ಸ್ಟೇಟಸ್ ಕತೆಗಳು (ಭಾಗ ೪೮೯) - ಆನೆ ಮರಿ
ನನಗ್ಯಾಕೆ ಅಮ್ಮನ ಜೊತೆ ಇರೋದಕ್ಕೆ ಬಿಡುತ್ತಿಲ್ಲ. ನಾನು ಹುಟ್ಟಿದ ಮೇಲೆ ಪ್ರತಿದಿನ ಅಮ್ಮನ ಜೊತೆಗೆ ಮಲಗುತ್ತಿದ್ದೆ, ಅವರ ಜೊತೆ ಆಟ ಆಡುತ್ತಿದ್ದೆ, ನಮ್ಮನ್ನ ಸಾಕುತ್ತಿದ್ದವರು ನನ್ನ ಆಟವನ್ನು ತುಂಬಾ ಖುಷಿಯಿಂದ ನೋಡುತ್ತಿದ್ದರು. ಅಮ್ಮ ನನಗೆ ನೀರಲ್ಲಿ ಈಜೋದನ್ನ ಹೇಳಿಕೊಟ್ಟರು, ತಿನ್ನೋದನ್ನು ಹೇಳಿಕೊಟ್ಟರು, ನಾವು ಹೇಗೆ ವರ್ತಿಸಬೇಕು ಅನ್ನೋದನ್ನ ಹೇಳಿಕೊಟ್ಟರು, ಎಲ್ಲವನ್ನು ಹೇಳಿಕೊಡುತ್ತಿದ್ದರು. ಅಮ್ಮ ಅಂದರೆ ಅದೊಂಥರ ವಿಪರೀತ ಪ್ರೀತಿ. ಅವರ ಜೊತೆಗೆ ಜೀವನಪೂರ್ತಿ ಬದುಕಬಹುದು ಅಂದುಕೊಳ್ಳುತ್ತಿದ್ದಂತೆ , ಅಮ್ಮನ ಕರೆದುಕೊಂಡು ಹೊರಟರು. ನಾನು ಒಬ್ಬಂಟಿಯಾಗಿ ಬದುಕಬೇಕಂತೆ. ಎಲ್ಲಿಗೂ ಹೋಗೋ ಆಗಿಲ್ಲವಂತೆ.
ನಾನಿಲ್ಲೇ ಉಳಿದು ಬಿಡಬೇಕಂತೆ. ನನಗಿನ್ನು ಜೋಗುಳ ಹಾಡೋರು ಯಾರು? ಕತೆ ಹೇಳೋರು ಯಾರು? ಆಟ ಆಡ್ಸೋರು ಯಾರು? ಮುದ್ದು ಮಾಡೋರ್ಯಾರು? ನಾನು ನನ್ನ ಕಾಲ ಮೇಲೆ ನಿಂತು ಸ್ವಂತವಾಗಿ ಬದುಕಬಹುದು ಅನ್ನೋವಷ್ಟು ದಿನಕ್ಕಾದರೂ ಅಮ್ಮನನ್ನ ನನ್ನ ಜೊತೆಗೆ ಇರುವುದಕ್ಕೆ ಬಿಟ್ಟುಬಿಡಿ. ಅಮ್ಮನಿಗೆ ವಯಸ್ಸಾಗ್ತಾ ಬಂತು. ಹೆಚ್ಚು ವಯಸ್ಸಾದರೆ ಕೆಲಸ ಮಾಡುವುದಕ್ಕಾಗುವುದಿಲ್ಲ ಅನ್ನುವ ಕಾರಣಕ್ಕೆ ನನ್ನಿಂದ ದೂರ ಮಾಡುತ್ತಿರುವುದೇನಕ್ಕೆ. ನಿಮ್ಮ ಸ್ವಾರ್ಥಕ್ಕೆ ಅಲ್ವಾ? ನಿಮ್ಮ ಮಕ್ಕಳನ್ನು ನಿಮ್ಮಿಂದ ದೂರ ಮಾಡಿದರೆ ನೀಮಗೆ ನೋವಾಗುವುದಿಲ್ವಾ? ನಿಮ್ಮ ಮಕ್ಕಳಿಗೆ ಬೇಜಾರಾಗುವುದಿಲ್ವಾ? ಹಾಗೆ ನನಗೂ ಅಲ್ವಾ. ನೀವು ಯಾವಾಗ ಅರ್ಥಮಾಡಿಕೊಳ್ಳುವುದು. ನನಗೊತ್ತಿದೆ ನಿಮಗೆ ನಿಮ್ಮವರ ಭಾಷೆಯೇ ಅರ್ಥ ಆಗೋದಿಲ್ಲ, ಇನ್ನು ನಮ್ಮ ಭಾಷೆ ನಿಮಗೆ ಅರ್ಥ ಹೇಗೆ ಆಗುತ್ತೆ ಅಲ್ವಾ. ಪುಟ್ಟ ಆನೆ ಮರಿಯೊಂದು ಅಳುತ್ತಾ ಅಳುತ್ತಾ ಈ ಮಾತನಾಡುತ್ತಿದೆ. ಆದರೆ ಯಾರಿಗೂ ಕೇಳುತ್ತಿರಲಿಲ್ಲ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ