ಸ್ಟೇಟಸ್ ಕತೆಗಳು (ಭಾಗ ೧೪೭) - ಮನದ ಮಾತು
ಮತ್ತೆ ಮತ್ತೆ ತಿರುಗಿ ಕದ್ದು ನೋಡುವ ಸುಂದರಿಯೇನಲ್ಲ, ಆದರೂ ಮನಸ್ಸಿನೊಳಗೆ ನಾ ಕಟ್ಟಿದ ಗುಡಿಯೊಳಗೆ ನೆಲೆಯಾಗಿದ್ದಾಳೆ "ಅವಳು". ಮೊದಲ ಕ್ಷಣದಲ್ಲೇ ಎದೆಬಡಿತ ಏರಿಸಿ ಪ್ರೀತಿ ಹುಟ್ಟಿಸಿದವಳಲ್ಲ. ದಿನದ ಕ್ಷಣದಲ್ಲಿ, ಕೆಲವು ಘಟನೆಗಳಲ್ಲಿ, ತೋರಿದ ಭಾವನೆಗಳು ಅವಳಿಗೆ ಹೂವಿನ ಹಾಸಿಗೆ ಹಾಸಿ ಮನದೊಳಗೆ ಸ್ವಾಗತ ನೀಡಿದ್ದವು. ಕಣ್ಮುಚ್ಚಿದ ರೆಪ್ಪೆಯನ್ನು ತಟ್ಟಿ ಎಬ್ಬಿಸಿದವಳಲ್ಲ. ಗೆಜ್ಜೆ ನಾದಕ್ಕೆ ನೋಡುವಂತ ಹೆಜ್ಜೆಯೊಡತಿ ಅಲ್ಲಾ? ಎದೆಬಡಿತದ ತಾಳಕ್ಕೆ ಧ್ವನಿಗೂಡಿಸುವ ಕಂಪಿನವಳು. ಒಂದಷ್ಟು ಸಾಧನೆಗೆ ಪರೋಕ್ಷ ಸ್ಫೂರ್ತಿ ನೀಡಿದವಳು. ಅವಳೊಂದಿಗಿನ ಕನಸು ಕಾಣುವುದಕ್ಕೆ ಅನುಮತಿ ನೀಡಿದವಳು (ನನ್ನ ಗ್ರಹಿಕೆಗೆ ಮಾತ್ರ) ಹೇಳುವ ಧೈರ್ಯವಿಲ್ಲದೆ ಬರವಣಿಗೆಯನ್ನ ಅಚ್ಚೊತ್ತಿದ್ದೇನೆ. ಅವಳೊಂದಿಗೆ ವಿನಿಮಯಕ್ಕೆ ನಗುವನ್ನು ನೀಡದ ಅಪರಿಚಿತ ನಾನು. ಮತ್ತೇನು ಸಂಭಾಷಣೆ ನಡೆಸಲಿ?. ಬರೆದಿದ್ದೇನೆ ಕಾಲವಿದ್ದರೆ ಕೂಡಬಹುದು ಬಂಧನ.
ಈ ಬರವಣಿಗೆಯ ಪುಟ ನನ್ನ ಪಕ್ಕದಲ್ಲಿನ ಸುಶಾಂತನ ಡೈರಿಯಲ್ಲಿ ಕಂಡು ಬಂದದ್ದು. ಓದಿದ್ದಷ್ಟೇ. ಅವಳ ಮಾಹಿತಿಯನ್ನು ಸಿಗಲಿಲ್ಲ ಅವನ ಕೊನೆಯ ಸಾಲು ಹೀಗಿತ್ತು "ಕೋರಿಕೆ ಸಲ್ಲಿಸಬೇಕಿದೆ ಅವಳಿಗೆ, ಅಪರಿಚಿತನಾದ ನನ್ನ ಮನದ ಮಾತನ್ನು ಭಾಷಾಂತರ ಮಾಡುವವರ ಅವಶ್ಯಕತೆ ಇದೆ". ಅವಳ ಅವನಿಗೆ ಸಿಗಲಿ ಇನ್ನೇನು ಹಾರೈಸಲು ಸಾಧ್ಯ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ