ಸ್ಟೇಟಸ್ ಕತೆಗಳು (ಭಾಗ ೫೭೨) - ವಾಪಾಸು
"ನನಗೆ ತುಂಬಾ ನೋವಾಗ್ತಾ ಇದೆ. ಅವರು ಅಷ್ಟು ನೋವು ನನಗೆ ಕೊಡಬಾರದು. ಅವರಿಗೆ ಸ್ವಲ್ಪನೂ ಅರ್ಥ ಆಗೋದಿಲ್ಲ". ಹೀಗಂತ ರಶ್ಮಿ ತನ್ನ ತಂದೆಯ ಬಳಿ ಹೇಳುತ್ತಾ ಇದ್ದಳು .'"ನೋಡು ಮಗಾ ಇದೆ ಒಂದು ವರ್ಷದ ಹಿಂದೆ ನೀನು ನಿನ್ನ ಗೆಳತಿಗೆ ಇದೇ ತರಹದ ನೋವನ್ನು ಕೊಟ್ಟಿದ್ದೀಯಾ, ನಿನ್ನ ತಮ್ಮನಿಗೂ ಒಂದು ತಿಂಗಳ ಹಿಂದೆ ನೋವನ್ನು ಕೊಟ್ಟಿದ್ದೀಯಾ, ಆಗ ನಿನಗೆ ಯಾವತ್ತೂ ಅವರಿಗೂ ನೋವಾಗುತ್ತದೆ, ಅನ್ನುವ ಯೋಚನೆ ಬರಲಿಲ್ಲ. ದಾರಿಯಲ್ಲಿ ಕಂಡ ನಾಯಿಗೆ ಕಲ್ಲು ಹೊಡೆದು ಓಡಿಸಿದ್ದನ್ನು ಏನೋ ದೊಡ್ಡ ಸಾಧನೆ ಅಂದುಕೊಂಡಿದ್ದೀಯಾ? ಮನೆ ಮುಂದೆ ಬಂದ ಹಾವಿಗೆ ಕೋಲಲ್ಲಿ ಹೊಡೆದಾಗ ಸಮಾಜ ಸುಧಾರಣೆ ಮಾಡಿದ ಚಿಂತನೆಯ ಮನಸ್ಸಲ್ಲಿ ನಿಂತುಬಿಡುತ್ತದೆ, ನೆನಪಿರಬೇಕಾದ್ದು ಏನು ಅಂತಂದ್ರೆ ನಾವು ಯಾವುದನ್ನು ಕೊಡುತ್ತೇವೆಯೋ ಅದು ನಮ್ಮ ಬಳಿ ಮತ್ತೆ ವಾಪಾಸ್ ಬರುತ್ತದೆ. ಹಾಗಾಗಿ ನೋವು ಕೊಡುವ ಮೊದಲು ಆ ನೋವನ್ನು ಅನುಭವಿಸುವುದಕ್ಕೆ ನಾನು ಸಿದ್ಧನಿದ್ದೇನಾ ಅಂತ ಯೋಚಿಸಿ ಕೊಡಬೇಕು. ನಮಗೆ ಆ ನೋವನ್ನು ಅನುಭವಿಸುವುದಕ್ಕೆ ಸಿದ್ಧವಿಲ್ಲ ಅಂತಾದ್ರೆ ಇನ್ನೊಬ್ಬರಿಗೂ ನೋವು ಕೊಡಬಾರದು. ಪ್ರೀತಿ ಕೊಡುತ್ತೀಯಾ ಅಷ್ಟೇ ಪ್ರೀತಿಯನ್ನು ಅನುಭವಿಸುವುದಕ್ಕೂ ಸಿದ್ಧವಿದ್ದಾಗ ಪ್ರೀತಿ ನೀಡು. ಪ್ರತಿಯೊಂದು ಕೂಡ ನಾವು ತಯಾರಿದ್ದೇವೆ ಅಂತ ಆದರೆ ಇನ್ನೊಬ್ಬರಿಗೆ ನೀಡಬೇಕು. ಪ್ರತಿಯೊಂದು ನಮ್ಮ ಬಳಿಗೆ ಬಂದೇ ಬರುತ್ತದೆ ಹಾಗಾಗಿ ಮನಸ್ಸು ಎಚ್ಚರಿಕೆಯಿಂದ ಇರಬೇಕು. ಸಮಯ ಸರಿದು ಬಳಿಗೆ ಬಂದು ನಿಂತಾಗ ನನಗೆ ಬೇಡ ಅನ್ನೋದಕ್ಕೆ ಸಾಧ್ಯವಾಗದೇ ಇರಬಹುದು." ರಶ್ಮಿಗೆ ಅಪ್ಪನ ಮಾತು ಅರ್ಥ ಆಗಿದೆ ಅಂತ ಅನಿಸ್ತು. ಮನಸ್ಸು ಕಣ್ಣೀರು ಇಳಿಸುತ್ತಾ ನೋವನ್ನ ಅನುಭವಿಸಿ ಅದುಮಿ ಹಿಡಿದು ಗಟ್ಟಿತನದಿಂದ ಓದಿನ ಕಡೆಗೆ ಹೊರಟಳು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ