ಸ್ಟೇಟಸ್ ಕತೆಗಳು (ಭಾಗ ೫೬೧) - ಕಳೆದುಕೊಂಡದ್ದು

ಸ್ಟೇಟಸ್ ಕತೆಗಳು (ಭಾಗ ೫೬೧) - ಕಳೆದುಕೊಂಡದ್ದು

"ಎಷ್ಟು ಅಂತ ನೋವನ್ನು ಅನುಭವಿಸುತ್ತೀಯಾ? ಕಳೆದುಕೊಂಡದ್ದು ಮತ್ತೆ ತಿರುಗಿ ಬರುವುದಿಲ್ಲ. ಆಗುವುದೆಲ್ಲ ಒಳ್ಳೇದಕ್ಕೆ. ತುಂಬಾ ಬೇಜಾರು ಮಾಡಿಕೊಂಡು ಅದೇ ಚಿಂತೆಯಲ್ಲಿ ಕಾಲ ಕಳೆಯುವುದಕ್ಕಿಂತ ಮುಂದುವರೆದು ಬಿಡು" 

"ಓ ಮಾರಾಯ ಅದು ನಿನಗೆ ಹೇಳೋದಕ್ಕೆ ಸುಲಭ, ಕಳೆದುಕೊಂಡವರಿಗೆ ಮಾತ್ರ ಅದರ ನೋವು ತಿಳಿಯೋದಕ್ಕೆ ಸಾಧ್ಯ. ಗಾಯವಾಗದವನಿಗೆ ನೋವಿನ ತೀವ್ರತೆ ಹೇಗೆ ವರ್ಣಿಸಿದರು ತಿಳಿಯೋದಿಲ್ಲ. ಕಣ್ಣೀರು ನೋಡಿ ಹೀಗಿರಬಹುದು ಅಂತ ಊಹೆ ಮಾಡಬಹುದೇ ಹೊರತು ಅದನ್ನ ಸ್ವತಃ ಅನುಭವಿಸುವುದಕ್ಕೆ ಸಾಧ್ಯವಿಲ್ಲ. ಎಲ್ಲರೂ ಅಮೂಲ್ಯವಾದುದ್ದನ್ನ ಕಳೆದುಕೊಳ್ಳುತ್ತಾರೆ. ಆದರೆ ಕಳೆದುಕೊಂಡಿರುವುದು ನಮ್ಮ ಜೀವನಕ್ಕೆ ಎಷ್ಟು ಅಗತ್ಯವಾಗಿದೆ ಅನ್ನುವುದರ ಮೇಲೆ ಅದರ ಭಾವ ಆವರಿಸಿರುತ್ತದೆ. ಆಗೋದೆಲ್ಲ ಒಳ್ಳೇದಕ್ಕೆ ಅನ್ನೋ ಮಾತು ತುಂಬಾ ದೊಡ್ಡದು. ಆದರೆ ಆ ಕ್ಷಣದಲ್ಲಿ ಉಂಟಾಗುವ ಭಾವ, ನೋವಿನ ಇರಿತ ಇದೆಯಲ್ಲ ಆ ಕ್ಷಣದಲ್ಲಿ ಇದ್ಯಾವ ದೊಡ್ಡ ಮಾತುಗಳು ಕೇಳೋದಿಲ್ಲ. ದೂರ ಹೋಗುತ್ತಾರೆ ಅಂತ ಭಾವ ಮೂಡಿಸಿದವರು ದೂರ ತೆರಳಿದಾಗ ಅದೇನು ಅಷ್ಟು ತೀವ್ರವಾಗಿ ನಾಟುವುದಿಲ್ಲ ಎರಡು ಹೆಜ್ಜೆ ಜೊತೆಯಾದವರು ಮೂರನೇ ಹೆಜ್ಜೆಗೆ ಜೊತೆ ಇಲ್ಲ ಅಂತ ಅಂದಾಗ ಅದನ್ನ ಅನುಭವಿಸಿದವನಿಗೆ ಉಸಿರು ಕಟ್ಟಿದಂತಾಗುತ್ತದೆ. ಹಾಗಾಗಿ ಸುಮ್ಮನೆ ದೊಡ್ಡ ಮಾತುಗಳನ್ನಾಡಬೇಡ, ನೋವನ್ನು ಅನುಭವಿಸುತ್ತಿದ್ದವನಿಗೆ ಅನುಭವಿಸುವುದಕ್ಕೆ ಬಿಡು. ನಿನ್ನ ಜೀವನದಲ್ಲಾದಾಗ ಈ ದೊಡ್ಡ ಮಾತುಗಳನ್ನ ನೀನಾಗಿ ಸ್ವೀಕರಿಸಿ ಬಿಡು. ನೀನಿನ್ನು ತೆರಳಬಹುದು" ಮಾತು ಖಾರವಾಗಿತ್ತು. ಆದ್ರೆ ಒಪ್ಪುವಂತದ್ದು ಆಗಿತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ