹೊತ್ತು ಕಾದರೂ ಆತ ನನ್ನ ಹತ್ತಿರವೇ ಸುಳಿಯದೇ ಇದ್ದದ್ದನ್ನು ಕಂಡಾಗ ಪ್ರಶ್ನೆಗೆ ಉತ್ತರ ಅಲ್ಲ ಎಂದು ತಿಳಿಯುತ್ತಿತ್ತು. ಎಲ್ಲೂ ಕೂಡ ಕೆಟ್ಟದಾಗುವ ಯಾವ ಸೂಚನೆಯನ್ನು ನೀಡಲಿಲ್ಲ .ನನ್ನ ಬದುಕಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡುವುದಕ್ಕೆ ಅವನು ಮುಂದೆಯೂ ಕಾಯುತ್ತಿರುತ್ತಾನೆ. ಅವನು ಹೊರಟು ಹೋಗುವಾಗ ಹೇಳಿದ್ದು ಕೆಲವೊಂದು ಮಾತುಗಳು ನಿನ್ನ ಪ್ರಶ್ನೆಗೆ ನಾನು ಉತ್ತರ ಕೊಟ್ಟಿದ್ದೇನೆ ನನ್ನ ಪ್ರಶ್ನೆಗೂ ಒಂದಷ್ಟು ಉತ್ತರವನ್ನು ನೀಡು. ಹಿಂದಿನ ಹಾಗಿಲ್ಲ ನನ್ನ ಬದುಕು. ಹೆಚ್ಚು ಕಲ್ಮಶಗಳನ್ನು ಹೊತ್ತು ನಿಂತಿದ್ದೇನೆ ತಡೆಯಿರದೆ ಮುಂದೆ ಮುಂದೆ ಸಾಗುತ್ತಿದ್ದೇನೆ . ನನ್ನನ್ನು ಆಗಾಗ ಗಮನಿಸ್ತಾ ಇರು ಒಳ್ಳೆಯದಾಗಲಿ... ಮಾತುಕತೆಯ ಇಂದಿನ ಸಂಚಿಕೆ ಮುಕ್ತಾಯವಾಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ