ಸ್ಟೇಟಸ್ ಕತೆಗಳು (ಭಾಗ ೧೨೯೫) - ಆಳ
ಅವನು ಪಾಠ ಹೇಳುತ್ತಿದ್ದ. ಅವನ ಪಾಠ ಕೇಳುವುದಕ್ಕಂತಲೇ ಹಲವು ಜನ ವಿದ್ಯಾರ್ಥಿಗಳು ಪಕ್ಕದಲ್ಲಿ ಕುಳಿತು ಕಿವಿ ಆನಿಸಿ ಕೇಳುತ್ತಿದ್ದರು. ಯಾಕೆಂದರೆ ಅವನು ಮಾತಾಡುವ ಪ್ರತಿ ವಿಚಾರದಲ್ಲೂ ಅವರ ಜೀವನಕ್ಕೆ ಬೇಕಾಗುವ ಯಾವುದೇ ಒಂದು ವಿಚಾರ ಸಿಗ್ತಾಯಿತ್ತು.ಆದರೆ ಮನೆಯಲ್ಲಿ ಅವನ ಮಗ ಇವನ ಮಾತನ್ನು ಒಂದು ದಿನವೂ ಕೇಳಿದವನಲ್ಲ. ಆತನಿಗೆ ಎಲ್ಲ ವಿಷಯವನ್ನು ತುಂಬಾ ಆಳವಾಗಿ ಅಭ್ಯಾಸ ಮಾಡಿದರೆ ಮಾತ್ರ ನಿನಗೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಅನ್ನೋದನ್ನ ಹೇಳಿ ಹೇಳಿ ಸಾಕಾಗಿ ಹೋಗಿತ್ತು. ಉದಾಹರಣೆ ಕೊಟ್ಟುಕೊಟ್ಟು ರೋಸಿ ಹೋಗಿ, ಆ ದಿನ ಅವರ ಮನೆಯ ಹಿಂಭಾಗದಲ್ಲಿ ಹಾಕಿದ್ದ ಹರಿವೆಯ ದಿಬ್ಬವನ್ನು ತೋರಿಸಿ ಕಥೆ ಹೇಳುವುದಕ್ಕೆ ಆರಂಭ ಮಾಡಿದ. ನೋಡು ಈ ಹರಿವೆಯ ಗಿಡ ತುಂಬಾ ಎತ್ತರವಾಗಿ ಬೆಳೆದು ದಪ್ಪ ಕಾಂಡಗಳನ್ನು ಹೊಂದಿ ಸಮೃದ್ಧವಾಗಿ ನಿಲ್ಲಬೇಕಿತ್ತು. ಎಲ್ಲಾ ಸಾಮರ್ಥ್ಯವು ಅದರಲ್ಲಿತ್ತು, ಆದರೆ ನಾವು ಹಾಕಿದ ಮಣ್ಣಿನ ದಿಬ್ಬವಿದ್ಯಲ್ಲ ಆ ದಿಬ್ಬದ ಕೆಳಗೆ ಗಟ್ಟಿ ನೆಲವಿದೆ ಆ ನೆಲದ ತುಂಬಾ ಕಲ್ಲು ಹಾಸಿಕೊಂಡಿದೆ ಬೀರುಗಳಿಗೆ ಕೆಳಗೆ ಹೋಗಲು ಬಿಡ್ತಾ ಇಲ್ಲ. ಆ ಕಾರಣಕ್ಕೆ ಎಲ್ಲಾ ಹರಿವೆ ಗಿಡಗಳು ಎತ್ತರವಾಗಿ ಬೆಳೆಯೋಕ್ಕಾಗದೆ ತುಂಬಾ ತೆಳ್ಳಗಾಗಿ ಸತ್ವ ಕಳೆದುಕೊಂಡು ಸಾಯುವ ಸ್ಥಿತಿಗೆ ಬಂದು ತಲುಪಿಬಿಟ್ಟಿದೆ.ಇಷ್ಟು ದಿನದ ಎಲ್ಲಾ ಪರಿಶ್ರಮ ಹಾಳಾಗಿ ಹೋಗಿದೆ. ಬೇರನ್ನ ಆಳಕ್ಕೆ ಇಳಿಸುವ ಸಾಮರ್ಥ್ಯವಿದ್ದಿದ್ದರೆ ಆ ಹರಿವೆ ಗಿಡ ಅದ್ಭುತವಾಗಿ ಮೇಲೆದ್ದು ನಿಲ್ತಾ ಇತ್ತು. ನೀನು ಕೂಡ ಹಾಗೆ ಒಂದು ವಿಚಾರದಲ್ಲಿ ಆಳಕ್ಕಿಳಿದರೆ ಮಾತ್ರ ಮೇಲಕ್ಕೇರಬಹುದು, ಇಲ್ಲವಾದರೆ ಸತ್ವ ಕಳೆದುಕೊಂಡು ಯಾರಿಗೂ ಉಪಯೋಗವಿಲ್ಲದ ದೀನ ಸ್ಥಿತಿಗೆ ತಲುಪ್ತೀಯ. ಮಗನ ಮುಖದಲ್ಲಾದ ಬದಲಾವಣೆಯ ಕಂಡ ಮಾಸ್ತರಿಗೆ ಈ ಸಲವಾದರೂ ಮಗ ಮಾತು ಕೇಳಬಹುದು ಅನ್ನಿಸ್ತು. ಗೊತ್ತಿಲ್ಲ ಇನ್ನೊಂದಷ್ಟು ದಿನ ಕಾಯಲೇಬೇಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ