ಸ್ಟೇಟಸ್ ಕತೆಗಳು (ಭಾಗ ೧೩೧) - ವೈರುದ್ಯ

ಸ್ಟೇಟಸ್ ಕತೆಗಳು (ಭಾಗ ೧೩೧) - ವೈರುದ್ಯ

ಮತ್ತೆ ಬಸ್ ಏರಬೇಕು. ಗಾಲಿ ತಿರುಗುತ್ತಾ ಊರ ಗಡಿ ದಾಟಬೇಕು. ಬದುಕಿನ ನಾವೇ ಉತ್ತರದ ಕಡೆಗೆ ಸೆಳೆದಿರುವಾಗ, ಹೋಗದಿರುವುದು ಹೇಗೆ? ಬ್ಯಾಗು ಹೆಗಲಿಗೇರಿಸಿದ್ದೇನೆ, ಹೃದಯದೊಳಗೆ ಅವ್ಯಕ್ತ ಭಾವನೆಯೊಂದು ಹನಿಗೂಡಿದೆ. ವಿದಾಯದ ಇಳಿಸಂಜೆ ಭಾರವಾಗಿದೆ. ಈ ಕೆಲಸದ ಜಾಗದಲ್ಲಿ ಅಪರಿಚಿತರೂ ಪರಿಚಿತರಾಗಿ, ನೀವು, ನೀನಾಗಿ, ಬಾಂಧವ್ಯ ಬೆಸೆದು ಬಂಧಿಸುವ ಸಮಯದಲ್ಲಿ ಅಗಲುವಿಕೆ ಅನಿವಾರ್ಯವಾಗಿದೆ. ಸಪ್ತ ದಿನಗಳ ನಿಮ್ಮ ಕೈರುಚಿ ಜೀವನದುದ್ದಕ್ಕೂ ಮನಸ್ಸಲ್ಲಿ ಉಳಿಯುತ್ತೆ. ಕಣ್ಣು ನೀರು ಹನಿಸಲು ಕಾತುರರಾಗಿದ್ದರು ನೀವು ತೋರಿದ ಸಂತಸದ ಕಾಳಜಿಯ ಹಿಂದೆ ನೋವಿನ ಪರದೆಯ ಎಳೆಯ ಗಾಢತೆ ನನಗೂ ತಟ್ಟಿದೆ. ನೀವು ನನಗೆ ನೆನಪಾಗೋದಿಲ್ಲ ಯಾಕೆಂದರೆ ನಾನು ನಿಮ್ಮನ್ನು ಮರೆಯೋದೇ ಇಲ್ವಲ್ಲ. ಹೆಜ್ಜೆಗಳಿಗೆ ಜೊತೆಯಾದವರು, ಸದ್ದಿಲ್ಲದೆ ಪ್ರೀತಿಸಿದವರು ನನ್ನವರು. ನನಗೆ ಹೆಮ್ಮೆಯಿದೆ ಇವರು ಯಾವತ್ತೂ ನನ್ನವರಾಗೆ ಇರುತ್ತಾರೆ. ಅಲ್ಪವಿರಾಮ ಇಟ್ಟು ಡೈರಿ ಮುಚ್ಚಿದಳು. ಕಿಟಕಿಯೊಳಗಿಂದ ರವಿ ಕಿರಣಗಳನ್ನು ತುರುಕಿಸಲಾರಂಭಿಸಿದ. ಓಡುವ ಬದುಕಿಗೆ ಹೆಜ್ಜೆಗಳನ್ನು ಇಡಲು ಆಕೆ ತಯಾರಾದಳು. ಬದುಕು ಹೊಸ ರಶ್ಮಿಯನ್ನು ಅವಳ ಬಾಳಿಗೆ ಬೀರಲಾರಂಭಿಸಿತು. ಮುಂದಿನ ಬದುಕಿನ ಬಾಂಧವ್ಯಕ್ಕೆ ಜೊತೆಯಾಗುವ ಹೆಜ್ಜೆಗಳನ್ನರಸಿ ಹೊರಟಿದ್ದಾಳೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ