ಸ್ಟೇಟಸ್ ಕತೆಗಳು (ಭಾಗ ೫೬೫) - ಅಂಗಡಿ

ಸ್ಟೇಟಸ್ ಕತೆಗಳು (ಭಾಗ ೫೬೫) - ಅಂಗಡಿ

ಆ ಊರಿನ ಹೊರಗೊಂದು ನದಿ ಹರಿಯುತ್ತದೆ. ಅಲ್ಲಿ ನೀರು ಮಾತ್ರ ಹರಿಯೋದಲ್ಲ ಆ ಊರಿನ ಒಂದಷ್ಟು ಕನಸುಗಳು ಕೂಡ ಆಗಾಗ ಕೊಚ್ಚಿ ಹೋಗುತ್ತಿರುತ್ತದೆ. ಆ ಊರಿನಲ್ಲಿ ಬದುಕುತ್ತಿರುವ ಯಾರಿಗೂ ಕೂಡ ಊರು ಬದಲಾಗಬೇಕು ಹೊಸ ಕೆಲಸ ಪಡೆದುಕೊಳ್ಳಬೇಕು ಹೆಸರು ಮಾಡಬೇಕು ಈ ತರಹದ ಯಾವುದೇ ಯೋಚನೆಗಳು ಮೂಡಿಲ್ಲ. ಬುದ್ದಿ ಇಲ್ಲ ಅಂತಲ್ಲ ಆದರೆ ಅವರ ಸದ್ಯದ ಪರಿಸ್ಥಿತಿ ಅವರನ್ನು ಅವರ ಚೌಕಟ್ಟಿನ ಒಳಗೆ ಬಂಧಿಸಿ ಬಿಟ್ಟಿದೆ. ಆ ಊರಿನಲ್ಲಿದ್ದ ಒಬ್ಬ ಅಜ್ಜನಿಗೆ ಊರು ಬದಲಾಗಬೇಕು ಅನ್ನುಸ್ತು. ಅದಕ್ಕಾಗಿ ಒಂದು ಅಂಗಡಿಯನ್ನು ತೆರೆದರು. ಉಳಿದ ಅಂಗಡಿಗಳಲ್ಲಿ ಸಿಗುವ ವಸ್ತುಗಳು ಅಲ್ಲಿ ಸಿಗುವುದಿಲ್ಲ. ಕನಸುಗಳು, ಹೊಸ ಆಲೋಚನೆಗಳು, ಸ್ಪೂರ್ತಿ ಜೊತೆಗೆ ಧೈರ್ಯ ಕೂಡ ಕೆಜಿಗಟ್ಟಲೆ ಸಿಗುತ್ತವೆ. ಆದರೆ ಅವುಗಳನ್ನು ಪಡೆದುಕೊಳ್ಳುವುದಕ್ಕೂ ಒಂದಷ್ಟು ಅರ್ಹತೆಗಳಿದೆ. ಅವುಗಳನ್ನ ಪೂರ್ತಿಗೊಳಿಸಿದರೆ ಉಚಿತವಾಗಿ ಎಲ್ಲವನ್ನ ಅಜ್ಜ ಕೊಟ್ಟುಬಿಡುತ್ತಾರೆ. ಒಂದಷ್ಟು ದಿನ ಅವರ ಕಡೆಯಿಂದ ಯಾವುದೇ ವಿಚಾರಗಳು ಮಾರಾಟವಾಗಲೇ ಇಲ್ಲ. ಯಾವುದೋ ಪುಣ್ಯದ ಘಳಿಗೆ ಅಂತ ಅನಿಸುತ್ತೆ ಒಂದಷ್ಟು ಜನ ಪಡೆದುಕೊಂಡವರು ಅದ್ಭುತ ವ್ಯಕ್ತಿಗಳಾದರು. ಇದನ್ನು ಕಂಡು ಅವರ ಅಂಗಡಿಯ ಮುಂದೆ ಹೊಸ ಸಾಲುಗಳು ನಿಲ್ಲೋದಕ್ಕೆ ಆರಂಭವಾದವು. ಅವರ ಅಂಗಡಿಗಿಂತ ಮೂರನೆಯ ಅಂಗಡಿಯಲ್ಲಿ ಇಷ್ಟರವರೆಗೂ ಜನ ತುಂಬಿ ಬಿಡ್ತಾ ಇದ್ರು, ಅದು ಜಾತಿ ಅಹಂಕಾರ ಸಿಟ್ಟು ದ್ವೇಷಗಳನ್ನು ಮಾರಾಟ ಮಾಡುವ ಮಳಿಗೆ. ಸದ್ಯಕ್ಕೆ ಈಗ ಊರಿನಲ್ಲಿ ಆ ಅಂಗಡಿಗೆ ಯಾರು ಜನಾನೇ ಬರ್ತಾ ಇಲ್ಲ. ಊರು ಬದಲಾಗಿದೆ. ಇನ್ನು ಆ ಊರಿನಲ್ಲಿ ತನಗೆ ಕೆಲಸ ಇಲ್ಲ ಅಂತ ಅಜ್ಜನಿಗೆ ಗೊತ್ತಾಗಿದೆ. ಹಾಗಾಗಿ ಅವರು ಗಂಟು ಮೂಟೆ ಹಿಡಿದು ಇನ್ನೊಂದು ಊರಿಗೆ ಹೊರಟಿದ್ದಾರೆ. ನಿಮ್ಮೂರಿಗೂ ಬರಬೇಕು ಅಂತಿದ್ರೆ ಅಜ್ಜನಿಗೆ ವಿಳಾಸ ತಿಳಿಸಿ ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ