ಸ್ಟೇಟಸ್ ಕತೆಗಳು (ಭಾಗ ೧೧೬೭)- ಭಾಷಣ

ವೇದಿಕೆಯಲ್ಲಿ ಭಾಷಣ ಜೋರಾಗಿದೆ. ಮುಂದೆ ಕುಳಿತವರನ್ನು ಉದ್ರೇಕಿಸುತ್ತಾ ಅವರೊಳಗೆ ಅಡಗಿರುವ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ ಅವರೆಲ್ಲರನ್ನ ಹೋರಾಟಕ್ಕೆ ಹಚ್ಚುವಂತಹ ಭಾಷಣ ವೇದಿಕೆಯಲ್ಲಿ ನಡೆಯುತ್ತಿದೆ. ಶತ್ರುವನ್ನ ಸದೆಬಡಿಯಬೇಕು, ನಾವೇ ಶ್ರೇಷ್ಠ ಅನ್ನವಂತಹ ಮಾತುಗಳು ಪುಂಖಾನು ಪುಂಖವಾಗಿ ವೇದಿಕೆಯಲ್ಲಿ ಮುಂದುವರೆಯುತ್ತಲೇ ಇದೆ. ಭಾಷಣ ಮಾಡುವವರು ಟೊಪ್ಪಿ ಹಾಕಿದವರು, ತಿಲಕ ಧರಿಸಿದವರು, ಮಾಲೆಯನ್ನು ಹಾಕಿದವರಿದ್ದಾರೆ. ಮುಂದೆ ಕುಳಿತವನು ತಮ್ಮ ಧರ್ಮಕ್ಕೋಸ್ಕರ ಪ್ರಾಣವನ್ನು ತೆಗಿಯೋಕೆ ಸಿದ್ಧರಾಗಬೇಕು ಅನ್ನುವ ಸಂದೇಶವನ್ನು ದಾಟಿಸಿದ್ದಾರೆ. ಪ್ರತಿಯೊಬ್ಬರ ಮಕ್ಕಳು ಧರ್ಮ ಶಿಕ್ಷಣವನ್ನೇ ಪಡೆಯಬೇಕು ಅದೇ ಮೂಲ ಅನ್ನುವ ಮಾತನ್ನು ಹೇಳಿದರು. ಭಾಷಣ ಮುಗಿಸಿ ವೇದಿಕೆ ಇಳಿಯುವಾಗ ಅವರನ್ನ ಮನೆಗೆ ಕರೆದುಕೊಂಡು ಹೋಗುವುದಕ್ಕೆ ಅವರ ಜೊತೆ ಹತ್ತು ಗಟ್ಟಿ ಹುಡುಗರ ತಂಡವಿದ್ದು ಜಾಗ್ರತೆಯಿಂದ ಮನೆ ತಲುಪಿಸುತ್ತಾರೆ. ಅವರ ಮನೆಯ ಮಕ್ಕಳು ಅವರ ಮನೆಯೊಳಗೆ ಭದ್ರವಾಗಿದ್ದರು ಅವರ್ಯಾರನ್ನು ಹೋರಾಟ ಮಾಡಿದವರಲ್ಲ, ಅವರು ಒಂದು ದಿನವೂ ಪೊಲೀಸ್ ಸ್ಟೇಷನ್ ಮುಖ ನೋಡಿಲ್ಲ, ಜೈಲಿನಲ್ಲಿ ಕತ್ತಲ ಕೋಣೆಯೊಳಗೆ ದಿನ ದೂಡಿಲ್ಲ ಉದ್ರೇಕಿಸುವುದಷ್ಟೆ ಅವರ ಜೀವನದ ಭಾಗವಾಗಿದೆ. ಮಾತು ಕೇಳಿ ಮೈಯೊಳಗೆ ಸೈತಾನ ಪ್ರವೇಶ ಮಾಡಿದ ಮನಸ್ಸುಗಳು ಹಲವರ ಪ್ರಾಣವನ್ನ ತೆಗೆದು ಇನ್ನೂ ಕೂಡ ಕತ್ತಲ ಕೋಣೆಯೊಳಗೆ ಬಂದಿಯಾಗಿದ್ದಾವೆ. ಮನೆ ಕತ್ತಲಲ್ಲಿದೆ, ವೇದಿಕೆಯ ಮೇಲೆ ನಿಂತವನು ಉಗ್ರ ಮಾತಿನ ಮಲ್ಲ ಹೊಸ ಮನೆ ಕಟ್ಟಿಸುತ್ತಿದ್ದಾನೆ, ಹೆಚ್ಚು ಶ್ರೀಮಂತನಾಗುತ್ತಿದ್ದಾನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ