ಸ್ಟೇಟಸ್ ಕತೆಗಳು (ಭಾಗ ೨೧೦) - ಬದಲಾವಣೆ
ಸ್ವಚ್ಛತೆಗಿಳಿದ ಮೇಲೆ ಪೂರ್ತಿಗೊಳಿಸಿಯೇ ಬಿಡೋದು ಅನ್ನೋ ನಿರ್ಧಾರ ಬಲವಾಗಿತ್ತು. ದೊಡ್ಡ ಕೊಠಡಿ ಉದ್ದಗಲ ಅವಲೋಕಿಸಿ ಪೊರಕೆಯೊಂದಿಗೆ ನನ್ನ ಪ್ರವೇಶವಾಗಿತ್ತು. ದೂಳು, ಕಸ ಮರಳಿನ ಕಣಗಳು ವಿಲವಿಲನೆ ಒದ್ದಾಡಿ ರಂಗಸ್ಥಳದಿಂದ ನಿರ್ಗಮಿಸಿದವು. ಅದೊಂದು ತರಹ ಮೊದಲ ವಿಜಯ. ರಣರಂಗದ ಭೀಕರತೆ ಸಾವಿನ ಪ್ರಮಾಣವನ್ನು ಅವಲಂಬಿಸಿರುವಂತೆ ನನ್ನ ಸ್ವಚ್ಛತೆಯ ಕಠಿಣ ಕ್ಷಣಗಳ ಅನುಭವಕ್ಕೆ ಸ್ವಲ್ಪ ಸಮಯ ಬೇಕಾಯಿತು. ಗಂಗಾಮಾತೆಯನ್ನು ಕೊಠಡಿಯೊಳಗೆ ಹರಿಸುವುದು ಎಂದು ಪೈಪ್ ಸಿಕ್ಕಿಸಿದಾಗ ಅನುಭವಿ ಗುರುಪ್ರಸಾದರು "ಬೇಡ ಬೇಗ ಮುಗಿಯೋ ಹಾಗೆ ಕಾಣಲ್ಲ ಒದ್ದೆ ಬಟ್ಟೆಯಲ್ಲಿ ಒರೆಸಿ ಬಿಡು ಅಂದ್ರು". ಸ್ವಚ್ಛತೆ ಸರದಾರನಾದ ನನಗೆ ಒಂದು ಚೂರು ಕೇಳಲಿಲ್ಲ. "ಸರ್, ನೀರು ಹಾಕಿದ ಮೇಲೆ ನೋಡಿ ನೆಲೆ ಮಿನುಗುವಂತೆ ಮಾಡುತ್ತೇನೆ" ಎಂಬ ಭೀಷ್ಮಪ್ರತಿಜ್ಞೆಯೊಂದಿಗೆ ನೀರು ಪ್ರವಹಿಸಲು ಆರಂಭವಾಯಿತು. ಕೊಠಡಿ ತುಂಬಾ ನೀರಾಟ ಹಿಡಿ ಪೊರಕೆಗಳ ಉಜ್ಜಾಟ.
ನೀರು ಹೊರಹೋಗುವ ಜಾಗ ಹುಡುಕಿದಾಗ ಯಾವ ಕುರುಹು ಕಾಣುತ್ತಿಲ್ಲ. ಬಾಗಿಲೊಂದು ಕೊನೆ ಅವಕಾಶ. ನನ್ನ ಗ್ರಹಚಾರಕ್ಕೆ ಬಾಗಿಲಿನ ಪ್ರದೇಶ ಏರಿನ ಗುಡ್ಡ .ಅದು ಯಾವ ಮೇಸ್ತ್ರಿಯ ಕೈಚಳಕವೂ, ಪೆಟ್ರೋಲ್ ಇಲ್ಲದ ಗಾಡಿಯನ್ನು ಏರಿನಲ್ಲಿ ತಳ್ಳುವ ಕೆಲಸ ಆರಂಭವಾಯಿತು. ತರಗತಿಯಲ್ಲಿ ಸುಮ್ಮನಿರಿ ಎಂದರೆ ಮಕ್ಕಳು ಸುಮ್ಮನಾಗುತ್ತಾರೆ. ಆದರೆ ನೀರು ಯಾವ ಮಾತಿಗೂ ಬಗ್ಗುತ್ತಿಲ್ಲ. ನೆಲವು ನೀರಿನಿಂದ ನಾನು ಬೆವರಿನಿಂದ ಒದ್ದೆ. ಒಂದು ಬಕೆಟ್ ನೀರು ಹೊರಹೋಗಿದ್ದಷ್ಟೆ. ನೀರು ಹಿಂದೆ ಚಲಿಸಿ ಮತ್ತೆ ಇಳಿಜಾರು ಪ್ರದೇಶವನ್ನು ಆಶ್ರಯಿಸುತಿತ್ತು. ಇನ್ನೊಂದಷ್ಟು ಜನರನ್ನು ಒಟ್ಟುಗೂಡಿಸಿ ಉಗ್ರ ಹೋರಾಟ ಆರಂಭವಾಯಿತು. ನೀರಿಗೂ ನಮಗೂ ಕದನ. ಶತ್ರುಗಳನ್ನ ಗಡಿಯಿಂದ ಹೊರಹಾಕಿದರೂ ಮೂಲೋತ್ಪಾಟನೆ ಸಾಧ್ಯವಾಗಿಲ್ಲ.
ಇಲ್ಲೊಂದು ಜೀವನ ಪಾಠ: ಕೊಠಡಿಯ ನೀರು ಹೊರ ಹೋಗಲು ಒಂದು ಸಣ್ಣ ಕಿಂಡಿ ಇರಲಿ. ಒಮ್ಮೊಮ್ಮೆ ಕೆಲವರ ಮಾತಿಗೆ ಬೆಲೆ ಕೊಡಿ. ಆ ರೂಮಿನ ಫ್ಯಾನು ಇನ್ನೂ ತಿರುಗುತ್ತಿದೆ. ನಾಳೆಗಾದರೂ ನೀರು ಆವಿಯಾದರೆ ಸಾಕು.
-ಧೀರಜ್ ಬೆಳ್ಳಾರೆ
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ