ಸ್ಟೇಟಸ್ ಕತೆಗಳು (ಭಾಗ ೧೧೨೧)- ಭಾರ
ನನಗೆ ಏನಾದರೂ ಅನ್ನಿಸಿದರೆ ಅದನ್ನು ಯಾರಲ್ಲಾದ್ರೂ ಪ್ರಶ್ನಿಸಿ ಅದಕ್ಕೆ ಉತ್ತರವನ್ನು ಕಂಡುಕೊಳ್ಳುತ್ತಿದ್ದೆ. ಹೀಗೆ ನನಗೆ ಹಾರಬೇಕು ಅಂತ ಅನ್ನಿಸ್ತು, ನೆಲವನ್ನ ಬಿಟ್ಟು ಎತ್ತರದಲ್ಲಿ ಹಾರಾಡಬೇಕು ಮನಸೋ ಇಚ್ಛೆ ಸಂಭ್ರಮ ಪಡಬೇಕು, ಎಲ್ಲವನು ಎತ್ತರದಿಂದ ವೀಕ್ಷಿಸಬೇಕು, ಇದರ ಬಗ್ಗೆ ತರಬೇತಿ ಪಡೆಯುವುದಕ್ಕೆ ಅಥವಾ ಆ ವಿಷಯವನ್ನು ತಿಳಿದುಕೊಳ್ಳುವುದಕ್ಕೆ ಅಂತ ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕ್ತಾ ಇದ್ದೆ. ಅವತ್ತು ಪಾರಿವಾಳವೊಂದು ಮನೆ ಅಂಗಳದಲ್ಲಿ ಬಂದು ಕುಳಿತಿರುವುದನ್ನು ಕಂಡು, ಅದಕ್ಕಿಂತ ಅದ್ಭುತ ವ್ಯಕ್ತಿ ಬೇರೆ ಯಾರು ಇಲ್ಲ ಅಂತಂದುಕೊಂಡು ಅದರಲ್ಲಿ ಪ್ರಶ್ನೆಯನ್ನು ಕೇಳಿದೆ, ಅದು ಕೊಟ್ಟ ಉತ್ತರ ತುಂಬಾ ಸುಲಭವಾಗಿತ್ತು, ಎಲ್ಲರಿಗೂ ಹಾರುವುದಕ್ಕೆ ಸಾಧ್ಯ ಇದೆ ಆದರೆ ಹೆಚ್ಚಿನವರು ಪ್ರಯತ್ನಪಟ್ಟಿಲ್ಲ ಅಂದುಕೊಳ್ಳುತ್ತೇನೆ. ನಮಗೆ ರೆಕ್ಕೆ ಇದೆ ನಾವು ಹಾರುತ್ತಾ ಇದ್ದೇವೆ ಅದು ಒಂದೇ ಕಾರಣವಲ್ಲ ನಾವು ಹಗುರಾಗಿದ್ದೇವೆ, ಆ ಕಾರಣಕ್ಕೆ ಎತ್ತರಕ್ಕೆ ಏರುತ್ತೇವೆ. ನೀವು ಭಾರವಾಗಿದ್ದೀರಿ ಅದಕ್ಕೆ ನೆಲವನ್ನ ಬಿಟ್ಟು ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ಮೊದಲು ಮನಸ್ಸಿನ ಒಳಗೆ ತುಂಬಿಕೊಂಡಿರುವ ಕಲ್ಮಶಗಳು, ಯೋಚನೆಗಳು ದುರಾಲೋಚನೆಗಳು ಭವಿಷ್ಯದ ಚಿಂತನೆಗಳು ಬದುಕಿನ ಆಸೆಗಳು ಪ್ರೀತಿ ಪ್ರೇಮ ಇವೆಲ್ಲವನ್ನ ತೊರೆದು ಹಗುರಾಗಿ ಬನ್ನಿ. ನೀವು ನಮಗಿಂತಲೂ ಎತ್ತರದಲ್ಲಿ ಹಾರಬಹುದು, ನೀವು ಎಲ್ಲವನ್ನು ತುಂಬಿಕೊಂಡು ತುಂಬಿಕೊಂಡು ಭಾರವಾಗಿ ನೆಲಕ್ಕೆ ಅಪ್ಪಿಕೊಂಡಿದ್ದೀರಿ. ಮೇಲಿರುವುದಕ್ಕೆ ಹೇಗೆ ಸಾಧ್ಯ ಅಂತಂದು ಹಾರಿಹೋಯಿತು. ನಾನು ಹಗುರಾಗುವುದು ಹೇಗೆ ಅಂತ ಯೋಚಿಸಿ ಯೋಚಿಸಿ ಮತ್ತಷ್ಟು ಭಾರವಾದೆ, ವಿನಃ ಹಗುರನಾಗಲಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ