ಸ್ಟೇಟಸ್ ಕತೆಗಳು (ಭಾಗ ೪೫೨) - ಸಮಾಜಮುಖಿ

ಸ್ಟೇಟಸ್ ಕತೆಗಳು (ಭಾಗ ೪೫೨) - ಸಮಾಜಮುಖಿ

ಸಣ್ಣದೊಂದು ಅಪಘಾತ. ಒಂದಿಷ್ಟು ಸಮಯದವರೆಗೆ ಕೋಮಾ. ಮತ್ತೆ ಸ್ಥಿರವಾಗಿ ಮನೆಯಲ್ಲಿ ಇನ್ನು ಮೂರು ವರ್ಷ ಕುಳಿತಲ್ಲೇ ಇರಬೇಕು ಅನ್ನುವ  ಡಾಕ್ಟರ ಮಾತು. ಹೇಗಿದ್ರೂ ಸಮಾಜಕ್ಕೆ ಏನಾದರೂ ಮಾಡಬೇಕು ಅನ್ನೋ ಮನಸ್ಸಿನವರು ಮನೆಯೊಳಕ್ಕೆ ಬಂಧಿಯಾದರು. ಊರಿನ ಹುಡುಗರೆಲ್ಲ ಸೇರಿ ಹುಲಿವೇಷ ಹಾಕಿದರೆ ಬಂದ ದುಡ್ಡನ್ನು ಮನೆಯವರಿಗೆ ಕೊಟ್ಟುಬಿಟ್ಟರೆ ಅವರ ಜೀವನ ಚೆನ್ನಾಗಿರುತ್ತೆ ಅನ್ನುವ ಆಸೆ. ಹಾಗಾಗಿ ಎರಡು ದಿನ ರಾತ್ರಿ-ಹಗಲೆನ್ನದೆ ಹುಲಿ ವೇಷದಲ್ಲಿ ಒಂದಷ್ಟು ದೊಡ್ಡ ಮಟ್ಟದ ದುಡ್ಡು ಸಂಗ್ರಹವಾಯಿತು. ಅವರ ಮನೆ ಮುಂದೆ ಬಂದು ಇವರ ಕೈಯಲ್ಲಿ ಕೊಟ್ಟು ಚೆನ್ನಾಗಿರಲೆಂದು ಹೊರಡುವಾಗ, ಆ ಮನೆ ಹಿರಿಯರು ಹೇಳಿದ್ದು "ಬೇಡಪ್ಪ ಇಷ್ಟು ದುಡ್ಡು ನನಗೆ ಕೊಟ್ಟುಬಿಟ್ಟರೆ ನಾನು 2 ವರ್ಷ ಇಲ್ಲಿ ಕೂತು ಬಿಡುತ್ತೇನೆ. ಹೊರತು ಮತ್ತೇನು ಬದಲಾವಣೆ ಆಗುವುದಿಲ್ಲ. ಇದೇ ದುಡ್ಡನ್ನ ಶಾಲೆಬಿಟ್ಟು ಓದೋದ್ದಕ್ಕೆ ಕಷ್ಟ ಪಡೋರಿಗೆ, ಇದಕ್ಕಿಂತಲೂ ದೊಡ್ಡದಾದ ಜೀವ ಹೋಗುವಂತಹ ಯಾವುದಾದರೂ ರೋಗವಿರುವವರಿಗೆ, ಯಾರಿಗೆ ದುಡ್ಡು ಬೇಕಿದೆಯೋ ಅಂಥವರಿಗೆ ನೀಡಿ, ಅವರು ಎರಡು ವರ್ಷದಲ್ಲಿ ಇನ್ನೊಂದು ಹತ್ತು ಹೆಜ್ಜೆ ಮುಂದಿದ್ದಾರೆ. ಅವರು ಹೆಜ್ಜೆಗಳನ್ನ ಇಟ್ಟಾಗ ಆ ಹೆಜ್ಜೆಗಳಲ್ಲಿ ನನ್ನ ನಾನು ನೋಡಿಕೊಳ್ಳುತ್ತೇನೆ. ಅಂತಂದರು. ಇದು ಸಮಾಜಮುಖಿ ಚಿಂತನೆ ಅಲ್ವಾ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ