ಸ್ಟೇಟಸ್ ಕತೆಗಳು (ಭಾಗ ೨೮೪) - ಗೆಜ್ಜೆ-ಹೆಜ್ಜೆ
ಮನೆಯಲ್ಲೊಂದು ಶುಭಕಾರ್ಯ ನಿಶ್ಚಯವಾಗಿತ್ತು. ಹಾಗಾಗಿ ಚಿನ್ನದ ಖರೀದಿಗಾಗಿ ಅದರ ಬೆಲೆ ಪರೀಕ್ಷೆಗೆ ಅಂಗಡಿಗೆ ತೆರಳಿದ್ದೆ . ಅಂಗಡಿಯಲ್ಲಿ ನಿಂತಾಗ ಕಂಡ ದೃಶ್ಯ ಬದುಕನ್ನ ಮತ್ತಷ್ಟು ಪ್ರೀತಿಸುವಂತೆ ಮಾಡಿದ್ದು ಸುಳ್ಳಲ್ಲ. ವರ್ಷ ಅವರದ್ದು 75 ರಿಂದ 80, ಅವರ ಹೆಂಡತಿಯ ಪ್ರಾಯ 70 ಇರಬಹುದು.
ಅವರೇನು ಆಡಂಬರದ ಬಟ್ಟೆಯನ್ನು ಧರಿಸಿ ಬಂದವರಲ್ಲ. ದಿನವೂ ಕೂಲಿ-ನಾಲಿ ಮಾಡುವ ಬದುಕುವವರು ಅನ್ನೋದನ್ನ ಅವರ ಪಾದಗಳು, ಕೈಗಳು, ಮುಖಚಹರೆ ತಿಳಿಸ್ತಾ ಇತ್ತು. ಇಬ್ಬರ ಮುಖದಲ್ಲೂ ಸಂಭ್ರಮ. ಒಬ್ಬರಿಗೆ ಕೊಡಿಸುವ ಸಂಭ್ರಮ, ಇನ್ನೊಬ್ಬರಿಗೆ ಪಡೆದುಕೊಳ್ಳುವ ಸಂಭ್ರಮ. ಅಲ್ಲಿ ಇಟ್ಟ ಆಸನದ ಮೇಲೆ ಕುಳಿತು ಆಭರಣಗಳನ್ನು ನಿರೀಕ್ಷಿಸಿದರು. ಅಜ್ಜನಿಗೆ ಪ್ರೀತಿಸಿ ಮದುವೆಯಾದ ಹೆಂಡತಿಯ ಕಾಲ್ಗೆಜ್ಜೆಯ ನಾದವನ್ನು ಕೇಳುವ ಭಾಗ್ಯ ಇಷ್ಟರವರೆಗೆ ಸಿಕ್ಕಿರಲ್ಲಿಲ್ಲ. ಹಾಗಾಗಿ ತನ್ನ ಬೆವರು ಹರಿಸಿ ದುಡಿದು ಕೂಡಿಟ್ಟ ದುಡ್ಡಿನಿಂದ ಈಗಲಾದರೂ ತನಗಾಗಿ ಅವಳು ಸವೆಸಿದ ಹೆಜ್ಜೆಗೊಂದು ನಾದವನ್ನು ಸೃಷ್ಟಿಸಬೇಕೆಂಬ ಹಂಬಲದಿಂದ ಗೆಜ್ಜೆಗಳ ಹುಡುಕಾಟದಲ್ಲಿ ಅವನ ಕಣ್ಣು ಓಡಾಡುತ್ತಾ ಇತ್ತು . ಕೊನೆಗೊಂದು ಗೆಜ್ಜೆಯ ಅಯ್ಕೆ ಆಯ್ತು. ಅದೊಂದು ಮಿನುಗು ಮಿನುಗಿತು ಕಣ್ಣಂಚಲಿ. ನಾನು ಇಷ್ಟರವರೆಗೆ ಹಾದಿಯಲ್ಲಿ ನಡೆದು ಹೋದ ಹಲವು ಪ್ರೀತಿಸುವವರ ಕಣ್ಣುಗಳಲ್ಲಿ ಕಾಣದೇ ಇದ್ದ ಕಾಂತಿಯೊಂದು ಮಿನುಗಿದಂತೆ ಭಾಸವಾಯಿತು. ಗೆಜ್ಜೆ ಪರೀಕ್ಷಿಸಿದರು. ಆಯ್ಕೆಗಳ ಸಾಲುಗಳು ತುಂಬಾ ಇದ್ದರು, ಕಿಸೆ ಮಾತಾಡಿದ್ದಷ್ಟಕ್ಕೆ ಒಂದು ಗೆಜ್ಜೆಯ ಆಯ್ಕೆಯಾಯಿತು. ಕೆಳಗೆ ಕೂತು ಅವಳ ಮುದ್ದಿನ ಪಾದಗಳನ್ನು ಹಿಡಿದು, ತನ್ನ ಜೀವನಕ್ಕೆ ಜೊತೆಯಾಗಿ ಸಪ್ತಪದಿ ತುಳಿದ ಜೊತೆಗಿದ್ದು ಸವೆದ ಪಾದಕ್ಕೆ ಇಂದು ಗೆಜ್ಜೆ ಉಡಿಸುವ ಭಾಗ್ಯವು ಅವನದಾಗಿತ್ತು. ಪ್ರೀತಿಯಿಂದ ಎರಡೂ ಕೈಗಳಲ್ಲಿ ಗೆಜ್ಜೆ ಹಿಡಿದು ತನ್ನ ಮಡದಿಯ ಪಾದಕ್ಕೆ ಉಡಿಸಿದ. ಎರಡೂ ಕಾಲುಗಳಲ್ಲಿ ಅದೇನು ಕಳೆಯೋ ಅದನ್ನ ಅಜ್ಜಿಯ ಕಣ್ಣು ಪ್ರತಿನಿಧಿಸುತ್ತಿತ್ತು. ಕಣ್ಣು ತೇವವಾಯಿತು. ಇಬ್ಬರೂ ಕೈಯನ್ನ ಕೈಹಿಡಿದುಕೊಂಡು ಕೊಡಬೇಕಾದ ದುಡ್ಡನ್ನು ಕೊಟ್ಟು ನಿಧಾನವಾಗಿ ಅಂಗಡಿಯ ಹೆಜ್ಜೆ ಹೊರ ಹಾಕಿದರು .ಅಜ್ಜ ಕಿವಿ ಮುಚ್ಚಿಕೊಂಡು ಅಜ್ಜಿಯ ಪಕ್ಕದಲ್ಲಿ ಹೆಜ್ಜೆಯನ್ನು ಹಾಕುತ್ತಾ ಮುಂದುವರೆದ. ಅವರಿಗೆ ತನ್ನ ಮನದರಸಿಯ ಪಾದ ನುಡಿಸುವ ನಾದವನ್ನು ಕೇಳುವ ಬಯಕೆ. ಅಜ್ಜಿ ಪ್ರೀತಿಯಿಂದ ಮುಗುಳ್ನಗುತ್ತ ತನ್ನ ಕೈಹಿಡಿದ ಸರದಾರನ ಜೊತೆ ಹೆಮ್ಮೆಯಿಂದ ರಸ್ತೆ ದಾಟುತ್ತಿದ್ದರು. ನನಗೆ ಬೆಲೆ ಕೇಳುವುದೇ ಮರೆತುಹೋಯಿತು. ಬೆಲೆಕಟ್ಟಲಾಗದ ಬಾಂಧವ್ಯ ನೋಡುತ್ತಾ ನೋಡುತ್ತಾ ಅಂಗಡಿಯಿಂದ ಹೊರಬಂದೆ . ಗೆಜ್ಜೆಗೊಂದು, ಹೆಜ್ಜೆಗೊಂದು ಹೊಸ ಅರ್ಥ ಸಿಕ್ಕಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ