ಸ್ಟೇಟಸ್ ಕತೆಗಳು (ಭಾಗ ೫೭೭) - ಒಗೆಯುವುದು
ಒಂದಷ್ಟು ಉದಾಸೀನದ ಕೆಲಸಗಳ ಪಟ್ಟಿ ಮಾಡ್ತಾ ಇದ್ದೆ. ಬಟ್ಟೆ ಒಗಿಯೋದು ಅದರಲ್ಲಿ ಮೊದಲೇ ಸ್ಥಾನದಲ್ಲಿ ಬಂದು ನಿಂತಿಬಿಟ್ಟಿತು. ಯಪ್ಪಾ, ಅಂದುಕೊಂಡು ತಣ್ಣೀರಲ್ಲಿ ಬಟ್ಟೆಯನ್ನು ಮುಳುಗಿಸಿ ತೆಗೆದು ಸಾಬೂನು ಹಾಕಿ ಚೆನ್ನಾಗಿ ತೊಳೆದು ನಂತರ ಬ್ರಷ್ ಹಾಕಿ ಉಜ್ಜಿ ಮತ್ತೆ ನೀರಿನಲ್ಲಿ ಮುಳುಗಿಸಿ ಹಿಂಡಿ ಹಾಕಬೇಕು. ಇಷ್ಟು ಸಮಯದಲ್ಲಿ ಒಂದು ದಿನವೂ ಈ ಕೆಲಸವನ್ನು ಪ್ರೀತಿಯಿಂದ ಮಾಡಿದ್ದಿಲ್ಲ. ಮಾಡಬೇಕಲ್ಲ ಅನ್ನುವ ಕಾರಣಕ್ಕೆ ಮಾಡ್ತಾ ಇದ್ದದ್ದು. ಅವತ್ತು ಮನೆಗೆ ಹೋಗಿದ್ದಾಗ ಅಮ್ಮ ಕೇಳಿಯೇ ಬಿಟ್ರು. "ನಿನಗೆ ಬಟ್ಟೆ ಸರಿಯಾಗಿ ಒಗಿಯೋದಕ್ಕೆ ಆಗೋದಿಲ್ಲ" ನಾನು ಸರಿಯಾಗಿ ಬಟ್ಟೆ ಒಗೆಯುತ್ತಿದ್ದೇನೆ. ಅಮ್ಮ ಯಾಕೆ ಈ ಪ್ರಶ್ನೆ ಮಾಡಿದ್ರು ಮತ್ತೆ ಅಮ್ಮ ಬಟ್ಟೆಗಳನ್ನ ಹಿಡಿದುಕೊಂಡು ಬಂದು "ನೋಡು ಇದರಲ್ಲಿ ಮಣ್ಣು ಹಾಗೆ ಉಳಿದಿದೆ ನಿನಗೆ ಸರಿಯಾಗಿ ಒಗಿಯೋದಕ್ಕೆ ಆಗೋದಿಲ್ಲ ", ಅಂತ ಹೇಳಿ ಮತ್ತೆ ಅವುಗಳನ್ನು ಒಗೆದು ಒಣಗಿಸಿ ತಂದು ಕೊಟ್ಟಾಗ ಒಗೆದು ಒಣಗಿಸಿ ತಂದು ಕೊಟ್ಟಾಗ ನನ್ನ ಬಟ್ಟೆ ತುಂಬಾ ಚೆನ್ನಾಗಿತ್ತು. ನಾನು ಅಮ್ಮ ಮಾಡುವ ಕೆಲಸವನ್ನೇ ಮಾಡಿದ್ದು ಆದರೆ ಮಣ್ಣು ಹಾಗೆಯೇ ಉಳಿದಿರುತ್ತಿತ್ತು. ವಿಷಯ ಏನು ಅಂತ ಅಂದ್ರೆ ನನಗೆ ಆ ಕೆಲಸದ ಮೇಲೆ ಪ್ರೀತಿ ಇರಲಿಲ್ಲ. ಮಾಡುವ ಕೆಲಸ ತುಂಬಾ ಶ್ರದ್ಧೆಯಿಂದ ಮುಗಿಬೇಕು, ಒಗೆದರೆ ಸಾಕು ಅನ್ನೋದು ತಲೆಯಲ್ಲಿ ತುಂಬಿತ್ತು ಅಮ್ಮನಿಗೆ ಮಗ ಚೆನ್ನಾಗಿ ಕಾಣಬೇಕು ಅನ್ನುವ ಪ್ರೀತಿಯ ಯೋಚನೆ. ಮಾಡುವ ಕೆಲಸವೂ ಅಚ್ಚುಕಟ್ಟಾಗಿ ಆಗಬೇಕು ಅಂತ ಅಂದ್ರೆ ಕೆಲಸದ ಮೇಲೆ ಪ್ರೀತಿ ಇರಬೇಕು. ಕೆಲಸ ಕೊಟ್ಟವರ ಮೇಲೆ ಗೌರವ ಇರಬೇಕು ಬಟ್ಟೆಯ ಒಗೆಯುವ ಸನ್ನಿವೇಶ ಜೀವನ ಪಾಠವನ್ನು ವರ್ಷಾನುಗಟ್ಟಲೆಯಿಂದ ಹೇಳುತ್ತಾ ಬಂದಿದೆ ಆದರೆ ಕೇಳುವ ವ್ಯವಧಾನ ಇರಲಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ